ಅಂದು ಅನೇಕ ಮನಸ್ಸುಗಳನ್ನ ಗೆದ್ದು, ಹಲವಾರು ರಾಜ್ಯ ಪ್ರಶಸ್ತಿಗಳು, ಸಂದೇಶ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದ ಕನ್ನಡ ಸಿನಿಮಾ ‘ಅಮೆರಿಕಾ ಅಮೆರಿಕಾ’ಗೆ ಇಂದು 25ರ ಸಂಭ್ರಮ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದು, ಇಂದು ಟ್ವೀಟ್​ ಮಾಡುವ ಮೂಲಕ ಕೃತಜ್ಞತೆಗಳನ್ನ ತಿಳಿಸಿದ್ದಾರೆ. ’25 ವರ್ಷದ ಮಧುರ ನೆನಪು, ಕಾಲು ಶತಮಾನದಾದ್ಯಂತ ಕೃತಜ್ಞತೆಗಳು’ ಅಂದಿದ್ದಾರೆ.

 

16-06-1996ರ ಸೋಮವಾರ ಬೆಳಗ್ಗೆ ಕಾಲಿಫೋರ್ನಿಯಾದಲ್ಲಿ ‘ಅಮೆರಿಕಾ..ಅಮೆರಿಕಾ’ ಸಿನಿಮಾದ ಮುಹೂರ್ತ ನಡೆದಿತ್ತು. ಇದರ ಫೋಟೋವನ್ನ ಇಂದು ಟ್ವಿಟರ್​ನಲ್ಲಿ ವಿಡಿಯೋ ಪೋಸ್ಟ್​​ ಮಾಡಿದ್ದಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​. ರಮೇಶ್​ ಅರವಿಂದ್​​, ಅಕ್ಷಯ್​ ಆನಂದ್​ ಹಾಗೂ ಹೇಮಾ ಪಂಚಮುಖಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಜಿ. ನಂದಕುಮಾರ್ ಬಂಡವಾಳ ಹೂಡಿದ್ದರು.

ಇನ್ನು ಈ ಸಿನಿಮಾದ ಹಾಡುಗಳ ಬಗ್ಗೆ ಎರಡು ಮಾತಿಲ್ಲ. ಅಂದು ಸಿನಿಮಾ ಅನೇಕ ಮನಸ್ಸುಗಳನ್ನ ಗೆಲ್ಲೋದಕ್ಕೆ ಸಂಗೀತ ನಿರ್ದೇಶಕ ಮನೋಮೂರ್ತಿಯವರು ನೀಡಿದ ಚಿತ್ರದ ಹಾಡುಗಳು ಕೂಡ ಒಂದು ಕಾರಣ. ಗಾಯಕ ರಾಜೇಶ್​ ಕೃಷ್ಣನ್​ ಹಾಡಿರುವ “ನೂರು ಜನ್ಮಕೂ..ನೂರಾರು ಜನ್ಮಕೂ” ಹಾಡು ಇಂದಿಗೂ ಹಚ್ಚ ಹಸುರಾಗಿದೆ, ಕಿವಿಗಳಿಗೆ ಇಂಪು ನೀಡುವಂತಿದೆ. ಇದೇ ಹಾಡಿನ ಸಾಲಿನಿಂದ ಮತ್ತೆ ನಾಗತಿಹಳ್ಳಿ ಚಂದ್ರಶೇಖರ್​ 2010ರಲ್ಲಿ ‘ನೂರು ಜನ್ಮಕೂ’ ಸಿನಿಮಾ ನಿರ್ದೇಶನ ಮಾಡಿದ್ದರು.

ಕರ್ನಾಟಕದ ಚಿತ್ರಮಂದಿರಗಳಲ್ಲಿ 365 ದಿನಗಳು ಅಂದ್ರೆ ಒಂದು ವರ್ಷ ಕಾಲ ಪ್ರದರ್ಶನಗೊಂಡ ‘ಅಮೆರಿಕಾ ಅಮೆರಿಕಾ’ ಸಿನಿಮಾ, ಅಮೆರಿಕಾದಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ನಂತರದಲ್ಲಿ ಈ ಸಿನಿಮಾವನ್ನ ತೆಲುಗಿನಲ್ಲಿ ಡಬ್​ ಮಾಡಲಾಗಿದ್ದು, ಆಂಧ್ರ ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿತ್ತು.

The post ಅಮೆರಿಕಾದಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಸಿನಿಮಾಗೆ ಇಂದು 25ರ ಸಂಭ್ರಮ appeared first on News First Kannada.

Source: newsfirstlive.com

Source link