ಅಮೆರಿಕಾ ಅಂದ್ರೇನೆ ಹಾಗೆ.. ಅಮೆರಿಕಾ ಏನು ಮಾಡಿದ್ರೂ ಇಡೀ ಜಗತ್ತಿನಾದ್ಯಂತ ಸುದ್ದಿಯಾಗುತ್ತೆ. ಎಷ್ಟೋ ಜನರ ಕನಸು ಅಮೆರಿಕಾ. ಇಂಥ ಅಮೆರಿಕಾದ ಸೇನಾ ಬಲದ ಬಗ್ಗೆ ಆಗೋ ಚರ್ಚೆಗಳಿಗೆ ಕೊನೆಯಿಲ್ಲ. ಇಂಥ ಚರ್ಚೆಯ ದೊಡ್ಡ ಸುನಾಮಿಯನ್ನೇ ಅಮೆರಿಕಾ ಈಗ ಎಬ್ಬಿಸಿದ್ದು, ಅದರ ಒಂದು ಬಾಂಬ್​ನಿಂದ ಒಂದು ನಗರದಲ್ಲಿ ಭೂಕಂಪವುಂಟಾಗಿಬಿಟ್ಟಿದೆ.

ಅಖಂಡ ಸಮುದ್ರವೇ ನಭಕ್ಕೆ ಹಾರಿದಂತೆ ಭಾಸವಾಗೋ ದೃಶ್ಯ.. ಹಲವು ಕಿಲೋಮೀಟರ್ ದೂರದಲ್ಲಿ ಕುಳಿತದವರಿಗೆ ಕಿವಿ ಸಿಡಿಯುವಂಥ ಅನುಭವ.. ಒಂದು ನಗರ ವಾಸಿಗಳಿಗೆ ಭೂಕಂಪನದ ಅನುಭವ.

ಅರೇ ಇದೇನಿದು? ಎಲ್ಲಿ ಈ ಸ್ಫೋಟವಾಗಿದ್ದು? ಯಾರು ಈ ಸ್ಫೋಟ ಮಾಡಿದ್ದು? ಯಾಕೆ ಈ ಸ್ಫೋಟ ಮಾಡಿದ್ದು? ಯಾರಿಗಾದ್ರೂ ಏನಾದ್ರೂ ಆಯ್ತಾ? ಇದು ಭಯೋತ್ಪಾದಕರ ಕೃತ್ಯವಾ? ಅಥವಾ ಯಾವುದಾದ್ರೂ ದೇಶ ನಡೆಸಿದ ದಾಳಿಯಾ? ಬಾಂಬ್ ಬ್ಲಾಸ್ಟ್ ಅಂದಾಕ್ಷಣ ಅದೆಷ್ಟು ಪ್ರಶ್ನೆಗಳು ಮೂಡುತ್ತೆ ಅಲ್ವಾ? ಅದ್ರಲ್ಲೂ ಇಂಥ ದೊಡ್ಡ ಮಟ್ಟದ ಬ್ಲಾಸ್ಟ್ ನಡೆದ್ರೆ ಕೇಳ್ಬೇಕಾ?!
ಹೌದು.. ಇದು ಅಂತಿಂಥ ಸ್ಫೋಟವಲ್ಲ.. ಒಂದು ವೇಳೆ ಯಾವುದಾದ್ರೂ ಊರಲ್ಲಿ ಈ ಸ್ಫೋಟವಾಗಿದ್ರೆ.. ಬಹುತೇಕ ಆ ಊರೀಗೆ ಊರೇ ನಿರ್ನಾಮವಾಗಿ ಬಿಡ್ತಿತ್ತು. ಯಾಕಂದ್ರೆ ಬರೋಬ್ಬರಿ 20 ಟನ್​ನಷ್ಟು ಸ್ಫೋಟಕದಿಂದ ಈ ಸ್ಫೋಟ ನಡೆಸಲಾಗಿದೆ.. ಇದರ ತೀವ್ರತೆಗೆ ಫ್ಲೋರಿಡಾದಲ್ಲಿ 3.9 ರಷ್ಟು ತೀವ್ರತೆಯ ಭೂಕಂಪವೇ ಸಂಭವಿಸಿದೆ. ಈ ಸ್ಫೋಟದಿಂದಾಗಿ ಸುತ್ತಲಿನ ಜನರೆಲ್ಲ ಆತಂಕಕ್ಕೂ ಒಳಗಾಗುವಂತೆ ಆಗಿದೆ.

ಇಂಥ ದೊಡ್ಡ ಸ್ಫೋಟ ನಡೆಸಿದ್ದಾದ್ರೂ ಯಾರು?
ಈ ಬೃಹತ್ ಸ್ಫೋಟ ನಡೆಸಿದ್ದು ಬೇರೆ ಯಾರೂ ಅಲ್ಲ.. ಬದಲಿಗೆ ಅದು ಅಮೆರಿಕಾದ ನೌಕಾಸೇನೆಯೇ.. ಹೌದು.. ಇಂಥ ಸ್ಫೋಟಕಗಳನ್ನ ಅಮೆರಿಕಾದ ನೌಕಾ ಸೇನೆ 80ರ ದಶಕದಿಂದಲೂ ಮಾಡುತ್ತಲೇ ಬರ್ತಿದೆ. ಇದು ಅವರಿಗೆ ಹೊಸದಲ್ಲ.. ಆದ್ರೆ ಈ ದೃಶ್ಯವನ್ನ ಕಣ್ತುಂಬಿಕೊಂಡ ಜನರಿಗೆ ಇದು ಕೌತುಕದ ಸಂಗತಿ.

ಇಂಥ ಸ್ಫೋಟ ಮಾಡೋದು ಯಾಕೆ?
ಇಂದು ಅಮೆರಿಕಾದ ಬಳಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಏರ್​ ಕ್ರಾಫ್ಟ್​ ಕ್ಯಾರಿಯರ್ ಯುದ್ಧ ನೌಕೆಗಳಿವೆ. ಅಮೆರಿಕಾದ 20 ಏರ್​ ಕ್ರಾಫ್ಟ್​ ಕ್ಯಾರಿಯರ್ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 13 ಏರ್​ ಕ್ರಾಫ್ಟ್​ ಕ್ಯಾರಿಯರ್​ ಅನ್ನ ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳಲು ಅಮೆರಿಕಾ ಯೋಜನೆ ರೂಪಿಸಿದೆ. ಅಮೆರಿಕಾ ಹೊರತು ಪಡಿಸಿದ್ರೆ ಇಂದು ಚೀನಾದ ಬಳಿ ಕೇವಲ 3, ಫ್ರಾನ್ಸ್​ ಬಳಿ 4, ಭಾರತದ ಬಳಿ 1 ಏರ್​ ಕ್ರಾಫ್ಟ್​ ಕ್ಯಾರಿಯರ್ ಇವೆ. ಈ ವ್ಯತ್ಯಾಸ ನೋಡಿದ್ರೆ ಸಾಕು ಅಮೆರಿಕಾದ ಬಲ ಎಂಥದ್ದು ಅನ್ನೋದು ತಿಳಿದು ಬರುತ್ತೆ. ಅಮೆರಿಕಾ ಕೇವಲ ಅತಿ ಹೆಚ್ಚು ಏರ್​ ಕ್ರಾಫ್ಟ್​ ಕ್ಯಾರಿಯರ್​ಗಳನ್ನ ಮಾತ್ರ ಹೊಂದಿಲ್ಲ. ಇವು ಅತ್ಯಂತ ಆಧುನಿಕ ಹಾಗೂ ಅತ್ಯಂತ ಬಲಾಢ್ಯ ಯುದ್ಧ ನೌಕೆಗಳನ್ನೂ ಹೊಂದಿದೆ. ಇದು ಯಾಕೆ ಇಂಥ ಬಲಾಢ್ಯ ಏರ್​ ಕ್ರಾಫ್ಟ್​ ಕ್ಯಾರಿಯರ್ ಹೊಂದಿದೆ ಅಂತಾ ನೊಡೋದಾದ್ರೆ. ಅದಕ್ಕೆ ಕಾರಣ ಇಂಥ ಸ್ಫೋಟವೂ ಒಂದು.

ಹೌದು, ಈ ಸ್ಫೋಟ ಹೇಗೆ ಸಹಾಯಕವಾಗಿರುತ್ತೆ ಅಂತಾ ನೋಡೋ ಮೊದಲು ಏರ್​ ಕ್ರಾಫ್ಟ್​ ಕ್ಯಾರಿಯರ್ ಅಂದ್ರೆ ಏನು ಅಂತಾ ನೋಡೋದಾದ್ರೆ, ಇದನ್ನ ತೇಲುವ ಏರ್​ಪೋರ್ಟ್ ಅನ್ನಬಹುದು. ತೇಲುವ ಯುದ್ಧ ಭೂಮಿ ಎನ್ನಬಹುದು. ತೇಲುವ ಕೋಟೆ ಎನ್ನಬಹುದು. ಯಾಕಂದ್ರೆ ಇದ್ರಲ್ಲಿ ಒಂದು ಏರ್​​ಪೋರ್ಟ್​ನಲ್ಲಿ ಹಾರುವಷ್ಟು ಯುದ್ಧ ವಿಮಾನಗಳನ್ನು ಹಾರಿಸಬಹುದು ಮತ್ತು ನಿಲ್ಲಿಸಬಹುದು. ಎಷ್ಟು ವಿಮಾನ ಅನ್ನೋದು ಆಯಾ ಏರ್​ ಕ್ರಾಫ್ಟ್​ ಕ್ಯಾರಿಯರ್ ಮೇಲೆ ಅವಲಂಬಿತವಾಗಿರುತ್ತೆ.

ಅಷ್ಟೇ ಅಲ್ಲ ಇದ್ರಲ್ಲಿ ಸಾಕಷ್ಟು ಯುದ್ಧ ಹೆಲಿಕಾಪ್ಟರ್​ಗಳನ್ನು ನಿಲ್ಲಿಸಬಹುದು. ಮದ್ದು ಗುಂಡುಗಳನ್ನು ಶೇಖರಿಸಿ ಇಡಬಹುದು. ಮಿಸೈಲ್​ಗಳನ್ನು ಹೊಂದಬಹುದು. ಇದು ತೇಲಿ ಬರ್ತಿದ್ದರೆ ದೊಡ್ಡ ರಣಾಂಗಣವೇ ತೇಲಿ ಬಂದಂತೆ ಕಾಣುತ್ತಿರುತ್ತೆ. ಇಂದಿಗೂ ಅಮೆರಿಕಾ ತನ್ನ ಏರ್​ ಕ್ರಾಫ್ಟ್​ ಕ್ಯಾರಿಯರ್ ಗಳನ್ನು ತಮ್ಮ ಪವರ್ ತೋರಿಸಲು ಬಳಸುತ್ತಲೇ ಇರುತ್ತೆ. ಇಷ್ಟೆಲ್ಲ ಯುದ್ಧ ವಿಮಾನ, ಹೆಲಿಕಾಪ್ಟರ್​, ಮಿಸೈಲ್ ಹೊತ್ತು ಸಾಗೋ ಇದರ ರಕ್ಷಣೆ ಸದಾಗಾಲ ಸೈನಿಕರಿಗೆ ಚಿಂತೆಯಾಗಿ ಕಾಡ್ತಿರುತ್ತೆ. ಎಂಥ ಸಂದಿಗ್ಧ ಸನ್ನಿವೇಶದಲ್ಲೂ ತನ್ನ ಏರ್​ ಕ್ರಾಫ್ಟ್​ ಕ್ಯಾರಿಯರ್ ರಕ್ಷಿಸಲು ಸೈನಿಕರು ಹರಸಾಹಸ ಪಡ್ತಿರ್ತಾರೆ.

ಇವುಗಳ ಮೇಲೆ ಸದಾ ಕಾಲ ವೈರಿ ಪಡೆಯ ಕಣ್ಣು ಇದ್ದೇ ಇರುತ್ತೆ. ಹೀಗಾಗಿಯೇ ಅವರೂ ದಾಳಿ ನಡೆಸಿದ್ರೆ ಇದ್ರ ಮೇಲೆ ದಾಳಿ ನಡೆಸೋಕೆ ಹವಣಿಸುತ್ತಿರ್ತಾರೆ. ಹೀಗಾಗಿಯೇ ಸ್ಫೋಟಕಗಳ ಪರೀಕ್ಷೆಯನ್ನ ನೌಕಾಸೇನೆ ನಡೆಸುತ್ತವೆ.

ಹೌದು ಜೂನ್ 18, 2021ರಲ್ಲಿ ಅಮೆರಿಕಾದಲ್ಲಿ ಇಂಥದ್ದೊಂದು ಪರೀಕ್ಷೆಯನ್ನ ಅಲ್ಲಿನ ನೌಕಾ ಸೇನೆ ನಡೆಸಿತು. R.Ford ಹೆಸರಿನ ನೌಕೆಯನ್ನ ಅಮೆರಿಕಾ ವಾಯುಸೇನೆ ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳುತ್ತಿದೆ. ಅತ್ಯಂಥ ಆಧುನಿಕ ಹಾಗೂ ಬಲಿಷ್ಠವಾದಂಥ ತನ್ನ ಏರ್​ ಕ್ರಾಫ್ಟ್​ ಕ್ಯಾರಿಯರ್ ಆಗಿದೆ. ಇದೇ ಹಿನ್ನೆಲೆಯಲ್ಲಿ ಅಮೆರಿಕಾ ನೌಕಾ ಸೇನೆ ಬರೋಬ್ಬರಿ 20 ಟನ್ ಸ್ಫೋಟಕ ಬಳಸಿ ಈ ತನ್ನ ಏರ್​ ಕ್ರಾಫ್ಟ್​ ಕ್ಯಾರಿಯರ್ ಬಳಿಯಲ್ಲೇ ಸ್ಫೋಟ ನಡೆಸಿತು. ಈ ಮೂಲಕ ಆ ತನ್ನ ಏರ್​ ಕ್ರಾಫ್ಟ್​ ಕ್ಯಾರಿಯರ್​ನ ಶಾಕ್ ಅಬ್ಸಾರ್ಬರ್ ಟೆಸ್ಟ್ ನಡೆಸಲಾಯ್ತು. ಇಂಥ ದೊಡ್ಡ ಸ್ಫೋಟ ಸಂಭವಿಸಿದ್ರೂ ಈ ತನ್ನ ಏರ್​ ಕ್ರಾಫ್ಟ್​ ಕ್ಯಾರಿಯರ್ ಏನೂ ಆಗಿಲ್ಲವೇನೋ ಅನ್ನೋ ಹಾಗಿ ನಿಂತಿತ್ತಂತೆ. ಆದ್ರೆ ಈ ನಡುವೆ ಫ್ಲೋರಿಡಾದಲ್ಲೇ ಭೂಕಂಪ ಕೂಡ ಆಗಿದೆ. ಆದ್ರೆ ಈ ತನ್ನ ಏರ್​ ಕ್ರಾಫ್ಟ್​ ಕ್ಯಾರಿಯರ್ ಗೆ ಯಾವ ಹಾನಿ ಕೂಡ ಆಗಿಲ್ಲ. ಇದು ಅಮೆರಿಕಾ ನೌಕಾಸೇನೆಗೆ ಸಾಕಷ್ಟು ಸಮಾಧಾನ ಕೂಡ ಉಂಟು ಮಾಡಿದೆ.

ಕಡಲ ಜೀವಿಗಳಿಗೆ ಸಂಚಕಾರ ಅಲ್ಲವಾ ಇದು?
ಯಾವುದೇ ಅಭಿವೃದ್ಧಿ ಶೀಲ ರಾಷ್ಟ್ರಗಳು ಏನದ್ರೂ ಅಭಿವೃದ್ಧಿ ಕಾರ್ಯ ನಡೆಸೋಣ ಅಂತಾ ಮುಂದಾದ್ರೆ ಇದೇ ಅಮೆರಿಕಾ ಅಂಥ ದೇಶಗಳಿಗೆ ಪರಿಸರ ಕಾಳಜಿ ಪಾಠ ಹೇಳಿ ಕೊಡುತ್ತೆ. ಆದ್ರೆ, ಇಂಥ ಸ್ಫೋಟ ಸಂಭವಿಸಿದ್ರೆ ಅಲ್ಲಿನ ಜಲ ಚರಗಳು ಸತ್ತೇ ಹೋಗುತ್ತವೆ ಅಲ್ಲವಾ? ಅನ್ನೋ ಪ್ರಶ್ನೆಯನ್ನ ಪರಿಸರವಾದದಿಗಳು ಕೇಳ್ತಿದ್ದಾರೆ. ಇದಕ್ಕೆ ಉತ್ತರ ನೀಡಿರೋ ಅಮೆರಿಕಾದ ನೌಕಾಸೇನೆ. ನಾವು ಜಲಚರಗಳ ಚಲನೆಯ ಪ್ಯಾಟರ್ನ್ ನೋಡಿಯೇ ಸ್ಫೋಟ ಮಾಡಿದ್ದೇವೆ. ಸ್ಫೋಟದ ವೇಳೆ ಅಲ್ಲಿ ಹೆಚ್ಚು ಜಲಚರಗಳು ಇರಲಿಲ್ಲ ಅಂತಾ ಸ್ಪಷ್ಟನೆ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಅಮೆರಿಕಾ ಯಾರು ಏನು ಹೇಳಿದ್ರೂ ತಾನು ಅಂದುಕೊಂಡಿದ್ದನ್ನ ಮಾಡ್ತಾ ಇರುತ್ತೆ. ಇಂದಿನ ಸ್ಫೋಟ ಕೂಡ ಅದಕ್ಕೆ ಖಂಡಿತವಾಗಿ ಉದಾಹರಣೆಯಾಗಿದೆ.

The post ಅಮೆರಿಕಾದ ಕಡಲಲ್ಲಿ ಭೀಕರ ಬಾಂಬ್ ಸ್ಫೋಟ -ತೀವ್ರತೆಗೆ ಫ್ಲೋರಿಡಾದಲ್ಲಿ ಭೂಕಂಪ appeared first on News First Kannada.

Source: newsfirstlive.com

Source link