‘ಪವರ್ ಸ್ಟಾರ್’ ಹೆಸರಲ್ಲಿ ಉದ್ಯಾನವನ
ದಾವಣಗೆರೆಯ ಉದ್ಯಾನವನವೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೆಸರಿಡಲಾಗಿದೆ. ನಗರದ ಎಂಸಿಸಿ ಬಿ ಬ್ಲಾಕ್ನ ಕುವೆಂಪು ನಗರದಲ್ಲಿರುವ ಉದ್ಯಾನವನಕ್ಕೆ ಅಲ್ಲಿನ ಸ್ಥಳೀಯರು ಅಪ್ಪು ಹೆಸರಿಡುವ ಮೂಲಕ ಕರುನಾಡಿನ ರಾಜಕುಮಾರನಿಗೆ ಗೌರವ ಸಲ್ಲಿಸಿದ್ದಾರೆ. ಪುನೀತ್ ಅಭಿಮಾನಿಗಳು ಹಾಗೂ ವಾರ್ಡ್ನ ಸಾರ್ವಜನಿಕರು ದೀಪ ಬೆಳಗಿಸುವ ಮೂಲಕ ಪವರ್ ಸ್ಟಾರ್ನ ಸ್ಮರಣೆ ಮಾಡಿದ್ದಾರೆ.
ಕೊನೆಗೂ ಮೌನ ಮುರಿದ ನಟಿ ನುಸ್ರತ್
ನಟಿ ರಾಜಕಾರಣಿ ನುಸ್ರತ್ ಜಹಾನ್ ಮದುವೆ ಬಗ್ಗೆ ಇತ್ತೀಚೆಗೆ ಹಲವಾರು ಗಾಸಿಪ್ಗಳು ಹರಿದಾಡಿದ್ವು. ಈ ಬಗ್ಗೆ ನುಸ್ರತ್ ಕೊನೆಗೂ ಮೌನ ಮುರಿದಿದ್ದು, ತನ್ನ ಪತಿಯ ಹೆಸರನ್ನೂ ಉಲ್ಲೇಖ ಮಾಡದೇ ಹಲವು ವಿಚಾರಗಳನ್ನ ಜನರಿಗೆ ತಿಳಿಸಿದ್ದಾರೆ. ನುಸ್ರತ್ ಮತ್ತು ಆಕೆಯ ಪತಿ ನಿಖಿಲ್ ಜೈನ್ ಕೆಲವು ತಿಂಗಳ ಹಿಂದಷ್ಟೇ ಬೇರೆ ಬೇರೆಯಾಗಿದ್ದು, ಅವರು ನನ್ನ ಮದುವೆಗೆ ಖರ್ಚು ಮಾಡಿಲ್ಲ. ಅವರು ಹೋಟೆಲ್ ಬಿಲ್‌ಗಳನ್ನು ಪಾವತಿಸಲಿಲ್ಲ. ಅವರಿಗೆ ನಾನು ಏನನ್ನೂ ಹೇಳಬೇಕಾಗಿಲ್ಲ. ನಾನು ಪ್ರಾಮಾಣಿಕವಾಗಿದ್ದೇನೆ. ನನ್ನನ್ನು ತಪ್ಪಾಗಿ ಚಿತ್ರಿಸಲಾಗಿದೆ ಮತ್ತು ಈಗ ನಾನು ಅದನ್ನು ಸ್ಪಷ್ಟಪಡಿಸಿದ್ದೇನೆ ಅಂತ ನುಸ್ರತ್ ತಿಳಿಸಿದ್ದಾರೆ. ಮತ್ತು ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ತೋರಿಸೋದು ಸುಲಭ. ಆದ್ರೆ ನನ್ನ ವಿಷಯದಲ್ಲಿ ಕೇಳಿಬಂದ ವಿವಾದದಲ್ಲಿ ನಾನು ಯಾರನ್ನೂ ದೂಷಿಸಿಲ್ಲ ಅಂತಾ ಹೇಳಿದ್ದಾರೆ.
ಆಯೋಧ್ಯೆ ತೀರ್ಪಿನ ಬಗ್ಗೆ ಪಿ.ಚಿದಂಬರಂ ಆಕ್ಷೇಪ
ಸಲ್ಮಾನ್ ಖುರ್ಷಿದ್ರ ಸನ್ ರೈಸ್ ಓವರ್ ಅಯೋಧ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಿ. ಚಿದಂಬರಂ ಅಯೋಧ್ಯ ಕುರಿತು ಸುಪ್ರಿಂ ಕೋರ್ಟ್ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆ ಕುರಿತು ಸುಪ್ರೀಂ ನೀಡಿರುವ ತೀರ್ಪು ಭಾರತೀಯರಿಗೆ ಶಾಶ್ವತವಾಗಿ ಕಾಡಲಿದೆ. ಯಾರೂ ಬಾಬ್ರಿ ಮಸೀದಿಯನ್ನು ಕೆಡವಲಿಲ್ಲ ಎಂಬುದು ಹಾಸ್ಯಸ್ಪದ ಎಂದಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಒಂದು ರೀತಿಯಲ್ಲಿ ನೋ ವನ್ ಕಿಲ್ಡ್ ಜೆಸ್ಸಿಕಾ ಎನ್ನುವಂತಿದೆ ಎಂದು ಸುಪ್ರೀಂ ತೀರ್ಪನ್ನು ವ್ಯಂಗವಾಡಿದ್ದಾರೆ.
ಆರ್ಯನ್ ಖಾನ್ಗೆ ಭದ್ರತೆ
ಆರ್ಯನ್ ಖಾನ್ ಬಿಡುಗಡೆ ನಂತರ ನಟ ಶಾರುಖ್ ಖಾನ್ ತಮ್ಮ ಮಗನ ವಿಚಾರವಾಗಿ ಶಾರುಖ್ ಹಲವು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಸದ್ಯ ಆರ್ಯನ್ ಚಲನವಲನ ಹಾಗೂ ಭದ್ರತೆಯ ಬಗ್ಗೆ ತೀವ್ರ ಯೋಚನೆ ಮಾಡಿದ್ದು, ಆರ್ಯನ್ ಖಾನ್ಗೆ ಭದ್ರತೆಗಾಗಿ ಬಾಡಿಗಾರ್ಡ್ ನೇಮಿಸಲು ಕಿಂಗ್ಖಾನ್ ಹುಡುಕಾಟ ನಡೆಸಿದ್ದಾರೆ. ಈ ಮೊದಲು ಜನರಿಗೆ ಆರ್ಯನ್ರ ಮುಖ ಪರಿಚಯ ಇರದ ಕಾರಣ, ಪಾರ್ಟಿ ಅಥವಾ ಫ್ರೆಂಡ್ಸ್ ಜೊತೆ ಸುತ್ತಲು ಆರ್ಯನ್ ಒಬ್ಬರೇ ಹೋಗುತ್ತಿದ್ರು. ಆದ್ರೀಗ ಡ್ರಗ್ ಪ್ರಕರಣದ ನಂತರ ಆರ್ಯನ್ರನ್ನು ಎಲ್ಲರೂ ಗುರುತಿಸುತ್ತಿದ್ದು, ಈ ಹಿನ್ನಲೆ ಆರ್ಯನ್ ರಕ್ಷಣೆಗೆ ಶಾರುಖ್ ಬಾಡಿಗಾರ್ಡ್ ನೇಮಕ ಮಾಡಿದ್ದಾರೆ.
ಕಂಗನಾ ಹೇಳಿಕೆಗೆ ತುಷಾರ್ ಗಾಂಧಿ ಕಿಡಿ
ಸ್ವಾತಂತ್ರ್ಯದ ಬಗ್ಗೆ ಕಂಗನಾ ರಣಾವತ್ ನೀಡಿದ್ದ ವಿವಾದ್ಮಕ ಹೇಳಿಕೆಗೆ ಈಗ ದೇಶದ್ಯಾಂತ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈಗ ಕಂಗನಾ ಹೇಳಿಕೆ ಮಹಾತ್ಮಾ ಗಾಂಧಿ ಅವರ ಮೊಮ್ಮಗ ತುಷಾರ್ ಗಾಂಧಿ ಕೂಡ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ತುಷಾರ್ ಗಾಂಧಿ, ಪದ್ಮಶ್ರೀ ಪುರಸ್ಕೃತೆ ಕಂಗನಾ ದ್ವೇಷ, ಅಸಹಿಷ್ಣುತೆ ಮತ್ತು ಅವಿವೇಕದ ಏಜೆಂಟ್ ಆಗಿದ್ದಾರೆ. ದೇಶದಲ್ಲಿ 2014ರಿಂದ ದ್ವೇಷ, ಕೋಮುವಾದ ಬಿತ್ತಲು ಕಂಗನಾ ಅಧಿಕೃತವಾಗಿ ರಾಯಭಾರಿಯಾಗಿದ್ದಾರೆ. ನಮ್ಮ ದೇಶದಲ್ಲಿ ಸದ್ಯ ಪ್ರಧಾನ ಮಂತ್ರಿ ಕಚೇರಿಯೇ ದ್ವೇಷದ ಚಿಲುಮೆಯಾಗಿ ಮಾರ್ಪಟ್ಟಿದ್ದು, ಅದು ಸತತವಾಗಿ ಹರಿತಾ ಇದೆ ಅಂತ ತುಷಾರ್ ಕಂಗನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವರನಾಡಲ್ಲಿ ‘ನೊರೊವೈರಸ್’ ಪತ್ತೆ
ಕೇರಳದಲ್ಲಿ ಕೊರೊನಾ ಸೋಂಕಿನ ಜೊತೆಗೆ ನೊರೊವೈರಸ್ ಎಂಬ ಹೊಸ ವೈರಸ್ನ ಕಾಟ ಶುರುವಾಗಿದೆ. ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದು, ವಯನಾಡಿನ ಕೆಲವು ಜನರಲ್ಲಿ ನೊರೊವೈರಸ್ ಪತ್ತೆಯಾಗಿದೆ. ಹಾಗಾಗಿ ಜನ ಹೆಚ್ಚು ಜಾಗರೂಕರಾಗಿ ಇರಬೇಕು ಅಂತ ಸೂಚಿಸಿದ್ದಾರೆ. ಈ ಹೊಸ ಸೋಂಕಿನ ಹರಡುವಿಕೆಯನ್ನ ತಡೆಯಲು ಆರೋಗ್ಯ ಸಚಿವೆ ಮಾರ್ಗಸೂಚಿ ಹೊರಡಿಸಿದ್ದಾರೆ. ಮತ್ತು ಸೋಂಕು ಪತ್ತೆಯಾಗಿರುವ ಜಿಲ್ಲೆಯಲ್ಲಿ ಪರಿಸ್ಥಿತಿಯನ್ನ ಪರಿಶೀಲಿಸಲು ಸೂಚಿಸಿದ್ದಾರೆ. ಇದು ಪ್ರಾಣಿಗಳಿಂದ ಹರಡುವ ರೋಗವಾಗಿದ್ದು, ಅತಿಸಾರ, ಹೊಟ್ಟೆನೋವು, ವಾಂತಿ, ಜ್ವರ, ತಲೆನೋವು ಇದರ ಲಕ್ಷಣವಾಗಿದೆ. ಈ ಲಕ್ಷಣಗಳು ಕಂಡುಬಂದ್ರೆ ಕೂಡಲೇ ಚಿಕಿತ್ಸೆ ಪಡೆಯುವಂತೆ ವೀಣಾ ಜಾರ್ಜ್ ಮನವಿ ಮಾಡಿದ್ದಾರೆ.
ಅಯ್ಯಪ್ಪನ ದರ್ಶನಕ್ಕೆ ಮುಕ್ತ ಅವಕಾಶ
ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶಬರಿಮಲೆ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ಸಿಹಿ ಸುದ್ದಿ ನೀಡಿದೆ. ನವೆಂಬರ್ 16ರಿಂದ ಶಬರಿಮಲೆಗೆ ಭಕ್ತರ ಪ್ರವೇಶ ಮುಕ್ತವಾಗಿರಲಿದ್ದು, ಪ್ರತಿದಿನ 25 ಸಾವಿರ ಭಕ್ತಾದಿಗಳಿಗೆ ದರ್ಶನ ಪಡೆಯುವ ಅವಕಾಶ ಮಾಡಿಕೊಡಲಾಗುವುದು ಅಂತ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ. ಎರಡು ತಿಂಗಳ ವಾರ್ಷಿಕ ಧಾರ್ಮಿಕ ಯಾತ್ರೆ ಆರಂಭವಾಗಿರುವ ಹಿನ್ನೆಲೆ, ಭಕ್ತರಿಗೆ ದರ್ಶನ ಅವಕಾಶ ಕಲ್ಪಿಸಲಾಗಿದೆ ಅಂತ ದೇವಸ್ಥಾನದ ಅಧ್ಯಕ್ಷರು ತಿಳಿಸಿದ್ದಾರೆ. ಇನ್ನೂ ನವೆಂಬರ್ 15ರ ಸಂಜೆ 5 ಕ್ಕೆ ದೇವಾಲಯ ತೆರೆಯಲಿದ್ದು, ಶಬರಿಗೆ ಬರುವ ಭಕ್ತರು ಕಡ್ಡಾಯವಾಗಿ ಕೊರೊನಾ ನಿಯಮ ಪಾಲಿಸಬೇಕು ಅಂತ ಮನವಿ ಮಾಡಿದ್ದಾರೆ.
ಇಬ್ಬರಿಗಾಗಿ ನೀಟ್ ಪರೀಕ್ಷೆ ನಡೆಸಲು ಸಾಧ್ಯವಿಲ್ಲ
ಇಬ್ಬರು ವಿದ್ಯಾರ್ಥಿಗಳಿಗಾಗಿ ಮತ್ತೊಮ್ಮೆ ನೀಟ್ ಪರೀಕ್ಷೆ ನಡೆಸಲಾಗುವುದಿಲ್ಲವೆಂದು ಸುಪ್ರೀಂಕೋರ್ಟ್ ಬಾಂಬೆ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆ ಬಗ್ಗೆ ಅನುಕಂಪವಿದೆ, ಆದ್ರೆ ಅವರಿಬ್ಬರಿಗಾಗಿಯೇ ಪರೀಕ್ಷೆ ನಡೆಸಲು ಸಾಧ್ಯವಿಲ್ಲವೆಂದು ಸುಪ್ರೀಂ ಹೇಳಿದೆ. ಮಹಾರಾಷ್ಟ್ರ ಮೂಲದ ವೈಷ್ಣವಿ ಭೋಪಾಲೆ ಮತ್ತು ಅಭಿಷೇಕ್ ಶಿವಾಜಿ ಎಂಬ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದರು. ಆದ್ರೆ ಅವರ ಪ್ರಶ್ನೆ ಪತ್ರಿಕೆಗಳು ಮತ್ತು ಓಎಂಆರ್ ಶೀಟ್ಗಳು ಬೆರೆತು ಹೋಗಿ ಸಮಸ್ಯೆ ಉದ್ಭವವಾಗಿತ್ತು. ಈ ಹಿನ್ನೆಲೆ ತಮಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕೊಡುವಂತೆ ವಿದ್ಯಾರ್ಥಿಗಳು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು.
ದೆಹಲಿಯಲ್ಲಿ ಉಸಿರಿಗೆ ಕುತ್ತು ತಂದ ದೀಪಾವಳಿ
ದೀಪಾವಳಿಯಲ್ಲಿ ಹೊಡೆದ ಪಟಾಕಿಗಳಿಂದ ಮತ್ತು ರೈತರು ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಚ್ಚಿದ ಪರಿಣಾಮ ದೆಹಲಿಯಲ್ಲಿ ವಾಯಗುಣಮಟ್ಟ ಸಂಪೂರ್ಣ ಹದಗೆಟ್ಟಿದ್ದು, ಯಾವುದೇ ಸಮಯದಲ್ಲಿ ತುರ್ತು ಪರಿಸ್ಥಿತಿಗೆ ಸಿದ್ದರಾಗಿರುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ. ಮುಂದಿನ 48 ಗಂಟೆಗಳಲ್ಲಿ ಪರಿಸ್ಥಿತಿ ಸುಧಾರಿಸದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇನ್ನೂ ವಾತಾವರಣ ತಿಳಿಗೊಳಿಸುವ ನಿಟ್ಟಿನಲ್ಲಿ ಕೆಲ ಸೂಚನೆಗಳನ್ನು ಕೊಟ್ಟಿದ್ದು, ಸದ್ಯ ನವೆಂಬರ್ 18ರವರೆಗೂ ಇದೇ ವಾತವರಣ ಮುಂದುವರೆಯಲಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಕದಿನ ನಾಯಕತ್ವಕ್ಕೂ ಕೊಹ್ಲಿ ವಿದಾಯ?
ಟಿ-20 ಮಾದರಿಯ ನಾಯಕತ್ವವನ್ನು ತೊರೆದಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ ಏಕದಿನ ನಾಯಕತ್ವಕ್ಕೂ ವಿದಾಯ ಹೇಳ್ತಾರೆ ಅಂತ ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ತಿಳಿಸಿದ್ದಾರೆ. ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ ರವಿ ಶಾಸ್ತ್ರಿ, ಕೊಹ್ಲಿ ತಮ್ಮ ನಾಯಕತ್ವದಲ್ಲಿ ಸತತ ನಾಲ್ಕು ಐಸಿಸಿ ಪಂದ್ಯಾವಳಿಗಳಲ್ಲಿ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದಾರೆ. ಇದ್ರಿಂದಾಗಿ ಕೊಹ್ಲಿ ಒತ್ತಡಕ್ಕೊಳಗಾಗಿದ್ದಾರೆ. ಬಹುಶಃ ಬಿಸಿಸಿಐ ಈ ವಿಚಾರವಾಗಿ ಏನು ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದು ಕೆಲವೇ ದಿನಗಳಲ್ಲಿ ತಿಳಿಯುತ್ತೆ. ಹಾಗಾಗಿ ಕ್ರಿಕೆಟ್ ಮಂಡಳಿಯೇ ನಾಯಕ ವಿರಾಟ್ನನ್ನ ಏಕದಿನ ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆ ಇದೆ ಅಂತ ರವಿಶಾಸ್ತ್ರಿ ತಿಳಿಸಿದ್ರು.