ರಾಯಪುರ: ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್ ಅವರು ಗೋವರ್ಧನ ಪೂಜೆಯ ಭಾಗವಾಗಿ ಚಾಟಿ ಏಟನ್ನು ಸ್ವೀಕರಿಸಿದ್ದಾರೆ. ಹುಲ್ಲು ಹಾಗೂ ಸ್ಥಳೀಯವಾಗಿ ದೊರೆಯುವ ಕುಶ್ ದರಗಳಿಂದ ನೇಯಲ್ಪಟ್ಟಿರುವ ‘ಸೊಂಟಾ’ ಎಂದು ಕರೆಯಲ್ಪಡುವ ಚಾಟಿಯಿಂದ ಏಟು ಸ್ವೀಕರಿಸಿದ್ದಾರೆ.
ಈ ಕುರಿತ ವಿಡಿಯೋವನ್ನು ಸಿಎಂ ಭೂಪೇಶ್ ಬಘೇಲ್ ಹಂಚಿಕೊಂಡಿದ್ದು, ದೇವರಿಗೆ ಹರಕೆ ಕಟ್ಟಿಕೊಂಡಿದ್ದಾಗಿ ತಿಳಿಸಿದ್ದಾರೆ. ದೇವಸ್ಥಾನದ ಸಿಬ್ಬಂದಿಯೋರ್ವ ಸಿಎಂ ಅವರಿಗೆ ಚಾಟಿಯಿಂದ ಕೈಗೆ ಹೊಡೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವೇಳೆ ಡೋಲು ಇತರೇ ಸಾಂಪ್ರದಾಯಿಕ ವಾದ್ಯಗಳನ್ನು ಬಾರಿಸಲಾಗುತ್ತಿತ್ತು. ಈ ವಿಡಿಯೋವನ್ನು ಛತ್ತೀಸ್ಗಢದ ದುರ್ಗ್ ಜಿಲ್ಲೆಯ ದೇವಾಲಯವೊಂದರಲ್ಲಿ ಚಿತ್ರೀಕರಿಸಲಾಗಿದೆ. ಬರೋಬ್ಬರಿ 8 ಬಾರಿ ಸಿಎಂಗೆ ಚಾಟಿ ಏಟು ಕೊಟ್ಟ ವ್ಯಕ್ತಿ, ಬಳಿಕ ಸಿಎಂ ಅವರನ್ನು ಅಪ್ಪಿಕೊಂಡು ಧನ್ಯವಾದ ತಿಳಿಸಿದ್ದಾರೆ.
ದೀಪಾವಳಿಯ ಮರುದಿನ ಪ್ರತಿವರ್ಷ ಗೋವರ್ಧನ ಪೂಜೆಯನ್ನು ನಡೆಸಲಾಗುತ್ತದೆ. ಈ ವರ್ಷ ಹಬ್ಬವನ್ನು ಶುಕ್ರವಾರ ಆಚರಿಸಲಾಗಿದೆ. ಅಂದಹಾಗೇ, ಶ್ರೀಕೃಷ್ಣ ಇದೇ ದಿನದಂದು ಗೋವರ್ಧನ ಪರ್ವತವನ್ನು ಕಿರುಬೆರಳಿನಲ್ಲಿ ಎತ್ತಿ ಜನರನ್ನು ರಕ್ಷಣೆ ಮಾಡಿ ಇಂಧ್ರದೇವನ ಅಹಂಕಾರವನ್ನು ಅಡಗಿಸಿದ್ದ ಎಂಬ ಧಾರ್ಮಿಕ ನಂಬಿಕೆ ಸ್ಥಳೀಯರಲ್ಲಿದೆ. ಈ ದಿನದಂದು ದೇವಾಲಯದಲ್ಲಿ ಚಾಟಿ ಏಟು ಸ್ವೀಕರಿಸಿದರೇ ಕಷ್ಟಗಳು ದೂರವಾಗಿ ಜೀವನದಲ್ಲಿ ಒಳ್ಳೆದಾಗುತ್ತದೆ ಎಂಬ ನಂಬಿಕೆಯನ್ನು ಸ್ಥಳೀಯರು ಹೊಂದಿದ್ದಾರೆ.
प्रदेश की मंगल कामना और शुभ हेतु आज जंजगिरी में सोटा प्रहार सहने की परंपरा निभाई।
सभी विघ्नों का नाश हो। pic.twitter.com/bHQNFIFzGv
— Bhupesh Baghel (@bhupeshbaghel) November 5, 2021