ಬೆಂಗಳೂರು: ಹಲವು ಬಾರಿಯ ಮನವಿಯ ಬಳಿಕ ಸರ್ಕಾರ ಈಗ ಎಚ್ಚೆತ್ತುಕೊಂಡಿದ್ದು, ಕೊನೆಗೂ ಸಿ ವರ್ಗದ ದೇವಾಲಯಗಳ ಅರ್ಚಕರು ಹಾಗೂ ಸಿಬ್ಬಂದಿಗೆ ಆಹಾರ ಕಿಟ್ ವಿತರಣೆಗೆ ಆದೇಶ ಹೊರಡಿಸಿದೆ.

ಜಿಲ್ಲಾಧಿಕಾರಿಗಳಿಗೆ ಈ ಜವಾಬ್ದಾರಿ ವಹಿಸಿದ್ದು, ಜಿಲ್ಲೆಯ ಎ ಮತ್ತು ಬಿ ವರ್ಗದ ದೇವಾಲಯಗಳ ಅನ್ನ ದಾಸೋಹದಲ್ಲಿ ಲಭ್ಯವಿರುವ ಅಕ್ಕಿ ಮತ್ತು ಇತರೇ ಧಾನ್ಯಗಳನ್ನು ಆಹಾರ ಕಿಟ್ ತಯಾರಿಸಿ ಸಿ ವರ್ಗದ ಅರ್ಚಕರು ಹಾಗೂ ಸಿಬ್ಬಂದಿಗೆ ನೀಡಬೇಕೆಂದು ಸೂಚಿಸಿದೆ.

ಒಂದು ವೇಳೆ ಆಹಾರ ಧಾನ್ಯಗಳು ಲಭ್ಯವಿಲ್ಲದಿದ್ದರೆ ಎ ಮತ್ತು ಬಿ ದೇವಾಲಯದ ನಿಧಿಯಿಂದ ಸಿ ವರ್ಗದ ದೇವಾಲಯ ಅರ್ಚಕರು ಮತ್ತು ಸಿಬ್ಬಂದಿಗೆ ಮಾತ್ರ ಆಹಾರ ಕಿಟ್ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಅರ್ಚಕರು ಹಾಗೂ ದೇವಾಲಯದ ಸಿಬ್ಬಂದಿಗೂ ಪರಿಹಾರ ನೀಡುವಂತೆ ಭಾರೀ ಚರ್ಚೆ ನಡೆದಿತ್ತು. ಆದರೆ ಸರ್ಕಾರ ಯಾವುದೇ ನೆರವು ನೀಡಿರಲಿಲ್ಲ. ಇದೀಗ ಫುಡ್ ಕಿಟ್ ಮಾತ್ರ ನೀಡಲು ಮುಂದಾಗಿದೆ.

ಕೊರೊನಾದಿಂದಾಗಿ ಅರ್ಚಕರ ಸಮುದಾಯ ಸಹ ಸಂಕಷ್ಟಕ್ಕೆ ಸಿಲುಕಿದ್ದು, ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ 35 ಸಾವಿರಕ್ಕೂ ಅಧಿಕ ದೇವಾಲಯಗಳ ಅರ್ಚಕರಿಗೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಅರ್ಚಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್ ಈ ಹಿಂದೆ ಮನವಿ ಮಾಡಿದ್ದರು.

ವೀಡಿಯೋ ಮೂಲಕ ಕೇಳಿಕೊಂಡಿದ್ದ ಅವರು, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ 35 ಸಾವಿರಕ್ಕೂ ಅಧಿಕ ದೇವಾಲಯಗಳ ಅರ್ಚಕರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಾರೋಗ್ಯದಿಂದ ಕೆಲವರು ತುಂಬಾ ಕಷ್ಟಪಡುತ್ತಿದ್ದಾರೆ. ಔಷಧಿ, ಚಿಕಿತ್ಸೆಗಾಗಿ ಹಣವಿಲ್ಲ. ಹೀಗಾಗಿ ಎಲ್ಲ ಅರ್ಚಕರಿಗೂ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಹೇಳಿದ್ದರು.

ಗ್ರಾಮಾಂತರ ಪ್ರದೇಶದಲ್ಲಿರುವ ಮುಜರಾಯಿ ದೇವಾಲಯಗಳಿಗೆ ಪೂಜೆಯ ಸಾಮಗ್ರಿಗಳನ್ನು ಕೊಳ್ಳಲು ಹಾಗೂ ಪೂಜೆ ನಡೆಸುವ ಅರ್ಚಕರ ಸಂಭಾವನೆ ಎರಡೂ ಸೇರಿ ದಿನಕ್ಕೆ 135 ರೂ. ನೀಡಲಾಗುತ್ತಿದೆ. ಆದರೆ ಇದೀಗ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದ್ದು, ದೇವಸ್ಥಾನಗಳಲ್ಲಿ ನಿತ್ಯ ಪೂಜೆ ನಡೆಸಲು ತುಂಬಾ ತೊಂದರೆಯಾಗುತ್ತಿದೆ. ಹೀಗಾಗಿ ಭತ್ಯೆಯನ್ನು ಇಂದಿನ ಬೆಲೆಗಳಿಗೆ ಅನುಗುಣವಾಗಿ ಪ್ರತಿ ದಿನಕ್ಕೆ 250 ರೂ.ಗೆ ಹೆಚ್ಚಿಸಬೇಕು ಎಂದು ದೀಕ್ಷಿತ್ ಮನವಿ ಮಾಡಿದ್ದರು.

ದೇವಸ್ಥಾನಗಳಿಗೆ ನೀಡುವ ಅನುದಾನ ಈಗಲೂ 1, 2 ರೂ ಇದೆ. ಅಲ್ಲದೆ ನಗದು ಅನುದಾನ ವಾರ್ಷಿಕ 6 ಸಾವಿರ ರೂ. ಮಾತ್ರ ಇದೆ. ಇದನ್ನೂ ಹೆಚ್ಚಿಸಬೇಕು ಎಂದು ಒಕ್ಕೂಟ ತಿಳಿಸಿತ್ತು.

The post ಅರ್ಚಕರು, ಸಿಬ್ಬಂದಿ ನೆರವಿಗೆ ಧಾವಿಸಿದ ಸರ್ಕಾರ- ಆಹಾರ ಕಿಟ್ ವಿತರಣೆಗೆ ಆದೇಶ appeared first on Public TV.

Source: publictv.in

Source link