ಅರ್ಚಕರ ಮಧ್ಯೆ ಜಗಳ: ಕ್ಯಾಮೇನಹಳ್ಳಿ ಆಂಜನೇಯ ದೇಗುಲಕ್ಕೆ ಬೀಗ, ಜಾತ್ರೆಗೆ ಅಡ್ಡಿ | Kyamenahalli Anjaneya Swamy Temple Two Priests Fight over Pooja Issue Devotees have no chance to offer Pooja


ಅರ್ಚಕರ ಮಧ್ಯೆ ಜಗಳ: ಕ್ಯಾಮೇನಹಳ್ಳಿ ಆಂಜನೇಯ ದೇಗುಲಕ್ಕೆ ಬೀಗ, ಜಾತ್ರೆಗೆ ಅಡ್ಡಿ

ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇಗುಲ

ತುಮಕೂರು: ಇತಿಹಾಸ ಪ್ರಸಿದ್ಧ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ  ದೇಗುಲಕ್ಕೆ ಬೀಗ ಬಿದ್ದಿದೆ. ಇಬ್ಬರು ಅರ್ಚಕರ ನಡುವಣ ವೈಮನಸ್ಯವೇ ದೇಗುಲಕ್ಕೆ ಬೀಗ ಬೀಳಲು ಮುಖ್ಯ ಕಾರಣ ಎನ್ನಲಾಗಿದೆ. ದೇಗುಲದ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮಾಚಾರಿ ಮತ್ತು ಲಕ್ಷ್ಮೀನಾರಾಯಣ ಭಟ್ಟರ ಮಧ್ಯೆ ಪ್ರಧಾನ ಅರ್ಚಕರ ಹುದ್ದೆ ವಿವಾದ ತಾರಕಕ್ಕೇರಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಗುಲದಲ್ಲಿ ಪೂಜೆ ನಿಂತಿದೆ. ಪ್ರತಿದಿನ ಮುಂಜಾನೆಯಿಂದಲೇ ದೇಗುಲದಲ್ಲಿ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದವು. ಆದರೆ ಭಾನುವಾರ (ಫೆ 6) ಮಾತ್ರ ಮಧ್ಯಾಹ್ನ 1 ಗಂಟೆ ದಾಟಿದರೂ ದೇಗುಲದ ಬೀಗ ತೆಗೆಯಲಿಲ್ಲ. ತಾವೂ ಪೂಜೆ ಸಲ್ಲಿಸದೇ, ಬೇರೆಯವರಿಗೂ ಪೂಜೆ ಸಲ್ಲಿಸಲು ಅವಕಾಶ ನೀಡದೇ ಅರ್ಚಕರು ಬೀಗ ಜಡಿದರು.

ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿಯ ದೇಗುಲದಲ್ಲಿ ಮೂಲ ಅರ್ಚಕ ರಾಮಾಚಾರಿ ಮತ್ತು ಸರ್ಕಾರದ ಆದೇಶದಂತೆ ನೇಮಕವಾಗಿರುವ ಅರ್ಚ ನಾರಾಯಣ ಭಟ್ಟರ ನಡುವೆ ಅಸಮಾಧಾನವಿದೆ. ಕ್ಯಾಮೇನಹಳ್ಳಿಯಲ್ಲಿ ಇಂದಿನಿಂದ ಬ್ರಹ್ಮೋತ್ಸವ ಪೂಜೆಗಳು ಆರಂಭವಾಗಬೇಕಿತ್ತು. ಬೆಳಿಗ್ಗೆಯೇ ಪೂಜೆ ಸಲ್ಲಿಕೆಗೆಂದು ಬಂದಿದ್ದ ಲಕ್ಷ್ಮೀನಾರಾಯಣ ಭಟ್ಟರು ಬೀಗದ ಕೀ ಇಲ್ಲದೆ ಕಾದು ಕುಳಿತಿದ್ದರು. ಮಧ್ಯಾಹ್ನ ಒಂದು ಗಂಟೆಯ ನಂತರ ಅರ್ಚಕ ರಾಮಾಚಾರಿ ದೇಗುಲ ಸಮೀಪಕ್ಕೆ ಬಂದರು.

ತೇರಿನ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ವಿವಿಧ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲೆಂದು ಗ್ರಾಮಕ್ಕೆ ಬಂದಿದ್ದ ಭಕ್ತರು ಅರ್ಚಕರ ನಡುವಣ ವಿವಾದದಿಂದಾಗಿ ದೇವರಿಗೆ ಪೂಜೆ ಸಲ್ಲಿಸಲು ಸಾಧ್ಯವಾಗದೆ ಹೊರಗೆ ಕಾದು ಕುಳಿತಿದ್ದರು.

ಏನಿದು ವಿವಾದ

ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇಗುಲದ ಜಾತ್ರೆಯು ಫೆ 6ರಿಂದ 17ರವರೆಗೆ ನಡೆಯಬೇಕಿದೆ. ಪ್ರಧಾನ ಅರ್ಚಕರ ಹುದ್ದೆ ಖಾಲಿ ಇರುವುದರಿಂದ ಪೂಜಾ ಕಾರ್ಯಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿ ಆದೇಶದಂತೆ ದೇವರಾಯನದುರ್ಗ ಲಕ್ಷ್ಮೀನರಸಿಂಹಸ್ವಾಮಿ ದೇಗುಲ ಅರ್ಚಕರಾದ ಡಿ.ಕೆ.ಲಕ್ಷ್ಮೀನಾರಾಯಣ ಭಟ್ಟರ್ ಅವರನ್ನು ಕ್ಯಾಮೇನಹಳ್ಳಿ ದೇಗುಲಕ್ಕೆ ನಿಯೋಜಿಸಲಾಗಿತ್ತು.

ಆದರೆ ಕ್ಯಾಮೇನಹಳ್ಳಿ ದೇಗುಲದಲ್ಲಿ ಮಾಧ್ವ ಸಂಪ್ರದಾಯದ ಪ್ರಕಾರ ಪೂಜೆ ನಡೆಯುವ ಸಂಪ್ರದಾಯವಿದೆ. ಈ ದೇಗುಲಕ್ಕೆ ಶ್ರೀವೈಷ್ಣವ ಸಂಪ್ರದಾಯದ ಅಯ್ಯಂಗಾರ್ ಅರ್ಚಕರ ನೇಮಕ ಸರಿಯಲ್ಲ ಎಂದು ರಾಮಾಚಾರ್ ವಾದಿಸಿದರು. ಸರ್ಕಾರಿ ಅಧಿಕಾರಿಗಳು ಜಿಲ್ಲಾಧಿಕಾರಿ ಆದೇಶದ ಬಗ್ಗೆ ವಿವರಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ತುಮಕೂರಿನ ದೊಡ್ಡ ಜಾತ್ರೆ

ಕ್ಯಾಮೇನಹಳ್ಳಿಯ ಎರಡು ಮುಖದ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ತುಮಕೂರು ಜಿಲ್ಲೆಯ ಪ್ರಮುಖ ಧಾರ್ಮಿಕ ಉತ್ಸವಗಳಲ್ಲಿ ಒಂದು. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಜನರು ಜಾತ್ರೆಗೆ ಬರುವುದು ವಾಡಿಕೆ. ಕ್ಯಾಮೇನಹಳ್ಳಿ ಸುತ್ತಮುತ್ತಲ ಬಿಲೋಟಿ, ಹೊನ್ನಾರನಹಳ್ಳಿ, ತಿಮ್ಮನಹಳ್ಳಿ ಮತ್ತು ತುಂಬಗಾನಹಳ್ಳಿ ಗ್ರಾಮಗಳಲ್ಲಿ ಕ್ಯಾಮೇನಹಳ್ಳಿ ಜಾತ್ರೆ ನಡೆಯುವ ಅಷ್ಟೂ ದಿನ ಹಬ್ಬದ ವಾತಾವರಣ ಇರುತ್ತದೆ.

ಸುತ್ತಮುತ್ತಲ ಗ್ರಾಮಸ್ಥರು ಭಕ್ತರಿಗೆ ಪ್ರಸಾದದ ಸೌಕರ್ಯ ಕಲ್ಪಿಸುತ್ತಾರೆ. ಸುತ್ತಮುತ್ತಲ ಮಹಿಳೆಯರು ಕಾಲ್ನಡಿಗೆಯಲ್ಲಿ ಆರತಿ ಹೊತ್ತು ತರುತ್ತಾರೆ.

TV9 Kannada


Leave a Reply

Your email address will not be published.