ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಸಂಚಾರಿ ವಿಜಯ್ ಅವರಿಗೆ 38 ವರ್ಷ ವಯಸ್ಸಾಗಿತ್ತು. ಚಿಕ್ಕ ವಯಸ್ಸಿಗೆ ಅದ್ರಲ್ಲೂ ಅಲ್ಪ ಸಮಯದಲ್ಲಿಯೇ ಸಂಚಾರಿ ವಿಜಯ್ ತಮ್ಮ ಸಹಜ ನಟನೆಯಿಂದಾಗಿ ಕೀರ್ತಿಯ ಉತ್ತುಂಗಕ್ಕೇರಿದ್ದರು.

ಸಂಚಾರಿ ವಿಜಯ್ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದವರು.  ಅವರ ಹುಟ್ಟು ಹೆಸರು ವಿಜಯ್ ಕುಮಾರ್ ಬಿ. ನಟ ರಂಗಾಯಣ ರಘು ಅವರ ಪತ್ನಿ ಖ್ಯಾತ ನಾಟಕಗಾರ್ತಿ ಮಂಗಳಾ ಅವರ ಸಂಚಾರಿ ತಂಡದಲ್ಲಿ ಪಳಗಿದ ವಿಜಯ್, ಅದೇ ಹೆಸರನ್ನು ಉಳಿಸಿಕೊಂಡಿದ್ದಾರೆ. ಸಂಚಾರಿ ವಿಜಯ್ ಅವರ ತಂದೆ ಬಸವರಾಜಯ್ಯ ಚಿತ್ರಕಲಾವಿದರಾಗಿದ್ದರು. ಜೊತೆಗೆ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಂದೆಯ ಕಲೆಯೇ ಸಂಚಾರಿ ವಿಜಯ್ ಅವರಿಗೆ ವರದಾನವಾಗಿ ಬಂದಿದೆ.

ರಂಗಪ್ಪ ಹೋಗ್ಬಿಟ್ನಾ, ರಾಮ ರಾಮ ರಘು ರಾಮ, ದಾಸವಾಳ ಸಿನಿಮಾಗಳಲ್ಲಿ ನಟಿಸಿದ್ದ ಸಂಚಾರಿ ವಿಜಯ್ ಜನಪ್ರಿಯತೆ ಗಳಿಸಿದ್ದು ಹರಿವು ಸಿನಿಮಾದಲ್ಲಿ. ನಂತರ 2015ರಲ್ಲಿ ನಾನು ಅವನಲ್ಲ ಅವಳು ಸಿನಿಮಾದಲ್ಲಿ ತೃತೀಯ ಲಿಂಗಿ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ ಸಂಚಾರಿ ವಿಜಯ್​ ಸಿನಿ ಜೀವನಕ್ಕೆ ಆ ಪಾತ್ರ ದೊಡ್ಡ ಬ್ರೇಕ್ ಕೊಟ್ಟಿತ್ತು. ಈ ಸಿನಿಮಾದಲ್ಲಿ ಪುರುಷನೋರ್ವ ಲಿಂಗ ಬದಲಾವಣೆ ಮಾಡಿಸಿಕೊಂಡು ಮಹಿಳೆಯಾಗಿ ಬದಲಾಗುವ ಸಮಯದಲ್ಲಿ ಎದುರಿಸುವ ಸಮಸ್ಯೆಗಳು, ಇಂಥವರ ಮೇಲೆ ಸಮಾಜದ ದೃಷ್ಟಿಕೋನ ಹೇಗಿರುತ್ತದೆ ಎಂಬ ಸೂಕ್ಷ್ಮ ಅಂಶಗಳನ್ನ ಮನದಟ್ಟಾಗುವಂತೆ ಚಿತ್ರಿಸಲಾಗಿತ್ತು. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಸಂಚಾರಿ ವಿಜಯ್ ಅವರ ನಟನೆಗೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಕ್ರಿಟಿಕ್ಸ್ ಅವಾರ್ಡ್​ನಂಥ ಅತ್ಯುತ್ತಮ ಪ್ರಶಸ್ತಿಗಳು ಒಲಿದುಬಂದಿದ್ದವು.

ಸಂಚಾರಿ ವಿಜಯ್ ವರ್ಸಟೈಲ್ ನಟರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಅಪರೂಪದ ನಟರಾಗಿದ್ದರು. ಎಂಥದ್ದೇ ಸವಾಲಿನ ಪಾತ್ರದ ಒಳಗೆ ಹೊಕ್ಕು ಅದಕ್ಕೆ ಜೀವ ತುಂಬುವ ಕಲೆ ಅವರಿಗೆ ಒಲಿದುಬಂದಿತ್ತು. ಯಾವುದೇ ಅಬ್ಬರ, ಬೊಬ್ಬಿರಿತಗಳಿಲ್ಲದ ನದಿಯಂತೆ ಗಂಭೀರವಾಗಿ ಹರಿಯುತ್ತಾ ಸಾಗುತ್ತಿದ್ದ ಅವರ ನಟನೆ ಎಂಥವರನ್ನೂ ಮೂಕವಿಸ್ಮಿತರನ್ನಾಗಿಸುತ್ತಿತ್ತು. ರಂಗಭೂಮಿಯಿಂದ ಸಿನಿಮಾಗೆ ಬಂದು ತಮ್ಮ ಅದ್ಭುತ ಪ್ರತಿಭೆಯನ್ನ ಜಗತ್ತಿನೆದುರು ಪ್ರದರ್ಶನಕ್ಕಿಟ್ಟು ಬೇಷ್ ಎನ್ನಿಸಿಕೊಂಡ ಕೆಲವೇ ಕೆಲವು ನಟರ ಸಾಲಿನಲ್ಲಿ ಸಂಚಾರಿ ವಿಜಯ್ ಗುರುತಿಸಿಕೊಳ್ಳುವ ಮೂಲಕ ತಮ್ಮದೇ ಅಭಿಮಾನಿ ಬಳಗವನ್ನೂ ಗಳಿಸಿಕೊಂಡಿದ್ದರು.

ಸಂಚಾರಿ ವಿಜಯ್ ಒಟ್ಟು 24 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಪ್ರಮುಖ ಚಿತ್ರಗಳ ಪಟ್ಟಿಯಲ್ಲಿ ಕಿಲ್ಲಿಂಗ್ ವೀರಪ್ಪನ್, ನಾತಿಚರಾಮಿ, ಆ್ಯಕ್ಟ್ 1978 ಸಿನಿಮಾಗಳೂ ಸೇರಿವೆ. ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ಒಂದೆಡೆಯಾದರೆ, ಕಡಿಮೆ ಅವಧಿಯಲ್ಲಿ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮನ್ನು ತಾವು ಸಿನಿರಂಗದಲ್ಲಿ ಬ್ಯುಸಿಯಾಗಿಸಿಕೊಂಡಿದ್ದರು. ಸಿನಿಮಾ ರಂಗವಷ್ಟೇ ಅಲ್ಲದೇ ಸಾಮಾಜಿಕ ಕೆಲಸಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಸಂಚಾರಿ ವಿಜಯ್ ಕೋವಿಡ್​ ಸಮಯದಲ್ಲಿ ಸೋಂಕಿನಿಂದ ಸಂಕಷ್ಟಕ್ಕೊಳಗಾದವರ ಸಹಾಯಕ್ಕೆ ನಿಂತಿದ್ದರು.

ಚಿತ್ರರಂಗಕ್ಕೆ ಕಾಲಿಟ್ಟ ಸಂಚಾರಿ ವಿಜಯ್ ಚಿಕ್ಕಪುಟ್ಟ ಪಾತ್ರಗಳನ್ನ ಮಾಡುತ್ತಲೇ ಬಾಲಿವುಡ್​ನ ಆಮೀರ್​ ಖಾನ್, ಮೋಹನ್​ ಲಾಲ್​ ಜೊತೆ ಸ್ಪರ್ಧೆಗಿಳಿದು ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದರು. ಇನ್ನು ಕನ್ನಡದಲ್ಲಿ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದ ನಟರ ಪಟ್ಟಿಯಲ್ಲಿ ಸಂಚಾರಿ ವಿಜಯ್ ಮೂರನೇ ನಟರೆನ್ನಿಸಿಕೊಂಡಿದ್ದರು. ಸಂಚಾರಿ ವಿಜಯ್ ಅವರ ಭವಿಷ್ಯ ಉಜ್ವಲವಾಗಿತ್ತು ಎನ್ನುವುದನ್ನ ಒತ್ತಿ ಹೇಳಬೇಕಿಲ್ಲ. ಸಿನಿಮಾ, ನಟನೆ ಬಗೆಗಿನ ಅವರ ಶ್ರಮ, ಶ್ರದ್ಧೆ ಅವರನ್ನ ಬಹು ಎತ್ತರಕ್ಕೆ ಕೊಂಡೊಯ್ಯುವುದಿತ್ತು. ಆದ್ರೆ ವಯಸ್ಸಲ್ಲದ ವಯಸ್ಸಿನಲ್ಲಿ ಸಂಚಾರಿ ವಿಜಯ್ ಆಕಸ್ಮಿಕವಾಗಿ ಪಯಣ ಅಂತ್ಯಗೊಳಿಸಿದ್ದಾರೆ. ಈ ಮೂಲಕ ಎಂಥದ್ದೇ ಪಾತ್ರಗಳಿಗೆ ಜೀವ ತುಂಬುವ ಪ್ರತಿಭೆಯನ್ನ ಹೊಂದಿದ್ದ ಓರ್ವ ಅದ್ಭುತ ನಟನನ್ನ ಸ್ಯಾಂಡಲ್​ವುಡ್ ಕಳೆದುಕೊಂಡಂತಾಗಿದೆ.

ಸಂಚಾರಿ ವಿಜಯ್ ಬದುಕಿನ ಹಾದಿ..

 1. ತಂದೆ ಬಸವರಾಜಯ್ಯ ತಾಯಿ ಗೌರಮ್ಮನವರಿಗೆ ಎರಡನೇ ಮಗನಾಗಿ ಜುಲೈ 17 , 1983ರಂದು ಜನನ..
 2. ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿಯನ್ನ ಪಡೆದಿದ್ರು.
 3. ಕೆಲ ಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ರು.
 4. ಕಲೆಯ ಹಸಿವಿಗಾಗಿ ಉಪನ್ಯಾಸ ವೃತ್ತಿಗೆ ಗುಡ್ ಬೈ ಹೇಳಿ ರಂಗಭೂಮಿಯಲ್ಲಿ ಸಕ್ರಿಯರಾದ್ರು.
 5. ಹತ್ತು ವರ್ಷಗಳ ಕಾಲ ಸಂಚಾರಿ ಥಿಯೇಟರ್ ರಂಗ ತಂಡದೊಂದಿಗೆ ರಂಗ ಸೇವೆ ಮಾಡಿದ್ದರು.
 6. ಎರಡು ನಾಟಕಗಳನ್ನ ನಿರ್ದೇಶನ ಮಾಡಿದ್ದಾರೆ. 1 ಪಿನಾಕಿಯೋ , 2 ಮಿಸ್ ಅಂಡರ್ ಸ್ಟ್ಯಾಂಡಿಂಗ್.
 7. ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತವನ್ನ ಅಭ್ಯಾಸ ಮಾಡಿದ್ದಾರೆ. ನಾಟಕಗಳಲ್ಲಿ ಹಾಡಿದ್ದರು ಹಾಗೂ ರಿಯಲಿಟಿ ಶೋಗಳಲ್ಲಿ ಹಾಡಿದ್ದರು.
 8. ಹಿರಿತೆರೆಗೆ ಬರೋ ಮುನ್ನ ಕಿರುತೆರೆಯಲ್ಲೂ ಅಲ್ಲಲ್ಲಿ ಕಾಣಿಸಿಕೊಂಡಿದ್ದರು.
 9. ನಗುನಗುತಾ ನಲಿ, ಹೊಸ ಬಾಳಿಗೆ ನೀ ಜೊತೆಯಾದೆ, ಪಂಚರಂಗಿ ಪೋಂ..ಪೋಂ.., ಪಾಂಡುರಂಗ ವಿಠಲ, ಪಾರ್ವತಿ ಪರಮೇಶ್ವರ, ಆನಾವರಣ ಸೀರಿಯಲ್​ಗಳಲ್ಲಿ ನಟನೆ.
 10. ಕಿರುಚಿತ್ರ (ಶಾರ್ಟ್ ಫಿಲ್ಮ್ ನಲ್ಲಿ ನಟನೆ) ರೌರವ , ಬೆಸ್ಟ್ ಆ್ಯಕ್ಟರ್ , ಮರ್ಡರ್ , ಕವಲುದಾರಿ , ಅಹಂ ಬ್ರಹ್ಮಾಸ್ಮಿ , ಅಜ್ಜಿಕಥೆ.. ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ಮಿಂಚಿದ್ದರು.
 11. ರಂಗಪ್ಪ ಹೋಗ್ಬಿಟ್ನಾ ,ರಾಮರಾಮ ರಘುರಾಮ, ವಿಲನ್ , ದಾಸ್ವಾಳ, ಒಗ್ಗರಣೆ , ಹೋಂ ಸ್ಟೇ, ಸಿನೆಮಾ ಮೈ ಡಾರ್ಲಿಂಗ್ , ಮಾರಿಕೊಂಡವರು, ಸಿಪಾಯಿ, ಶುದ್ಧಿ, ಗೋದಿ ಬಣ್ಣ ಸಾಧಾರಣ ಮೈಕಟ್ಟು, ಭಲೇ ಜೋಡಿ , ಕಿಲ್ಲಿಂಗ್ ವೀರಪ್ಪನ್, ಅಲ್ಲಮ, ವೈಟ್ ಹಾರ್ಸ್ ಸಿನಿಮಾಗಲ್ಲಿ ನಟನೆ.. ಜಂಟಲ್ ಮಲ್ ಸಿನಿಮಾದಲ್ಲಿ ವಿಲನ್ ಆಗಿ ನಟನೆ..
 12. ಕನ್ನಡ ಚಿತ್ರರಂಗಕ್ಕೆ ಮೂರನೇ ರಾಷ್ಟ್ರ ಪ್ರಶಸ್ತಿಯನ್ನ ತಂದು ಕೊಟ್ಟ ನಟ
 13. 2011ರಲ್ಲಿ ‘‘ರಂಗಪ್ಪ ಹೋಗ್ಬಿಟ್ಟ’’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ
 14. 2015ರಲ್ಲಿ ‘‘ನಾನು ಅವನಲ್ಲ.. ಅವಳು’’ ಸಿನಿಮಾದ ನಟನೆಗೆ ರಾಷ್ಟ್ರಪ್ರಶಸ್ತಿ
 15. 62ನೇ ರಾಷ್ಟ್ರಿಯ ಪ್ರಶಸ್ತಿಗಳಲ್ಲೊಂದ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದ ನಟ (ಪ್ರಣಬ್ ಮುಖರ್ಜೀ ಅವರಿಂದ ಪ್ರಶಸ್ತಿ ಸ್ವೀಕಾರ).
  ಆಟಕ್ಕುಂಟು ಲೆಕ್ಕಕ್ಕಿಲ್ಲ, ಮೇಲೊಬ್ಬ ಮಾಯಾವಿ ಸಿನಿಮಾದಲ್ಲಿ ನಟಿಸುತ್ತಿದ್ದರು.
 16. ಆಟಕ್ಕೂಂಟು ಲೆಕ್ಕಕ್ಕಿಲ್ಲ , ಮೇಲೊಬ್ಬ ಮಾಯಾವಿ ಚಿತ್ರಗಳು ಸಂಚಾರಿ ವಿಜಯ್ ನಟನೆಯ ಕೊನೆಯ ಸಿನಿಮಾಗಳು.
 17. ಕಳೆದ ಜನವರಿ 15ನೇ ತಾರೀಖು ಸಂಚಾರಿ ವಿಜಯ್ ನಟಿಸುತ್ತಿದ್ದ ಅವಸ್ಥಾಂತರ ಸಿನಿಮಾದ ಮುಹೂರ್ತವಾಗಿತ್ತು.
 18. ಇದೇ ಸಿನಿಮಾ ಸಂಚಾರಿ ವಿಜಯ್ ಅವರ ಕೊನೆ ಸಿನಿಮಾದ ಮುಹೂರ್ತ. ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವನ್ ಈ ಸಿನಿಮಾದ ನಾಯಕಿ.
 19. ಅಭಿನಯದ ಜೊತೆಗೆ ಸಾಮಾಜಿಕ ಕಳಕಳಿಯುಳ್ಳ ನಟನಾಗಿದ್ದರು.
 20. ಕೊಡಗು ನೆರೆ ಬಂದಾಗ ಸ್ವತಃ ಫಿಲ್ಡ್​​ಗಿಳಿದು ಕೆಲಸ ಮಾಡಿದ್ದರು.
 21. ಕಳೆದ ವರ್ಷ ಮತ್ತು ಈ ವರ್ಷ ಕೋವಿಡ್​ ಪರಿಸ್ಥಿತಿಯಲ್ಲಿ ಅಪಾರ ಜನ ಸೇವೆಯನ್ನ ಮಾಡಿದ್ದಾರೆ.
 22. ಸೋಶಿಯಲ್ ಮೀಡಿಯಾದಲ್ಲಿ ಸ್ವಾರಸ್ಯ ಲೇಖನಗಳನ್ನ ಪ್ರಕಟಿಸುತ್ತಿದ್ದರು.
 23. ಸದಾ ಏನಾದ್ರೊಂದು ಚಟುವಟಿಗಳಲ್ಲಿ ಪಾಲ್ಗೊಳುತ್ತಿದ್ದರು.
 24. ಕೊನೆದಿನಗಳಲ್ಲಿ ಸಾಕಷ್ಟು ಕನ್ನಡ ಪುಸ್ತಕಗಳನ್ನ ಓದುತ್ತಿದ್ದರು.

ವಿಶೇಷ ಬರಹ: ರಾಜಶೇಖರ್ ಬಂಡೆ, ಡಿಜಿಟಲ್ ಡೆಸ್ಕ್

The post ಅಲ್ಪ ಕಾಲದಲ್ಲೇ ಕೀರ್ತಿಯ ಉತ್ತುಂಗಕ್ಕೇರಿದ್ದ ಸಂಚಾರಿ ವಿಜಯ್ ಬದುಕಿನ ಸಂಚಾರ ಹೇಗಿತ್ತು? appeared first on News First Kannada.

Source: newsfirstlive.com

Source link