ಅವಕಾಶ ಇಲ್ಲದೇ ಕಾಲ್​ ಸೆಂಟರ್​ ಕೆಲಸಕ್ಕೆ ಸೇರಿಕೊಂಡ ಖ್ಯಾತ ನಟಿ; ಭೇಷ್​ ಎಂದ ಅಭಿಮಾನಿಗಳು | Serial actress Ekta Sharma started working in call center due to no work in TV industry after lockdown


Serial Actress Ekta Sharma: ‘ನಟಿಯಾಗಿ ಐಷಾರಾಮಿ ಜೀವನ ನಡೆಸುತ್ತಿದ್ದ ನಾನು ಈಗ ಈ ರೀತಿ ಕೆಲಸ ಮಾಡುವುದು ಸುಲಭ ಆಗಿರಲಿಲ್ಲ’ ಎಂದು ಏಕ್ತಾ ಶರ್ಮಾ ಹೇಳಿದ್ದಾರೆ. ತಮ್ಮ ಕಷ್ಟದ ಬಗ್ಗೆ ಅವರು ಎಳೆಎಳೆಯಾಗಿ ವಿವರಿಸಿದ್ದಾರೆ.

ಅವಕಾಶ ಇಲ್ಲದೇ ಕಾಲ್​ ಸೆಂಟರ್​ ಕೆಲಸಕ್ಕೆ ಸೇರಿಕೊಂಡ ಖ್ಯಾತ ನಟಿ; ಭೇಷ್​ ಎಂದ ಅಭಿಮಾನಿಗಳು

ಏಕ್ತಾ ಶರ್ಮಾ

ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಕೆಲಸ ಅಲ್ಲ. ಸರಿಯಾಗಿ ಅವಕಾಶ ಸಿಗದೇ ಇದ್ದರೆ ಕಷ್ಟಪಡಬೇಕಾಗುತ್ತದೆ. ಅದರಲ್ಲೂ ಲಾಕ್​ಡೌನ್​ (Lockdown) ಬಳಿಕ ಅನೇಕ ನಟ-ನಟಿಯರಿಗೆ, ತಂತ್ರಜ್ಞರಿಗೆ ತುಂಬ ತೊಂದರೆ ಆಯ್ತು. ಹಲವು ಸೀರಿಯಲ್​ಗಳು ನಿಂತುಹೋದವು. ಅಂಥ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದೇ ಅವರಿಗೆ ತೋಚಲಿಲ್ಲ. ಕೆಲವರು ಆತ್ನಹತ್ಯೆ ಮಾಡಿಕೊಂಡರು. ಇನ್ನೂ ಕೆಲವರು ಕೆಟ್ಟ ಹಾದಿ ತುಳಿದರು. ಆದರೆ ಹಿಂದಿ ಕಿರುತೆರೆಯ ಖ್ಯಾತ ನಟಿ ಏಕ್ತಾ ಶರ್ಮಾ (Ekta Sharma) ತೆಗೆದುಕೊಂಡ ನಿರ್ಧಾರ ಅಂಥದ್ದಲ್ಲ. ಸೀರಿಯಲ್​ನಲ್ಲಿ ಕೆಲಸ ಸಿಗದೇ ಇದ್ದಾಗ ಅವರು ಕಾಲ್​ ಸೆಂಟರ್​ನಲ್ಲಿ (Call Center) ಕೆಲಸ ಆರಂಭಿಸಿದರು. ಈ ಬಗ್ಗೆ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅವರ ನಿರ್ಧಾರಕ್ಕೆ ಅಭಿಮಾನಿಗಳು ಭೇಷ್​ ಎನ್ನುತ್ತಿದ್ದಾರೆ.

ಏಕ್ತಾ ಶರ್ಮಾ ಅವರು ಕಳೆದ 20 ವರ್ಷಗಳಿಂದ ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಡ್ಯಾಡಿ ಸಮ್ಜಾ ಕರೋ, ಕುಸುಮ್​, ಕ್ಯೂಂ ಕಿ ಸಾಸ್​ ಬಿ ಕಬಿ ಬಹು ತಿ, ಕಾಮಿನಿ-ಧಾಮಿನಿ, ಬೇಪನಾ ಪ್ಯಾರ್​ ಮುಂತಾದ ಸೀರಿಯಲ್​ಗಳಲ್ಲಿ ಏಕ್ತಾ ಶರ್ಮಾ ನಟಿಸಿದ್ದಾರೆ. ಆದರೆ ಲಾಕ್​ಡೌನ್​ ಆರಂಭ ಆದಾಗ ಅವರು ಕೆಲಸ ಕಳೆದುಕೊಳ್ಳಬೇಕಾಯಿತು.

‘ಕೆಲಸ ಇಲ್ಲದೇ ಇದ್ದಾಗ ನಾನು ಸುಮ್ಮನೆ ಮನೆಯಲ್ಲಿ ಕೂತು ಅಳಲಿಲ್ಲ. ನಾನು ಶಿಕ್ಷಿತ ಮಹಿಳೆ. ಈಗ ಗೌರವಯುತವಾದ ಕೆಲಸ ಮಾಡುತ್ತಿದ್ದೇನೆ. ಅದರಿಂದ ಹೆಮ್ಮೆ ಇದೆ. ಆರಂಭದಲ್ಲಿ ನನ್ನ ಆಭರಣ ಮಾರಿದೆ. ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲವೂ ಸರಿಹೋಗಬಹುದು ಎಂದುಕೊಂಡೆ. ಆದರೆ ಹಾಗಾಗಲಿಲ್ಲ. ಒಂದು ವರ್ಷ ಕಳೆದ ಬಳಿಕ ನಾನು ಕಾಲ್​ ಸೆಂಟರ್​ ಕೆಲಸಕ್ಕೆ ಸೇರಿದೆ’ ಎಂದು ಏಕ್ತಾ ಶರ್ಮಾ ಹೇಳಿದ್ದಾರೆ.

‘ನಟಿಯಾಗಿದ್ದ ನಾನು ಈಗ ಈ ರೀತಿ ಕೆಲಸ ಮಾಡುವುದು ಸುಲಭ ಆಗಿರಲಿಲ್ಲ. ಅಕ್ಕ-ಪಕ್ಕ ಸಹಾಯಕರನ್ನು ಇಟ್ಟುಕೊಂಡು, ಸದಾ ಕಾಲ ಡಯೆಟ್​ ಫುಡ್​ ಸೇವಿಸುತ್ತ ಐಷಾರಾಮಿ ಜೀವನ ನಡೆಸಿದ್ದ ನಾನು ಈಗ ಕೋಪಿಷ್ಟ ಗ್ರಾಹಕರ ಜೊತೆ ಕಾಲ್​ ಸೆಂಟರ್​ನಲ್ಲಿ ಮಾತನಾಡುತ್ತಿದ್ದೇನೆ. ವೀರರಂತೆ ಬದುಕಬೇಕು. ಬಲಿಪಶು ರೀತಿ ಅಲ್ಲ’ ಎಂದು ಏಕ್ತಾ ಶರ್ಮಾ ಹೇಳಿದ್ದಾರೆ.

ಒಂದು ವೇಳೆ ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಆಗ ಎಲ್ಲರೂ ಬಂದು ದೊಡ್ಡ ದೊಡ್ಡ ಸಲಹೆ ನೀಡುತ್ತಾರೆ. ಆದರೆ ಬದುಕಿದ್ದಾಗ ಕಷ್ಟ ಎಂದು ಹೇಳಿಕೊಂಡರೆ ಯಾರೂ ಬರುವುದಿಲ್ಲ ಎಂಬುದು ಏಕ್ತಾ ಶರ್ಮಾ ಅವರ ಅಭಿಪ್ರಾಯ. ಅವರು ನಟಿಸಿದ ಕೊನೆಯ ಸೀರಿಯಲ್​ ‘ಬೇಪನಾ ಪ್ಯಾರ್​’. ಲಾಕ್​ಡೌನ್​ ಆರಂಭ ಆಗುವುದಕ್ಕೂ ಕೆಲವೇ ದಿನಗಳ ಮುನ್ನ ಆ ಧಾರಾವಾಹಿ ಅಂತ್ಯವಾಗಿತ್ತು.

TV9 Kannada


Leave a Reply

Your email address will not be published.