ನಟ ಸಂಚಾರಿ ವಿಜಯ್ ನಿಧನದ ಹಿನ್ನೆಲೆ ಹಿರಿಯ ನಟ ನಿರ್ದೇಶಕ ಟಿ.ಎಸ್​ ನಾಗಾಭರಣ ಸಂತಾಪ ಸೂಚಿಸಿದ್ದಾರೆ. ನನ್ನ ಸಹೋದರನನ್ನ ಕಳೆದುಕೊಂಡಿದ್ದೇನೆ ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.

ಮೊದಲನೆಯದಾಗಿ ಬಹಳ ದುಃಖದ ವಿಷಯ. ನಮ್ಮ ಇಡೀ ಕನ್ನಡ ಚಿತ್ರೋದ್ಯಮದಲ್ಲಿ ಮುನ್ನೆಲೆಗೆ ಬಂದಂತ, ಮುನ್ನಡೆ ಇಡ್ತಿದ್ದ ಹಾಗೂ ತನ್ನದೇ ಆದ ವ್ಯಕ್ತಿತ್ವವನ್ನ ರೂಪಿಸಿಕೊಂಡಂತ ವ್ತಕ್ತಿ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಕಲಾತ್ಮಕವಾಗಿ ತನ್ನನ್ನ ತಾನು ತೊಡಗಿಸಿಕೊಂಡಂತ ವ್ಯಕ್ತಿತ್ವ. ಬಹಳ ದುಃಖ ಆಗ್ತಿದೆ. ನನ್ನ ಅಲ್ಲಮ ಚಿತ್ರದಲ್ಲಿ ಬಸವಣ್ಣನ ಪಾತ್ರ ಮಾಡಿದ್ದ. ಬಹಳ ಶಿಸ್ತಿನ ಸಿಪಾಯಿ. ಕೆಲಸ ಅಂದ್ರೇನೇ ಎಲ್ಲಾ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ರಂಗಭೂಮಿಯ ನಂಟು ಬಹಳ ದೊಡ್ಡದು. ಅವನು ಸಂಚಾರಿ ತಂಡದಲ್ಲಿ, ನಮ್ಮದು ಬೆನಕ ತಂಡದಲ್ಲಿ. ಸೋದರ ತಂಡಗಳ ಥರ ಕೆಲಸ ಮಾಡ್ತಿದ್ವಿ. ಸಂಚಾರಿ ತಂಡದ ಬಹಳ ಅದ್ಭುತವಾದ ಕೊಡುಗೆ ಸಂಚಾರಿ ವಿಜಯ್​. ಅವನು ಮೊದಲ ಬಾರಿ ರಾಷ್ಟ್ರ ಪ್ರಶಸ್ತಿ ತೆಗೆದುಕೊಳ್ಳಬೇಕಾದ್ರೆ ಬಹಳ ಸಂಭ್ರಮಿಸಿದ್ವಿ. ದೊಡ್ಡ ಪರದೆಯಲ್ಲೇ ಅದನ್ನ ಹಾಕಿ ಅವನು ಪ್ರಶಸ್ತಿ ತೆಗೆದುಕೊಳ್ಳೋದನ್ನ ನೋಡಿದ್ವಿ. ಅಷ್ಟು ಖುಷಿಯಾಗಿತ್ತು. ಅಂಥಾ ಖುಷಿಯನ್ನ ಏಕ್​ಧಮ್​ ದೇವರು ಕರೆಸಿಕೊಂಡು ಬಿಟ್ಟ. ನಿಜವಾಗಿಯೂ ನನ್ನ ಒಬ್ಬ ಕಿರಿಯ ಸಹೋದರನನ್ನ ಕಳೆದುಕೊಂಡ ಹಾಗಾಗಿದೆ.

ಹಿರೋಯಿಸಂ ಅನ್ನೋ ಪದವೇ ಬಹಳ ಕೆಟ್ಟದ್ದು. ಒಂದು ಸಿನಿಮಾ ಕೇವಲ ಒಬ್ಬ ಹೀರೋಯಿಂದ ಆಗೋದಿಲ್ಲ. ಸಿನಿಮಾ ಅನ್ನೋದೇ ಟೀಂ ವರ್ಕ್​. ಆ ಟೀಂ ವರ್ಕ್​ನಲ್ಲಿ ತನ್ನನ್ನ ತಾನು ಗುರುತಿಸಿಕೊಂಡವನು ನಮ್ಮ ವಿಜಯ್​. ವ್ಯಕ್ತಿತ್ವ ಅನ್ನೋದು ನಮ್ಮ ಜೊತೆಯಲ್ಲೇ ಬೆಳೆಯುತ್ತೆ, ನಮ್ಮ ಬದುಕಿನಲ್ಲಿ ಬೆಳೆಯುತ್ತೆ. ಆ ವ್ಯಕ್ತಿತ್ವವನ್ನ ರೂಪಿಸಿಕೊಳ್ಳಬೇಕಾದ್ದು ಒಬ್ಬ ನಟನ ಕರ್ತವ್ಯ. ಆ ಕರ್ತವ್ಯವನ್ನ ಸಾಮಾಜಿಕವಾಗಿ, ಜವಾಬ್ದಾರಿಯುತವಾಗಿ ನಿರ್ವಹಿಸಸಿದವನು ನಮ್ಮ ವಿಜಯ್​. ಬಹಳ ಅದ್ಭುತವಾಗಿ ನಿರ್ವಹಿಸಿದ್ದಾನೆ. ಅದರ ಬಗ್ಗೆ ಎರಡು ಮಾತಿಲ್ಲ. ಜೀವನದಲ್ಲಿ ಇನ್ನಷ್ಟು ಆಗುತ್ತೆ ಅಂತ ಕನಸುಗಳನ್ನ ಇಟ್ಟುಕೊಂಡವನು. ಅವನು ಇನ್ನಷ್ಟು ಮಾಡ್ತಾನೆ ಅಂತ ಕನಸುಗಳನ್ನ ಇಟ್ಟುಕೊಂಡವರು ನಾವು. ಆ ಕನಸುಗಳನ್ನೆಲ್ಲಾ ದೇವರು ಭಗ್ನ ಮಾಡಿಬಿಟ್ಟ.

ಟಿ.ಎಸ್​ ನಾಗಾಭರಣ, ಹಿರಿಯ ನಟ-ನಿರ್ದೇಶಕ

The post ಅವನ ಕನಸುಗಳನ್ನ ದೇವರು ಭಗ್ನ ಮಾಡ್ಬಿಟ್ಟ..ನನ್ನ ಸೋದರನನ್ನ ಕಳೆದುಕೊಂಡಿದ್ದೇನೆ- ಟಿ.ಎಸ್​ ನಾಗಾಭರಣ appeared first on News First Kannada.

Source: newsfirstlive.com

Source link