ಸುಕೇಶ್ ಡಿ.ಎಚ್
ದಣಿವರಿಯದ ನಾಯಕನಿಗೆ ಸಾಕಿನ್ನು ನೀವು ದಣಿವಾರಿಸಿಕೊಳ್ಳಿ ಎನ್ನಲು ಸಿದ್ಧತೆ ಆರಂಭವಾಗಿದೆ. ಆದರೆ ಅದನ್ನ ಹೇಳೋದು ಹೇಗೆ ಅನ್ನೋದೆ ಸದ್ಯದ ಗೊಂದಲ. ದೆಹಲಿ ನಾಯಕರಿಗೆ ಹೇಳುವ ಮನಸ್ಸಿದೆ. ರಾಜ್ಯ ನಾಯಕರುಗಳಿಗೆ ಆ ಬೆಳವಣಿಗೆಯ ನಂತರದ ಆಗು ಹೋಗುಗಳ ಬಗ್ಗೆ ತರಾವರಿ ಕನಸುಗಳಿವೆ, ಆಸೆಗಳಿವೆ, ಅರ್ಹತೆಗೂ ಮೀರಿದ ನಿರೀಕ್ಷೆಗಳಿವೆ.ಹೌದು ಇದು ದಣಿವರಿಯದ ನಾಯಕ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರನ್ನ ಮಾಜಿ ಮುಖ್ಯಮಂತ್ರಿ ಮಾಡಲು ಪಕ್ಷದ ಮಟ್ಟದಲ್ಲಿ ಆರಂಭವಾಗಿರುವ ಸಿದ್ಧತೆಯ ಸ್ಯಾಂಪಲ್. ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಖಾತೆ ತೆರೆಯಲು ಬಿಜೆಪಿ ಈಗಲು ಹೆಣಗಾಡುತ್ತಿದೆ. ಆದರೆ ರಾಜ್ಯದ ಮಟ್ಟಿಗೆ ಹೇಳುವುದಾದರೆ ಒಂದುವರೆ ದಶಕದ ಹಿಂದೆಯೇ ಕರ್ನಾಟಕದ ಬಾಗಿಲು ಬಿಜೆಪಿಗೆ ತೆರೆದುಕೊಂಡಿತ್ತು. ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಗೆ ವಾಜಪೇಯಿ, ಎಲ್.ಕೆ.ಅಡ್ವಾಣಿ, ನರೇಂದ್ರ ಮೋದಿ ಹೀಗೆ ಬೇರೆ ಬೇರೆ ಹೆಸರುಗಳು ಆಯಾ ಕಾಲ ಘಟ್ಟದಲ್ಲಿ ಮುನ್ನಲೆಗೆ ಬಂದಿರಬಹುದು. ಆದರೆ ಕಳೆದ 3-4 ದಶಕದಿಂದ ರಾಜ್ಯ ಬಿಜೆಪಿ ಪಾಲಿಗೆ ರೇಸ್‍ನಲ್ಲಿ ಇರುವ ಏಕೈಕ ಹೆಸರು ಯಡಿಯೂರಪ್ಪ ಮಾತ್ರ. ಬಿ.ಬಿ.ಶಿವಪ್ಪ, ಎ.ಕೆ.ಸುಬ್ಬಯ್ಯ ಅನಂತ ಕುಮಾರ್, ಈಶ್ವರಪ್ಪ ಮುಂತಾದ ನಾಯಕರು ಜೊತೆಗಿದ್ದರು, ಬಲ ತುಂಬಿದರು ಅನ್ನೋದು ನಿಜವಾದರೂ ರಾಜ್ಯ ಬಿಜೆಪಿಗೆ ಕಳೆದ ಮೂರು ನಾಲ್ಕು ದಶಕಗಳಿಂದ ಒಂದೇ ಹೆಸರು ಆಸರೆ ಅದು ಯಡಿಯೂರಪ್ಪ, ಯಡಿಯೂರಪ್ಪ ಮತ್ತು ಯಡಿಯೂರಪ್ಪ.

ಆದರೆ ಕಾವೇರಿ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲನ್ನ ಕರ್ನಾಟಕದಲ್ಲಿ ತೆರೆದು ಭವ್ಯ ಸ್ವಾಗತ ಕೋರಿದ ಯಡಿಯೂರಪ್ಪರಿಗೆ ಇದು ವಿಶ್ರಾಂತಿಯ ಕಾಲ ಅನ್ನೋದು ಬಹುತೇಕ ಬಿಜೆಪಿ ನಾಯಕರ ಅಭಿಪ್ರಾಯ. ವಯಸ್ಸಿನ ಕಾರಣ, ಆರೋಗ್ಯದ ದೃಷ್ಟಿ ಎಲ್ಲವು ಯಡಿಯೂರಪ್ಪ ಸಾಕು ಹೊಸತನ ಬೇಕು ಅನ್ನೋದನ್ನ ಸಾರಿ ಸಾರಿ ಹೇಳುತ್ತಿದೆ. ಬೆಕ್ಕಿಗಾದರೆ ಗಂಟೆ ಕಟ್ಟಿಬಿಡಬಹುದಿತ್ತು. ಆದರೆ ರಾಜಾ ಹುಲಿಗೆ ಮನವೊಲಿಕೆಯ ಗಂಟೆ ಕಟ್ಟಬೇಕಿದೆ. ಪಕ್ಷಕ್ಕೆ ಹಿನ್ನಡೆಯಾಗದಂತೆ, ಯಡಿಯೂರಪ್ಪ ಮನಸ್ಸಿಗೆ ನೋವಾಗದಂತೆ ಬೆಣ್ಣೆಯಿಂದ ಕೂದಲು ತೆಗೆಯಬೇಕು. ಆದರೆ ಅದನ್ನು ತೆಗೆಯುವವರು ಯಾರು ಮತ್ತು ಹೇಗೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ.

ಅಷ್ಟಕ್ಕೂ ಕುಮಾರಸ್ವಾಮಿ ಸರ್ಕಾರವನ್ನ ಪತನಗೊಳಿಸಿ ಆಪರೇಷನ್ ಕಮಲವನ್ನ ಯಶಸ್ವಿಯಾಗಿ ಮಾಡಿ ಮುಗಿಸಿದ ಯಡಿಯೂರಪ್ಪ ರಾಜ ಸಿಂಹಾಸನವನ್ನ ಏರಿದ್ದರೂ ಅದು ಕೇವಲ ಒಂದು ವರ್ಷ ಮಾತ್ರ ಅನ್ನೋ ಮಾತು ಆರಂಭದಿಂದಲೂ ಕೇಳಿ ಬಂದಿತ್ತು. ಒಂದು ವರ್ಷ ಕಳೆದು ಅಂತೆ ಕಂತೆ ಎನ್ನುವಷ್ಟರಲ್ಲಿ ಕೋವಿಡ್ ಹಾವಳಿ ಎಲ್ಲರ ಬಾಯಿ ಮುಚ್ಚಿಸಿತು. ಈಗ ಕರೋನಾ ಎರಡನೆ ಅಲೆಯ ನಡುವೆ ಯಡಿಯೂರಪ್ಪ ಪದಚ್ಯುತಿಯ ಎರಡನೆ ಅಲೆಯೂ ಬೀಸತೊಡಗಿದೆ. ಆದರೆ ಒಂದಂತೂ ಸತ್ಯ. ವಯಸ್ಸಿನ ಕಾರಣವು ಸೇರಿದಂತೆ ಬೇರೆ ಬೇರೆ ಕಾರಣಗಳಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲಿನಷ್ಟು ಪ್ರಬಲರಾಗಿ ಉಳಿದಿಲ್ಲ. ಬಿಜೆಪಿ ಹೈಕಮಾಂಡ್ ಸಹಾ ಈ ಮೊದಲಿನಂತೆ ದುರ್ಬಲವಾಗಿಯು ಇಲ್ಲ. ಆದರೆ ಯಡಿಯೂರಪ್ಪ ಅನ್ನುವ ಮಾಸ್ ಲೀಡರನ್ನ ಸಿಎಂ ಕುರ್ಚಿಯಿಂದ ಇಳಿಸುವುದು ಬಿಜೆಪಿ ಹೈ ಕಮಾಂಡ್‍ಗೆ ಅಷ್ಡು ಸುಲಭದ ಮಾತಂತು ಅಲ್ಲಾ. ಆಪರೇಷನ್ ಸಕ್ಸಸ್, ಪೇಷಂಟ್ ಡೆಡ್ ಅನ್ನುವಂತಾದರೆ ರಾಜ್ಯ ಬಿಜೆಪಿಯ ಹಡಗಿಗೆ ತೂತು ಬೀಳೋದು ಗ್ಯಾರಂಟಿ. ಆದ್ದರಿಂದ ಆಪರೇಷನ್ ಯಡಿಯೂರಪ್ಪದಲ್ಲಿ ಪೇಶೆಂಟ್ ಸೇಫಾಗಬೇಕು ಆಪರೇಷನ್ ಸಕ್ಸಸ್ ಆಗಬೇಕಿದೆ.

ಅಷ್ಟಕ್ಕೂ ಕರೋನಾ ತೀವ್ರ ಸಂಕಷ್ಟದ ನಡುವೆ ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಆರಂಭವಾಗಿದ್ದು ಯಾಕೆ…? ರಾಜಕಾರಣದ ಪಾಲಿಗೆ ಮುಂದಿನ ಎರಡು ವರ್ಷ ಅನ್ನೋ ಶಾರ್ಟ್ ಟೈಮ್ ಹಾಗೂ ವ್ಯಕ್ತಿಗತ ಹಿಡಿತದಿಂದ ಪಕ್ಷದ ಹಿಡಿತಕ್ಕೆ ರಾಜ್ಯ ಬಿಜೆಪಿಯನ್ನ ತರಲೇಬೇಕು ಅನ್ನೋ ಬಿಜೆಪಿ ಹೈಕಮಾಂಡ್ ಹಾಗೂ ಸಂಘ ಪರಿವಾರದ ಲೆಕ್ಕಾಚಾರ. ಯಡಿಯೂರಪ್ಪ ಬದಲಾವಣೆಯ ಮಾತು ಕೇಳಿ ಬರುತ್ತಿದ್ದಂತೆ ಡಜನ್‍ಗೂ ಹೆಚ್ಚು ಹೆಸರುಗಳು ಸಿಎಂ ರೇಸ್‍ಗೆ ಕೇಳಿ ಬರತೊಡಗಿವೆ. ಅರವಿಂದ ಬೆಲ್ಲದ್, ಪ್ರಹ್ಲಾದ್ ಜೋಷಿ, ಮುರುಗೇಶ್ ನಿರಾಣಿ, ಲಕ್ಷಣ ಸವದಿ, ಬಸವರಾಜ್ ಬೊಮ್ಮಾಯಿ, ಅಶ್ವಥ್ ನಾರಾಯಣ, ಆರ್.ಅಶೋಕ್, ಗೋವಿಂದ ಕಾರಜೋಳ ಹೀಗೆ ಸಾಲು ಸಾಲು ಹೆಸರುಗಳು ಕೇಳಿ ಬರತೊಡಗಿವೆ. ಇವೆಲ್ಲ ಹೆಸರುಗಳನ್ನ ಸೈಡ್ ಲೈನ್ ಮಾಡಿ ಬಿ.ಎಲ್.ಸಂತೋಷ್ ಹೆಸರೇ ಅಂತಿಮ ರೇಸ್‍ಗೆ ಬಂದರೂ ಆಶ್ಚರ್ಯವಿಲ್ಲ. ಸಿಎಂ ಕನವರಿಕೆಯಲ್ಲಿರುವ ಬಹುತೇಕ ನಾಯಕರು ಸೂಟು ಬೂಟು ಹೊಲಿಸಿಕೊಂಡು ಸಿದ್ಧವಾದಂತಿದೆ. ಕೆಲವರಿಗೆ ಪಕ್ಷದ ಸೂಟು, ಇನ್ನೂ ಕೆಲವರಿಗೆ ಆರ್‍ಎಸ್‍ಎಸ್ ಕೋಟು, ಮತ್ತೆ ಕೆಲವರಿಗೆ ಜಾತಿ ಲೆಕ್ಕಾಚಾರದ ಕುರ್ತಾ ಪೈಜಾಮ ಎಲ್ಲವು ಆಸರೆಯಾಗಿರಬಹುದು. ಆದರೆ ಯಡಿಯೂರಪ್ಪನವರ ನಾಯಕತ್ವಕ್ಕೆ ಸರಿ ಸಮಾನಾದ ನಾಯಕ ಯಾರು…? ಅನ್ನೋ ಪ್ರಶ್ನೆಗೆ ಮಾತ್ರ ಯಾರಲ್ಲೂ ಉತ್ತರವಿಲ್ಲ. ಆಸೆ ಇದ್ದ ಮಾತ್ರಕ್ಕೆ ಯಾರೂ ನಾಯಕರಾಗಲಾರರು. ಆದರೆ 2008ರ ಯಡಿಯೂರಪ್ಪನವರ ಆಡಳಿತ ಅವರಲ್ಲಿದ್ದ ಚುರುಕುತನ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುತ್ತಿದ್ದ ರೀತಿ ಎಲ್ಲವು ಬಿಜೆಪಿ ಸರ್ಕಾರದಿಂದ ಅಭಿವೃದ್ಧಿಯ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದವು. ಆದರೆ 2021 ರ ಯಡಿಯೂರಪ್ಪರಿಂದ ಹೆಚ್ಚಿನದ್ದೇನು ನಿರೀಕ್ಷೆ ಮಾಡುವಂತಿಲ್ಲ. ವಯಸ್ಸಿನ ಕಾರಣವೋ, ರಾಜ್ಯದ ಆರ್ಥಿಕ ಸ್ಥಿತಿಗತಿಯೋ ಅಥವಾ ವೈಯಕ್ತಿಕವಾಗಿ ಯಡಿಯೂರಪ್ಪನವರೇ ಆಸಕ್ತಿ ಕಳೆದುಕೊಂಡರೋ ಗೊತ್ತಿಲ್ಲ. ಆದರೆ ಸರ್ಕಾರ ಮುನ್ನಡೆಸುವುದರಲ್ಲಿ ಇದು 2008ರ ಯಡಿಯೂರಪ್ಪ ಅಲ್ಲ ಅನ್ನುವುದಂತು ಸ್ಪಷ್ಟ. ಕೇವಲ ಖುರ್ಚಿ ಆಸೆಗಾಗಿ ಯಡಿಯೂರಪ್ಪ ದಿನ ದೂಡುವ ಅವಶ್ಯಕತೆಯು ಇಲ್ಲ. ಆದರೆ ಯಡಿಯೂರಪ್ಪ ನಂತರ ಯಾರು ಅಂದರೆ ಯಡಿಯೂರಪ್ಪರಷ್ಟೆ ಪ್ರಬಲ ನಾಯಕ ಯಾರು ಅನ್ನೋ ಪ್ರಶ್ನೆಗೆ ರಾಜ್ಯ ಬಿಜೆಪಿ ನಾಯಕರಿರಲಿ, ಕೇಂದ್ರ ಬಿಜೆಪಿ ನಾಯಕರಿರಲಿ ಮುಖ ಮುಖ ನೋಡಿಕೊಳ್ಳುವ ಪರಿಸ್ಥಿತಿಯಂತೂ ಖಂಡಿತವಾಗಿ ಇದೆ.

ಬಿಜೆಪಿಯ ಭವಿಷ್ಯದ ದೃಷ್ಟಿಯಿಂದ ಯಡಿಯೂರಪ್ಪ ಬದಲಾವಣೆ ಪ್ರಯತ್ನ ಆರಂಭವಾಗಿರಬಹುದು. ಆದರೆ ಅವರನ್ನ ವಿಶ್ವಾಸಕ್ಕೆ ತಗೆದುಕೊಂಡು ಮನವೊಲಿಕೆ ಮಾಡಿ ಇಳಿಸಿದರಷ್ಟೆ ರಾಜ್ಯ ಬಿಜೆಪಿ ಸೇಫ್. ಹೈಕಮಾಂಡ್ ಸ್ಟ್ರಾಂಗ್ ಇದೆ ನಾವು ಆಡಿದ್ದೇ ಆಟ ಅಂದುಕೊಂಡರೆ ಪರಿಣಾಮವೇ ಬೇರೆ ಆಗಬಹುದು. 2013ರಲ್ಲಿ ಯಡಿಯೂರಪ್ಪ ಸಿಟ್ಟು ಮಾಡಿಕೊಂಡು ಪಕ್ಷ ಒಡೆದು ಕೆಜೆಪಿ ಕಟ್ಟಿದಾಗ ಇದ್ದ ಪರಿಸ್ಥಿತಿ ಈಗಿಲ್ಲ. ಹಾಗೆಯೇ ಅಷ್ಟೆ ಹಟದಲ್ಲಿ ಬಿಜೆಪಿ ಒಡೆದು ಇನ್ನೊಂದು ಪಕ್ಷ ಕಟ್ಟುವ ಶಕ್ತಿಯು ಯಡಿಯೂರಪ್ಪನವರಲ್ಲಿ ಉಳಿದಿಲ್ಲ. ಈ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಜೊತೆ ಅವರದೇ ಸಮುದಾಯದ ನಾಯಕರುಗಳು ಗಟ್ಟಿಯಾಗಿ ನಿಲ್ಲಲಾರರು. ಆದರೂ ಬಿ.ಎಸ್.ಯಡಿಯೂರಪ್ಪನವರಿಗೆ ಗೌರವದ ವಿದಾಯ ಹೇಳದ ಹೊರತು ಗೊಂದಲ ಬಗೆಹರಿಯುವ ಲಕ್ಷಣವು ಕಾಣುತ್ತಿಲ್ಲ. ಯಡಿಯೂರಪ್ಪ ಕೆಲವು ಷರತ್ತಿನೊಂದಿಗೆ ಬದಲಾವಣೆಗೆ ಒಪ್ಪಿಕೊಳ್ತಾರೆ ಅನ್ನುವ ಮಾತು ಬಿಜೆಪಿ ಪಾಳಯದಿಂದಲೇ ಕೇಳಿ ಬರತೊಡಗಿವೆ. ಆದರೆ ಪುತ್ರ ವ್ಯಾಮೋಹ ಹಿಡಿದು ಕುಳಿತರೆ ಮಾತ್ರ ಕೇಂದ್ರ ನಾಯಕರಿಗೆ ಯಡಿಯೂರಪ್ಪ ಪ್ರಕರಣ ಮತ್ತಷ್ಟು ಕಗ್ಗಂಟಾಗಲಿದೆ. ಒಟ್ಟಾರೆ ಕೇಂದ್ರ ಬಿಜೆಪಿ ನಾಯಕರಿಗೆ ಬದಲಾವಣೆಯ ಮನಸ್ಸಿದೆ. ರಾಜ್ಯ ನಾಯಕರುಗಳಿಗೆ ಥರಾವರಿ ಕನಸುಗಳಿವೆ. ಆದರೆ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರ ಮನಸ್ಸಲ್ಲಿ ಏನಿದೆ..? ಇದಕ್ಕೆ ಕಾಲವೇ ಉತ್ತರಿಸಬೇಕು.

The post ಅವರಿಗೆ ಮನಸ್ಸಿದೆ ಇವರಿಗೆ ಕನಸಿದೆ ಆದರೆ…? appeared first on Public TV.

Source: publictv.in

Source link