ನವದೆಹಲಿ: ಕೊರೊನಾ ಎರಡನೇ ಅಲೆ ವ್ಯಾಪಕವಾದ ಸಂದರ್ಭದಲ್ಲಿ ಆಕ್ಸಿಜನ್ ಅಭಾವದ ವಿಚಾರ ದೇಶಾದ್ಯಂತ ಸದ್ದು ಮಾಡಿತ್ತು. ಅದ್ರಲ್ಲೂ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನಮಗೆ ಕೇಂದ್ರದಿಂದ ಸಮರ್ಪಕ ಪ್ರಮಾಣದ ಆಕ್ಸಿಜನ್ ಸಿಗುತ್ತಿಲ್ಲ ಅಂತ ದೂರಿದ್ದರು. ಆದ್ರೆ ಕೇಜ್ರಿವಾಲ್ ಸರ್ಕಾರ ದೆಹಲಿಯಲ್ಲಿ ಬಳಸಿಕೊಂಡಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಆಕ್ಸಿಜನ್​ಗೆ ಬೇಡಿಕೆ ಇಟ್ಟಿತ್ತು ಅಂತ ಹೇಳಲಾಗಿದೆ.

ಆಕ್ಸಿಜನ್ ಅಭಾವದ ವಿಚಾರ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಬೆನ್ನಲ್ಲೇ ಆಮ್ಲಜನಕ ಪೂರೈಕೆಯ ಆಡಿಟಿಂಗ್ ಮಾಡಲು ಸೂಚಿಸಲಾಗಿತ್ತು. ಸುಪ್ರೀಂ ಕೋರ್ಟ್​ ನೇಮಿಸಿದ್ದ ಆಕ್ಸಿಜನ್ ಆಡಿಟ್​ ಟೀಂ ಈಗ ವರದಿ ನೀಡಿದ್ದು, ಆಪ್ ಸರ್ಕಾರ ಏಪ್ರಿಲ್ 25ರಿಂದ ಮೇ 4ರ ಅವಧಿಯಲ್ಲಿ ಬಳಕೆ ಮಾಡಿಕೊಂಡಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಮೆಡಿಕಲ್ ಆಕ್ಸಿಜನ್ ಕೇಳಿತ್ತು ಅಂತ ತಿಳಿಸಿದೆ.

ದೆಹಲಿಗೆ ಸರಿಸುಮಾರು 300 ಮೆಟ್ರಿಕ್ ಟನ್ ಆಮ್ಲಜನಕ ಬೇಕಾಗಿತ್ತು. ಆದರೆ ಕೇಜ್ರಿವಾಲ್ ಸರ್ಕಾರ ಸುಮಾರು 4 ಪಟ್ಟು.. ಅಂದ್ರೆ 1,200 ಮೆಟ್ರಿಕ್ ಟನ್​ನಷ್ಟು ಆಮ್ಲಜನಕ ಬೇಕೆಂದು ಕೇಳಿತ್ತು ಎಂದು ಈ ವರದಿ ಹೇಳಿದೆ. ಆಕ್ಸಿಜನ್​ ಬೇಡಿಕೆಯ ಲೆಕ್ಕಾಚಾರದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರೋದು ಈ ವ್ಯತ್ಯಾಸಕ್ಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಾಷ್ಟ್ರ ರಾಜಧಾನಿಗೆ ಅಗತ್ಯಕ್ಕಿಂತ ಹೆಚ್ಚುವರಿ ಆಮ್ಲಜನಕ ಪೂರೈಕೆಯಾದ ಕಾರಣ, ಹೆಚ್ಚಿನ ಕೊರೊನಾ ಪ್ರಕರಣಗಳಿದ್ದ 12 ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆಯ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದೆ ಎಂದು ಆಡಿಟ್​ ತಂಡ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಅಲ್ಲದೇ ಎಲ್‌ಎನ್‌ಜೆಪಿ ಮತ್ತು ಏಮ್ಸ್ ಸೇರಿದಂತೆ ಹಲವಾರು ಆಸ್ಪತ್ರೆಗಳಲ್ಲಿ ಆಮ್ಲಜನಕ ಟ್ಯಾಂಕರ್‌ಗಳನ್ನ ಆಫ್​ಲೋಡ್​ ಮಾಡಲು ಸಾಧ್ಯವಾಗಿರಲಿಲ್ಲ. ಯಾಕಂದ್ರೆ ಆ ಆಸ್ಪತ್ರೆಗಳ ಟ್ಯಾಂಕ್​ಗಳಲ್ಲಿ ಆಗಲೇ ಶೇಕಡ 75 ರಷ್ಟು ಸಾಮರ್ಥ್ಯದ ಆಕ್ಸಿಜನ್ ಭರ್ತಿ ಇತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಆಕ್ಸಿಜನ್ ಪೂರೈಕೆಗೆ ಈ ಪ್ಯಾನೆಲ್​ ಕೆಲವು ಸಲಹೆಗಳನ್ನೂ ನೀಡಿದೆ;

  • ರಸ್ತೆ ಸಾರಿಗೆ ದುರ್ಬಲವಾಗಿರುವುದರಿಂದ ದೊಡ್ಡ ನಗರಗಳು ತಮ್ಮ ಆಕ್ಸಿಜನ್ ಬೇಡಿಕೆಯ ಕನಿಷ್ಠ 50 ಪ್ರತಿಶತವನ್ನು ಪೂರೈಸಿಕೊಳ್ಳಲು ಸ್ಥಳೀಯವಾಗಿ ಅಥವಾ ನೆರೆಹೊರೆಯಲ್ಲಿ ಆಕ್ಸಿಜನ್ ಉತ್ಪಾದನೆಗೆ ಕಾರ್ಯತಂತ್ರವನ್ನು ರೂಪಿಸಬೇಕು ಅಂತ ಸಮಿತಿ ಶಿಫಾರಸು ಮಾಡಿದೆ.
  • ದೆಹಲಿ ಮತ್ತು ಮುಂಬೈನಲ್ಲಿನ ಜನಸಂಖ್ಯಾ ಸಾಂದ್ರತೆ ಹಿನ್ನೆಲೆ ಈ ಎರಡೂ ಮೆಟ್ರೋ ನಗರಗಳಲ್ಲಿ ಇದನ್ನು ಆದ್ಯತೆಯ ಆಧಾರದ ಮೇಲೆ ಮಾಡಬಹುದಾಗಿದೆ ಎಂದು ಹೇಳಿದೆ.
  • ದೇಶದ ಎಲ್ಲಾ 18 ಮೆಟ್ರೋ ನಗರಗಳು ಆಮ್ಲಜನಕ ಪೂರೈಕೆಯಲ್ಲಿ ಸ್ವಾವಲಂಬಿಯಾಗಿರಬೇಕು. ನಗರದಲ್ಲಿಯೇ ಕನಿಷ್ಠ 100 ಮೆಟ್ರಿಕ್ ಟನ್ ಸಂಗ್ರಹವನ್ನು ಹೊಂದಿರಬೇಕು ಎಂದು ಸಮಿತಿ ಹೇಳಿದೆ.

ಅಂದ್ಹಾಗೆ ದೆಹಲಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ವಿಚಾರ ರಾಷ್ಟ್ರಾದ್ಯಂತ ಸುದ್ದಿಯಾದ ಹಿನ್ನೆಲೆ, ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್. ಷಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ, ಈ ಸಮಸ್ಯೆಯನ್ನು ಪರಿಶೀಲಿಸಲು 12 ಸದಸ್ಯರ ಕಾರ್ಯಪಡೆ ನೇಮಕಕ್ಕೆ  ಆದೇಶಿಸಿತು. ಜೊತೆಗೆ ಆಖ್ಸಿಜನ್ ಪೂರೈಕೆ ಬಗ್ಗೆ ಲೆಕ್ಕಪರಿಶೋಧನಾ ವರದಿ(ಆಡಿಟ್ ರಿಪೋರ್ಟ್​) ಕೇಳಿತ್ತು.

 

The post ಅವಶ್ಯಕತೆಗಿಂತ 4 ಪಟ್ಟು ಹೆಚ್ಚು ಆಕ್ಸಿಜನ್ ಕೇಳಿತ್ತು ಕೇಜ್ರಿವಾಲ್ ಸರ್ಕಾರ; ಜನರ ಜೀವದ ಜತೆ ಚೆಲ್ಲಾಟ? appeared first on News First Kannada.

Source: newsfirstlive.com

Source link