ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಸಂಸದನಿಗೆ ಚಪ್ಪಲಿಯೇಟು ಕೊಡುವುದಾಗಿ ಕೆಸಿಆರ್​ ಪುತ್ರಿ ಕವಿತಾ ಎಚ್ಚರಿಕೆ – Telangana CM KCR Daughter Kavitha Threatens to Hit BJP MP With Chappals After He Alleges She is Joining Congress


ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮತ್ತು ಅವರ ಮಗಳು ಕವಿತಾ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಟಿಆರ್​ಎಸ್​ ಕಾರ್ಯಕರ್ತರು ಹೈದರಾಬಾದ್​​ನಲ್ಲಿ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (TRS) ಶಾಸಕಿ ಕೆ. ಕವಿತಾ ಶುಕ್ರವಾರ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಧರ್ಮಪುರಿ ಅರವಿಂದ್ (Dharmapuri Arvind) ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನಾನು ಆತನನ್ನು ಸೋಲಿಸುತ್ತೇನೆ ಎಂದಿರುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ಮಗಳು ಕವಿತಾ (Kavitha), ಅರವಿಂದ್ ಅವರು ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದರೆ ನಾನು ಅವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮತ್ತು ಅವರ ಮಗಳು, ಸಂಸದೆ ಕವಿತಾ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಟಿಆರ್​ಎಸ್​ ಕಾರ್ಯಕರ್ತರು ಹೈದರಾಬಾದ್​​ನಲ್ಲಿ ಶುಕ್ರವಾರ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಅವರ ಮನೆ ಮೇಲೆ ಕಲ್ಲು ತೂರಾಟ ಮಾಡಿ, ದಾಳಿ ನಡೆಸಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕವಿತಾ ಅವರನ್ನು ಧರ್ಮಪುರಿ ಅರವಿಂದ್ ಸೋಲಿಸಿದ್ದರು.

ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕವಿತಾ ಕುರಿತು ಮಾತನಾಡಿದ್ದ ಧರ್ಮಪುರಿ ಅರವಿಂದ್, ಕವಿತಾ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಅವರು ಟಿಆರ್​ಎಸ್​ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗದಿದ್ದರೆ ಅವರ ಮೇಲೆ ಇಡಿ ದಾಳಿ ನಡೆಸಲಾಗುತ್ತದೆ ಎಂಬ ವರದಿಯನ್ನು ಉಲ್ಲೇಖಿಸಿ ಮಾತನಾಡಿದ್ದರು. ಇದಾದ ಬಳಿಕ ಕವಿತಾರನ್ನು ಬಿಜೆಪಿ ಖರೀದಿ ಮಾಡುತ್ತಿದೆ ಎಂದು ಸುದ್ದಿಗಳು ಪ್ರಸಾರವಾಗಿದ್ದವು. ಅಲ್ಲದೆ, ಅದೇ ಸುದ್ದಿಗೋಷ್ಠಿಯಲ್ಲಿ ಕೆಸಿಆರ್​ ಅವರು ಅತ್ಯಂತ ಮೂರ್ಖ ಮುಖ್ಯಮಂತ್ರಿ ಎಂದು ಅರವಿಂದ್ ಟೀಕಿಸಿದ್ದರು. ಇದಕ್ಕೆ ಟಿಆರ್​ಎಸ್​ ಕಾರ್ಯಕರ್ತರು ಮತ್ತು ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

TV9 Kannada


Leave a Reply

Your email address will not be published.