ಕಾನ್ಪುರ ಟೆಸ್ಟ್ ಡ್ರಾ ಆಗಿದ್ದು, ಭಾರತೀಯ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಆದ್ರೆ 5 ದಿನಗಳ ಕಾಲ ನಡೆದ ಹೋರಾಟ, ಕ್ರಿಕೆಟ್ ಫ್ಯಾನ್ಸ್ಗೆ ಸಖತ್ ಟ್ರೀಟ್ ಅಂತೂ ನೀಡಿದೆ. ಅದರಲ್ಲೂ ಆಫ್ ಸ್ಪಿನ್ನರ್ ಅಶ್ವಿನ್ ಬೌಲಿಂಗ್, ಪಂದ್ಯದ ಹೈಲೆಟ್ ಅಂಶ ಅಂದ್ರೆ ತಪ್ಪಾಗಲ್ಲ.
ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯ, ವಿರೋಚಿತ ಡ್ರಾನಲ್ಲಿ ಅಂತ್ಯ ಕಂಡಿದೆ. ಒಂದೆಡೆ ಪಂದ್ಯದ ಫಲಿತಾಂಶ ಬರದೇ ಇದ್ದದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ರೂ, ಉಭಯ ತಂಡಗಳ ಹಣಾಹಣಿ, ಕ್ರಿಕೆಟ್ನ ಹಬ್ಬದೂಟವನ್ನಂತೂ ಬಡಿಸಿದೆ. ಅದರಲ್ಲೂ ಪಂದ್ಯದ ಆರಂಭಿಕ ದಿನದಿಂದ ಕೊನೆಯ ಹಂತದವರೆಗೂ, ಆಫ್ ಸ್ಪಿನ್ನರ್ ಅಶ್ವಿನ್ ನಡೆಸಿದ ಹೋರಾಟ, ಎಲ್ಲರ ಗಮನ ಸೆಳೆದಿದೆ.
2ನೇ ದಿನದಾಟದ ಅಂತಿಮ ಸೆಷನ್ನಲ್ಲಿ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಆರಂಭಿಕ ಜೋಡಿಯನ್ನ ಬ್ರೇಕ್ ಮಾಡುವಲ್ಲಿ, ಟೀಮ್ ಇಂಡಿಯಾ ವಿಫಲವಾಯ್ತು. ಆದ್ರೆ 3ನೇ ದಿನದಾಟದ ಆರಂಭದಲ್ಲೇ ಬ್ರೇಕ್ ಥ್ರೂ ನೀಡಿದ ಅಶ್ವಿನ್, ಪಂದ್ಯದಲ್ಲಿ ಕಮ್ಬ್ಯಾಕ್ ಮಾಡುವಂತೆ ಮಾಡಿದ್ರು. ಇದೊಂದೆ ಅಲ್ಲ.. ಇಡೀ ಪಂದ್ಯದಲ್ಲಿ ಆ್ಯಷ್ ಕಬಳಿಸಿದ 6 ವಿಕೆಟ್ಗಳೂ, ಕ್ರೂಶಿಯಲ್ಲೇ.!! ಜೊತೆಗೆ ವೆರಿಯೇಷನ್ನಿಂದ ಕೂಡಿದ ಕರಾರುವಕ್ ದಾಳಿ ಇಡೀ ಪಂದ್ಯದಲ್ಲಿ ಭಾರತವನ್ನ ಜೀವಂತವಾಗಿರಿಸುವಂತೆ ಮಾಡಿದ್ದು ಸುಳ್ಳಲ್ಲ.
‘ಅಶ್ವಿನ್ ಪರಿಪೂರ್ಣ ಮ್ಯಾಚ್ ವಿನ್ನರ್’’
‘ನನಗನ್ನಿಸಿದಂತೆ ಅಶ್ವಿನ್ ಒಬ್ಬ ಭಾರತದ ಪರಿಪೂರ್ಣ ಮ್ಯಾಚ್ ವಿನ್ನರ್. ಇವತ್ತು ಅಂತಹ ಕಷ್ಟಕರ ವಿಕೆಟ್ಸ್ ನಾವು ನೋಡಿದ್ದೇವೆ. ಆತ ಮೂರನೇ ದಿನದಾಟದ ಬೆಳಗ್ಗೆ ಇಡೀ ತಂಡವನ್ನ ಮತ್ತೆ ಆಟದಲ್ಲಿ ಜೀವಂತವಾಗಿರಿಸುವಂತೆ ಮಾಡಿದ. ಅದು 11ನೇ ಓವರ್ನಲ್ಲಿ. ಆಗ ಮಾಡಿದ ಬೌಲಿಂಗ್ ಅದ್ಭುತವಾಗಿತ್ತು. ಅದಾದ ಬಳಿಕ ಕೊನೆಯ ದಿನದಾಟದಲ್ಲೂ ಇಂತಹ ವಿಕೆಟ್ಸ್ನಲ್ಲಿ ತನ್ನ ಅದ್ಭುತ ಬೌಲಿಂಗ್ನಿಂದ ಪಂದ್ಯದಲ್ಲಿ ಜೀವಂತವಾಗಿರುವಂತೆ ಮಾಡಿದ. ಇದು ಆತನ ಕೌಶಲ್ಯ ಹಾಗೂ ಸಾಮರ್ಥ್ಯವನ್ನ ತೋರಿಸುತ್ತೆ’
ರಾಹುಲ್ ದ್ರಾವಿಡ್, ಕೋಚ್
ದ್ರಾವಿಡ್ ಹೇಳಿದಂತೆ, ಅಶ್ವಿನ್ ಟೀಮ್ ಇಂಡಿಯಾದ ಪರಿಪೂರ್ಣ ಮ್ಯಾಚ್ ವಿನ್ನರ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ಈ ಪಂದ್ಯದಲ್ಲಿ ದಾಖಲಿಸಿದ ವಿಶ್ವ ದಾಖಲೆಯನ್ನೂ ಸಾಕ್ಷಿ. ತನ್ನ ಸಾಲಿಡ್ ಸ್ಪೆಲ್ನೊಂದಿಗೆ ಕಿವೀಸ್ ಪಾಳಯವನ್ನ ಕಾಡಿದ ಅಶ್ವಿನ್, ಟೀಮ್ ಇಂಡಿಯಾ ಪರ ಹೆಚ್ಚು ಟೆಸ್ಟ್ ವಿಕೆಟ್ ಕಬಳಿಸಿದ ಬೌಲರ್ಗಳ ಪಟ್ಟಿಯಲ್ಲಿ ಹರ್ಭಜನ್ ಸಿಂಗ್ರನ್ನ ಹಿಂದಿಕ್ಕಿ 3ನೇ ಸ್ಥಾನಕ್ಕೇರಿದ್ರು
ಟೆಸ್ಟ್ನಲ್ಲಿ ಭಾರತದ ಪರ ಹೆಚ್ಚು ವಿಕೆಟ್
ಟೆಸ್ಟ್ ಫಾರ್ಮೆಟ್ನಲ್ಲಿ ಭಾರತದ ಪರ 150 ಇನ್ನಿಂಗ್ಸ್ಗಳಲ್ಲಿ 419 ವಿಕೆಟ್ ಕಬಳಿಸಿರೋ ಅಶ್ವಿನ್, ಕುಂಬ್ಳೆ, ಕಪಿಲ್ ನಂತರ 3ನೇ ಸ್ಥಾನದಲ್ಲಿದ್ದಾರೆ. 190 ಇನ್ನಿಂಗ್ಸ್ನಲ್ಲಿ 417 ವಿಕೆಟ್ ಕಬಳಿಸಿರೋ ಹರ್ಭಜನ್ ಸಿಂಗ್ 4ನೇ ಸ್ಥಾನದಲ್ಲಿದ್ದಾರೆ.
ಆಶ್ವಿನ್ ಈ ಸಾಧನೆಗೆ ಭಜ್ಜಿಯೇ ಪ್ರೇರಣೆ..!
ಹೌದು..! ಕಾನ್ಪುರ ಟೆಸ್ಟ್ ಪಂದ್ಯದ ಅಮೋಘ ಪ್ರದರ್ಶನದೊಂದಿಗೆ ಅಶ್ವಿನ್, ಹರ್ಭಜನ್ ಸಿಂಗ್ ದಾಖಲೆಯನ್ನ ಮುರಿದಿದ್ದಾರೆ. ಆದ್ರೆ, ಇಂದು ಅಶ್ವಿನ್ ಈ ಸಾಧನೆ ಮಾಡಲು ಸ್ಪೂರ್ತಿಯಾಗಿದ್ದೇ ಭಜ್ಜಿ ಅನ್ನೋ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
‘ಸಾಧನೆಗೆ ಹರ್ಭಜನ್ ಸ್ಪೂರ್ತಿ’
‘ಇದೊಂದು ಅದ್ಭುತವಾದ ಮೈಲಿಗಲ್ಲು. ಹರ್ಭಜನ್ ಸಿಂಗ್ ಅಂದು ಆಸ್ಟ್ರೇಲಿಯಾ ವಿರುದ್ಧ 2001ರಲ್ಲಿ ಅಮೋಘ ಬೌಲಿಂಗ್ ನಡೆಸಿದ್ರು. ನಾನು ಆ ದಿನ ಒಬ್ಬ ಆಫ್ ಸ್ಪಿನ್ನರ್ ಆಗುತ್ತೇನೆ ಎಂದು ಊಹಿಸಿಯೂ ಇರಲಿಲ್ಲ. ಅವರಿಂದ ಸ್ಪೂರ್ತಿ ಪಡೆದುಕೊಂಡ ನಾನು ಆಫ್ ಸ್ಪಿನ್ ಬೌಲಿಂಗ್ ಆಯ್ಕೆ ಮಾಡಿಕೊಂಡೆ. ಈಗ ಇಲ್ಲಿದ್ದೇನೆ. ನನಗೆ ಸ್ಪೂರ್ತಿಯಾಗಿದ್ದಕ್ಕೆ ಧನ್ಯವಾದಗಳು ಭಜ್ಜಿ ಪಾ’
ಅಶ್ವಿನ್, ಸ್ಪಿನ್ನರ್
ಕೇವಲ ಕಾನ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮಾತ್ರವಲ್ಲ.. 2021ರ ವರ್ಷದೂದ್ದಕ್ಕೂ ಅಶ್ವಿನ್, ಸಾಲಿಡ್ ಫರ್ಪಾಮೆನ್ಸ್ ನೀಡಿದ್ದಾರೆ. ಆಡಿದ 7 ಪಂದ್ಯಗಳಲ್ಲೇ 44 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಜೊತೆಗೆ ಈ ವರ್ಷ ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ಗಳ ಪಟ್ಟಿಯಲ್ಲಿ ಶಾಹೀನ್ ಶಾ ಅಫ್ರಿದಿಯೊಂದಿಗೆ, ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
ತಾನೆಂತಾ ಶ್ರೇಷ್ಠ ಬೌಲರ್ ಅನ್ನೋದನ್ನ ಅಶ್ವಿನ್ ವರ್ಷದಿಂದ ವರ್ಷಕ್ಕೆ, ಪಂದ್ಯದಿಂದ ಪಂದ್ಯಕ್ಕೆ ಪ್ರೂವ್ ಮಾಡ್ತಾಲೆ ಇದ್ದಾರೆ. ಆದ್ರೆ, ಟೀಮ್ ಮ್ಯಾನೇಜ್ಮೆಂಟ್ ಮಾತ್ರ.. ಆಗಾಗ ಅಶ್ವಿನ್ರನ್ನ ತಂಡದಿಂದ ಕೈ ಬಿಡೋ ನಿರ್ಧಾರವನ್ನ ಮಾಡುತ್ತಲೇ ಬಂದಿದೆ. ಹೀಗಾಗಿಯೇ ಸ್ಪಿನ್ ದಿಗ್ಗಜ ಡೇನಿಯನ್ ವೆಟ್ಟೊರಿ, ಅಶ್ವಿನ್ ಬದಲಾಗಿ ಜಡೇಜಾ ಆಯ್ಕೆ ಮಾಡೋದು ವಿಚಿತ್ರವಾಗಿ ಕಾಣುತ್ತೆ ಅಂತ ಹೇಳಿಕೆ ನೀಡಿದ್ದು. ಅದೇನೆ ಇದ್ರೂ, ಅಶ್ವಿನ್ ಟೀಮ್ ಇಂಡಿಯಾದ ಬಿಗ್ ಮ್ಯಾಚ್ ವಿನ್ನರ್ ಅನ್ನೋದನ್ನ ಮಾತ್ರ ಅಲ್ಲಗಳೆಯುವಂತಿಲ್ಲ.