ಮುಂಬಯಿ: ರಾಜಸ್ಥಾನ್‌ ರಾಯಲ್ಸ್‌ ಎದುರಿನ ಪಂದ್ಯದಲ್ಲಿ ಭಾರೀ ನಿಯಂತ್ರಣ ಸಾಧಿಸಿದ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಅವರಿಗೆ ಪೂರ್ತಿ ಓವರ್‌ಗಳ ಕೋಟಾ ನೀಡದಿದ್ದುದು ತಮ್ಮ ಕಡೆಯಿಂದ ಆದ ತಪ್ಪು ಎಂಬುದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್‌ ರಿಕಿ ಪಾಂಟಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಅಶ್ವಿ‌ನ್‌ 3 ಓವರ್‌ಗಳಲ್ಲಿ ಒಂದೂ ಬೌಂಡರಿ ಬಿಟ್ಟುಕೊಡದೆ ಕೇವಲ 14 ರನ್‌ ನೀಡುವ ಮೂಲಕ ಡೆಲ್ಲಿಗೆ ಮೇಲುಗೈ ಒದಗಿಸಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಇಬ್ಬರು ಎಡಗೈ ಆಟಗಾರರಾದ ಮಿಲ್ಲರ್‌-ತೇವಟಿಯಾ ಆಡುತ್ತಿದ್ದಾಗ ಅಶ್ವಿ‌ನ್‌ ಅವರನ್ನು ಮುಂದುವರಿಸುವ ಬದಲು ಸ್ಟೋಯಿನಿಸ್‌ ಕೈಗೆ ಪಂತ್‌ ಚೆಂಡು ನೀಡುತ್ತಾರೆ. ಆ ಓವರಿನಲ್ಲಿ 15 ರನ್‌ ಸೋರಿ ಹೋಗುತ್ತದೆ. ಕೊನೆಗೂ ಅಶ್ವಿ‌ನ್‌ ಅವರ 4ನೇ ಓವರ್‌ ಬಾಕಿಯಾಗಿಯೇ ಉಳಿಯುತ್ತದೆ.

“ಖಂಡಿತ ಇದು ನಮ್ಮ ಕಡೆ ಯಿಂದಾದ ತಪ್ಪು. ತಂಡದೊಂದಿಗೆ ಕುಳಿತು ಚರ್ಚಿಸುವಾಗ ಈ ವಿಷಯವನ್ನು ನಾನು ಪ್ರಸ್ತಾವಿಸುತ್ತೇನೆ. ಅಶ್ವಿ‌ನ್‌ ಮೊದಲ ಪಂದ್ಯದಲ್ಲಿ ದುಬಾರಿಯಾದರೂ ಇಲ್ಲಿ ಅಮೋಘ ರೀತಿಯಲ್ಲಿ ಕಮ್‌ಬ್ಯಾಕ್‌ ಮಾಡಿದ್ದರು’ ಎಂಬುದಾಗಿ ಪಾಂಟಿಂಗ್‌ ಹೇಳಿದರು.

ಇಶಾಂತ್‌ ಶರ್ಮಾಗೆ ಹಿಮ್ಮಡಿ ಗಾಯ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಇಶಾಂತ್‌ ಶರ್ಮ ಹಿಮ್ಮಡಿ ನೋವಿನಿಂದ ಬಳಲುತ್ತಿದ್ದಾರೆ ಎಂಬುದನ್ನು ಕೋಚ್‌ ರಿಕಿ ಪಾಂಟಿಂಗ್‌ ಖಚಿತಪಡಿಸಿದ್ದಾರೆ.

“ಇಶಾಂತ್‌ ಶರ್ಮ ಹಿಮ್ಮಡಿ ನೋವಿಗೆ ಸಿಲುಕಿದ್ದಾರೆ. ಆದ್ದರಿಂದ ಆರಂಭಿಕ ಎರಡು ಪಂದ್ಯಗಳಿಂದ ಅವರನ್ನು ಕೈಬಿಡಲಾಗಿತ್ತು. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಮುಂದಿನ ಕೆಲವು ಪಂದ್ಯಗಳಲ್ಲೂ ಇಶಾಂತ್‌ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ’ ಎಂದು ಪಾಂಟಿಂಗ್‌ ಸ್ಪಷ್ಟಪಡಿಸಿದ್ದಾರೆ.

ಇಶಾಂತ್‌ ಶರ್ಮ ಕಳೆದ ಐಪಿಎಲ್‌ನಲ್ಲಿ ಒಂದು ಪಂದ್ಯವನ್ನಾಡಿ ಬಳಿಕ ಸ್ನಾಯು ಸೆಳೆತಕ್ಕೆ ಸಿಲುಕಿ ಕೂಟದಿಂದಲೇ ಹೊರಬಿದ್ದಿದ್ದರು.

ಕ್ರೀಡೆ – Udayavani – ಉದಯವಾಣಿ
Read More