ಅಸ್ತಿತ್ವಕ್ಕಾಗಿ ‘ದಳ’ 7 ಲೆಕ್ಕ: ‘ಹಸ್ತ’ಕ್ಷೇಪಕ್ಕೆ ‘ದೋಸ್ತಿ ವ್ಯೂಹ’ ರಚಿಸಿದ್ರಾ ದೊಡ್ಡಗೌಡರು..?


ಬೆಂಗಳೂರು: ದಳಕೋಟೆಯಲ್ಲಿ ಹಸ್ತಕ್ಷೇಪ ಹೆಚ್ಚಾಗ್ತಿದೆ. ದಳಪತಿಗಳಿಂದ ದೂರಾಗ್ತಿರುವ ಸಂಖ್ಯೆ ದ್ವಿಗುಣಗೊಳ್ತಿದೆ. ಇದಕ್ಕೆ ಮದ್ದರೆಯಲು ಜೆಡಿಎಸ್​​ ರಣವ್ಯೂಹ ರಚಿಸಿದೆ. ಬಿಜೆಪಿ ಜೊತೆ ಮೈತ್ರಿ ಬೆಸುಗೆ ಮಾಡಿಕೊಂಡು ವೈರಿಗಳ ಹೆಡೆಮುರಿ ಕಟ್ಟಲು ಸಜ್ಜಾಗಿದೆ. ಅಸ್ತಿತ್ವ ಉಳಿವಿಗಾಗಿ ಅಂತಿಮ ಯುದ್ಧಕ್ಕೆ ಸಿದ್ಧವಾಗಿದೆ.

ಇತ್ತೀಚೆಗೆ ‘ಹಸ್ತ’ಕ್ಷೇಪದಿಂದ ಬೇಸತ್ತಿರೋ ‘ದಳ’ ನಾಯಕರು, ದಾಳ ಹೂಡ್ತಿದ್ದಾರೆ. ದಳಪತಿಗಳ ಈ ಹೊಸ ದಾಳದಿಂದಾಗಿ ವಿರೋಧಿ ಪಡೆಯಲ್ಲಿ ನಡುಕು ಶುರುವಾಗಿದೆ.. ಹಳೇ ಸ್ನೇಹಕ್ಕೆ ಕೈಚಾಚಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.

ದಳಕೋಟೆಯಲ್ಲಿ ‘ಹಸ್ತ’ಕ್ಷೇಪಕ್ಕೆ ಸಿಡಿದೆದ್ದ ದಳಪತಿ!
ಹೌದು, ಕೇಸರಿ ಪಾಳಯದ ಜೊತೆ ದೋಸ್ತಿಗೆ ಜೆಡಿಎಸ್‌ ಪ್ರಸ್ತಾಪ ಮಾಡಿದೆ. ಮೈತ್ರಿ ಪ್ರಸ್ತಾಪದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಬಿಜೆಪಿ ಜೊತೆ ‘ದಳಪತಿಗಳ’ ಹೊಂದಾಣಿಕೆಯ ಲೆಕ್ಕಾಚಾರ ಕುತೂಹಲ ಕೆರಳಿಸಿದೆ. ಅಸ್ತಿತ್ವ ಉಳಿಕೆ, ವಿರೋಧಿಗಳಿಗೆ ಟಕ್ಕರ್ ಕೊಡೋ ಲೆಕ್ಕಾಚಾರ ಹೆಣೆದಿರುವ ಜೆಡಿಎಸ್​​, ಆಪರೇಷನ್ ಹಸ್ತಕ್ಕೆ ಹೊಸ ದೋಸ್ತಿ ವ್ಯೂಹ ರಚಿಸ್ತಿದೆ.

ಮೊನ್ನೆ ಮೊನ್ನೆ ಅಷ್ಟೇ ಮಾಜಿ ದೇವೇಗೌಡರು ದೆಹಲಿಯಲ್ಲಿ ದಾಳ ಉರುಳಿಸಿದ್ದಾರೆ. ಪ್ರಧಾನಿ ಮೋದಿ ಭೇಟಿ ಮಾಡಿ, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಮುಂದಿನ ಚುನಾವಣೆಯಲ್ಲಿ ಹೊಂದಾಣಿಕೆ ಬಗ್ಗೆ ಸಮಾಲೋಚನೆ ನಡೆದಿದೆ ಎನ್ನಲಾಗ್ತಿದೆ. ಅಲ್ಲಿ ಮೈತ್ರಿ ಸುಳಿವು ಸಿಗುತ್ತಲೇ, ರಾಜ್ಯದಲ್ಲೂ ಚರ್ಚೆ ಗರಿಗೆದರಿದೆ.

ಜೆಡಿಎಸ್‌ ಶಾಸಕ ಜಿ.ಟಿ ದೇವೇಗೌಡ, ಗುಬ್ಬಿ ಶ್ರೀನಿವಾಸ್, ಬೆಮೆಲ್ ಕಾಂತರಾಜ್, ಸಿ.ಆರ್ ಮನೋಹರ್‌ಗೆ ಕಾಂಗ್ರೆಸ್​​​ ಗಾಳ ಹಾಕಿದೆ. ಹಳೇ ಮೈಸೂರು ಭಾಗದ ನಾಯಕರನ್ನೇ ಗುರಿ ಆಗಿಸಿರುವ ಕಾಂಗ್ರೆಸ್‌, ಚುನಾವಣೆ ಹೊತ್ತಿಗೆ ಮತ್ತಷ್ಟು ನಾಯಕರನ್ನ ಸೆಳೆಯುವ ತಂತ್ರ ಹೊಂದಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಜೋಡಿಯ ಆಟಕ್ಕೆ ಬಿಜೆಪಿ ಜೊತೆ ಜೆಡಿಎಸ್​​​ ದೋಸ್ತಿ ಪ್ಲಾನ್​​​​ ಮಾಡಿದೆ.

ಅಸ್ತಿತ್ವಕ್ಕಾಗಿ ‘ದಳ’ ಲೆಕ್ಕ

  • ಲೆಕ್ಕಾಚಾರ 1 : ರಾಜ್ಯದಲ್ಲಿ ಜೆಡಿಎಸ್‌ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವುದು
  • ಲೆಕ್ಕಾಚಾರ 2 : ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಗೆ ಪಾಠ ಕಲಿಸುವುದು
  • ಲೆಕ್ಕಾಚಾರ 3 : ದಳಕ್ಕೆ ಕಾಡ್ತಿರೋ ಜಮೀರ್ ಅಹ್ಮದ್‌ಗೆ ಬುದ್ಧಿ ಹೇಳಬೇಕು
  • ಲೆಕ್ಕಾಚಾರ 4 : ಮೈತ್ರಿ ಸರ್ಕಾರ ಕೆಡವಿದ ವಲಸಿಗರಿಗೆ ಠಕ್ಕರ್ ಕೊಡಬೇಕು
  • ಲೆಕ್ಕಾಚಾರ 5 : ‘ಕೈ’ ಹಿಡಿದಿರುವ ಚೆಲುವರಾಯಸ್ವಾಮಿ & ಟೀಂಗೆ ಕೌಂಟರ್
  • ಲೆಕ್ಕಾಚಾರ 6 : ಜೆಡಿಎಸ್‌ನ್ನು ತೊರೆದ ನಾಯಕರಿಗೆ ತಕ್ಕಶಾಸ್ತಿ ಮಾಡುವುದು
  • ಲೆಕ್ಕಾಚಾರ 7 : ಪಕ್ಷ ತ್ಯಜಿಸಲು ಸಜ್ಜಾದ ನಾಯಕರನ್ನ ಹಿಡಿದಿಟ್ಟುಕೊಳ್ಳಬೇಕು

ಈ ಎಲ್ಲಾ ಲೆಕ್ಕಾಚಾರಗಳೊಂದಿಗೆ ಜೆಡಿಎಸ್​​, ಬಿಜೆಪಿ ದೋಸ್ತಿ ಬಯಸಿದೆ. ಮುಂದಿನ ದಿನಗಳಲ್ಲಿ ಕಮಲ ಕಲಿಗಳ ಜೊತೆ ದಳಪತಿಗಳು ಹಸ್ತಲಾಘವ ಮಾಡೋದು ಪಕ್ಕಾ ಅನ್ನೋ ಮಾತು ಕೇಳಿ ಬರ್ತಿದೆ.

ವಿಶೇಷ ವರದಿ: ಹರೀಶ್​ ಕಾಕೋಳ್, ಪೊಲಿಟಿಕಲ್​​ ಬ್ಯೂರೋ

The post ಅಸ್ತಿತ್ವಕ್ಕಾಗಿ ‘ದಳ’ 7 ಲೆಕ್ಕ: ‘ಹಸ್ತ’ಕ್ಷೇಪಕ್ಕೆ ‘ದೋಸ್ತಿ ವ್ಯೂಹ’ ರಚಿಸಿದ್ರಾ ದೊಡ್ಡಗೌಡರು..? appeared first on News First Kannada.

News First Live Kannada


Leave a Reply

Your email address will not be published. Required fields are marked *