ಚಿಕ್ಕಮಗಳೂರು: ಅಸ್ಸಾಂ ಕೆಲಸಗಾರರು. ಕೇರಳ ಬಸ್ಸು. ಬಂದಿದ್ದು ಚಿಕ್ಕಮಗಳೂರಿಗೆ ಇದು ಹೇಗೆ ಸಾಧ್ಯ ಎಂದು ಕಾಫಿನಾಡಿನ ಜನ ಪ್ರಶ್ನಿಸಿದ್ದಾರೆ. ನಾವು ಮನೆಯಿಂದ ಹೊರಬಂದರೆ ಲಾಕ್‍ಡೌನ್ ಅಂತ ಪೊಲೀಸರು ಲಾಠಿ ಬೀಸುತ್ತಾರೆ. ಪಕ್ಕದ ಹಾಸನ, ಶಿವಮೊಗ್ಗಕ್ಕೂ ಹೋಗೋದು ಕಷ್ಟ. ನೂರು ನಿಬಂಧನೆಗಳು. ಹೀಗಿರುವಾಗ ಅಸ್ಸಾಂನಿಂದ ಇಲ್ಲಿಗೆ ಅದು ಬಸ್ಸಲ್ಲಿ ಕಾರ್ಮಿಕರು ಹೇಗೆ ಬಂದರೂ ಎಂದು ಜನ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರದಲ್ಲಿ ಉಳ್ಳವರಿಗೊಂದು ಕಾನೂನು, ಬಡವರಿಗೊಂದು ಕಾನೂನಾ ಎಂದು ಕಾಫಿನಾಡಿಗರು ಪ್ರಶ್ನಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಬೆಟ್ಟದಮಳಲಿ ಗ್ರಾಮದ ನಾಗೇಶ್ ಗೌಡ ಎಂಬವರ ಕಾಫಿ ತೋಟಕ್ಕೆ ಅಸ್ಸಾಂನಿಂದ ಕಾರ್ಮಿಕರನ್ನ ಕರೆತರಲಾಗಿದೆ. ಕೆಲಸಗಾರರು ಅಸ್ಸಾಂನವರು. ಕರೆತಂದ ಬಸ್ಸು ಕೇರಳದ್ದು. ಬಂದದ್ದು ಚಿಕ್ಕಮಗಳೂರಿಗೆ. ಇದು ಹೇಗೆ ಸಾಧ್ಯ ಎಂದು ಜನ ಆಡಳಿತ ವ್ಯವಸ್ಥೆ ಮೇಲೆ ಅಸಮಾಧಾನಗೊಂಡಿದ್ದಾರೆ.

ಕಾರ್ಮಿಕರು ಅಲ್ಲಿಂದ ಬರಲು ರಾಜಕಾರಣ ವ್ಯವಸ್ಥೆಯೇ ಕಾರಣ ಎಂದು ಕಿಡಿಕಾರಿದ್ದಾರೆ. ಸದ್ಯಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಆರು ದಿನಗಳಿಂದ ಟಫ್ ರೂಲ್ಸ್ ಲಾಕ್‍ಡೌನ್ ಜಾರಿಯಾಗಿದೆ. ಜಿಲ್ಲೆಯಲ್ಲಿ ಜನ ಮನೆಯಿಂದ ಹೊರಬರಲು ಅವಕಾಶವಿಲ್ಲ. ಮೆಡಿಕಲ್ ಎಮರ್ಜೆನ್ಸಿಗೆ ಮನೆಯಿಂದ ಹೊರ ಬರಬೇಕೆಂದರೂ ಜನ ಯೋಚಿಸಿ ಬರುವಂತಹಾ ಪರಿಸ್ಥಿತಿ ಜಾರಿಯಲ್ಲಿದೆ. ಅಗತ್ಯ ವಸ್ತುಗಳ ಖರೀದಿಗೂ ಜನ ಮನೆಯಿಂದ ಆಚೆ ಬರುವಂತಿಲ್ಲ. ಒಂದು ವಸ್ತು ಇಲ್ಲ ಅಂದರೂ ಇದ್ದಿದ್ದರಲ್ಲೇ ಬದುಕುತ್ತಿದ್ದಾರೆ.

ಸೋಮವಾರ ಮೂಡಿಗೆರೆಯಲ್ಲಿ ತರಕಾರಿ ಕೊಳ್ಳಲು ಬಂದ ಮಹಿಳೆಗೆ ಕಂದಾಯ ಇಲಾಖೆ ಅಧಿಕಾರಿ ಫೈಬರ್ ಪೈಪಿನಿಂದ ಹಲ್ಲೆ ಮಾಡಿ ದರ್ಪ ತೋರಿದ್ದಾರೆ. ಪರಿಸ್ಥಿತಿ ಹೀಗಿದ್ದು 50 ಜನ ದೂರದ ಅಸ್ಸಾಂನಿಂದ ಹೇಗೆ ಬಂದರೂ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅನುಮತಿ ನೀಡಿರುವುದೇ ತಪ್ಪು. ಅಷ್ಟೆ ಅಲ್ಲದೇ ಕಾರ್ಮಿಕರ ಪ್ರಯಾಣಕ್ಕೆ ಸರ್ಕಾರದಿಂದ ಅನುಮತಿ ನೀಡಿರುವ ಬಸ್ಸೇ ಬೇರೆ, ಕಾರ್ಮಿಕರು ಬಂದಿರುವ ಬಸ್ಸೇ ಬೇರೆ. ಹೀಗಾಗಿ ಸರ್ಕಾರದ ಈ ನಿಗೂಢ ನೆರೆ ವಿರುದ್ಧ ಜನಸಾಮಾನ್ಯರು ಆಕ್ರೋಶ ಭರಿತರಾಗಿದ್ದಾರೆ. ಶ್ರೀಮಂತರೂ ಏನ್ ಬೇಕಾದ್ರೂ ಮಾಡಬಹುದಾ, ಸರ್ಕಾರ ಸಪೋರ್ಟ್ ಮಾಡುತ್ತಾ ಎಂದು ಪ್ರಶ್ನಿಸಿದ್ದಾರೆ.

The post ಅಸ್ಸಾಂ ಜನ ಕೇರಳ ಬಸ್ಸಲ್ಲಿ ಕಾಫಿನಾಡಿಗೆ ಎಂಟ್ರಿ – ಎಲ್ಲಿಯ ಟಫ್ ರೂಲ್ಸ್? ಎಲ್ಲಿಯ ಲಾಕ್‍ಡೌನ್? appeared first on Public TV.

Source: publictv.in

Source link