ದಕ್ಷಿಣ ಆಫ್ರಿಕಾ ವಿರುದ್ಧದ ನಿರ್ಣಾಯಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಸಂಪೂರ್ಣ ವಿಭಿನ್ನ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಒಂದೆಡೆ ಪೆವಿಲಿಯನ್ ಪರೇಡ್ ನಡೀತಾ ಇದ್ರೂ, ಮತ್ತೊಂದೆಡೆ ಕ್ರೀಸ್ನಲ್ಲಿ ಭದ್ರವಾಗಿ ಬೇರೂರಿದ್ದ ವಿರಾಟ್ 159 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಅಂತಿಮವಾಗಿ 205 ಎಸೆತಗಳಲ್ಲಿ 12 ಫೋರ್, ಒಂದು ಸಿಕ್ಸರ್ ಚಚ್ಚಿದ ವಿರಾಟ್ ಕೊಹ್ಲಿ 79 ರನ್ಗಳಿಸಿ ಔಟಾದ್ರು. ಕೊಹ್ಲಿಯ ಈ ತಾಳ್ಮೆಯುತ ಬ್ಯಾಟಿಂಗ್ ಬಗ್ಗೆ ದಿಗ್ಗಜ ಆಟಗಾರರೆಲ್ಲಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ವಿರಾಟ್ ಅಹಂಕಾರವನ್ನ ಬಿಟ್ಟು ಆಡಿದರು ಹೀಗಾಗಿ ಇದು ಸಾದ್ಯವಾಯ್ತು ಎಂದಿದ್ದಾರೆ. ವಿರಾಟ್ ಖುದ್ದಾಗಿ ಇಂಗ್ಲೆಂಡ್ ಪ್ರವಾಸದಲ್ಲಿ ಇದ್ದಾಗ ಅಹಂಕಾರವನ್ನು ಮನೆಯಲ್ಲೇ ಬಿಟ್ಟು ಬರಬೇಕು ಎಂದು ಹೇಳುತ್ತಿದ್ದರು. ಇಂದು ದಕ್ಷಿಣ ಆಫ್ರಿಕಾ ಎದುರು ಕೊಹ್ಲಿ ತಮ್ಮ ಅಹಂಕಾರವನ್ನು ತಮ್ಮ ಕಿಟ್ ಬ್ಯಾಗ್ನಲ್ಲೇ ಬಿಟ್ಟು ಬಂದು ಬ್ಯಾಟ್ ಮಾಡಿದ್ದಾರೆ. ಅವರ ಈ ಆಟ ಇಂಗ್ಲೆಂಡ್ ನೆಲದಲ್ಲಿ ಅವರು ಕಂಡ ಯಶಸ್ಸನ್ನು ಸ್ಮರಿಸುವಂತೆ ಮಾಡಿದೆ.
ಅಲ್ಲಿ ಅವರು ಆಫ್ ಸ್ಟಂಪ್ನಿಂದ ಆಚೆಯಿದ್ದ ಎಸೆತಗಳನ್ನು ಬಿಟ್ಟು ಆಟವಾಡಿದ್ದರು. ಇಲ್ಲೂ ಕೂಡ ಆಫ್ ಸ್ಟಂಪ್ನಿಂದ ಆಚೆಯಿದ್ದ ಎಸೆತಗಳನ್ನು ಬಿಟ್ಟು ಆಡಿದ್ದಾರೆ. ಈ ಪ್ರಯತ್ನದಲ್ಲಿ ಹಲವು ಬಾರಿ ಬೀಟನ್ ಆದರು. ಆದರೂ ತಮ್ಮ ಅಹಂಕಾರ ಮರೆತು ಬ್ಯಾಟ್ ಮಾಡಿದರು. ಯಾವ ಎಸೆತದಲ್ಲೂ ಆಕ್ರಮಣಕಾರಿ ಆಟವಾಡುವ ಪ್ರಯತ್ನ ಮಾಡಲಿಲ್ಲ. ಇದರಿಂದ ಯಶಸ್ಸು ಸಿಕ್ಕಿತು ಎಂದು ಗಂಭೀರ್ ಹೇಳಿದ್ದಾರೆ.