ಕೊರೊನಾ ವಿರುದ್ಧ ಜನ ಸಾಮಾನ್ಯರಿಂದ ಹಿಡಿದು ಸ್ಟಾರ್ ಸೆಲೆಬ್ರಿಟಿಗಳ ತನಕ ಸಮರ ಸಾರಿದ್ದಾರೆ.. ಉಳ್ಳವರು, ಉಳ್ಳದೆ ಇರೋರಿಗೆ ಸಹಾಯ ಮಾಡುವುದೇ ಹೃದಯವಂತಿಕೆ.. ಟಾಲಿವುಡ್​​ನ ಮೆಗಾಸ್ಟಾರ್ ಚಿರಂಜೀವಿ ಕೊರೊನಾ ವಿರುದ್ಧ ದೊಡ್ಡ ಮಟ್ಟದ ಸಮರ ಸಾರಿದ್ದಾರೆ, ಜನ ಸಾಮಾನ್ಯರಿಗೆ ವಾಯುಪುತ್ರನಾಗಲು ಟೊಂಕ ಕಟ್ಟಿ ನಿಂತಿದ್ದಾರೆ.. ಚಿರಂಜೀವಿ ಮಾಡುತ್ತಿರುವ ವಿಶೇಷ ಕಾರ್ಯದ ಬಗ್ಗೆ ಒಂದು ಪಕ್ಷಿ ನೋಟ ಇದೋ ನಿಮ್ಮಮುಂದೆ..

ಜೀವ ವಾಯು, ಆಕ್ಸಿಜನ್ ಎಷ್ಟು ಮುಖ್ಯ ಅನ್ನೋದು ಇಡೀ ಜಗತ್ತಿಗೆ ಅದ್ರಲ್ಲೂ ಭಾರತ ದೇಶಕ್ಕೆ ಗೊತ್ತಾಗುತ್ತಿದೆ. ಅರೇ ಆಕ್ಸಿಜನ್ನಾ..? ಈ ಭೂಮಿ ಮೇಲೆ ಎಲ್ಲಾ ಕಡೆ ಫ್ರೀಯಾಗಿ ಸಿಗುತ್ತೆ ಅಂತಿದ್ದವರು ಆಕ್ಸಿಜನ್ ಸಿಲೆಂಡರ್ ಅನ್ನ ಅವುಚಿಕೊಂಡು ಬೆನ್ನಿಗೆ ಕಟ್ಟಿಕೊಂಡು ಓಡಾಡೋ ಪರಿಸ್ಥಿತಿ ನಿರ್ಮಾಣವಾಗಿದೆ. ಜೀವ ವಾಯುಗಾಗಿ ಎಲ್ಲೆಲ್ಲೂ ಹಾಹಾಕಾರ ಶುರುವಾಗಿದೆ.. ಒಂದ್ ಕಾಲದಲ್ಲಿ ಅಡುಗೆ ಗ್ಯಾಸ್​ ಸಿಲೆಂಡರ್​​ಗಳ ರೇಟ್ ಹೆಚ್ಚಾದಾಗ ಆಕಾಶ ನೋಡ್ತಿದ್ದ ಶ್ರೀ ಸಾಮಾನ್ಯ ಈಗ ಆ್ಯಕ್ಸಿಜನ್ ಸಿಲೆಂಡರ್​​ಗಳು ಸಿಗದಿದ್ರೆ ಆಕಾಶ-ಭೂಮಿ ಎರಡನ್ನ ಒಂದು ಮಾಡಿ ನೋಡ್ತಿದ್ದಾನೆ. ಕೊರೊನಾ ಸೊಂಕಿನಿಂದಾಗಿ ಇಡೀ ದೇಶ ಆ್ಯಕ್ಸಿಜನ್ ಇಲ್ಲದೆ ಪರದಾಡುತ್ತಿದೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆಗೆ ಸರ್ಕಾರ ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ ಅನೇಕ ಅನೇಕ ದೊಡ್ಡ ಮನಸಿನ ಹೃದಯವಂತರು ಭಾರೀ ಸಾಹಸವನ್ನೇ ಮಾಡ್ತಿದ್ದಾರೆ. ತೆರೆಯ ಮೇಲೆ ರಂಜಿಸುತ್ತಿದ್ದ ಸ್ಟಾರ್ ಮಹೋದಯರು ಈಗ ಜನ ಸಾಮಾನ್ಯರಿಗೆ ಪ್ರಾಣವಾಯುವಾಗುತ್ತಿದ್ದಾರೆ. ಬಹಳಷ್ಟು ನಟ ನಟಿಯರು ಈ ಕೋವಿಡ್ ಸಂದರ್ಭದಲ್ಲಿ ಮಹಾ ಉಪಕಾರ ಮಾಡ್ತಿರೋ ಈ ಸಂದರ್ಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಆಕ್ಸಿಜನ್ ಪೂರೈಕೆ ವಿಚಾರದಲ್ಲಿ ದೈತ್ಯ ಹೆಜ್ಜೆಯನ್ನ ಇಟ್ಟಿದ್ದಾರೆ.

ಆಂಧ್ರದಲ್ಲಿ ವಾಯು ಪುತ್ರನಾದ ಟಾಲಿವುಡ್​​​​​ ಮೆಗಾಸ್ಟಾರ್

ಆಕ್ಸಿಜನ್​​​​ ಪೂರೈಕೆಗಾಗಿ ದೊಡ್ಡ ಹೆಜ್ಜೆ ಇಟ್ಟ ‘‘ಗ್ಯಾಂಗ್ ಲೀಡರ್’’

 

ತನ್ನವರಿಗೆ ಏನೇ ಆದ್ರೂ ಒಂದು ಹೆಜ್ಜೆ ಮುಂದೆ ಹೋಗಿ ಸಹಾಯ ಮಾಡೋರು ಈ ಕಾಣದ ಕೋವಿಡ್ ಸಂದರ್ಭದಲ್ಲಿಯೂ ಉಪಕಾರಗಳ ಉತ್ಸವವನ್ನೇ ಮಾಡ್ತಿದ್ದಾರೆ.. ನಮ್ಮ ಕನ್ನಡ ನಾಡಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ , ಕಿಚ್ಚ ಸುದೀಪ್ , ಭುವನ್ ಪೊನ್ನಣ್ಣ _ ಹರ್ಷಿಕಾ ಪೂಣಚ್ಚ , ಉಸಿರು ತಂಡ, ರಾಗಿಣಿಯವರಂತೆ ಚಿರಂಜೀವಿ ಕೂಡ ಆಂಧ್ರ ಮತ್ತು ತೆಲಂಗಾಣದಲ್ಲಿ ಅದ್ಭುತ ಸೇವಾ ಕಾರ್ಯಗಳನ್ನ ಮಾಡುತ್ತಿದ್ದಾರೆ.. ಟಾಲಿವುಡ್​​ನ ಸಿನಿ ಕಾರ್ಮಿಕರಿಗೆ ದಿನಸಿ ಕಿಟ್, ಹೆಲ್ತ್ ಕಿಟ್ ಹಾಗೂ ಹಣದ ವ್ಯವಸ್ಥೆಯ ಜೊತೆಗೆ ಕೊರೊನಾ ಸೋಂಕಿಗೆ ಸರಿಯಾದ ಸಮಯದಲ್ಲಿ ಟ್ರೀಟ್ಮೆಂಟ್ ಸಿಗುವಂತೆ ಸೌಲಭ್ಯಗಳನ್ನ ವಿಮಾ ಭಾಗ್ಯವನ್ನ ಮಾಡಿಸಿದ್ದಾರೆ ಚಿರಂಜೀವಿ. ತೆಲುಗು ಸಿನಿಮಾ ರಂಗದ ಕಾರ್ಮಿಕರಿಗೆ ಲಸಿಕೆಯನ್ನು ಕೂಡ ಸೂಕ್ತ ಸಮಯದಲ್ಲಿ ಸಿಗೋ ಹಾಗೆ ಮಾಡ್ತಿದ್ದಾರೆ ಚಿರು.. ತನ್ನನ್ನ ಆರಾಧಿಸುವ ಸಂಘ ಸಂಸ್ಥೆಗಳನ್ನ ಕಟ್ಟಿಕೊಂಡಿರುವ ಅಭಿಮಾನಿಗಳು ಏನಾದ್ರು ಕೊರೊನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ರೆ ಅವರ ಕುಟುಂಬಕ್ಕೆ ಸಾಹಯ ಧನವನ್ನ ಸೈಲೆಂಟ್ ಆಗಿ ನೀಡ್ತಿದ್ದಾರೆ ಮೆಗಾಸ್ಟಾರ್ ಚಿರಂಜೀವಿ.. ಇದಕ್ಕೆ ತಾಜಾ ಎಗ್ಸಾಂಪಲ್ ಚಿರಂಜೀವಿ ಅವರ ಕ್ಯಾರೋ ವ್ಯಾನ್ ಡ್ರೈವರ್ ಕೊರೊನಾದಿಂದ ಸಾವನ್ನಪಿದಾಗ ಅವರ ಕುಟುಂಬಕ್ಕೆ ಒಂದು ಲಕ್ಷ ಕೊಟ್ಟಿರುವುದು.

 

ಸದಾ ಜನರ ಕಷ್ಟಕ್ಕೆ ಮಿಡಿಯುವ ಚಿರಂಜೀವಿ ಕೊರೊನಾ ವಿರುದ್ಧ ಸಮರ ಸಾರಿದ್ದಾರೆ.. ಚಿರಂಜೀವಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಬ್ಲಡ್ ಬ್ಯಾಂಕ್ ಐ ಬ್ಯಾಂಕ್ ನ ಜೊತೆಗೆ ಸಾಕಷ್ಟು ಸೇವೆಗಳನ್ನ ಮಾಡುತ್ತ ಬಂದಿರೋ ಚಿರು ಈ ಬಾರಿ ಆಕ್ಸಿಜನ್ ಬ್ಯಾಂಕ್​ಗಳನ್ನ ತೆಲಂಗಾಣ ಮತ್ತು ಸೀಮಾಂಧ್ರ ರಾಜ್ಯಗಳಲ್ಲಿ ಸ್ಥಾಪಿಸಲು ಮುಂದಾಗಿದ್ದಾರೆ.. ಕಳೆದ ಬುಧವಾರ ಅಧಿಕೃತವಾಗಿ ಆಕ್ಸಿಜನ್ ಬ್ಯಾಂಕ್​​ಗೆ ಚಾಲನೆ ಕೊಟ್ಟಿರುವ ಚಿರಂಜೀವಿಯವರು ತಮ್ಮ ಮಗ ರಾಮ್ ಚರಣ್ ಮುಂದಾಳತ್ವದಲ್ಲಿ ಆಕ್ಸಿಜನ್ ಬ್ಯಾಂಕ್ ಸ್ಥಾಪಿಸಿದ್ದಾರೆ.. ಸದ್ಯದ ಮಟ್ಟಿಗೆ ಪ್ರಾಯೋಗಿಕವಾಗಿ ನೂರು ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಆಕ್ಸಿಜನ್ ಸಿಲೆಂಡರ್​ಗಳನ್ನ ಕೊಂಡಿರುವ ಚಿರಂಜೀವಿ ಬಳಗ ಅನಂತಪುರ ಮತ್ತು ಗುಂಟುರು ಜಿಲ್ಲೆಗಳಲ್ಲಿ ಆಕ್ಸಿಜನ್ ಸಿಲೆಂಡರ್ ಬ್ಯಾಂಕ್​ ಅನ್ನ ಸ್ಥಾಪಿಸಿದೆ.. ಮುಂದಿನ ದಿನಗಳಲ್ಲಿ ತ್ವರಿತವಾಗಿ ತೆಲುಗು ನಾಡಿನ ಅಷ್ಟು ಜಿಲ್ಲೆಗಳಲ್ಲಿ ಆಕ್ಸಿಜನ್ ಸಿಲೆಂಡರ್ ಬ್ಯಾಂಕ್​​​ಗಳನ್ನ ಸ್ಥಾಪಿಸುವ ಗುರಿಯನ್ನ ಚಿರಂಜೀವಿ ಚಾರಿಟೆಬಲ್ ಟ್ರಸ್ಟ್ ಹೊಂದಿದೆ..

ನಿಜಕ್ಕೂ ಇದು ಕೋವಿಡ್ ಕಾಲದಲ್ಲಿ ಧೈತ್ಯ ಹೆಜ್ಜೆ.. ಯಾರನ್ನು ಜನ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲ್ಲ.. ಒಬ್ಬ ಕಲಾವಿದನಲ್ಲಿ ನಾಯಕನನ್ನ ಜನ ಕಾಣ್ತಾರೆ.. ನೂರಲ್ಲೊಬ್ಬರು ಚಿರಂಜೀವಿ ಅಷ್ಟು ಬೆಳಿತ್ತಾರೆ ಕಷ್ಟದಲ್ಲಿದರಿಗೆ ಸಹಾಯ ಹಸ್ತ ಚಾಚುತ್ತಾರೆ.. ಚಿರಂಜೀವಿ ಕಾರ್ಯಕ್ಕೆ ತೆಲುಗು ನಾಡಿನಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ..

ಕೆರೆಯ ನೀರನ್ನ ಕೆರೆಗೆ ಚೆಲ್ಲೋದು, ದಾನ ಧರ್ಮ ಮಾಡೋವಾಗ ತಲೆ ತಗ್ಗಿಸು ಮಾಡೋದು ಚಿರಂಜೀವಿ ಅಂತ ನಟರಲ್ಲಿ ಕಂಡು ಬರೋ ಗುಣ.. ಈ ಕಾರಣಕ್ಕೆ ಇಂತಹ ನಟರು ಗಡಿ ನುಡಿಯನ್ನ ಮೀರಿ ಬೆಳೆದಿರುತ್ತಾರೆ..

The post ಆಂಧ್ರದಲ್ಲಿ ವಾಯುಪುತ್ರನಾದ ಟಾಲಿವುಡ್ ಮೆಗಾಸ್ಟಾರ್: ಆಕ್ಸಿಜನ್​​​​ ಪೂರೈಕೆಗಾಗಿ ದೊಡ್ಡ ಹೆಜ್ಜೆ appeared first on News First Kannada.

Source: newsfirstlive.com

Source link