ಆಂಧ್ರದ ಸಿಎಂ ಜಗನ್​​ಗೆ ಕೊಲೆ ಬೆದರಿಕೆ.. ಪವನ್​ ಕಲ್ಯಾಣ್​ ಅಭಿಮಾನಿ ಅರೆಸ್ಟ್


ಟಾಲಿವುಡ್​ನಲ್ಲಿ ಅತೀ ಹೆಚ್ಚು ಫ್ಯಾನ್​ ಫಾಲೊಯಿಂಗ್​ ಇರುವ ನಟ ಎಂದರೆ ಅದು ಎಲ್ಲರಿಗೂ ಗೊತ್ತಿರುವಂತೆ ನಟ ಪವರ್​ ಸ್ಟಾರ್​ ಪವನ್​ ಕಲ್ಯಾಣ್. ತಮ್ಮ ಸಿನಿಮಾಗಳ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಪವನ್, ರಾಜಕೀಯಕ್ಕೂ ಎಂಟ್ರಿಕೊಟ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಪವನ್​ ಕಲ್ಯಾಣ್​ ಎಂದರೆ ಅಲ್ಲಿನ ಅಭಿಮಾನಿಗಳು ಸಾಯುವುದಕ್ಕು ಸಿದ್ಧ. ಹೆಚ್ಚು ಕಡಿಮೆ ಆದರೆ ಸಾಯಿಸುವುದಕ್ಕೂ ಯೋಚನೆ ಮಾಡುವುದಿಲ್ಲ. ಸದ್ಯ ಅಂಥದ್ದೊಂದು ಘಟನೆಯೀಗ ಆಂಧ್ರದಲ್ಲಿ ನಡೆದಿದೆ.

ಪವನ್​ ಕಲ್ಯಾಣ್​ ರಾಜಕೀಯದಲ್ಲಿ ​ಜಗನ್ ಮೋಹನ್ ರೆಡ್ಡಿ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದ್ದರು. ಅದಾದ ಬಳಿಕ ರಾಜಕೀಯವಾಗಿ ಪವನ್​ ತುಂಬಾ ಬೇಸರಗೊಂಡಿದ್ದರು. ಇದನ್ನು ಗಮನಿಸಿದ ಪವನ್​ ಕಲ್ಯಾಣ್​ ಅಭಿಮಾನಿ, ಆಂಧ್ರ ಪ್ರದೇಶದ ಮುಖ್ಯಮಂತ್ರಿಯನ್ನು ಬಾಂಬ್​ ಹಾಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತ ಆಂಧ್ರದ ಪೊಲೀಸರು 27 ವರ್ಷದ ರಾಜಾಪಲೇಮ್ ಫಣಿ ಎಂಬ ಪವನ್​ ಕಲ್ಯಾಣ್​ ಅಭಿಮಾನಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಜನವರಿ 16 ನೇ ತಾರೀಖು ಟ್ವಿಟರ್‌ನಲ್ಲಿ ಸರಣಿ ಟ್ವೀಟ್‍ಗಳನ್ನು ಮಾಡಿ, ಜಗನ್ ಮೋಹನ್ ರೆಡ್ಡಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಯಾವಾಗ ಟ್ವೀಟ್‍ಗಳು ವೈರಲ್ ಆದವೋ, ಇದನ್ನು ಗಮನಿಸಿದ ಆರೋಪಿ ಇವುಗಳನ್ನು ಡಿಲೀಟ್​ ಮಾಡಿದ್ದಾನೆ. ಈ ಕುರಿತು ಜಗನ್ ಸೇವಾದಳದ ಉಪಾಧ್ಯಕ್ಷ ಮಲ್ಯಂ ಶ್ರೀಕಾಂತ್ ಎನ್ನುವರು ತಿರುಪತಿ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಐಪಿ ವಿಳಾಸ ಆಧರಿಸಿ ಬೆದರಿಕೆ ಹಾಕಿದ್ದವನನ್ನು ಬಂಧಿಸಿದ್ದಾರೆ. ರಾಜಾಪಲೇಮ್ ಫಣಿ ಪವನ್ ಕಲ್ಯಾಣ ಅವರ ಜನಸೇನಾ ಪಕ್ಷದ ಬೆಂಬಲಿಗನಾಗಿದ್ದ. ಈತನ ಮೇಲೆ ಐಪಿಸಿ ಕಲಂ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ, ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಐಡಿ ಸೈಬರ್ ಕ್ರೈಂ ಎಸ್‍ಪಿ ಜಿ.ಆರ್. ರಾಧಿಕಾ ಹೇಳಿದ್ದಾರೆ. ಅಭಿಮಾನ ಅನ್ನೋದು ಏನು ಬೇಕಾದರೂ ಮಾಡಿಸುತ್ತದೆ ಎನ್ನುವುದಕ್ಕೆ ಇದು ತಾಜಾ ಉದಾಹರಣೆಯಾಗಿದೆ.

News First Live Kannada


Leave a Reply

Your email address will not be published. Required fields are marked *