ಹ್ಯೂಸ್ಟನ್: ಭಾರತದ ಆಸ್ಪತ್ರೆಗಳಿಗೆ ಆಕ್ಸಿಜನ್​ ಪೂರೈಸುವ ಸಲುವಾಗ 10 ಮಿಲಿಯನ್ ಡಾಲರ್(ಸುಮಾರು ₹74.22 ಕೋಟಿ) ಧನಸಹಾಯ ನೀಡುವುದಾಗಿ ಭಾರತೀಯ-ಅಮೆರಿಕನ್ ಕೋಟ್ಯಾಧಿಪತಿ​ ಉದ್ಯಮಿ ವಿನೋದ್​ ಖೋಸ್ಲಾ ಘೋಷಿಸಿದ್ದಾರೆ.

ಸನ್ ಮೈಕ್ರೋಸಿಸ್ಟಮ್ಸ್​​ ಸಹ-ಸಂಸ್ಥಾಪಕರಾದ ಖೋಸ್ಲಾ, ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯ ವಿರುದ್ಧ ಹೋರಾಟಕ್ಕೆ ಕೈಜೋಡಿಸಿ ಈಗಾಗಲೇ ನೆರವು ಘೋಷಿಸಿದ್ದರು. ಆಕ್ಸಿಜನ್ ಪೂರೈಕೆಯನ್ನು ಹೆಚ್ಚಿಸಲು ಅಥವಾ ಭಾರತಕ್ಕೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಆಮದು ಮಾಡಿಕೊಳ್ಳಲು ಹಣದ ಅಗತ್ಯವಿರುವ ಆಸ್ಪತ್ರೆಗಳಿಗೆ ಧನಸಹಾಯ ನೀಡಲು ನಾನು ಸಿದ್ಧನಿದ್ದೇನೆ ಎಂದು ಕಳೆದ ವಾರ ಘೋಷಿಸಿದ್ದರು. ಈಗ ತಮ್ಮ ಮಾತಿನಂತೆ ನಡೆದುಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಈ ಹಿಂದೆ ಕೊಟ್ಟ ಭರವಸೆಯಂತೆ ಖೋಸ್ಲಾ ಕುಟುಂಬ ಗಿವ್​ ಇಂಡಿಯಾಗೆ 10 ಮಿಲಿಯನ್ ಡಾಲರ್ ಹಣವನ್ನ ನೀಡುತ್ತಿದೆ. ಇತರರು ಕೂಡ ಇದಕ್ಕೆ ಕೈಜೋಡಿಸುತ್ತಾರೆ ಎಂದು ಭಾವಿಸುತ್ತೇನೆ. ಸದ್ಯ ದೊಡ್ಡ ಮಟ್ಟದ ಮತ್ತು ತುರ್ತು ಅಗತ್ಯಗಳಿವೆ. ಒಂದು ದಿನದ ವಿಳಂಬ ಕೂಡ ಜೀವಗಳನ್ನ ಬಲಿ ಪಡೆಯುತ್ತದೆ.  ಆಮ್ಲಜನಕವಿಲ್ಲದೆ ಒಂದು ಆಸ್ಪತ್ರೆಯಲ್ಲಿ ಒಂದು ದಿನಕ್ಕೆ 8 ಜನರು ಉಸಿರಿಗಾಗಿ ಹಾತೊರೆಯುತ್ತಾ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ತಡ ಮಾಡಿದ್ರೆ ಮತ್ತಷ್ಟು ಸಾವು ಸಂಭವಿಸಬಹುದು. ಜೀವಗಳನ್ನ ಉಳಿಸಬೇಕಿದೆ.  ಗಿವ್​ ಇಂಡಿಯಾಗೆ ಇಷ್ಟು ಸಾಲಲ್ಲ. 20,000 ಆಕ್ಸಿಜನ್ ಕಾನ್ಸಂಟ್ರೇಟರ್ಸ್​, 15,000 ಸಿಲಿಂಡರ್​ಗಳು, 500 ICU ಬೆಡ್​​ಗಳು, 10,000 ಹಾಸಿಗೆ ಸಾಮರ್ಥ್ಯದ ಕೋವಿಡ್​ ಕೇರ್​ ಸೆಂಟರ್​ಗಳಿಗಾಗಿ ದೇಶಾದ್ಯಂತ ನಾನ್-ಪ್ರಾಫಿಟ್ ಸಂಸ್ಥೆಗಳು ಹಾಗೂ ಆಸ್ಪತ್ರೆಗಳಿಂದ ಬೇಡಿಕೆ ಬಂದಿದೆ. ಕೂಡಲೇ ನಾವು ಇನ್ನಷ್ಟು ಸಹಾಯ ಮಾಡಬೇಕಿದೆ ಎಂದಿದ್ದಾರೆ.

 

The post ಆಕ್ಸಿಜನ್​​​​ ಖರೀದಿಗಾಗಿ ಭಾರತದ ಆಸ್ಪತ್ರೆಗಳಿಗೆ ಇಂಡಿಯನ್-ಅಮೆರಿಕನ್ ಉದ್ಯಮಿಯಿಂದ ₹74 ಕೋಟಿ ನೆರವು appeared first on News First Kannada.

Source: newsfirstlive.com

Source link