ಚಾಮರಾಜನಗರ: ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್​ ಲಭ್ಯವಿಲ್ಲದೇ ಸಾವನ್ನಪ್ಪಿದ್ದು ಕೇವಲ 24 ಮಂದಿಯಲ್ಲ, 34 ರೋಗಿಗಳು ಸಾವನ್ನಪ್ಪಿದ್ದಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಮಾಹಿತಿಯನ್ನು ಮುಚ್ಚಿ ಹಾಕಲಾಗುತ್ತಿದೆ ಎಂದು ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ಹನೂರು ಶಾಸಕ ನರೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹನೂರು ಶಾಸಕ ನರೇಂದ್ರ, ಮಾಧ್ಯಮಗಳು ನಿರಂತರವಾಗಿ ಈ ಬಗ್ಗೆ ಸುದ್ದಿ ಮಾಡುತ್ತಿದ್ದು, ಯಾವ ವರದಿಗಳೂ ಇಲ್ಲಿ ಸುಳ್ಳು ಹೇಳುತ್ತಿಲ್ಲ. ಮಾಧ್ಯಮಗಳು ತಮ್ಮ ಮಾಹಿತಿಯ ಅನ್ವಯ 24 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿವೆ. ಆದರೆ ಸಚಿವರು 24 ಜನರು ಆಕ್ಸಿಜನ್​ ಇಲ್ಲದೇ ಸತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ನಾನು ನ್ಯಾಯಾಂಗ ತನಿಖೆ ನಡೆಸಲು ಆಗ್ರಹಿಸುತ್ತಿದ್ದೇನೆ.

ಏಕೆಂದರೆ, ನನಗೆ ಮಾಹಿತಿ ಇರುವ ಪ್ರಕಾರ ನಿನ್ನೆ ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೂ 7 ಮಂದಿ ಸಾವನ್ನಪ್ಪಿದ್ದಾರೆ. ರಾತ್ರಿ ಎಂಟರ ಬಳಿಕ ಬೆಳಗ್ಗೆ ವೇಳೆಗೆ 24 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಇವರು ಆಕ್ಸಿಜನ್​ ಇಲ್ಲದೇ ಸಾವನ್ನಪ್ಪಿಲ್ಲ ಎಂದು ಮರೆಮಾಚುತ್ತಿದ್ದಾರೆ. ನನ್ನ ಕ್ಷೇತ್ರದ ಜನರೇ ಮೂವರು ಸಾವನ್ನಪ್ಪಿದ್ದಾರೆ. ಆದರೆ ಇವರ ಹೆಸರನ್ನು ಜಿಲ್ಲಾಧಿಕಾರಿಗಳು ನೀಡಿದ ಮಾಹಿತಿಯಲ್ಲಿ ನೀಡಿಲ್ಲ.

ನಾನು ಸರ್ಕಾರದ ಕಾರ್ಯದರ್ಶಿ ರವಿಕುಮಾರ್ ಜೊತೆ ಮಾತನಾಡಿದರೂ ಕೂಡ ಆಕ್ಸಿಜನ್ ಬರುತ್ತಿಲ್ಲ. ನನ್ನ ಕ್ಷೇತ್ರದವರೇ ಆಗಿರುವುದರಿಂದ ಇಷ್ಟು ಮಂದಿಯ ಹೆಸರು ನನಗೆ ಗೊತ್ತಾಗಿದೆ. ಇದೇ ರೀತಿ ಪುಟ್ಟರಂಗ ಶೆಟ್ಟಿ ಅವರ ಕ್ಷೇತ್ರದ ಸೋಂಕಿತರು ಸಾವನ್ನಪ್ಪಿದವರ ಹೆಸರು ಪಟ್ಟಿಯಲ್ಲಿ ನೀಡಿಲ್ಲ. ಇದರಂತೆ 34 ರಿಂದ 35 ಮಂದಿ ಕಳೆದ 24 ಗಂಟೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ ಎಂದರು. ಇದೇ ವೇಳೆ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಬೇಕು. ಆಕ್ಸಿಜನ್ ಕೊರತೆಯಿಂದ ಸತ್ತಿದ್ರೆ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಿ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳಿಗೆ ಶಾಸಕ ನರೇಂದ್ರ ತರಾಟೆ..
ಇದಕ್ಕೂ ಮುನ್ನ ಸಚಿವರ ಸುದ್ದಿಗೋಷ್ಠಿಯ ಬಳಿಕ ಶಾಸಕರಾದ ನರೇಂದ್ರ ಮತ್ತು ಪುಟ್ಟರಂಗಶೆಟ್ಟಿ ಅವರು ಮಾಧ್ಯಮಗಳೊಂದಿಗೆ ಮಾತನಾಡಲು ಮುಂದಾದರು. ಆದರೆ ಈ ವೇಳೆ ಡಿಸಿ ಅವರು ಮಧ್ಯ ಪ್ರವೇಶ ಮಾಡಿ ಸುದ್ದಿಗೋಷ್ಠಿ ಬೇಡ ಎಂದು ಮನವಿ ಮಾಡಿದರು. ಇದರಿಂದ ಅಸಮಾಧಾನಗೊಂಡ ನರೇಂದ್ರ ಅವರು ನಮ್ಮನ್ನ ಪಕ್ಕದಲ್ಲಿ ಕೂರಿಸಿಕೊಂಡು ತಪ್ಪು ಮಾಹಿತಿ ನೀಡಿದ್ದೀರಿ. ನೀವು ಹೇಳಿದನ್ನು ಕೇಳಿಸಿಕೊಂಡು ಎದ್ದು ಹೋದರೆ ನಾವು ಅದನ್ನು ಒಪ್ಪಿಕೊಂಡಂತೆ ಆಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.

The post ಆಕ್ಸಿಜನ್​ ದುರಂತದಲ್ಲಿ ಸತ್ತಿರೋದು 24 ಅಲ್ಲ 34 ಮಂದಿ -ಶಾಸಕ ನರೇಂದ್ರ ಗಂಭೀರ ಆರೋಪ appeared first on News First Kannada.

Source: newsfirstlive.com

Source link