ಚಾಮರಾಜನಗರ: ನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ 22 ರೋಗಿಗಳು ಸಾವನ್ನಪ್ಪಿದ ಕುರಿತ ವರದಿಗಳು ಪ್ರಸಾರ ಆಗುತ್ತಿದಂತೆ ಶಾಸಕ ಪುಟ್ಟರಂಗಶೆಟ್ಟಿ ಆಸ್ಪತ್ರೆಯ ಬಳಿ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದಾರೆ. ಈ ವೇಳೆ ಸಾರ್ವಜನಿಕರು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಕ್ಸಿಜನ್ ಇಲ್ಲದೆ 24 ಜನ ಸತ್ತಿದ್ದಾರೆ. ಸಾವಿಗೆ ಯಾರು ಹೊಣೆ..?  34 ವರ್ಷದ ಯುವಕ 2 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ, ಆತ ಸಾವನ್ನಪ್ಪಿದ್ದಾನೆ. ಸಮಸ್ಯೆ ಹೇಳಿಕೊಂಡು ಕರೆ ಮಾಡಿದರೆ. ಯಾರಿಂದಲೂ ಸರಿಯಾದ ಉತ್ತರ ಇಲ್ಲ. ಇಂತಹ ಆಸ್ಪತ್ರೆ ಇರುವುದಕ್ಕಿಂತ ಮುಚ್ಚುವುದೇ ಮೇಲು ಎಂದು ಏರು ಧ್ವನಿಯಲ್ಲಿ ಜನರು ಪ್ರಶ್ನಿಸಿದರು.

ಈ ವೇಳೆ ಸಾರ್ವಜನಿಕರನ್ನು ಶಾಂತಗೊಳಿಸಲು ಮುಂದಾದ ಶಾಸಕರು, ನಾನು ನಿನ್ನೆ ರಾತ್ರಿಯೇ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಜಿಲ್ಲಾಧಿಕಾರಿಗಳೊಂದಿಗೂ ಮಾತನಾಡಿ ಆಕ್ಸಿಜನ್ ಪೂರೈಕೆ ಮಾಡಲು ಹೇಳಿದ್ದೆ. ಆದರೆ ಹೀಗೆ ಆಗುತ್ತೆ ಅಂತಾ ನನಗೆ ಗೊತ್ತಿಲ್ಲ ಎಂದರು. ಆದರೂ ಜನರು ಸಮಾಧಾನಗೊಳ್ಳದ ಕಾರಣ, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾತನಾಡುತ್ತೇನೆ ಎಂದು ಸ್ಥಳದಿಂದ ಹೊರಟರು.

ಇತ್ತ ಚಾಮರಾಜನಗರ ಘಟನೆ ಕುರಿತಂತೆ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರಿಗೆ ಬುಲಾವ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಆರ್​ಡಿಓ ಅಧಿಕಾರಿಗಳ ಜೊತೆ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಸುಧಾಕರ್ ಸಿಎಂ ನಿವಾಸಕ್ಕೆ ತೆರಳಿದ್ದಾರೆ.

The post ಆಕ್ಸಿಜನ್ ಕೊರತೆ: 24 ಜನರ ಸಾವಿಗೆ ಯಾರು ಹೊಣೆ..?- ಶಾಸಕ ಪುಟ್ಟರಂಗಶೆಟ್ಟಿಗೆ ಜನರ ತರಾಟೆ appeared first on News First Kannada.

Source: newsfirstlive.com

Source link