ಬೆಂಗಳೂರು: ಆ್ಯಕ್ಸಿಜನ್ ಖರೀದಿ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.

ಜಿಲ್ಲಾಡಳಿತ ನೀಡುತ್ತಿರುವ ಆಕ್ಸಿಜನ್ ಅನ್ನು ತಮ್ಮ ಸ್ವಂತ ಹಣದಲ್ಲಿ ನೀಡಿರುವುದಾಗಿ ಹೇಳಿ ಸುಮಲತಾ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಅವರು, ವ್ಯಯಕ್ತಿಕವಾಗಿಯೇ ಆ್ಯಕ್ಸಿಜನ್ ಖರೀದಿ ಮಾಡಿ, ಖಾಲಿ ಸಿಲಿಂಡರ್​ಗಳಿಗೆ ತುಂಬಿಸಿಕೊಡುತ್ತಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ದಾಖಲೆಗಳೂ ಇವೆ ಎಂದು ತಿಳಿಸಿದ್ದಾರೆ. ಈ ವಿಷಮ ಪರಿಸ್ಥಿತಿಯಲ್ಲಾದರೂ ರಾಜಕೀಯ ಮಾಡುವುದು ಬಿಡಿ. ನಿಮ್ಮ ಕೈಯಲ್ಲಿ ಸಾಧ್ಯವಾದ್ರೆ ಖಾಲಿ ಸಿಲಿಂಡರ್ ತನ್ನಿ. ನಿಮಗೂ ಆಕ್ಸಿಜನ್ ಭರ್ತಿ ಮಾಡಿಸಿಕೊಡುವ ಪ್ರಯತ್ನ ಮಾಡ್ತೀನಿ, ಅದು ನನ್ನ ಖರ್ಚಿನಲ್ಲೇ ಎಂದು, ಆರೋಪ ಮಾಡಿದವರಿಗೆ ಉತ್ತರಿಸಿದ್ದಾರೆ.

ಸುಮಲತಾ ಹೇಳಿದ್ದೇನು?

ಮಾತಿಗಿಂತ ಕೃತಿ ಮಾತಾಡಬೇಕು ಎನ್ನುವುದನ್ನು ನಂಬಿರುವವಳು ನಾನು. ಸಾಮಾನ್ಯ ಜನರು ಜೀವನ-ಮರಣದ ನಡುವೆ ಹೋರಾಟ ನಡೆಸುತ್ತಿರುವ ಈ ಕಾಲದಲ್ಲೂ, ಕೆಲವರು ಆಕ್ಸಿಜನ್ ಸಿಲಿಂಡರ್ ವಿಷಯದಲ್ಲಿ ರಾಜಕೀಯ ಕುತಂತ್ರ ಮಾಡುತ್ತಿರುವುದು ತುಂಬಾ ಹೇಸಿಗೆ ಅನಿಸಿದೆ. ಆದ್ದರಿಂದ ಈ ಮಾತನ್ನು ಅನಿವಾರ್ಯವಾಗಿ ಹೇಳುತ್ತಿದ್ದೇನೆ.

ಜಿಲ್ಲಾ ಆಡಳಿತವೇ ಕೊಡುತ್ತಿರುವ ಆಕ್ಸಿಜನ್ ಅನ್ನು, ನನ್ನ ಸ್ವಂತ ಹಣದಿಂದ ಕೊಡುತ್ತಿದ್ದೇನೆ ಎಂದು ಸುಳ್ಳು ಹೇಳುತ್ತಿರುವುದಾಗಿ ಅಪಪ್ರಚಾರ ಮಾಡುತ್ತಿದ್ದೀರಿ. ಅದಕ್ಕೆ ನನ್ನ ಸ್ಪಷ್ಟ ಉತ್ತರ ನೀಡುತ್ತೇನೆ.

ಜಿಲ್ಲಾಧಿಕಾರಿಗಳು, ಡಿಸ್ಟ್ರಿಕ್ಟ್ ಹೆಲ್ತ್ ಆಫೀಸರ್, ಮತ್ತು ಡ್ರಗ್ ಕಂಟ್ರೋಲರ್ ಅವರುಗಳು ಜಿಲ್ಲೆಯಲ್ಲಿ ಸರ್ಕಾರದ ಕಡೆಯಿಂದ ಬರುತ್ತಿರುವ ಆಕ್ಸಿಜನ್ಗೂ ಮೀರಿ ಎರಡರಿಂದ ಮೂರು ಸಾವಿರ ಲೀಟರ್ ಆಕ್ಸಿಜನ್ ಹೆಚ್ಚುವರಿ ಬೇಕಾಗುತ್ತದೆ ಎಂದು ತಿಳಿಸಿದರು. ಖಾಲಿ ಸಿಲಿಂಡರ್ ಭರ್ತಿ ಮಾಡಿಸಿ ಕೊಡುವುದಕ್ಕೆ ನನ್ನನ್ನು ಕೇಳಿದರು ಮತ್ತು ಇದಕ್ಕೆ ಹಣಕಾಸಿನ ವ್ಯವಸ್ಥೆ ಮಾಡುವುದರ ಬಗ್ಗೆಯೂ ಚರ್ಚಿಸಿದರು. ಈ ಹೆಚ್ಚುವರಿ 2,000 ಲೀಟರ್ ಆಕ್ಸಿಜನ್ ಅನ್ನು ನನ್ನ ಸ್ವಂತ ಖರ್ಚಿನಲ್ಲಿ ಸರ್ಕಾರದಿಂದ ಬರುವ ಆಕ್ಸಿಜನ್ ಸಾಕಾಗುವ ತನಕ ತುಂಬಿಸಿ ಕೊಡುವುದಾಗಿ ಹೇಳಿದೆ. ಇಂತಹ ಕಾಲದಲ್ಲಿ ಆಕ್ಸಿಜನ್ ಸಿಗುವುದೇ ದೊಡ್ಡ ವಿಷಯ. ಅದನ್ನು ನಮ್ಮ ಜಿಲ್ಲೆಗೆ ದೊರಕಿಸಿಕೊಳ್ಳುವುದೇ ನನ್ನ ಉದ್ದೇಶವಾಗಿತ್ತು. ಸಿಲಿಂಡರ್​​ಗಳ ಅಭಾವ ಇರುವುದರಿಂದ ಅವರು ಕಾಲಕಾಲಕ್ಕೆ ಕಳಿಸಿಕೊಡುತ್ತಿರುವ ಖಾಲಿ ಸಿಲಿಂಡರ್​ಗಳನ್ನು ಭರ್ತಿ ಮಾಡಿಸಿ ಕಳುಹಿಸಿ ಕೊಡುತ್ತಿದ್ದೇನೆ. ಇದರಿಂದ ಇನ್ನೂ ಹೆಚ್ಚು ಜನ ಸೋಂಕಿತರಿಗೆ ಚಿಕಿತ್ಸೆ ಕೊಡಲು ನೆರವಾಗುತ್ತಿದೆ. ಈ ಹೆಚ್ಚುವರಿ ಆಕ್ಸಿಜನ್ ಖರ್ಚನ್ನು ನಾನೇ ಭರಿಸುತ್ತಿರುವೆ. ಇದಕ್ಕೆ ಸಂಬಂಧಪಟ್ಟ ಇ-ಮೇಲ್ ಪತ್ರವ್ಯವಹಾರಗಳು ಮತ್ತು ರಸೀದಿಗಳೇ ಸಾಕ್ಷಿಯಾಗಿವೆ. ಯಾವ ಸಮಯದಲ್ಲಿ ಯಾರಿಗೆ ಎಷ್ಟು ಖಾಲಿ ಸಿಲಿಂಡರ್​ಗಳನ್ನು ಭರ್ತಿ ಮಾಡಿ ಕಳಿಸಿಕೊಡಲಾಗಿದೆ ಎನ್ನುವುದಕ್ಕೆ ದಾಖಲೆ ಕೂಡ ಇದೆ.

ಆಡಳಿತದಿಂದ ಕಳಿಸುತ್ತಿರುವ ಖಾಲಿ ಸಿಲಿಂಡರ್​ಗಳನ್ನು ಕಳೆದ ಮೂರು ದಿನಗಳಿಂದ ಸ್ವಂತ ಖರ್ಚಿನಲ್ಲಿ ಆಕ್ಸಿಜನ್ ತುಂಬಿಸಿ ಕಳಿಸುತ್ತಿದ್ದೇನೆ. ಇದನ್ನು ಅಗತ್ಯವಿರುವವರೆಗೂ ಮುಂದುವರೆಸುತ್ತೇನೆ. ಈ ವಿಷಯವನ್ನು ನೀವು ಯಾವ ರೀತಿ ತಿರುಚಿದರೂ ಇರುವ ಸತ್ಯ ಉಳಿಯುತ್ತದೆ.

ಜಿ.ಮಾದೇಗೌಡ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಅಧಿಕಾರಿಗಳು ಕೂಡ ಅಲ್ಲಿ ಆಕ್ಸಿಜನ್ ಕೊರತೆ ಇರುವುದರ ಬಗ್ಗೆ ನನಗೆ ಮನವಿ ಮಾಡಿದರು. ಈ ಆಸ್ಪತ್ರೆಯಲ್ಲಿ ಕೂಡ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದ್ದು ಹೆಚ್ಚಿನವರಿಗೆ ಅನುಕೂಲವಾಗುತ್ತಿದೆ. ಆಸ್ಪತ್ರೆಯ ಆಡಳಿತ ವರ್ಗದವರು ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಮುಂದೆಯೂ ಆಕ್ಸಿಜನ್ ಬೇಕಾಗಬಹುದು ಎಂದು ತಿಳಿಸಿದ್ದಾರೆ. ಅಗತ್ಯ ಬಿದ್ದರೆ ಮುಂದೆಯೂ ಆಕ್ಸಿಜನ್ ಕೊಡಿಸುವ ಪ್ರಯತ್ನ ಮಾಡಲಾಗುವುದು.

ನಂತರ ಬಿ.ಜಿ.ಎಸ್ ವೈದ್ಯಕೀಯ ಸಂಸ್ಥೆಯಿಂದ ಕೂಡ ಆಕ್ಸಿಜನ್ ಕೊರತೆ ಬಗ್ಗೆ ತಿಳಿಸಲಾಯಿತು. ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಕರೆ ಮಾಡಿ ನನ್ನ ಕೆಲಸವನ್ನು ಶ್ಲಾಘನೆ ಮಾಡಿದರು. ಟ್ಯಾಂಕರ್ ಕಳುಹಿಸಿಕೊಟ್ಟರೆ ಆಕ್ಸಿಜನ್ ತುಂಬಿಸಿ ಕಳುಹಿಸಲು ಸಕಲ ಪ್ರಯತ್ನ ಮಾಡುವುದಾಗಿ ಸ್ವಾಮೀಜಿಗಳಿಗೆ ತಿಳಿಸಿದ್ದೇನೆ.

ಮಂಡ್ಯದ ಜನ ಕೇವಲ ಒಬ್ಬ ಸಂಸದರನ್ನು ಮಾತ್ರ ಗೆಲ್ಲಿಸಿ ಕಳಿಸಿಲ್ಲ. ಹಲವಾರು ಬಾರಿ ನಿಮ್ಮನ್ನು ಗೆಲ್ಲಿಸಿದ್ದಾರೆ. ಈ ಮಹಾಮಾರಿ ಜನರನ್ನು ಕಿತ್ತು ತಿನ್ನುತ್ತಿದೆ. ಕನಿಷ್ಠಪಕ್ಷ ಈ ವಿಷಮ ಪರಿಸ್ಥಿತಿಯಲ್ಲಾದರೂ ರಾಜಕೀಯ ಮಾಡುವುದನ್ನು ಬಿಟ್ಟು ನನ್ನ ಜೊತೆ ಕೈಜೋಡಿಸಿ. ಸಾಂಕ್ರಾಮಿಕ ರೋಗಕ್ಕೆ ನಾಚಿಕೆಯಾಗುವಂಥ ಮಾತಾಡಬೇಡಿ. ಕ್ಷೇತ್ರದ ಜನರಿಗೆ ನೀವು ಆಕ್ಸಿಜನ್ ಪೂರೈಸಲು ಸಾಧ್ಯವಾಗದಿದ್ದರೆ ಆ ವೈಫಲ್ಯಕ್ಕೆ ನಾನು ಮಾಡುತ್ತಿರುವ ಕೆಲಸಗಳನ್ನು ಗುರಿ ಮಾಡಬೇಡಿ.

ಒಬ್ಬ ಸ್ವತಂತ್ರ ಸಂಸದೆಯಾಗಿ ನಾನು ಪ್ರಧಾನಮಂತ್ರಿ, ಕೇಂದ್ರ ಆರೋಗ್ಯ ಮಂತ್ರಿ ಮತ್ತು ಕೇಂದ್ರ ಗೃಹ ಮಂತ್ರಿಗಳಿಗೆ ಪತ್ರ ಬರೆದು ಕರ್ನಾಟಕದ ಜನರ ಸಂಕಷ್ಟಗಳನ್ನು ವಿವರಿಸಿ ನಮಗೆ ಸಿಗಬೇಕಾದ ವ್ಯವಸ್ಥೆಗಳನ್ನು ಪಡೆಯುವ ಬಗ್ಗೆ ಪ್ರಯತ್ನ ನಡೆಸಿದ್ದೇನೆ. ನಿಮ್ಮ ಪಕ್ಷದ ಮುಖಂಡರು, ಸಂಸದರು, ಘಟಾನುಘಟಿಗಳು, ಕೇಂದ್ರ ಸರ್ಕಾರದ ಮೇಲೆ ಯಾವ ರೀತಿಯ ಒತ್ತಡ ತಂದಿದ್ದೀರಿ ದಯಮಾಡಿ ತಿಳಿಸಿ.

ಬರೀ ಮಾತಿನಲ್ಲೇ ರಾಜಕೀಯ ಮಾಡುತ್ತಿರುವರು ದಯವಿಟ್ಟು ನಿಮ್ಮ ಕೈಯಲ್ಲಿ ಸಾದ್ಯವಾದರೆ ಖಾಲಿ ಸಿಲಿಂಡರ್ಗಳನ್ನಾದರೂ ತನ್ನಿ. ನಿಮಗೂ ಕೂಡ ನಾನು ಯಾವುದೇ ಭೇದಭಾವವಿಲ್ಲದೆ ಇದೇ ರೀತಿಯಲ್ಲಿ ಆಕ್ಸಿಜನ್ ಭರ್ತಿ ಮಾಡಿಸಿಕೊಡುವ ಪ್ರಯತ್ನ ಮಾಡುತ್ತೇನೆ. ಅದು ನನ್ನ ಖರ್ಚಿನಲ್ಲೇ.

ಇಲ್ಲಿ ಎಲ್ಲರ ಪ್ರಯತ್ನವೂ ಅಗತ್ಯ ಇದೆ. ಸಮಸ್ಯೆ ದೊಡ್ಡದಿದೆ. ಜನರ ಜೀವನದ ಜೊತೆ ಆಟವಾಡುತ್ತ ಕೊಡುವ ಸಮಯ ಇದಲ್ಲ. ಸುಳ್ಳು ಆರೋಪಗಳನ್ನು ಮಾಡುವುದೇ ಕಾಯಕವಾದರೆ ಸಮಾಜ ನಿಮ್ಮನ್ನು ಕ್ಷಮಿಸುವುದಿಲ್ಲ.

ಸುಮಲತಾ ಅಂಬರೀಶ್, ಮಂಡ್ಯ ಸಂಸದೆ.

ನಿಮಗೆ ಮುಕ್ತ ಆಹ್ವಾನ

ಮಾತಿಗಿಂತ ಕೃತಿ ಮಾತಾಡಬೇಕು ಎನ್ನುವುದನ್ನು ನಂಬಿರುವವಳು ನಾನು. ಸಾಮಾನ್ಯ ಜನರು ಜೀವನ-ಮರಣದ ನಡುವೆ ಹೋರಾಟ…

Posted by Sumalatha Ambareesh on Saturday, 8 May 2021

The post ಆಕ್ಸಿಜನ್ ಖರ್ಚನ್ನು ನಾನೇ ಭರಿಸುತ್ತಿರುವೆ, ರಸೀದಿಗಳೇ ಸಾಕ್ಷಿ -ಸುಮಲತಾ ಸ್ಪಷ್ಟನೆ appeared first on News First Kannada.

Source: newsfirstlive.com

Source link