ಬೆಂಗಳೂರು: ಕರ್ನಾಟಕದ ಏಳಿಗೆಗೆ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ಡಬಲ್ ಇಂಜಿನ್ ರೀತಿ ಕೆಲಸ ಮಾಡುತ್ತವೆ ಎಂದು ಹೇಳಿದ್ದರು. ಆದರೆ ಕೋವಿಡ್ ನಿರ್ವಹಣೆ, ಆಕ್ಸಿಜನ್, ಲಸಿಕೆ ಪೂರೈಕೆ ವಿಚಾರದಲ್ಲಿ ಈ ಡಬಲ್ ಇಂಜಿನ್​ಗಳು ಕೆಟ್ಟು ನಿಂತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಚಾಮರಾಜನಗರದಲ್ಲಿ 24 ಜನರ ಸಾವಿಗೆ ಸರ್ಕಾರವೇ ಹೊಣೆ ಎಂದು ಹೈಕೋರ್ಟ್ ನೇಮಕ ಮಾಡಿದ್ದ ನ್ಯಾಯಮೂರ್ತಿಗಳ ಸಮಿತಿ ಈಗಾಗಲೇ ವರದಿ ಕೊಟ್ಟಿದೆ. ಇದಕ್ಕೆ ಸರ್ಕಾರದಿಂದ ಯಾರು ಹೊಣೆಗಾರರು ಎಂದು ನೀವೇ ತೀರ್ಮಾನಿಸಿ. ಈ ಸಾವುಗಳಿಗೆ ಸರ್ಕಾರ ನೈತಿಕ ಹೊಣೆ ಹೊರಬೇಕು.

ಇನ್ನು ಮುಖ್ಯಮಂತ್ರಿಗಳು ಬೌರಿಂಗ್ ಆಸ್ಪತ್ರೆಯಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಈಗ ಸುಮ್ಮನಾಗಿದ್ದಾರೆ. ಕೇಂದ್ರದಿಂದ ಎಷ್ಟು ಪ್ರಮಾಣದಲ್ಲಿ ಲಸಿಕೆ ಬರುತ್ತಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ಇಲ್ಲವೇ? ಲಸಿಕೆ ವಿತರಣೆ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಹೊತ್ತುಕೊಳ್ಳಬೇಕು. ರಾಜ್ಯ ಸರ್ಕಾರ ಯಾಕೆ ಸುಮ್ಮನಿದೆಯೋ ಗೊತ್ತಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರನ್ನು ದೇವರೇ ಕಾಪಾಡಬೇಕು. ಇವರಲ್ಲಿ ಯಾರಾದರೂ ಒಬ್ಬರು ರಾಜ್ಯದ ಪರವಾಗಿ ಧ್ವನಿ ಎತ್ತಿದ್ದಾರಾ? ಜನರಿಗೆ ನೆರವಾಗಿದ್ದಾರಾ? ಎಂದು ಪ್ರಶ್ನಿಸಿದರು.

ಲಸಿಕೆ ಉಚಿತವಾಗಿ ನೀಡುತ್ತೇವೆ ಎಂದರು. 18-44 ರ ವಯೋಮಾನದವರಿಗೆ ಲಸಿಕೆ ಅಂತಾ ಮೇ 1ರಂದು ಉದ್ಘಾಟನೆಯನ್ನೂ ಮಾಡಿದರು. ಇವತ್ತು ಲಸಿಕೆ ಕೊಡಲು ಆಗಲ್ಲ ಅಂತಿದ್ದಾರೆ. ಆಕ್ಸಿಜನ್ ಪೂರೈಸುವಂತೆ ಆದೇಶಿಸಿ ಹೈಕೋರ್ಟ್ ರಾಜ್ಯದ ಜನರಿಗೆ ನ್ಯಾಯ ಒದಗಿಸಿತ್ತು. ಆದರೆ ಕೇಂದ್ರ ಸರ್ಕಾರ ಆಕ್ಸಿಜನ್ ಕಳುಹಿಸಿದೆ ಎಂದು ಇವರು ಶಹಬ್ಬಾಶ್ ಗಿರಿ ತೆಗೆದುಕೊಳ್ಳುತ್ತಿದ್ದಾರೆ. ಅವರು ಯಾರಿಗಾದರೂ ಶಹಬ್ಬಾಶ್ ಗಿರಿ ಕೊಡಲಿ, ಒಟ್ಟಾರೆ ಜನರ ಪ್ರಾಣ ಉಳಿಸಿದರೆ ಸಾಕು.

45 ವರ್ಷ ಮೇಲ್ಪಟ್ಟವರಲ್ಲಿ ಅನೇಕರಿಗೆ ಇನ್ನು ಮೊದಲ ಲಸಿಕೆ ಕೊಟ್ಟಿಲ್ಲ. ಎರಡನೇ ಡೋಸ್ ಕೂಡ ಕೊಡಬೇಕು. ಈ ವಿಚಾರದಲ್ಲಿ ಸರ್ಕಾರದ ಬಳಿ ಪರಿಣಾಮಕಾರಿ ಯೋಜನೆ, ಸಿದ್ಧತೆ ಇಲ್ಲ. ಇದನ್ನು ನಿಭಾಯಿಸಲು ಇವರಿಗೆ ಆಗುತ್ತಿಲ್ಲ ಎಂದು ಗುಡುಗಿದರು.

The post ‘ಆಕ್ಸಿಜನ್, ಲಸಿಕೆ ಪೂರೈಕೆ ವಿಚಾರದಲ್ಲಿ ಡಬಲ್ ಇಂಜಿನ್​ಗಳು ಕೆಟ್ಟು ನಿಂತಿವೆ’ appeared first on News First Kannada.

Source: newsfirstlive.com

Source link