ಬೆಂಗಳೂರು: ಆಕ್ಸಿಜನ್, ವ್ಯಾಕ್ಸಿನ್ ವಿಚಾರದಲ್ಲಿ ಚಾಟಿ ಬೀಸಿದ್ದ ಕರ್ನಾಟಕ ಹೈಕೋರ್ಟ್, ಈಗ ಬೆಡ್ ಸಮಸ್ಯೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಚುರುಕು ಮುಟ್ಟಿಸಿದೆ.

ಬೆಂಗಳೂರಿನ ಸಮಸ್ಯೆ ಜಿಲ್ಲಾ ಆಸ್ಪತ್ರೆಯಲ್ಲೂ ಕೂಡ ಆಗುತ್ತಿದೆ. ಎಷ್ಟು ಬೆಡ್‍ಗಳಿವೆ? ಎಷ್ಟು ಜನರಿಗೆ ಹಂಚಿಕೆ ಮಾಡಲಾಗಿದೆ? ಜಿಲ್ಲಾ ಕೇಂದ್ರಗಳಲ್ಲಿ ಎಷ್ಟಿದೆ ಲೆಕ್ಕ ಕೊಡಿ ಎಂದು ಕೇಳಿತು.

ಆಗ ರಾಜ್ಯದಲ್ಲಿರುವ ಕೊರೋನಾ ಪ್ರಕರಣಗಳ ಅನುಸಾರ 66 ಸಾವಿರ ಆಕ್ಸಿಜನ್ ಬೆಡ್ ಬೇಕು. ಆದ್ರೆ ರಾಜ್ಯದಲ್ಲಿ 45ಸಾವಿರ ಬೆಡ್ ಇವೆ. ಅಂದಾಜು 20 ಸಾವಿರ ಆಕ್ಸಿಜನ್ ಬೆಡ್‍ಗಳ ಕೊರತೆ ಇದೆ ಎಂದು ರಾಜ್ಯ ಸರ್ಕಾರ ಲೆಕ್ಕ ನೀಡಿತು.

ಈ ಉತ್ತರಕ್ಕೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಮೊದಲನೇ ಅಲೆ ಬಂದಾಗಲೇ ತಯಾರಿ ಆಗಬೇಕಿತ್ತು. ಏಕೆ ಆಗಲಿಲ್ಲ ಎಂದು ಪ್ರಶ್ನಿಸಿ ಚಾಟಿ ಬೀಸಿತು. ಕೂಡಲೇ ಸಮಸ್ಯೆ ಬಗೆಹರಿಸಲು ಪ್ಲಾನ್ ಮಾಡಿಕೊಳ್ಳಿ ಎಂದು ಸೂಚಿಸಿತು.

ಏರ್‍ಫೋರ್ಸ್‍ನಲ್ಲಿ 100 ಬೆಡ್ ರೆಡಿ ಇದೆ. ರೆಡಿ ಇರುವ ಬೆಡ್ ಪಡೆಯಲು ಸರ್ಕಾರಕ್ಕೆ ಕಷ್ಟನಾ ಅಂತ ಕ್ಲಾಸ್ ತೆಗೆದುಕೊಂಡಿತು. ಬೆಡ್ ಬ್ಲಾಕಿಂಗ್ ಅವ್ಯವಹಾರದ ನಡೆಸಿರುವ ತನಿಖಾ ತಂಡಕ್ಕೆ ಅನುಭವಿ ಐಪಿಎಸ್ ಅಧಿಕಾರಿ, ಸೈಬರ್ ತಜ್ಞರನ್ನು ಸೇರಿಸಿಕೊಳ್ಳಬೇಕು ಅಂತ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತು.

ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿಯೇ ತನಿಖೆ ನಡೆಯುತ್ತಿದೆ ಎಂದು ಸರ್ಕಾರದ ಪರ ವಕೀಲರು ಕೋರ್ಟ್‍ಗೆ ಮಾಹಿತಿ ನೀಡಿದರು. ಮುಂದಿನ ವಾರ ತನಿಖಾ ಪ್ರಗತಿ ವರದಿ ಸಲ್ಲಿಸಲು ಸೂಚಿಸಿದ ಹೈಕೋರ್ಟ್, ನಾಳೆಗೆ ವಿಚಾರಣೆ ಮುಂದೂಡಿತು.

ವರದಿ ಸಲ್ಲಿಕೆ: ಇದೇ ವೇಳೆ ಚಾಮರಾಜನಗರ ಆಕ್ಸಿಜನ್ ದುರಂತದ ತನಿಖೆ ನಡೆಸಲು ಹೈಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲಗೌಡ ನೇತೃತ್ವದ ಸಮಿತಿ ಹೈಕೋರ್ಟ್‍ಗೆ ವರದಿ ಸಲ್ಲಿಸಿದೆ. ಈ ವರದಿ ಪರಿಶೀಲಿಸಿದ ಹೈಕೋರ್ಟ್ ಮೃತರ ಕುಟುಂಬಗಳಿಗೆ ಪರಿಹಾರ ಸೇರಿ ಸಮಿತಿ ಮಾಡಿದ ಶಿಫಾರಸುಗಳನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಈ ಬಗ್ಗೆಯೂ ನಾಳೆ ವಿಚಾರಣೆ ಮುಂದುವರೆಯಲಿದೆ.

The post ಆಕ್ಸಿಜನ್, ವ್ಯಾಕ್ಸಿನ್ ಆಯ್ತು ಬೆಡ್ ಸಮಸ್ಯೆ ವಿಚಾರದಲ್ಲೂ ಸರ್ಕಾರಕ್ಕೆ ಕ್ಲಾಸ್ appeared first on Public TV.

Source: publictv.in

Source link