Column : ಮತ್ತೆ ಸಂಪಾದಕರನ್ನು ಸಂಪರ್ಕಿಸಿದೆ. ಎಲ್ಲದಕ್ಕೂ ಉತ್ತರ ನಿಮಗೆ ಬೇಕಾದ ಸ್ವರೂಪದಲ್ಲೇ ಸಿಗುವುದಿಲ್ಲ. ಆದರೆ, ನಿಮಗೆ ಭೂತ ಮುಖ್ಯವೋ ಭವಿಷ್ಯ ಮುಖ್ಯವೋ ವಾಸ್ತವ ಮುಖ್ಯವೋ ಎಂದರು. ವಾಸ್ತವ ಎಂದೆ. ಬರೆಯಲಾರಂಭಿಸಿದೆ. ಇದು ಕೊನೆಯ ಕಂತು.
ಆಗಾಗ ಅರುಂಧತಿ: ಬೆಳಗ್ಗೆ ಎದ್ದವಳೇ ನನ್ನನ್ನೇ ನಾನು ದಿಟ್ಟಿಸಿಕೊಂಡೆ ಕನ್ನಡಿಯಲ್ಲಿ. ಸಾಕು ಇನ್ನು ಬರೆದಿದ್ದು ಕೊನೆಯ ಕಂತು ಬರೆದು ಮುಗಿಸಿಬಿಡೋಣ ಎಂದು ಗೇಟಿನತ್ತ ನಡೆದೆ. ಚೀಲದಲ್ಲಿದ್ದ ಹಾಲಿನ ಪ್ಯಾಕೆಟ್ ತೆಗೆದುಕೊಂಡು ಕಾಯಲು ಇಟ್ಟೆ. ಕಾಫಿಯೊಂದಿಗೆ ಬಾಲ್ಕನಿಯಲ್ಲಿ ಬಂದು ಕುಳಿತೆ. ಈ ಅಂಕಣವನ್ನು ಮನಸ್ಸು ಬಂದಾಗ ಬರೆಯುತ್ತೇನೆ ಎಂದು ಸಂಪಾದಕರಿಗೆ ಹೇಳಿದ್ದೆನಾದ್ದರಿಂದ ನನ್ನ ಹೆಸರಿನ ಹಿಂದೆ ‘ಆಗಾಗ’ ಎಂದು ಸೇರಿಸಿ ಅವರು ಮೊದಲು ನನಗೊಂದು ನಿರಾಳ ಭಾವ ತಂದರು. ಕಥೆ ಕಾದಂಬರಿ ಓದಿ ಗೊತ್ತಿತ್ತು. ಆದರೆ ಆತನಕ ಬರೆವಣಿಗೆ ನನ್ನ ಮಾಧ್ಯಮವಾಗಿರಲಿಲ್ಲ. ಬರೆಯುತ್ತ ಹೋದಂತೆ ಇದು ನನಗೊಂದು ಶಾಶ್ವತ ಪರ್ಯಾಯ ಮಾರ್ಗವೇ ಆಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಆದರೆ, ಸಂಪಾದಕರದು ಒಂದೇ ಶರತ್ತು. ನೀವು ಏನೇ ಬರೆದರೂ ಸತ್ಯವನ್ನೇ ಬರೆಯಬೇಕು. ಆ ಪ್ರಕಾರ ನಾನು ಬರೆಯುತ್ತ ಹೋದೆ ನೀವೆಲ್ಲ ಓದುತ್ತ ಹೋದಿರಿ. ನಾನೀಗ ಕೊನೆಯ ಸತ್ಯವನ್ನು ನಿಮ್ಮೆದುರು ಬಿಚ್ಚಿಡುವಂಥ ಸಮಯ ಬಂದಿದೆ.
ಅರುಂಧತಿ (Arundhati)
ನಾನು ಸಾಫ್ಟ್ವೇರ್ ಎಂಜಿನಿಯರ್. ಫೋಟೋಗ್ರಫಿ ನನ್ನ ಹವ್ಯಾಸ. ಐದನೇ ಕ್ಲಾಸಿಗೇ ನನ್ನ ತಾಯಿ ಊಟಿಯ ರೆಸಿಡೆನ್ಶಿಯಲ್ ಶಾಲೆಗೆ ಸೇರಿಸಿದರು. ನಂತರ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದಿ ಕೆಲಸಕ್ಕೆ ಸೇರಿಕೊಂಡೆ. ಯಾವಾಗ ವರ್ಕ್ ಫ್ರಂ ಹೋಮ್ ಶುರುವಾಯಿತೋ ನಾನು ನನ್ನ ಊರಿಗೆ ಮರಳಿದೆ. ಆತನಕ ನನಗೆ ಕನಸಿನಲ್ಲಿ ಪ್ರೋಗ್ರ್ಯಾಂಗಳು ಬಿಟ್ಟರೆ, ಅಪರೂಪಕ್ಕೆ ಯಾವುದೋ ಕಾಡು ನದಿ ಅಲೆಯುತ್ತಿರುವಂಥ ದೃಶ್ಯಗಳು ಹಾದು ಹೋಗುತ್ತಿದ್ದವು. ಆದರೆ ಆನಂತರ ಬಿದ್ದ ಕನಸುಗಳು ನನ್ನನ್ನು ಅದೆಷ್ಟು ಕಂಗೆಡಿಸಿಬಿಟ್ಟವೆಂದರೆ… ಪೂರ್ವಜನ್ಮಕ್ಕೇನಾದರೂ ಮರಳುತ್ತಿದ್ದೇನಾ ಎಂಬಂತೆ. ಇದ್ಯಾವುದನ್ನೂ ನಂಬದ ನಾನು ಇದರಿಂದ ಹೊರಬರುವುದು ಹೇಗೆ? ಬೀಳುತ್ತಿದ್ದ ಕನಸುಗಳಿಗೂ ನನ್ನ ಆಸಕ್ತಿ, ಆಲೋಚನೆಗಳಿಗೂ ಸಂಬಂಧವೇ ಇರಲಿಲ್ಲ.
ಅಜ್ಜಿಯ ಬಳಿ ಹೇಳಿಕೊಂಡರೆ ದೇವರು ದಿಂಡಿರು ಕೊನೆಗೆ ದೆವ್ವವೆಂದೂ ಹೇಳಿಯಾರು. ಅಮ್ಮನ ಬಳಿ ಹೋದರೆ ಕೌನ್ಸೆಲಿಂಗ್, ಥೆರಪಿ ಅಂತ ಅಂದರೂ ಅಂದರೇ. ಸ್ನೇಹಿತರ ಬಳಿ ಹೇಳಿಕೊಂಡರೆ ಮಳ್ಳು ನೀನು ಎಂದು ನಕ್ಕು ಅವಮಾನಿಸಲೂ ಹಿಂದೆಮುಂದೆ ನೋಡರು. ಹಾಗಿದ್ದರೆ ಏನು ಮಾಡಲಿ? ಎಲ್ಲರ ಬಳಿ ನನ್ನ ಸಮಸ್ಯೆ ಹೇಳಿಕೊಂಡು, ಅವರವರ ಆಲೋಚನೆಗೆ ತಕ್ಕಂತೆ ಪರಿಹಾರ ಕಂಡುಕೊಳ್ಳಲು ನನ್ನನ್ನು ಎಳೆದಾಡುತ್ತ ಹೋದರೆ ನನ್ನ ಪರಿಸ್ಥಿತಿ? ಆದರೆ ಹಾಗೆಂದು ನನಗೆ ಸುಮ್ಮನಿರಲು ಆಗುತ್ತಿಲ್ಲ. ನಿದ್ದೆ ಬರುತ್ತಿಲ್ಲ. ಇದರಿಂದ ಕೆಲಸ ಮಾಡುವಲ್ಲಿ ಏಕಾಗ್ರತೆ ಒದಗುತ್ತಿಲ್ಲ. ಏನಾದರೂ ಒಂದು ಪರಿಹಾರ ಕಂಡುಕೊಳ್ಳಲೇಬೇಕು ಎಂದು ಯೋಚಿಸಿದೆ.