‘ಆಚಾರ್ಯ’ ತಂಡದಿಂದ ನಟಿ ಕಾಜಲ್​ಗೆ ಅವಮಾನ; ಫ್ಯಾನ್ಸ್​ ಮನದಲ್ಲಿ ಮೂಡಿದೆ ದೊಡ್ಡ ಅನುಮಾನ | Megastar Chiranjeevi starrer Acharya movie makers reportedly chopped off Kajal Aggarwal role


‘ಆಚಾರ್ಯ’ ತಂಡದಿಂದ ನಟಿ ಕಾಜಲ್​ಗೆ ಅವಮಾನ; ಫ್ಯಾನ್ಸ್​ ಮನದಲ್ಲಿ ಮೂಡಿದೆ ದೊಡ್ಡ ಅನುಮಾನ

ಮೆಗಾ ಸ್ಟಾರ್​ ಚಿರಂಜೀವಿ, ರಾಮ್​ ಚರಣ್​, ಕಾಜಲ್​ ಅಗರ್​ವಾಲ್​

​ನಟಿ ಕಾಜಲ್​ ಅಗರ್​ವಾಲ್​ ಅವರು ದಕ್ಷಿಣ ಭಾರತದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ಕಲಾವಿದೆ ಆಗಿದ್ದ ಅವರು ಈಗ ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಉದ್ಯಮಿ ಗೌತಮ್​ ಕಿಚಲು ಜೊತೆ ಅವರು ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಕಾಜಲ್​ ಅಗರ್​ವಾಲ್​ ನಟನೆಯ ‘ಆಚಾರ್ಯ’ ಸಿನಿಮಾ (Acharya Movie) ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ‘ಮೆಗಾ ಸ್ಟಾರ್​’ ಚಿರಂಜೀವಿ (Megastar Chiranjeevi) ಮುಖ್ಯ ಭೂಮಿಕೆ ನಿಭಾಯಿಸಿರುವ ಈ ಚಿತ್ರ ಏ.29ರಂದು ರಿಲೀಸ್​ ಆಗಲಿದೆ. ಆ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಪ್ರೀ-ರಿಲೀಸ್​ ಇವೆಂಟ್​ ಮಾಡಲಾಗಿದೆ. ಹೈದರಾಬಾದ್​ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಜಲ್​ ಅಗರ್​ವಾಲ್ (Kajal Aggarwal)​ ಅವರನ್ನು ಹೊರತುಪಡಿಸಿ ಇಡೀ ಚಿತ್ರತಂಡ ಹಾಜರಿ ಹಾಕಿತ್ತು. ಅಲ್ಲದೇ ಅನೇಕ ಅತಿಥಿಗಳು ಕೂಡ ಬಂದಿದ್ದರು. ಆದರೆ ಯಾರೊಬ್ಬರೂ ಕೂಡ ಕಾಜಲ್​ ಅಗರ್​ವಾಲ್​ ಬಗ್ಗೆ ಮಾತನಾಡಿಲ್ಲ. ಆ ಮೂಲಕ ಕಾಜಲ್​ಗೆ ಅವಮಾನ ಮಾಡಲಾಗಿದೆ ಎಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈ ಸಿನಿಮಾದಲ್ಲಿ ಕಾಜಲ್​ ಪಾತ್ರ ಇದೆಯೋ ಇಲ್ಲವೋ ಎಂಬ ಅನುಮಾನ ಕೂಡ ಮೂಡುವಂತಾಗಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

‘ಆಚಾರ್ಯ’ ಚಿತ್ರಕ್ಕೆ ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಅತಿಥಿ ಪಾತ್ರದಲ್ಲಿ ರಾಮ್​ ಚರಣ್​ ನಟಿಸಿದ್ದಾರೆ. ಅವರು ಈ ಸಿನಿಮಾದ ನಿರ್ಮಾಪಕರೂ ಹೌದು. ‘ಮೆಗಾ ಸ್ಟಾರ್​’ ಚಿರಂಜೀವಿ ಅವರಿಗೆ ಜೋಡಿಯಾಗಿ ಕಾಜಲ್​ ಅಗರ್​ವಾಲ್​ ನಟಿಸಿದ್ದಾರೆ ಎಂಬ ಕಾರಣಕ್ಕೆ ಅಭಿಮಾನಿಗಳು ನಿರೀಕ್ಷೆ ಹೆಚ್ಚಿಸಿಕೊಂಡಿದ್ದರು. ಆದರೆ ಈಗ ಕಾಜಲ್​ ಪಾತ್ರ ಇದೆಯೋ ಇಲ್ಲವೋ ಎಂಬ ಪ್ರಶ್ನೆ ಎದುರಾಗಿದೆ. ಚಿತ್ರತಂಡ ಎಲ್ಲರ ನಡೆ ಕೂಡ ಈ ಅನುಮಾನಕ್ಕೆ ಪೂರಕವಾಗಿಯೇ ಇದೆ.

ಕಾಜಲ್​ ಕೂಡ ಈ ಸಿನಿಮಾ ಬಗ್ಗೆ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಯಾವುದೇ ಪೋಸ್ಟ್​ ಹಾಕಿಕೊಂಡಿಲ್ಲ. ಹಾಗಾಗಿ ಚಿತ್ರತಂಡದ ಜೊತೆಗೆ ಅವರು ಮನಸ್ತಾಪ ಮಾಡಿಕೊಂಡಿರಬಹುದು ಎಂಬ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ. ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಜಲ್​ ಅವರು ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ಕಾರಣದಿಂದಲೂ ಅವರು ‘ಆಚಾರ್ಯ’ ಚಿತ್ರದ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ. ಅದೇನೇ ಇರಲಿ, ಕೊನೇ ಪಕ್ಷ ವೇದಿಕೆಯಲ್ಲಿ ಒಬ್ಬರಾದರೂ ಅವರ ಹೆಸರನ್ನು ಹೇಳಬೇಕಿತ್ತು. ಎಲ್ಲರೂ ಕಾಜಲ್​ ಬಗ್ಗೆ ಮೌನ ವಹಿಸಿರುವುದರಿಂದ ಈ ಚಿತ್ರದಲ್ಲಿ ಅವರ ಪಾತ್ರವನ್ನು ತೆಗೆದು ಹಾಕಲಾಗಿದೆ ಎಂಬ ಅನುಮಾನ ಬಲವಾಗಿದೆ.

ಹಿಂದಿಗೆ ಡಬ್​ ಆಗಿಲ್ಲ ‘ಆಚಾರ್ಯ’:

ಉತ್ತರ ಭಾರತದಲ್ಲಿ ಬಾಲಿವುಡ್​ ಚಿತ್ರಗಳೇ ಸೊರಗುತ್ತಿರುವಾಗ ದಕ್ಷಿಣ ಭಾರತದ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಕಮಾಲ್​ ಮಾಡುತ್ತಿವೆ. ಮುಂಬರುವ ಅನೇಕ ಸಿನಿಮಾಗಳು ಕೂಡ ಹಿಂದಿಗೆ ಡಬ್​ ಆದರೆ ಬಾಕ್ಸ್​ ಆಫೀಸ್​ ದೃಷ್ಟಿಯಿಂದ ಸಖತ್​ ಲಾಭ ಆಗಲಿದೆ. ಆದರೆ ‘ಆಚಾರ್ಯ’ ಸಿನಿಮಾ ಬೇರೆ ದಾರಿ ಹಿಡಿದಿದೆ. ಈ ಸಿನಿಮಾವನ್ನು ಹಿಂದಿಗೆ ಡಬ್​ ಮಾಡಲು ನಿರ್ಮಾಪಕ ರಾಮ್​ ಚರಣ್ ಅವರು ಸಿದ್ಧರಿಲ್ಲ. ಈ ಬಗ್ಗೆ ಅವರು ಖಡಕ್​ ನಿರ್ಧಾರ ತಿಳಿಸಿದ್ದಾರೆ.

‘ಈ ಸಿನಿಮಾದ ಕೆಲಸ ಶುರು ಆದಾಗಿನಿಂದಲೂ ನಿರ್ದೇಶಕ ಕೊರಟಾಲ ಶಿವ ಅವರು ಈ ವಿಚಾರದಲ್ಲಿ ಸ್ಪಷ್ಟವಾಗಿದ್ದರು. ಇದು ದಕ್ಷಿಣ ಭಾರತದ ಸೊಗಡಿನ ಸಿನಿಮಾ. ಗಡಿಬಿಡಿಯಲ್ಲಿ ಇದನ್ನು ಪ್ಯಾನ್​ ಇಂಡಿಯಾ ಸಿನಿಮಾ ಆಗಿಸುವ ಉದ್ದೇಶವೂ ನಮಗೆ ಇಲ್ಲ. ಹಿಂದಿಗೆ ಡಬ್​ ಆಗಿಲ್ಲ ಎಂಬ ಬಗ್ಗೆ ನಮಗೆ ಬೇಸರ ಕೂಡ ಇಲ್ಲ’ ಎಂದು ರಾಮ್​ ಚರಣ್​ ಹೇಳಿದ್ದಾರೆ.

TV9 Kannada


Leave a Reply

Your email address will not be published.