ಆಜಾದಿ ಕಾ ಅಮೃತ್ ಮಹೋತ್ಸವ್: ಕೊಮಾರಂ ಭೀಮ್​ ಬ್ರಿಟಿಷ್ ಮತ್ತು ನಿಜಾಮರ ಸೇನಗಳನ್ನು ಹೇಗೆ ಮಟ್ಟಹಾಕಿದರು!? | Azadi Ka Amrit Mahotsav: Komaram Bheem took on both Nizam and British armies with his guerilla troup


ಹಲವಾರು ಬಾರಿ ಹೈದರಾಬಾದಿನ ಸೈನ್ಯವನ್ನು ಯುದ್ಧದಲ್ಲಿ ಸೋಲಿಸಿದ್ದರೂ ಅಂತಿಮವಾಗಿ ಅವರಿಗೆ ವೀರಗತಿ ಪ್ರಾಪ್ತವಾಯಿತು. ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಆರ್ ಅರ್ ಆರ್ ಚಿತ್ರದಲ್ಲಿ ಜೂನಿಯರ್ ಎನ್ ಟಿ ಆರ್ ನಿರ್ವಹಿಸಿದ ಪಾತ್ರ ಈ ಕೋಮಾರಂ ಭೀಮ್​ರಿಂದ ಸ್ಫೂರ್ತಿ ಪಡೆದಿದೆ.

ಆಜಾದಿ ಕಾ ಅಮೃತ್ ಮಹೋತ್ಸವ್: ಕೊಮಾರಂ ಭೀಮ್​ ಬ್ರಿಟಿಷ್ ಮತ್ತು ನಿಜಾಮರ ಸೇನಗಳನ್ನು ಹೇಗೆ ಮಟ್ಟಹಾಕಿದರು!?

ಕೊಮಾರಂ ಭೀಮ

Azadi Ka Amrit Mahotsav | ದೌರ್ಜನ್ಯ ಮತ್ತು ಶೋಷಣೆಗಳ ವಿರುದ್ಧ ರಣಕಹಳೆ ಊದಿದ ಅನೇಕ ಕ್ರಾಂತಿಕಾರಿಗಳು ಚಳವಳಿಯಲ್ಲಿ ಧುಮುಕಿ ದೇಶಕ್ಕಾಗಿ ಪ್ರಾಣ ತೆತ್ತರು. ಅಂತಹ ಮಹಾನ್ ಯೋಧರಲ್ಲಿ ಕೊಮಾರಂ ಭೀಮ (Komaram Bheem) (ಕೊಮುರಂ ಭೀಮ) ಕೂಡ ಒಬ್ಬರು. ಆ ಬುಡಕಟ್ಟು ಪಂಗಡದ ಈ ವೀರ ಯೋಧ, ಹೈದರಾಬಾದ್ ನಿಜಾಮ್ ಮತ್ತು ಬ್ರಿಟಿಷ್ ರಾಜ್ ವಿರುದ್ಧ ಹೋರಾಟದ ಕಹಳೆಯನ್ನು ಏಕಾಂಗಿಯಾಗಿ ಮೊಳಗಿಸಿದರು. ನೀರು, ಕಾಡು ಮತ್ತು ಭೂಮಿ ಎಂಬ ಘೋಷವಾಕ್ಯ ದೇಶಕ್ಕೆ ನೀಡಿದರು. ಅವರು ತಮ್ಮದೇ ಆದ ಗೊರಿಲ್ಲಾ ಸೇನೆಯನ್ನು ಕಟ್ಟಿ ಬ್ರಿಟಿಷ್ ಮತ್ತು ಹೈದರಾಬಾದ್‌ನ ನಿಜಾಮರ ಸೇನೆಗಳಲ್ಲಿ ನಡುಕ ಹುಟ್ಟಿಸಿದ್ದರು.

ಹಲವಾರು ಬಾರಿ ಹೈದರಾಬಾದಿನ ಸೈನ್ಯವನ್ನು ಯುದ್ಧದಲ್ಲಿ ಸೋಲಿಸಿದ್ದರೂ ಅಂತಿಮವಾಗಿ ಅವರಿಗೆ ವೀರಗತಿ ಪ್ರಾಪ್ತವಾಯಿತು. ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಆರ್ ಅರ್ ಆರ್ ಚಿತ್ರದಲ್ಲಿ ಜೂನಿಯರ್ ಎನ್ ಟಿ ಆರ್ ನಿರ್ವಹಿಸಿದ ಪಾತ್ರ ಈ ಕೋಮಾರಂ ಭೀಮ್​ರಿಂದ ಸ್ಫೂರ್ತಿ ಪಡೆದಿದೆ.

ಬಾಲ್ಯದಿಂದಲೇ ಹೋರಾಟ!

ಕೊಮಾರಂ ಭೀಮ್ ಆವರು 1901 ರಲ್ಲಿ ಆಸಿಫಾಬಾದ್ ಜಿಲ್ಲೆಯ ಸಂಕಪಲ್ಲಿ ಹೆಸರಿಬ ಗ್ರಾಮದಲ್ಲಿ ಜನಿಸಿದರು. (ಸದರಿ ಜಿಲ್ಲೆ ಮೊದಲು ಹೈದರಾಬಾದ್ ನಲ್ಲಿತ್ತು ಈಗ ತೆಲಂಗಾಣದ ಭಾಗವಾಗಿದೆ). ಇವರ ತಂದೆಯ ಹೆಸರು ಕೊಮರಂ ಚಿನ್ನು. ಗೊಂಡ ಬುಡಕಟ್ಟಿನಲ್ಲಿ ಜನಿಸಿದ ಕೊಮಾರಂ ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ, ಹಾಗಾಗಿ ಅವರು ಶಿಕ್ಷಣ ಪಡೆಯಲು ಸಾಧ್ಯವಾಗದೆ ಹೊರಜಗತ್ತು ಅವರ ಪಾಲಿಗೆ ಅಪರಿಚಿತವಾಗಿತ್ತು. ಜೀವನ ಸಾಗಿಸಲು ಅವರು ಬಾಲ್ಯದಿಂದಲೇ ಸಂಘರ್ಷಪಡಬೇಕಾಗಿತ್ತು.

ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧ ದಂಗೆ

ಬ್ರಿಟಿಷರು ದೇಶದ ನೈಸರ್ಗಿಕ ಸಂಪತ್ತನ್ನು ದೋಚಲು ಪ್ರಾರಂಭಿಸಿದ ಸಮಯ ಅದಾಗಿತ್ತು. ಹೈದರಾಬಾದ್ ನಿಜಾಮರು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡು ಆಳ್ವಿಕೆ ನಡೆಸುತ್ತಿದ್ದರು. ಹಾಗಾಗಿ ಆದಿವಾಸಿಗಳ ಮೇಲೆ ನಿರಂತರವಾಗಿ ಅನ್ಯಾಯ, ದೌರ್ಜನ್ಯಗಳು ನಡೆಯುತ್ತಿದ್ದವು. ಕಷ್ಟಪಟ್ಟು ಬೆಳೆದ ಪೈರಿನಿಂದ ಅವರು ಗಳಿಸಿದ ಆದಾಯದ ಮೇಲೆ ತೆರಿಗೆ ವಿಧಿಸಲಾಗುತಿತ್ತು. ತೆರಿಗೆ ನೀಡಲು ನಿರಾಕಾರಿಸಿದರೆ ಅವರ ಮೇಲೆ ದೌರ್ಜನ್ಯ ನಡೆಸಿ ಕಿರುಕುಳ ನೀಡಲಾಗುತಿತ್ತು. ಇದೆಲ್ಲವನ್ನು ನೋಡಿ ರೋಸಿ ಹೋಗಿದ್ದ ಕೋಮಾರಂ ಭೀಮ ಬಂಡಾಯವೆದ್ದು ಹೈದರಾಬಾದನ್ನು ಆಸೀಫ್ ಶಾಹಿ ಮನೆತನದಿಂದ ರಕ್ಷಿಸುವ ಪಣತೊಟ್ಟರು.

ನೀರು, ಕಾಡು ಮತ್ತು ಭೂಮಿಯ ಘೋಷವಾಕ್ಯ ನೀಡಿದರು ಕೋಮಾರಂ!

ಬಂಡಾಯದ ಕಹಳೆ ಮೊಳಗಿಸಿದ ಕೋಮಾರಂ, ಅರಣ್ಯ ಪ್ರದೇಶಗಳಲ್ಲಿ ವಾಸ ಮಾಡುವ ಜನರಿಗೆ ಕಾಡಿನ ಎಲ್ಲ ಸಂಪತ್ತಿನ ಮೇಲೆ ಹಕ್ಕಿದೆ, ನಿಜಾಮ ಇದರಲ್ಲಿ ಹಸ್ತಕ್ಷೇಪ ಮಾಡಕೂಡದು ಎಂದು ಜಲ್, ಜಂಗಲ್, ಜಮೀನ್ ಘೋಷಣೆಯನ್ನು ಮಾಡಿದರು.

ಭಗತ್ ಸಿಂಗ್ ರಿಂದ ಪ್ರಭಾವಿತರಾಗಿದ್ದರು!

ದಕ್ಷಿಣದ ಇತಿಹಾಸಕಾರರ ಪ್ರಕಾರ, ಕೊಮಾರಂ ಭೀಮ ಹೈದರಾಬಾದ್ ನಿಜಾಮ್ ಮತ್ತು ಬ್ರಿಟಿಷ್ ರಾಜ್ ವಿರುದ್ಧದ ಹೋರಾಟ ಘೋಷಿಸಿದಾಗ, ದೇಶದಲ್ಲಿ ಸ್ವಾತಂತ್ರ್ಯ ಚಳುವಳಿ ಜೋರು ಹಿಡಿದಿತ್ತು ಮತ್ತು ಭಗತ್ ಸಿಂಗ್ ದೇಶಕ್ಕಾಗಿ ಪ್ರಾಣವನ್ನು ಬಲಿದಾನ ಮಾಡಿದ್ದರು. ಕೊಮಾರಂ ಭೀಮ ಕೂಡ ಭಗತ್ ಸಿಂಗ್ ನಿಂದ ಪ್ರಭಾವಿತರಾಗಿದ್ದನೆಂದು ಹೇಳಲಾಗುತ್ತದೆ. ತಮ್ಮ ನೆಲಕ್ಕಾಗಿ ಪ್ರಾಣ ತ್ಯಾಗ ಮಾಡಿದ ಬುಡಕಟ್ಟು ಯೋಧರ ಪ್ರಭಾವವೂ ಅವರ ಮೇಲಿತ್ತು.

ನಿಜಾಮನ ಬಂಟ ಕೊಲೆಯಾದ!

ಹೈದರಾಬಾದಿನ ನಿಜಾಮ ತೆರಿಗೆ ವಸೂಲಿಗಾಗಿ ಬಂಟರನ್ನು ನಿಯೋಜಿಸಿಕೊಂಡಿದ್ದ. ಆದಿವಾಸಿಗಳ ಹಳ್ಳಿಯೊಂದರಲ್ಲಿ ತೆರಿಗೆ ವಸೂಲಿ ಮಾಡುವಾಗ ಗೇಣಿದಾರನೊಬ್ಬ ಸಿದ್ದಿಕಿ ಆದಿವಾಸಿಗಳ ಮೇಲೆ ದೌರ್ಜನ್ಯ ಎಸಗಿದ್ದನ್ನು ಕೇಳಿಸಿಕೊಂಡ ಕೊಮಾರಂ ಭೀಮ ಅವನನ್ನು ಕೊಂದೇಬಿಟ್ಟರು. ಇದಾದ ನಂತರ ಅವರು ಗ್ರಾಮವನ್ನು ತೊರೆದು ಕಾಡುಗಳಲ್ಲಿ ಆಶ್ರಯ ಪಡೆಯಬೇಕಾದ ಅನಿವಾರ್ಯತೆ ಎದುರಾಯಿತು.

ತಮ್ಮದೇ ಅದ ಗೊರಿಲ್ಲಾ ಸೈನ್ಯ ಕಟ್ಟಿದರು.

ಅಷ್ಟೊತ್ತಿಗಾಗಲೇ ನಿಜಾಮನಿಗೆ ಕೊಮಾರಂ ಭೀಮನ ಬಂಡಾಯದ ಸುದ್ದಿ ಕಿವಿಗೆ ಬಿದ್ದಿದ್ದರಿಂದ ಅವನು ಭೀಮನನ್ನು ಹಿಡಿಯಲು ಹಲವಾರು ಬಾರಿ ಸೇನೆಯನ್ನು ಕಳುಹಿಸಿದ್ದ. ಅತ್ತ ಕಡೆ ಕೊಮಾರಂ ಭೀಮ ಸಹ ತನ್ನ ಗೊರಿಲ್ಲಾ ಸೇನೆಯವನ್ನು ತಯಾರು ಮಾಡಿದ್ದರು ಅವರ ಸೇನೆ ಪ್ರತಿ ಬಾರಿ ನಿಜಾಮನ ಸೈನ್ಯದೊಂದಿಗೆ ಸೆಣಸಿ ಅದನ್ನು ಸೋಲಿಸಿ ಕಾಡುಗಳಲ್ಲಿ ಬಚ್ಚಿಟ್ಟುಕೊಳ್ಳುತಿತ್ತು.

ರಾಜಿ ಪ್ರಸ್ತಾಪವನ್ನು ತಿರಸ್ಕರಿಸಿದರು!

ಸತತ ಸೋಲನ್ನು ಕಂಡ ಹೈದರಾಬಾದಿನ ನಿಜಾಮನ ತನ್ನ ದೂತನನ್ನು ಕೋಮಾರಂ ಭೀಮನ ಬಳಿಗೆ ಹಲವಾರು ಬಾರಿ ಕಳುಹಿಸಿ ರಾಜಿ ಮಾಡಿಕೊಳ್ಳಲು ಮುಂದಾದರೂ ಕೋಮಾರಂ ಭೀಮ ಮಾತ್ರ ಪ್ರತಿ ಬಾರಿ ಅವನ ತಿರಸ್ಕರಿಸಿದ್ದರು. ಕೋಮಾಂ ಭೀಮನ್ನು ಸೋಲಿಸಿಯೇ ತೀರಬೇಕೆಂಬ ಛಲದೊಂದಿಗೆ ನಿಜಾಮ ದೊಡ್ಡ ತುಕಡಿಯನ್ನು ಯುದ್ಧಕ್ಕೆ ಕಳುಹಿಸುತ್ತಾನೆ.

1940 ರಲ್ಲಿ ನಿಜಾಮನಿಂದ ಮೋಸ, ಕೊಮಾರಂ ಭೀಮ ಹುತಾತ್ಮರಾದರು

1928ರಿಂದ 1940ರವರೆಗೆ ನಿಜಾಮ ಮತ್ತು ಬ್ರಿಟಿಷರನ್ನು ಕೊಮಾರಂ ಭೀಮ ನಿರಂತರವಾಗಿ ಸೋಲಿಸಿ ಅವರಲ್ಲಿ ಹತಾಷೆಯನ್ನುಂಟು ಮಾಡಿದ್ದರು. 1940 ರಲ್ಲಿ, ನಿಜಾಮ ಮತ್ತೊಮ್ಮೆ ಸೈನ್ಯವನ್ನು ಕಳುಹಿಸಿ ಮೋಸದಿಂದ ಭೀಮ ಅವರ ಬಲಿ ತೆಗೆದುಕೊಂಡ. ಹಾಗೆ ಹುತಾತ್ಮರಾದ ಕೋಮಾರಂ ಭೀಮ ಆದಿವಾಸಿಗಳ ಹೃದಯದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಕೆಲವು ಭಾಗಗಳಲ್ಲಿ ಅವರನ್ನು ದೇವರಂತೆ ಪೂಜಿಸಲಾಗುತ್ತದೆ.

‘ಆರ್‌ಆರ್‌ಆರ್‌’ ಚಿತ್ರದ ಜ್ಯೂನಿಯರ್ ಎನ್ ಟಿ ಆರ್ ನಿರ್ವಹಿಸಿದ ಪಾತ್ರ ಕೋಮಾರಾಮ್ ಗೆ ಸಮರ್ಪಿಸಲಾಗಿದೆ

ಇತ್ತೀಚೆಗೆ ಬಿಡುಗಡೆಯಾದ ತೆಲುಗು ಚಿತ್ರರಂಗದ ಅದ್ದೂರಿ ಸಿನಿಮಾ ‘ಅರ್ ಅರ್ ಅರ್’ ನಲ್ಲಿ ಜ್ಯೂನಿಯರ್ ಎನ್ ಟಿ ಆರ್ ಅವರ ಪಾತ್ರ ಕೊಮರಂ ಅನ್ನು ಕೊಮಾರಂ ಭೀಮ್‌ ಅವರಿಗೆ ಸಮರ್ಪಿಸಲಾಗಿದೆ. ಚಿತ್ರ ಕಾಲ್ಪನಿಕವಾಗಿದ್ದರೂ, ಪ್ರಮುಖ ಪಾತ್ರವನ್ನು ಭೀಮ ಅವರ ವ್ಯಕ್ತಿತ್ವ ಮತ್ತು ಹೋರಾಟವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಚಿತ್ರದ ಪಾತ್ರಕ್ಕೂ ಭೀಮ ಎಂದು ಹೆಸರಿಡಲಾಗಿದೆ.

ಜಿಲ್ಲೆಯ ಹೆಸರು ಬದಲಾಗಿದೆ

ಆಸಿಫಾಬಾದ್ ಜಿಲ್ಲೆಯನ್ನು 2016 ರಲ್ಲಿ ಕೊಮಾರಂ ಭೀಮ್ ಆಸಿಫಾಬಾದ್ ಜಿಲ್ಲೆ ಎಂದು ಮರುನಾಮಕರಣ ಮಾಡಲಾಯಿತು. ಇಲ್ಲಿ ಅವರ ಸ್ಮಾರಕ ಮತ್ತು ಕೊಮಾರಂ ಭೀಮಾ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ, ಇದರಿಂದ ಜನರು ಬುಡಕಟ್ಟು ವೀರ ಯೋಧನ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *