ಆಜಾದಿ ಕಾ ಅಮೃತ್ ಮಹೋತ್ಸವ್: ತಾತ್ಯಾ ಟೋಪೆ ಬ್ರಿಟಿಷರ ವಿರುದ್ಧ ನಡೆಸಿದ ಯುದ್ದಗಳು ಅಸಾಮಾನ್ಯವಾಗಿದ್ದವು | Azadi Ki Amrit Mahotsav: Tatya Tope fought a few extraordinary battles against British before being hanged


1857 ರ ಮೊದಲ ಸ್ವಾತಂತ್ರ್ಯ ಹೋರಾಟದ ಜ್ವಾಲೆ ಕಾನ್ಪುರ ತಲುಪಿದಾಗ, ತಾತ್ಯಾ ಟೋಪೆ ಮತ್ತು ನಾನಾ ಸಾಹೇಬ ಬ್ರಿಟಿಷರೊಂದಿಗೆ ಕೆಚ್ಚೆದೆಯಿಂದ ಹೋರಾಡಿದರು. ಅಲ್ಲಿದ್ದ ಕ್ರಾಂತಿಕಾರಿಗಳನ್ನು ಒಗ್ಗೂಡಿಸುವುದು ನಾನಾ ಸಾಹೇಬ್ ಮತ್ತು ತಾತ್ಯಾ ಟೋಪೆ ಅವರ ಕೆಲಸವಾಗಿತ್ತು.

ಆಜಾದಿ ಕಾ ಅಮೃತ್ ಮಹೋತ್ಸವ್: ಮೀರತ್‌ನಿಂದ ಪ್ರಾರಂಭವಾದ ಕ್ರಾಂತಿಯ ಕಿಡಿ ಉತ್ತರ ಭಾರತದಾದ್ಯಂತ (North India) ಹರಡಿ ಜ್ವಾಲೆಯಲ್ಲಿ ಪರಿವರ್ತನೆಯಾಗಿತ್ತು. ಆ ಅದ್ಭುತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹದ್ದೂರ್ ಶಾ ಜಾಫರ್, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ, ನಾನಾ ಸಾಹೇಬ್ ಪೇಶ್ವೆ ಮತ್ತು ಇತರ ಕ್ರಾಂತಿಕಾರಿಗಳು ಬ್ರಿಟಿಷರೊಂದಿಗೆ ಉಗ್ರವಾಗಿ ಹೋರಾಡಿದರು. ಒಬ್ಬೊಬ್ಬರಾಗಿ ಅವರು ಇಲ್ಲವಾಗುತ್ತಾ ಹೋದರು. ಅವರಲ್ಲಿ ಕೆಲವರು ಹುತಾತ್ಮರಾದರೆ, ಕೆಲವರು ಜೈಲು ಪಾಲಾದರು ಮತ್ತೂ ಕೆಲವರನ್ನು ದೇಶದಿಂದ ಗಡಿಪಾರು ಮಾಡಲಾಯಿತು. ಇಷ್ಟೆಲ್ಲಾ ಆಗಿದ್ದರೂ ಒಬ್ಬ ವೀರ ಯೋಧ ಮಾತ್ರ ಬ್ರಿಟಿಷರ ವಿರುದ್ಧ ತನ್ನ ಹೋರಾಟವನ್ನು ಮುಂದುವರೆಸಿದ್ದರು ಈ ವೀರನು ಯಾರು ಗೊತ್ತೇ? ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯ ಸೇನೆಯ ಕಮಾಂಡರ್ ಆಗಿದ್ದ ತಾತ್ಯಾ ಟೋಪೆ (Tatya Tope). ಮಿಲಿಟರಿ ಶಕ್ತಿ ತಮ್ಮ ಜೊತೆ ಇಲ್ಲದೆ ಹೋದಾಗ ಅವನು ಗೆರಿಲ್ಲಾ ಯುದ್ಧ (Guerilla war) ನಡೆಸಿದರು. ನಿರಂತರವಾಗಿ ಬ್ರಿಟಿಷರನ್ನು ಬಗ್ಗುಬಡಿದರು. ಟಿವಿ9 ನ ಆಜಾದಿ ಕಾ ಅಮೃತ್ ಮಹೋತ್ಸವ್ ವಿಶೇಷ ಸರಣಿಯಲ್ಲಿ, ಇಂದು ನಾವು ಅದೇ ಮಹಾ ಪರಾಕ್ರಮಿ ಯೋಧನ ಶೌರ್ಯ ಮತ್ತು ಸಾಹಸಗಳನ್ನು ಪರಿಚಯಿಸುತ್ತಿದ್ದೇವೆ.

ಹುಟ್ಟು ಮಹಾರಾಷ್ಟ್ರದಲ್ಲಿ

ಅಪ್ರತಿಮ ಮತ್ತು ಮಹಾನ್ ಹೋರಾಟಗಾರ ತಾತ್ಯಾ ಟೋಪೆ 1814ರಲ್ಲಿ (ದಿನಾಂಕ ತಿಳಿದು ಬಂದಿಲ್ಲ) ಮಹಾರಾಷ್ಟ್ರದ ಪಟೋಡಾ ಜಿಲ್ಲೆಯ ಯೆವಾಲಾ ಗ್ರಾಮದಲ್ಲಿ ಹುಟ್ಟಿದರು, ಅವರ ಪೂರ್ಣ ಹೆಸರು ರಾಮಚಂದ್ರ ಪಾಂಡುರಂಗ ಯೇವಾಲ್ಕರ್. ಅವರ ತಂದೆ ಪಾಂಡುರಂಗ, ಪೇಶ್ವೆ ಬಾಜಿರಾವ್ II ರ ಆಸ್ಥಾನದಲ್ಲಿದ್ದರು. ತಾಯಿಯ ಹೆಸರು ರುಕ್ಮಿಣಿ ಬಾಯಿ.

ಟೋಪೆ ಎಂಬ ಅಡ್ಡಹೆಸರು ಸಿಕ್ಕಿದ್ದು ಹೀಗೆ

ರಾಮಚಂದ್ರ ಪಾಂಡುರಂಗರನ್ನು ತಾತ್ಯಾ ಎಂದು ಕರೆಯಲಾಗುತಿತ್ತು. ಬಹಳ ಧೈರ್ಯಶಾಲಿಯಾಗಿದ್ದ ಅವರು ತುಂಬಾ ಬುದ್ಧಿವಂತ ಕೂಡ ಆಗಿದ್ದರು. ಯಾವುದೇ ಕೆಲಸ ವಹಿಸಿದರೂ ಪರಿಶ್ರಮ, ಶ್ರದ್ಧೆ ಮತ್ತು ಸಮರ್ಪಣಾಭಾವದಿಂದ ಮಾಡುತ್ತಿದ್ದರು. ಅವರಲ್ಲಿನ ಬದ್ಧತೆ ಮತ್ತು ಸಂಕಲ್ಪ ಪೇಶ್ವೆ ಬಾಜಿರಾವ್ ಗೆ ಬಹಳ ಮೆಚ್ಚಿಕೆಯಾಗಿತ್ತು ಮತ್ತು ಅವರ ವಿಷಯದಲ್ಲಿ ಅಪಾರ ಸಂತೋಷ ಮತ್ತು ಹೆಮ್ಮೆ ಪಡುತ್ತಿದ್ದರು.

ಹಾಗಾಗೇ, ಅವರು ತಾತ್ಯಾಗೆ ಬಿತ್ತೂರಿ ಕೋಟೆಯಲ್ಲಿ ಲೆಕ್ಕಿಗನ (ಮುನ್ಷಿ) ಕೆಲಸವನ್ನು ವಹಿಸಿಕೊಟ್ಟರು. ಆ ಕೆಲಸವನ್ನೂ ತಾತ್ಯಾ ಬಹಳ ಅದ್ಭುತವಾಗಿ ನಿಬಾಯಿಸಿದರು. ಇದರಿಂದ ಸಂತಸಗೊಂಡ ಪೇಶ್ವೆ ರತ್ನಖಚಿತ ಟೋಪಿಯೊಂದನ್ನು ಅವರಿಗೆ ಇನಾಮು (ಬಹುಮಾನ) ನೀಡಿದರು. ಆ ಟೋಪಿಯಿಂದಾಗೇ ರಾಮಚಂದ್ರ ಪಾಂಡುರಂಗರನ್ನು ತಾತ್ಯಾ ಟೋಪೆ ಎಂದು ಕರೆಯಲಾರಂಭಿಸಲಾಯಿತು.

ನಾನಾ ಸಾಹೇಬರು ತಾತ್ಯಾ ಟೋಪೆಯನ್ನು ಸೇನಾಪತಿಯಾಗಿ ನೇಮಿಸಿದರು

ಪೇಶ್ವೆ ಬಾಜಿರಾವ್ ಮರಣದ ನಂತರ, ನಾನಾ ಸಾಹೇಬರು ತಾತ್ಯಾ ಟೋಪೆಯನ್ನು ತಮ್ಮ ಸೇನಾಪತಿಯಾಗಿ ನೇಮಕ ಮಾಡಿಕೊಂಡರು. ಬ್ರಿಟಿಷರು ನಾನಾರಾವ್‌ಗೆ ಪೇಶ್ವೆ ಪದವಿಯನ್ನು ನೀಡಲು ನಿರಾಕರಿಸಿದರು ಮತ್ತು ಪೇಶ್ವೆ II ಬಾಜಿರಾವ್‌ಗೆ ನೀಡಲಾಗುತ್ತಿದ್ದ ಪಿಂಚಣಿಯನ್ನು ನೀಡುವುದನ್ನು ಸಹ ನಿಲ್ಲಿಸಿದರು. ಇದರಿಂದ ಕೋಪಗೊಂಡ ನಾನಾ ಸಾಹೇಬರ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಅಣಿಯಾದರು. ಹೋರಾಟದ ರಣತಂತ್ರವನ್ನು ಸಿದ್ಧಪಡಿಸುವ ಜವಾಬ್ದಾರಿ ತಾತ್ಯಾ ಟೋಪೆ ಅವರಿಗೆ ವಹಿಸಲಾಯಿತು.

ಕಾನ್ಪುರದಲ್ಲಿ ಬ್ರಿಟಿಷರೊಂದಿಗೆ ಸಂಘರ್ಷ

1857 ರ ಮೊದಲ ಸ್ವಾತಂತ್ರ್ಯ ಹೋರಾಟದ ಜ್ವಾಲೆ ಕಾನ್ಪುರ ತಲುಪಿದಾಗ, ತಾತ್ಯಾ ಟೋಪೆ ಮತ್ತು ನಾನಾ ಸಾಹೇಬ ಬ್ರಿಟಿಷರೊಂದಿಗೆ ಕೆಚ್ಚೆದೆಯಿಂದ ಹೋರಾಡಿದರು. ಅಲ್ಲಿದ್ದ ಕ್ರಾಂತಿಕಾರಿಗಳನ್ನು ಒಗ್ಗೂಡಿಸುವುದು ನಾನಾ ಸಾಹೇಬ್ ಮತ್ತು ತಾತ್ಯಾ ಟೋಪೆ ಅವರ ಕೆಲಸವಾಗಿತ್ತು. ಕಾನ್ಪುರವನ್ನು ಬ್ರಿಟಿಷರಿಂದ ಮುಕ್ತಗೊಳಿಸಲಾಯಿತಾದರೂ ನಂತರ ಬ್ರಿಟಿಷರು ಕಾನ್ಪುರವನ್ನು ಪುನಃ ವಶಪಡಿಸಿಕೊಂಡರು.

ರಾಣಿ ಲಕ್ಷ್ಮೀಬಾಯಿಯ ಜೊತೆಸೇರಿ ಬ್ರಿಟಿಷರೊಂದಿಗೆ ಹೋರಾಡಿದರು ತಾತ್ಯಾ!

ಬ್ರಿಟಿಷರು ಝಾನ್ಸಿಯ ಕೋಟೆಯನ್ನು ಆಕ್ರಮಿಸಿದಾಗ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಉಗ್ರ ಹೋರಾಟ ನಡೆಸಿದರು. ಆದರೆ ವಂಚನೆಗೆ ಬಲಿಯಾದ ನಂತರ, ಅವರ ನಂಬಿಗಸ್ತ ಸಹಚರರು ಅವರನ್ನು ಕಲ್ಪಿ ಕಡೆಗೆ ಹೋಗುವ ಸಲಹೆ ನೀಡಿದ್ದರು. ಇಲ್ಲಿ ತಾತ್ಯಾ ಟೋಪೆ ರಾಣಿ ಲಕ್ಷ್ಮೀಬಾಯಿಯ ಬೆಂಬಲಕ್ಕೆ ನಿಂತು ಕೋಚ್‌ನಲ್ಲಿ ಬ್ರಿಟಿಷರೊಂದಿಗೆ ನಡೆದ ಭೀಕರ ಕಾಳಗ ನಡೆಸಿದರು. ಆದರೆ, ಬ್ರಿಟಿಷರ ಕೈ ಮೇಲಾದಾಗ ರಾಣಿ ಲಕ್ಷ್ಮೀಬಾಯಿ ಮತ್ತು ತಾತ್ಯಾ ಟೋಪೆ ಗ್ವಾಲಿಯರ್‌ಗೆ ತೆರಳಿದರು ಮತ್ತು ಅಲ್ಲೂ ಬ್ರಿಟಿಷರೊಂದಿಗೆ ಪುನಃ ಯುದ್ಧ ನಡೆಸಿದರು.

ತಾತ್ಯಾ ಟೋಪೆ ಹೋರಾಟವನ್ನು ಮುಂದುವರೆಸಿದರು!

ಗ್ವಾಲಿಯರ್‌ನಲ್ಲಿ ರಾಣಿ ಲಕ್ಷ್ಮೀಬಾಯಿ ಮರಣದ ಹೊಂದಿದ ನಂತರವೂ ತಾತ್ಯಾ ಟೋಪೆ ತಮ್ಮ ಹೋರಾಟವನ್ನು ಮುಂದುವರೆಸಿದರು ಮತ್ತು ಗೆರಿಲ್ಲಾ ಯುದ್ಧತಂತ್ರ ಅಳವಡಿಸಿ ಬ್ರಿಟಿಷರ ವಿರುದ್ಧ ಹೋರಾಡತೊಡಗಿದರು. ಈ ಯುದ್ಧಕಲೆಯಲ್ಲಿ ನಿಪುಣರಾಗಿದ್ದ ಅವರು, ಅಂಥ ಪರಿಸ್ಥಿತಿಯಲ್ಲಿ ಸಣ್ಣ ಪುಟ್ಟ ದಾಳಿಗಳನ್ನು ನಡೆಸಿ ಬ್ರಿಟಿಷರಿಗೆ ದೊಡ್ಡ ಹಾನಿ ಉಂಟು ಮಾಡತೊಡಗಿದ್ದರು. ಬ್ರಿಟಿಷರು ತಾತ್ಯಾಟೋಪಿಯನ್ನು ಸೆರೆಹಿಡಿಯುವ ಭಗೀರತ ಪ್ರಯತ್ನ ನಡೆಸಿದರಾದರೂ ಅವರಿಗದು ಸಾಧ್ಯವಾಗಲಿಲ್ಲ.

ಶಿವಪುರಿಯ ಕಾಡುಗಳಲ್ಲಿ ಮೋಸದಿಂದ ಅವರನ್ನು ಸೆರೆಹಿಡಿಯಲಾಯಿತು

ನರ್ವಾರ್ ರಾಜನು ತಾತ್ಯಾ ಟೋಪೆಗೆ ದ್ರೋಹ ಬಗೆದ ಕಾರಣ ಶಿವಪುರಿಯ ಪಡೌನ್ ಕಾಡುಗಳಲ್ಲಿ ನಿದ್ರಿಸುತ್ತಿದ್ದಾಗ ಬಂಧಿಸಲಾಯಿತು. ಅವರನ್ನು ವಿಚಾರಣೆಗೊಳಪಡಿದ ನಂತರ 1859 ರ ಏಪ್ರಿಲ್ 15 ರಂದು ಮರಣದಂಡನೆ ಶಿಕ್ಷೆ ಘೋಷಿಸಲಾಯಿತು. ಅಂತಿಮವಾಗಿ ಅವರನ್ನು 18 ಏಪ್ರಿಲ್, 1859 ರಂದು ಗಲ್ಲಿಗೇರಿಸಲಾಯಿತು.

ರಾಷ್ಟ್ರೀಯ ಸುದ್ದಿಗಳನ್ನು ಇನ್ನಷ್ಟು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *