ಆಟೋರಿಕ್ಷಾ ಚಾಲಕರಿಗೆ ಪರಿಷ್ಕೃತ ಬಾಡಿಗೆ ದರದ ಸಂತಸ ಕ್ಷಣಿಕ, ಬೆಳಗಾಗುವಷ್ಟರಲ್ಲಿ ಕಾದಿತ್ತೊಂದು ಆಘಾತ! | Joy of revises auto fares turns out to be short lived for drivers even as auto LPG price hiked by Rs. 3


ನವೆಂಬರ್ 30 ರಂದು ಅಂದರೆ ಮಂಗಳವಾರ ದಿನವಿಡೀ ಆಟೋ ಓಡಿಸಿದ ಚಾಲಕರು ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದಿದ್ದರೂ ಸಂತಸದಿಂದಲೇ ಮನೆಗೆ ಹೋದರು. ಅವರ ಸಂತಸಕ್ಕೆ ಕಾರಣವೂ ಇತ್ತು. ಮಧ್ಯರಾತ್ರಿಯಿಂದ ಪರಿಷ್ಕೃತ ಆಟೋ ಬಾಡಿಗೆ ದರಗಳು ಜಾರಿಗೊಳ್ಳಲಿದ್ದವು ಮತ್ತು ಸರ್ಕಾರದ ಆದೇಶದ ಪ್ರಕಾರ ಅದು ಆಗಿದೆ. ನಿಮಗೆ ಗೊತ್ತಿರಲಿ, ಆಟೋ ಬಾಡಿಗೆ ದರಗಳು 8 ವರ್ಷಗಳ ನಂತರ ಪರಿಷ್ಕರಣೆಗೊಂಡಿವೆ. ಬೇರೆಲ್ಲ ವಸ್ತುಗಳ ಬೆಲೆಗಳು ಕಳೆದ 8 ವರ್ಷಗಳ ಅವಧಿಯಲ್ಲಿ ಹತ್ತಾರು ಬಾರಿ ಹೆಚ್ಚಿದರೂ ಆಟೋ ಬಾಡಿಗೆ ದರ ಮಾತ್ರ ಬದಲಾವಣೆ ಆಗಿರಲಿಲ್ಲ. ಹಾಗಾಗಿ, ಆಟೋ ಚಾಲಕರು ಹೊಸ ಹುಮ್ಮಸ್ಸಿನಿಂದ ಬೆಳಗ್ಗೆ ಎದ್ದು ಸ್ನಾನ ಮಾಡಿ ತಿಂಡಿ ತಿಂದು, ಆಟೋ ರೋಡಿಗಿಳಿಸಿ ಆಟೋ ರಾಜಾ ಚಿತ್ರದ ಹಾಡು ಗುನುಗುನಿಸುತ್ತಾ ವಾಹನಕ್ಕೆ ಗ್ಯಾಸ್ ತುಂಬಿಸಿಕೊಳ್ಳಲು ಹತ್ತಿರದ ಗ್ಯಾಸ್ ಸ್ಟೇಷನ್​ಗೆ ಹೋದಾಗ ಕಾದಿತ್ತು ಆಘಾತ! ರಾತ್ರೋರಾತ್ರಿ ಪ್ರತಿ ಲೀಟರ್ ಗ್ಯಾಸ್ ಬೆಲೆ ರೂ. 3ರಷ್ಟು ಹೆಚ್ಚಾಗಿತ್ತು!!
ಸರ್ಕಾರದ ನಡೆ ಆಟೋ ಚಾಲಕರನ್ನು ರೊಚ್ಚಿಗೆಬ್ಬಿಸಿದೆ.

ಆಟೋ ಬಾಡಿಗೆ ದರ ಹೆಚ್ಚಿದ ಖುಷಿ ಅವರ ಪಾಲಿಗೆ ಕ್ಷಣಿಕ. ಗ್ಯಾಸ್ ಬೆಲೆ ಹೆಚ್ಚಾಗಿರುವುರಿಂದ ಅವರ ಸಂಪಾದನೆ 8 ವರ್ಷಗಳ ಹಿಂದೆ ಎಷ್ಟಿತ್ತೋ ಈಗಲೂ ಅಷ್ಟೇ ಅಗಿರಲಿದೆ. ಟಿವಿ9 ವರದಿದಗಾರರು ಕೆಲ ಆಟೋ ಚಾಲಕರೊಂದಿಗೆ ಮಾತಾಡಿದಾಗ ಅವರು ತಮ್ಮ ವೇದನೆ ಮತ್ತು ಅಸಹಾಯಕತೆಯನ್ನು ತೋಡಿಕೊಂಡರು.

ಆಟೋ ಬಾಡಿಗೆ ಕನಿಷ್ಟ ದರವನ್ನು ಮೊದಲಿದ್ದ ರೂ 25 ರಿಂದ ರೂ. 30ಕ್ಕೆ ಏರಿಸಲಾಗಿದೆ. ಅದಾದ ಮೇಲೆ, ಪ್ರತಿ ಕಿಲೋಮೀಟರ್ಗಿದ್ದ ರೂ 13 ದರವನ್ನು ರೂ 15ಕ್ಕೆ ಹೆಚ್ಚಿಸಲಾಗಿದೆ. ಇದು ಹೇಳಿಕೊಳ್ಳುವಂಥ ಹೆಚ್ಚಳವೇನೂ ಅಲ್ಲ. ಆಟೋ ಎಲ್ಪಿಜಿ ದರ 2019ರಲ್ಲಿ ರೂ 32 ಇತ್ತು ಎಂದು ಒಬ್ಬ ಹಿರಿಯ ಆಟೋ ಚಾಲಕರು ಹೇಳುತ್ತಾರೆ. ಆದರೆ ಅದನ್ನೀಗ ರೂ 70 ಕ್ಕೆ ತರಲಾಗಿದೆ. ಇದು ಅನ್ಯಾಯ ಅಲ್ವಾ ಅಂತ ಅವರು ಕೇಳುತ್ತಾರೆ.

ಸರ್ಕಾರ ಆಟೋ ಬಾಡಿಗೆ ದರವನ್ನು ಪುನಃ ಹೆಚ್ಚಿಸುವುದೇನೂ ಬೇಡ, ಅಟೋ ಎಲ್ ಪಿ ಜಿ ಗ್ಯಾಸ್ ಬೆಲೆ ಕಡಿಮೆ ಮಾಡಿದರೆ ಸಾಕು ಅಂತ ಆಟೋ ಚಾಲಕರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ:  Viral Video: ಹೇರ್ ಡ್ರೈಯರ್ ಬದಲು ಕುಕ್ಕರ್​ ಬಳಸಿದ ಯುವಕ; ಅಪರೂಪದ ವಿಡಿಯೋ ನೋಡಿ ಅಚ್ಚರಿಗೊಂಡ ನೆಟ್ಟಿಗರು!

TV9 Kannada


Leave a Reply

Your email address will not be published. Required fields are marked *