ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಕೆಲವೊಮ್ಮೆ ದುರಂತಗಳು ನಡೆದು ಹೋಗಿಬಿಡುತ್ತವೆ.. ದಿನ ಅಕ್ಕಪಕ್ಕ ಎದುರು ಬದುರು ಆದಾಗ ಪರಸ್ಪರ ಕಣ್ಣೋಟಗಳ ಮೂಲಕ ಮುಖ ಪರಿಚಯ ಆಗುತ್ತೆ.. ಆ ನೋಟಗಳು ಸಂಬಂಧ ಬೆಸೆಯುತ್ತವೆ.. ಮುಂದೊಂದು ದಿನ ಕಲ್ಪನೆಗೂ ಮೀರಿದ ಆತ್ಮೀಯತೆ ಬೆಳೆದು ನಿಂತಾಗ ಕೆಲವೊಮ್ಮೆ ಹೀಗೂ ದುರಂತಗಳು ಸಂಭವಿಸಿಬಿಡುತ್ತವೆಯಲ್ಲಾ ಅನ್ನೋ ಸಣ್ಣ ವಿಷಾದ ಈ ಸ್ಟೋರಿ ಓದಿದವರಿಗೆ ಆಗದೇ ಇರದು.
ಹೌದು.. ಈ ದುರಂತ ಕಥೆಯ ಹೀರೋ ಹಾಗೂ ವಿಲನ್ ಮಂಜುನಾಥ್ ಅನ್ನೋ ವ್ಯಕ್ತಿ. ಮಂಜುನಾಥ್ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಬಿಎಂಪಿ ಕಸ ವಿಲೇವಾರಿ ಮಾಡಿಕೊಂಡು ಬದುಕು ಕಟ್ಟಿಕೊಂಡು ಇರುತ್ತಾನೆ. ದಿನ ನಿತ್ಯ ಬೆಳಗಾದರೆ ಆಟೋ ಮೂಲಕ ಮನೆ ಮನೆಗೆ ಹೋಗಿ ಕಸ ವಿಲೇವಾರಿ ಮಾಡುತ್ತಿದ್ದ. ಹೀಗೆ ಕಸ ವಿಲೇವಾರಿ ಮಾಡುತ್ತಿದ್ದ ಮಂಜುನಾಥನಿಗೆ ಗಾಯತ್ರಿ ಅನ್ನೋ ಮಹಿಳೆಯೊಬ್ಬರ ಮುಖ ಪರಿಚಯ ಆಗುತ್ತದೆ..
ಯಾರು ಈ ಗಾಯತ್ರಿ..?
ಗಾಯತ್ರಿ ಬಡ ಕುಟುಂಬದಿಂದ ಬೆಳೆದು ಬಂದಿದ್ದ ಮಹಿಳೆ. ಈಗಾಗಲೇ ಮದುವೆಯಾಗಿದ್ದ ಈಕೆಗೆ ಮಕ್ಕಳೂ ಕೂಡ ಇದ್ದರು. ಆದರೆ ಕಾರಣಾಂತರಗಳಿಂದಾಗಿ ಗಂಡನನ್ನ ಬಿಟ್ಟು ಬಂದು ಬೆಂಗಳೂರಿನ ವಿಜಯನಗರ ಠಾಣೆ ವ್ಯಾಪ್ತಿಯ ಮನೆ ಒಂದರಲ್ಲಿ ಕೆಲಸಕ್ಕೆ ಇದ್ದಳು. ದಿನಾಲು ಕಸ ತೆಗೆದುಕೊಂಡು ಹೋಗಲು ಆಟೋ ಬಂದಾಗ, ಈಕೆ ಮನೆಯಲ್ಲಿದ್ದ ಕಸವನ್ನು ಹಾಕಲು ಹೊರಗೆ ಬರುತ್ತಿದ್ದಳು.
ದಿನ ಕಸ ಹಾಕಲು ಬಂದಾಗ, ಮಂಜುನಾಥನ ಮುಖ ಪರಿಚಯ ಆಗಿತ್ತು. ಹೀಗೆ ದಿನಗಳು ಉರುಳಿದಾಗ ಈ ಮಂಜುನಾಥನ ಮೇಲೆ ಈಕೆಗೆ ಒಂದು ರೀತಿಯ ಆಕರ್ಷಣೆ ಶುರುವಾಗಿ ಹೋಗಿತ್ತು. ಅದಕ್ಕಾಗಿ ದಿನ ಕಸ ಹಾಕಲು ಮಂಜುನಾಥ್ ಬರುತ್ತಿರೋದನ್ನ ಕಾಯುತ್ತಿದ್ದಳು. ಆತ ಬಂದಾಗ ತುಸು ನಕ್ಕು ಕಸ ಹಾಕಿ ಮನೆಯೊಳೆಗೆ ಹೋಗುತ್ತಿದ್ದಳು ಗಾಯತ್ರಿ. ಇದು ಹೀಗೆ ಮುಂದುವರಿಯುತು.. ಮುಂದೊಂದು ದಿನ ಇಬ್ಬರ ನಡುವೆ ಹೆಸರು ಪರಿಚಯ ಮಾಡಿಕೊಂಡು ಫೋನ್ ನಂಬರ್ ಕೂಡ ಎಕ್ಸ್ಚೇಂಜ್ ಆಗಿ ಹೋಗಿತ್ತು. ನಂತರದ ದಿನಗಳಲ್ಲಿ ಇಬ್ಬರ ನಡುವಿನ ಕಣ್ಣೋಟಗಳು ಸ್ನೇಹಕ್ಕೆ ದಾರಿ ಮಾಡಿಕೊಟ್ಟಿತ್ತು. ಅಲ್ಲದೇ ಮುಂದೊಂದು ದಿನ ಪ್ರೀತಿ, ಪ್ರೇಮಕ್ಕೂ ತಿರುಗಿಬಿಟ್ಟಿತ್ತು, ಆಟೋ ಹಿಂದಿನ ಎರಡು ಜೀವಗಳಿಗೆ.
ಜಗಳ ಶುರುವಾಗಿದ್ದ ಯಾವಾಗ..?
ಗಂಡ ಇಲ್ಲದ ನನಗೆ ಮಂಜುನಾಥನೇ ಆಸರೆ ಎಂದು ತಿಳಿದುಕೊಂಡ ಗಾಯತ್ರಿ, ಆತನಿಗೆ ತನ್ನನ್ನ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದರು. ಆದರೆ ಮಂಜುನಾಥ ಪ್ರ್ಯಾಕ್ಟಿಕಲ್ ಆಗಿ ಯೋಚನೆ ಮಾಡಿ.. ನನಗೆ ಇನ್ನೂ ಮದುವೆ ಆಗಿಲ್ಲ. ನನಗೆ ಇನ್ನೂ ಭವಿಷ್ಯ ಇದೆ. ಹೀಗಾಗಿ ಮಕ್ಕಳಿರುವ ಈಕೆಯನ್ನ ಮದುವೆಯಾದರೆ ನನಗೆ ತೊಂದರೆ ಆಗಬಹುದು ಅನ್ನೋದನ್ನ ಅರಿತು, ಈತ ಗಾಯತ್ರಿ ಜೊತೆ ಒಂದು ದಿನ ಕೂತು ಎಲ್ಲವನ್ನೂ ಮಾತನಾಡಿದ್ದ.
ಅಂತೆಯೇ ಕಳೆದ ಆರು ತಿಂಗಳ ಹಿಂದೆ ನಾನು ಬೇರೆ ಮದುವೆ ಆಗುತ್ತೇನೆ. ಇದಕ್ಕೆ ನೀನು ಒಪ್ಪಿಗೆ ನೀಡಬೇಕು ಎಂದು ಗಾಯತ್ರಿ ಬಳಿ ಮನವಿ ಮಾಡಿಕೊಂಡಿದ್ದಾನೆ ಮಂಜುನಾಥ್. ಇದರಿಂದ ಆತಂಕಕ್ಕೆ ಒಳಗಾದ ಗಾಯತ್ರಿ ತೀವ್ರ ವಿರೋಧ ವ್ಯಕ್ತಪಡಿಸುತ್ತಾಳೆ. ಇಲ್ಲ, ನಿನ್ನ ಬಿಟ್ಟು ನನಗೆ ಬೇರೆ ಯಾರೂ ಇಲ್ಲ. ನೀನೇ ನನಗೆ ಎಲ್ಲಾ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಇಷ್ಟೆಲ್ಲಾ ಆದ ಮೇಲೆ ಇಬ್ಬರ ನಡುವೆ ಮನಸ್ತಾಪ ಶುರುವಾಗಿ ಆಗಾಗ ಜಗಳ ನಡೆಯುತ್ತಿತ್ತು. ನೀನು ಬೇರೊಬ್ಬಳನ್ನ ಮದುವೆಯಾದ್ರೆ ನಾನೂ, ನನ್ನ ಮಕ್ಕಳು ಅನಾಥರಾಗ್ತೀವಿ ಎಂದು ಗಾಯತ್ರಿ ದಿನಾಲೂ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಳಂತೆ. ಇದರಿಂದ ಕೆರಳಿದ ಮಂಜುನಾಥ್ ಗಾಯತ್ರಿಗೆ ಒಂದು ಗತಿ ಕಾಣಿಸಬೇಕು ಎಂದು ಮುಹೂರ್ತ ಇಟ್ಟಿದ್ದ.
ಧೈರ್ಯಕ್ಕಾಗಿ ಗಾಂಜಾ ಹೊಡೆದು ಬಂದಿದ್ದ..!
ಆಕೆಗೆ ಪಾಠ ಕಲಿಸಬೇಕೆಂದು ಕೊಂಡಿದ್ದ ಮಂಜುನಾಥನಿಗೆ ಧೈರ್ಯ ಬಂದಿರಲಿಲ್ಲ. ಹೀಗಾಗಿ ಧೈರ್ಯ ಬರಲು ಗಾಂಜಾ ಹೊಡೆದುಕೊಂಡು ಬಂದು ಆಕೆಯನ್ನ ಭೇಟಿಯಾದ. ಈ ವೇಳೆ ಅದೇ ವಿಚಾರವನ್ನ ಗಾಯತ್ರಿ ಮುಂದೆ ಪ್ರಸ್ತಾಪ ಮಾಡಿದ್ದಾನೆ. ಆಗ ಇಬ್ಬರ ನಡುವೆ ಜಗಳ ತಾರಕಕ್ಕೆ ಏರಿದೆ.
ತುಂಬಾ ರೊಚ್ಚಿಗೆದ್ದ ಮಂಜುನಾಥ್, ಗಾಯತ್ರಿ ಮೇಲೆ ಹಲ್ಲೆ ಮಾಡಿದ್ದಾನೆ. ಸಾಲದ್ದಕ್ಕೆ ಆಕೆಯ ವೇಲ್ ತೆಗೆದುಕೊಂಡ ಕುತ್ತಿಗೆಗೆ ಸುತ್ತಿ ಉಸಿರುಕಟ್ಟಿಸಿ ಸಾಯಿಸಿಬಿಟ್ಟಿದ್ದಾನೆ. ನಂತರ ವಿಜಯನಗರ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕೊನೆಗೂ ಕಣ್ಣೋಟಗಳಲ್ಲಿ ಶುರುವಾದ ಒಂದು ಮುಗ್ಧ ಪ್ರೀತಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಸದ್ಯ ಪ್ರಕರಣ ದಾಖಲಿಸಿರುವ ವಿಜಯನಗರ ಪೊಲೀಸರು ತನಿಖೆಯನ್ನ ಮುಂದುವರಿಸಿದ್ದಾರೆ.