Childhood : ಅಕ್ಕಪಕ್ಕದ ಹಳ್ಳಿಗಳಿಗೆ ಗರ್ಭಿಣಿ ಮನೆಯವರು ಅಮ್ಮನನ್ನು ಎತ್ತಿನಗಾಡಿಯಲ್ಲಿ ಕರೆದೊಯ್ಯುತ್ತಿದ್ದರು. ರಾತ್ರಿ ಸಮಯದಲ್ಲಿ ಅಮ್ಮ ನಮ್ಮನ್ನೂ ಎತ್ತಿನ ಗಾಡಿಯಲ್ಲಿ ಕರೆದುಕೊಂಡು ಹೋಗುತ್ತಿದ್ದಳು. ಮಗು ಹುಟ್ಟುವವರೆಗೆ ನಾನು, ನನ್ನ ತಂಗಿ ತೂಕಡಿಸಿಕೊಂಡು ಕೂತಿರುತ್ತಿದ್ದೆವು.
ಆಧುನಿಕ ಶಕುಂತಲಾ ಕಥನ | Adhunika Shakuntala Kathana : ನಮ್ಮ ತಂದೆ ವಾರಕ್ಕೊಂದು ಸಲ ಕ್ಯಾಸಂಬಳ್ಳಿಗೆ ಬರುತ್ತಿದ್ದರು. ನನ್ನ ತಾಯಿಯನ್ನ ಅವರ ತವರು ಮನೆಯಲ್ಲಿ ‘‘ಪಾಪ’’ (ಕೂಸು) ಎಂದು ಕರೆಯುತ್ತಿದ್ದರು. ಅವರ ತಂಗಿ, ತಮ್ಮ ಅವರನ್ನ ಅಕ್ಕಾ ಅಂಥ ಕರೆಯುತ್ತಿದ್ದುದರಿಂದ ನಾವು ಮಕ್ಕಳೆಲ್ಲ ಯಾವತ್ತು ಆಕೆಯನ್ನ ಅಮ್ಮ ಅಂತ ಕರೆಯಲಿಲ್ಲ. ನಾವೂ ಅಕ್ಕಾ ಅಂತಾನೇ ಕರೆಯುತ್ತಿದ್ದೆವು. ತಂದೆ ನಮ್ಮ ಪಾಲಿಗೆ “ಅಪ್ಪ”. ನಿಮಗೆಲ್ಲ ನಂಬಲಿಕ್ಕೆ ಸಾಧ್ಯವಾಗೋಲ್ಲ. ನಮ್ಮ ತಂದೆ ನನ್ನ ತಾಯಿಯನ್ನ ಸಾಯುವವರೆಗೆ ಆ ಕಾಲದಲ್ಲೇ “ಬಂಗಾರು” (ಚಿನ್ನ) ಅಂತಾನೆ ಕರೆಯುತಿದ್ದರು. ಇನ್ನು ನಮ್ಮಗಳ ನಾಮಕರಣದಲ್ಲೂ ಸಣ್ಣ ವಿಶೇಷತೆಗಳು ಇದ್ದವು. ಅವರಾಗಲಿ, ನನ್ನಮ್ಮನಾಗಲಿ ಯಾವ ಜಾತಕವನ್ನೂ ಬರೆಸಲಿಲ್ಲ ಶುದ್ಧ ಹಳ್ಳಿಗಾಡಿನಲ್ಲಿ, ವಿದ್ಯುಚ್ಛಕ್ತಿಯೂ ಇಲ್ಲದ ಕೊಂಪೆಯಲ್ಲಿ, ಒಂಟಿಯಾಗಿದ್ದ ನನ್ನ ತಾಯಿಗೆ ನಾನು ಮೊದಲ ಮಗುವಾಗಿ ಹುಟ್ಟಿದ್ದರಿಂದ, ನೋಡುವುದಕ್ಕೆ ಕೆಂಪುಕೆಂಪಾಗಿ ಇಂಗ್ಲಿಷ್ನವರಂತಿದ್ದ ನನಗೆ ಅಪ್ಪ ಶಕುಂತಲಾ ಅಂಥ ಹೆಸರಿಟ್ಟರು. ಹಾಗಾಗಿ ಹೆಸರುಗಳು ಅವರಿಗಿಷ್ಟ ಬಂದಂತೆ ಇಟ್ಟರು.
ಡಾ. ಶಕುಂತಲಾ ಶ್ರೀಧರ್, ಮೂಷಕ ತಜ್ಞೆ (Dr. Shakuntala Sridhara)
(ಕಥನ 2)
ನನ್ನ ಮೊದಲನೇ ತಂಗಿ ಕೆಜಿಎಫ್ನಲ್ಲಿ ಹುಣ್ಣಿಮೆ ದಿನ ಹುಟ್ಟಿದಳು. ಆದರೆ ಬಣ್ಣ ಕಪ್ಪು. ತಂದೆ ಆವಳಿಗೆ ಕಸ್ತೂರಿ ಅಂಥ ಹೆಸರಿಟ್ಟರು. ಆಮೇಲೆ ನನ್ನ ಮೊದಲನೇ ತಮ್ಮ ಮೂರು ಹೆಣ್ಣು ಮಕ್ಕಳ ನಂತರ ಬೆಳ್ಳಗೆ ತುಂಬಾ ಅಂದವಾಗಿ ಹುಟ್ಟಿದ. ಭಗವಂತನ ದಯೆಯಿಂದ ಹುಟ್ಟಿ ಕುಟುಂಬದಲ್ಲಿ ಆನಂದ ತಂದಿದ್ದರಿಂದ ಅವನು ದಯಾನಂದ ಆದ. ತೆಲುಗು ಕುಟುಂಗಳಲ್ಲಿ ಗಂಡು ಮಕ್ಕಳನ್ನು ಸಾಮಾನ್ಯವಾಗಿ ಹೆಸರಿನಿಂದ ಕೂಗದೆ, ಬಾಬು ಎಂದು ಮುದ್ದಾಗಿ ಕರೆಯುತ್ತಾರೆ. ಹೀಗೆ ನನ್ನ ತಮ್ಮ ಎಲ್ಲರಿಗೂ ಬಾಬು ಆದ. ಆಮೇಲೆ ಇಬ್ಬರು ಹೆಣ್ಣುಮಕ್ಕಳು. ಅವರಿಗೆ ವಿಜಯ ಮತ್ತು ಜಯ ಎಂದು ಹೆಸರಿಟ್ಟರು. ವಿಜಯ ಕ್ಯಾಸಂಬಳ್ಳಿಯಲ್ಲಿ ಹುಟ್ಟಿದರೆ, ಜಯ ಕೆಜಿಫ್ ನಲ್ಲಿ ಅಜ್ಜಿ ಮನೆಯಲ್ಲಿ ಜನ್ಮ ತಳೆದಳು . ಕೊನೆಯದಾಗಿ ಬೆಂಗಳೂರಿನಲ್ಲಿ ಸೋಮವಾರ ಹುಟ್ಟಿದ ತಮ್ಮ ಸೋಮಶೇಖರನಾದ.
ಸಂಸಾರ ದೊಡ್ಡದಾಗುತಿದ್ದಂತೆ ತಂದೆ ತುಂಬಾ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿ, ಆಗಿನ ಕಾಲಕ್ಕೆ ಧೈರ್ಯವೆನಿಸುವಂತಹ ನಿರ್ಣಯ ತೆಗೆದುಕೊಂಡು ಸಂತಾನ ಹರಣ ಚಿಕಿತ್ಸೆ ಮಾಡಿಕೊಂಡರು. ಅಲ್ಲಿಗೆ ನಮ್ಮ ಮಾತಾಪಿತೃಗಳ ಸಂತಾನೋತ್ಪತ್ತಿ ನಿಂತಿತು. ಜಯ ಹುಟ್ಟುವುವರೆಗೆ ನಾವು ಕ್ಯಾಸಂಬಳ್ಳಿಯಲ್ಲೇ ಇದ್ದೆವು. ಆಗಿನ ಕಾಲದಲ್ಲಿ ಹಳ್ಳಿಯಿರಲಿ, ಕ್ಯಾಸಂಬಳ್ಳಿಯಂಥ ಹೋಬಳಿಯಲ್ಲೂ ಚಿಕ್ಕದೊಂದು ಆಸ್ಪತ್ರೆ ಇರಲಿಲ್ಲ. ಒಬ್ಬ midwife (ದಾಯಿ) ಹೋಬಳಿಯಲ್ಲಿ ಇರುತ್ತಿದ್ದಳು. ಆಕೆ ಗರ್ಭಿಣಿಯರ ಮನೆಗಳಿಗೆ ಪ್ರಸವದ ವೇಳೆ ಹೋಗಿ ಹೆರಿಗೆ ಮಾಡಿಸುತ್ತಿದ್ದಳು. ಎಲ್ಲಾ ಹಳ್ಳಿಯ ಮಕ್ಕಳಿಗೂ ಹೆರಿಗೆ ಸ್ವಾಭಾವಿಕವಾಗಿ ಆಗುತ್ತಿತ್ತು. No caesarian, No hospitalization. ಹೊಟ್ಟೆಯಲ್ಲೋ ಅಥವಾ ಹುಟ್ಟಿದ ತಕ್ಷಣವೋ, ಯಾವ ಮಗುವೂ, ಬಾಣಂತಿಯೂ ಸಾಯುತ್ತಿರಲಿಲ್ಲ.
ಕ್ಯಾಸಂಬಳ್ಳಿಯೊಳಗೆ ಹೆರಿಗೆಯಾದರೆ ಅಮ್ಮ ನಡೆದುಕೊಂಡೇ ಹೋಗುತ್ತಿದ್ದಳು. ಅಕ್ಕಪಕ್ಕದ ಹಳ್ಳಿಗಳಾದರೆ ಗರ್ಭಿಣಿ ಮನೆಯವರು ಎತ್ತಿನ ಗಾಡಿಯಲ್ಲಿ ಕರೆದುಕೊಂಡು ಹೋಗಿ, ಹೆರಿಗೆಯಾದನಂತರ ಮನೆಗೆ ತಂದು ಬಿಡುತ್ತಿದ್ದರು. ಹೆರಿಗೆಗೆ ರಾತ್ರಿ ಸಮಯ ಹೋಗಬೇಕಾದರೆ ಅಮ್ಮ ನಮ್ಮನ್ನೂ ಎತ್ತಿನ ಗಾಡಿಯಲ್ಲಿ ಕರೆದುಕೊಂಡು ಹೋಗುತ್ತಿದ್ದಳು. ಮಗು ಹುಟ್ಟುವವರೆಗೆ ನಾನು, ನನ್ನ ತಂಗಿ ತೂಕಡಿಸಿಕೊಂಡು ಕೂತಿರುತ್ತಿದ್ದೆವು. ಹೆರಿಗೆಯನಂತರ, ಬಾಂಣಂತಿಯ ಮನೆಯವರು ತಟ್ಟೆ ತುಂಬಾ ಎಲೆ, ಅಡಿಕೆ, ಬಾಳೆಹಣ್ಣು, ಕೆಲವು ಸಲ ರವಿಕೆ ಮತ್ತು ಗಂಡುಮಗು ಹುಟ್ಟಿದ್ದರೆ 10 ರೂಪಾಯಿ, ಹೆಣ್ಣು ಮಗು ಹುಟ್ಟಿದ್ದರೆ ಐದು ರೂಪಾಯಿ ಇಟ್ಟು ಕೊಡುತಿದ್ದರು. ಈ ಹುಟ್ಟುಗಳ ಬಗ್ಗೆ ಅಮ್ಮ ಒಂದು ದೊಡ್ಡ ರಜಿಸ್ಟರಿನಲ್ಲಿ ಹಳ್ಳಿಯ ಹೆಸರು, ಮಗುವಿನ ಜನ್ಮದ ದಿನಾಂಕ, ವೇಳೆ, ಮಗುವಿನ ಲಿಂಗ ಬರೆದಿಡುತ್ತಿದ್ದಳು.
ಭಾಗ 1 : ಆಧುನಿಕ ಶಕುಂತಲಾ ಕಥನ: ಫಲವತ್ತಾದ ಕ್ಯಾಸಂಬಳ್ಳಿ ಮತ್ತು ಕೆಜಿಎಫ್ನ ಸಿಡಿಮದ್ದಿನ ನಡುವೆ ಅರಳಿದ ಬಾಲ್ಯ
ಹಳ್ಳಿಯಲ್ಲಿ ನಮ್ಮದು ಎರಡು ಮನೆಗಳಿದ್ದವು. ಒಂದು ಹಳೆಮನೆ, ರಾಮದೇವರ ಗುಡಿಯ ಪಕ್ಕ. ಅಲ್ಲಿ ಸೌದೆ ಒಲೆಯಲ್ಲಿ ಅಡುಗೆಮಾಡಿ, ಊಟ ಮಾಡಿ, ನಿದ್ದೆ ಮಾಡಲು ಅದೇ ಗುಡಿಯ ಎದುರಿನಲ್ಲಿದ್ದ ಹೆಂಚಿನ ಮನೆಗೆ ಬರುತ್ತಿದ್ದೆವು. ಇಲ್ಲೊಂದು ಮಂಚ ಇದ್ದು ಅದರ ಮೇಲೆ ದೊಡ್ಡ ಮಕ್ಕಳು ಹಾಗೂ ನೆಲದ ಮೇಲೆ ಅಮ್ಮ ಮತ್ತು ಚಿಕ್ಕಮಕ್ಕಳು ಮಲುಗುತಿದ್ದೆವು. ಅಪ್ಪ ವಾರಕೊಮ್ಮೆ ಬಂದರೆ ಮಂಚ ಅವರಿಗೆ ಮೀಸಲು. ಊರಿನಲ್ಲಿ ತರಕಾರಿ ಅಂಗಡಿಗಳೇನೂ ಇರಲಿಲ್ಲ. ರೈತರು ಬೆಳೆಯುತ್ತಿದ್ದ ಟೊಮ್ಯಾಟೋ, ಬದನೇಕಾಯಿ, ಹಸಿಮೆಣಸಿನಕಾಯಿ, ಹಸಿತೊಗರಿ, ಅವರೆ ಕಾಳು, ಸೊಪ್ಪು ಇವೇ ನಮ್ಮ ತರಕಾರಿಗಳು. ಅಮ್ಮನಿಗೆ ಮನೆ ಸುತ್ತಮುತ್ತ ಅವಾಗೆ ಬೆಳೆದುಕೊಂಡಿದ್ದ ಸೊಪ್ಪುಗಳಲ್ಲಿ ಯಾವುದು ತಿನ್ನಬಹುದು ಅಂತ ಗೊತ್ತಿತ್ತು. ಆಕೆಯ ಜೊತೆ ಸೊಪ್ಪು ಕೀಳಲು ನಾನೂ ಹೋಗುತ್ತಿದ್ದುದರಿಂದ ನನಗೂ ಈ ನಮ್ಮ ಮನೆಯಲ್ಲಿ ಎರಡೇ ಊಟ, ಮಧ್ಯಾಹ್ನ ಮತ್ತು ರಾತ್ರಿ. ತಿಂಡಿ ಯಾವತ್ತೂ ಮಾಡುತ್ತಿರಲಿಲ್ಲ. ಹಳ್ಳಿಯಲ್ಲಿ ದೊರಕದ ಒಣ ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಗಸಗಸೆ, ರವೆ, ಸಕ್ಕರೆ ಇವುಗಳನ್ನ ನನ್ನ ಸೋದರ ಮಾವ ತಿಂಗಳಿಗೊಮ್ಮೆ ಕೆಜಿಎಫ್ನಿಂದ ತಂದುಕೊಡುತಿದ್ದರು. ಅದನ್ನ ಅಮ್ಮ ಹೆಂಚಿನ ಮನೆಯ ಮಂಚದಡಿಯಲ್ಲಿ ಇಟ್ಟಿರುತಿದ್ದಳು. ಒಮ್ಮೊಮ್ಮೆ ದ್ರಾಕ್ಷಿ, ಗೋಡಂಬಿ, ಸಕ್ಕರೆಗಳನ್ನ ನಾನು ಕದ್ದು ತಿಂದಿದ್ದು ಉಂಟು.

ಸಹೋದರ ಸಹೋದರಿಯರೊಂದಿಗೆ ಶಕುಂತಲಾ
ಅಮ್ಮ ಚಿಕ್ಕವಯಸ್ಸಿನಲ್ಲೇ ಮನೆಯಿಂದ ದೂರವಿದ್ದು ಬೆಂಗಳೂರಿನಲ್ಲಿ ಓದುತಿದ್ದುದರಿಂದ, ಓದಿದ ತಕ್ಷಣ ಟ್ರೇನಿಂಗ್ ಮುಗಿಸಿ ಕೆಲಸಕ್ಕೆ ಸೇರಿದ ಕಾರಣ ಆಕೆಗೆ ಅಡುಗೆ ಅಷ್ಟು ಚೆನ್ನಾಗಿ ಬರುತ್ತಿರಲಿಲ್ಲ. ಆದರೆ ತುಂಬಾ ಆಸಕ್ತಿಯಿಂದ ಕೋಲಾರದ ವಿಶಿಷ್ಟ ಅಡಿಗೆಗಳನ್ನೆಲ್ಲ ನನ್ನ ತಂದೆಯಿಂದ ಕಲಿತರು. ಊಟದ ವಿಷಯದಲ್ಲಿ ನನ್ನ ತಂದೆ ಮಹಾರಸಿಕ, ಸಣ್ಣಅಕ್ಕಿಯಿಂದ ಮಾಡಿದ ಬಿಡಿಬಿಡಿಯಾದ ಅನ್ನ, ಹಸುವಿನ ತುಪ್ಪ, ಗಟ್ಟಿಯಾದ ಸಾಂಬಾರ್, ಹಪ್ಪಳ, ಮೊಸರು, ಮಸಾಲಾ ವಡೆ, ಗಸಗಸೆ ಪಾಯಸ ಇವೇ ಅವರ ಮೆಚ್ಚಿನ ಊಟದ ಐಟಂಗಳು.