ಆಧುನಿಕ ಶಕುಂತಲಾ ಕಥನ: ದಮನಕ್ಕೊಳಗಾದ ಹೆಣ್ಣುಮಕ್ಕಳಿಗೆ ನನ್ನ ಜೀವನ ಸ್ಫೂರ್ತಿಯಾಗಲಿ | Adhunika Shakuntala Kathana Autobiography Column of Scientist Dr Shakuntala Sridhar


Patriarchy : ಎಪ್ಪತ್ತೈದು ವರ್ಷಗಳ ಹಿಂದೆ ಕೋಲಾರದ ಹಳ್ಳಿಯೊಂದರಲ್ಲಿ ಹುಟ್ಟಿದ ಕೆಳಮಧ್ಯಮ ವರ್ಗದ ಹೆಣ್ಣುಮಗಳು ಶಿಕ್ಷಣ ಪಡೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ಹೊತ್ತಿಗೆ ಏನೆಲ್ಲ ಹಾದು ಬರಬೇಕಾಯಿತು?

ಆಧುನಿಕ ಶಕುಂತಲಾ ಕಥನ | Adhunika Shakuntala Kathana : ವಿದ್ಯಾವಂತ ಮತ್ತು ಶ್ರೀಮಂತ ಕುಟುಂಬಗಳಲ್ಲಿ ಬೆಳೆದ ಹೆಣ್ಣುಮಕ್ಕಳು ನಮ್ಮ ದೇಶದಲ್ಲಿ ವೃತ್ತಿಯಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಸಾಧನೆಯ ಶಿಖರಕ್ಕೇರುವುದನ್ನು ನಾವು ನೋಡಿದ್ದೇವೆ ಅಥವಾ ಓದಿದ್ದೇವೆ. ಆದರೆ ದುರದೃಷ್ಟವಶಾತ್ ನಾನು ಈ ವರ್ಗಕ್ಕೆ ಸೇರಿರಲಿಲ್ಲ. ಕರ್ನಾಟಕದ ಕೋಲಾರ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೆಳಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ, ಸಂಕೋಚ ಪ್ರವೃತ್ತಿಯ, ಅಂತರ್ಮುಖಿಯಾದ ನಾನು ಯಾರೂ ಊಹಿಸಲು ಸಾಧ್ಯವಿಲ್ಲದ ಯಶಸ್ಸನ್ನು ವೃತ್ತಿಯ ಮೂಲಕ ಪಡೆದೆ. ನನಗೆ ಮಾರ್ಗದರ್ಶನ ನೀಡಲು, ಪ್ರೋತ್ಸಾಹಿಸಲು ಇರಲಿ, ಹೆಚ್ಚಿನ ಶಿಕ್ಷಣ ನೀಡಲೂ ನನ್ನ ಪೋಷಕರು ಸಿದ್ಧರಿರಲಿಲ್ಲ. ಏಕೆಂದರೆ ಇನ್ನೂ ಐದು ಮಕ್ಕಳನ್ನು ಅವರು ಓದಿಸಬೇಕಿತ್ತು. ಇಂತಹ ಪರಿಸ್ಥತಿಯಲ್ಲಿ ಪದವಿಯ ನಂತರ ಸ್ನಾತಕೋತ್ತರ ಓದು, ಅದಾದ ಮೇಲೆ ಪಿಎಚ್​.ಡಿ ನಂತರ ನಂತರ ಇಲಿ ಹೆಗ್ಗಣಗಳ ನಿಯಂತ್ರಣದಲ್ಲಿ ಪರಿಣಿತಳಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮನ್ನಣೆ ಪಡೆಯುವುದು ಸುಲಭವಾಗಿರಲಿಲ್ಲ. ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ವಿಶ್ರಾಂತ ವಿಜ್ಞಾನಿಯಾಗಿ ಆಯ್ಕೆಯಾದ ಮತ್ತು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಗೆ ನಾಮ ನಿರ್ದೇಶನಗೊಂಡ ಮೊದಲ ಮಹಿಳೆ ಎನ್ನಿಸಿಕೊಂಡೆ.
ಡಾ. ಶಕುಂತಲಾ ಶ್ರೀಧರ್, ಮೂಷಕ ತಜ್ಞೆ, ಬೆಂಗಳೂರು

ಕುಟುಂಬ ಮತ್ತು ಸರ್ಕಾರದಿಂದ ಎಲ್ಲಾ ಪ್ರೋತ್ಸಾಹವನ್ನು ಪಡೆಯುವ ಈ ದಿನಗಳಲ್ಲಿ ಮಹಿಳಾ ಶಿಕ್ಷಣ ಎನ್ನುವುದು ಸುಲಭವಾಗಿದೆ. ಹೆಚ್ಚಿನ ವ್ಯಾಸಂಗ ಮಾಡಲು ಅವಕಾಶಗಳು ಸಾಕಷ್ಟು ಉತ್ತಮವಾಗಿವೆ. ಆದರೆ 1950 ರಿಂದ 1973ರ ಅವಧಿಯಲ್ಲಿ ನಾನು ಅಧ್ಯಯನ ಮಾಡುವಾಗ ಅಂತಹ ವಾತಾವರಣ ಇರಲಿಲ್ಲ. ಕೆಲವೇ ಕೆಲವು ಹುಡುಗಿಯರು ಪದವಿಯನಂತರ ಎಂ.ಎಸ್​ಸಿ, ಎಂಎ ಓದಲು ಬರುತ್ತಿದ್ದರು. ಸಂಶೋಧನೆಯನ್ನು ತಮ್ಮ ಧ್ಯೇಯವಾಗಿಸಿಕೊಂಡರು ಕಡಿಮೆ ಹುಡುಗಿಯರು. ಪದವಿಯ ನಂತರ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ನಾನು ನನ್ನ ತಂದೆಯನ್ನು ಬೇಡಿಕೊಳ್ಳಬೇಕಾಯಿತು. ನಾನು ಎಂ.ಎಸ್​ಸಿ ಅಧ್ಯಯನ ಮಾಡಲು ರಾಷ್ಟ್ರೀಯ ಸಾಲದ ವಿದ್ಯಾರ್ಥಿವೇತನವನ್ನು ಪಡೆಯುತ್ತೇನೆ ಎಂದು ಅವರಿಗೆ ಮನವರಿಕೆ ಮಾಡಿದ ನಂತರ ಅವರು ಸ್ನಾತಕೋತ್ತರ ಅಧ್ಯಯನಕ್ಕೆ ಒಪ್ಪಿಕೊಂಡರು. ಅದೃಷ್ಟವಶಾತ್ ನನಗೆ ಪಿ.ಎಚ್‌ಡಿ ಮಾಡಲು ಸಂಶೋಧನಾ ಫೆಲೋಶಿಪ್ ಸಿಕ್ಕಿತು.

ಕೃಷಿವಿಶ್ವವಿದ್ಯಾಲಯದಲ್ಲಿ ಉದ್ಯೋಗಕ್ಕೆ ಸೇರಿದ ನಂತರ ನನ್ನ ಸಂಶೋಧನೆಯ ವಿಷಯವೇ ಬೇರೆ ಆಯಿತು. ಹೊಲ ಗದ್ದೆಗಳಲ್ಲಿ, ತೋಟದ ಬೆಳೆಗಳಲ್ಲಿ, ಎಣ್ಣೆಕಾಳುಗಳ ಬೆಳವಣಿಗೆಯಲ್ಲಿ, ವಾಣಿಜ್ಯ ಬೆಳೆಗಳಲ್ಲಿ, ಮನೆಗಳಲ್ಲಿ, ಗೋದಾಮುಗಳಲ್ಲಿರುವ ಇಲಿ ಪ್ರಭೇದಗಳನ್ನು ಗುರುತಿಸುವುದಲ್ಲದೆ, ಅವುಗಳಿಂದಾಗುವ ನಷ್ಟದ ಪ್ರಮಾಣ, ಇಲಿ ಪಾಷಾಣಗಳು ಎಷ್ಟು ಪರಿಣಾಮಕಾರಿಯಾಗಿವೆ, ಇಲಿಗಳ ವರ್ತನೆ, ಅದನ್ನು ಹೇಗೆ ಅವುಗಳ ಹತೋಟಿಯಲ್ಲಿ ಉಪಯೋಗಿಸಿಕೊಳ್ಳಬಹುದು ಮುಂತಾದವು ನನ್ನ ಸಂಶೋಧನೆಯ ವಿಷಯಗಳಾಗಿದ್ದವು. ನಾನು ಹೆಚ್ಚಿನ ಸಮಯ ಹೊಲಗದ್ದೆಗಳಲ್ಲಿಯೇ ಹೆಣಗಬೇಕಾಗಿತ್ತು, ಹಳ್ಳಿಗಳಿಗೆ ಭೇಟಿ ನೀಡಬೇಕಾಗುತ್ತಿತ್ತು. ರಾಜ್ಯದ ವಿವಿಧ ಭಾಗಗಳಲ್ಲಿ ಕೆಲಸ ಮಾಡಬೇಕಾಗುತ್ತಿತ್ತು. ವೃತ್ತಿಪರ ಯಶಸ್ಸು ನಿಧಾನವಾಗಿ, ಸ್ಥಿರವಾಗಿ ಬರಲಾರಾಂಭಿಸಿತು.

ಆದರೆ ಸುಲಭವಾಗಿ ಅಲ್ಲ. ಎಲ್ಲಾ ಹಂತಗಳಲ್ಲಿ ಲಿಂಗ ಪಕ್ಷಪಾತವಿತ್ತು, ದಮನದ ವಿರುದ್ಧ ಧೈರ್ಯವಾಗಿ ನಿಂತಿದ್ದರಿಂದ ಸಂಬಳ ನಿಲ್ಲಿಸಲಾಯಿತು. ನ್ಯಾಯವನ್ನು ಪಡೆಯಲು ಮತ್ತು ಇಲಾಖೆಯ ಮುಖ್ಯಸ್ಥರು ಮತ್ತು ಅಧೀನ ಅಧಿಕಾರಿಯ ಕಿರುಕುಳದಿಂದ ತಪ್ಪಿಸಿಕೊಳ್ಳಲು ವರ್ಷಾನುಗಟ್ಟಲೆ ಹೋರಾಡಬೇಕಾಯಿತು. ವಿಶ್ವವಿದ್ಯಾನಿಲಯದಲ್ಲಿ ಮತ್ತು ನ್ಯಾಯಾಲಯದಲ್ಲಿ ಸುದೀರ್ಘವಾದ ಹೋರಾಟಗಳು ಅಂತಿಮವಾಗಿ ನನ್ನ ಕಷ್ಟಗಳನ್ನು ಕೊನೆಗೊಳಿಸಿದವು. ಆದರೆ ಸಂಶೋಧನಾ ಪ್ರಬಂಧಗಳು ಮತ್ತು ಪುಸ್ತಕ ಬರವಣಿಗೆ ಈ ಎಲ್ಲಾ ಸಮಸ್ಯೆಗಳ ನಡುವೆಯೂ ಮುಂದುವರೆಯಿತು. ವಾಸ್ತವವಾಗಿ ಈ ಚಟುವಟಿಕೆಗಳು ನನ್ನ ಆತ್ಮಸ್ಥೈರ್ಯವನ್ನು ಹೆಚ್ಚಿಸಿದವು. ನಾನು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ನಂತರ ಅಂತಾರಾಷ್ಟ್ರೀಯ ಮನ್ನಣೆ ಪಡೆದೆ. ಅಮೆರಿಕ
ಮತ್ತು ಯುರೋಪ್‌ನ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ ನನ್ನ ಕಾರ್ಯಕ್ಷೇತ್ರ, ಸಂಶೋಧನೆಗೆ ಸಂಬಂಧಿಸಿ ಉಪನ್ಯಾಸಗಳನ್ನು ನೀಡಲು ಆಹ್ವಾನಿತಳಾದೆ. ಒಂದು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವುದು ಅನೇಕರಿಗೆ ಹೆಮ್ಮೆಯ ಸಾಧನೆಯಾಗಿದೆ. ಆದರೆ ನಾನು ಪ್ರಪಂಚದಾದ್ಯಂತ ಅಂತಹ ಸಾಕಷ್ಟು ವೈಜ್ಞಾನಿಕ ಸಮ್ಮೇಳನಗಳಲ್ಲಿ Sessional Chairman ಆಗಿ ವರ್ಷಗಟ್ಟಲೆ ಭಾಗವಹಿಸುತ್ತಿದ್ದೆ.

TV9 Kannada


Leave a Reply

Your email address will not be published. Required fields are marked *