ಆಧುನಿಕ ಶಕುಂತಲಾ ಕಥನ: ಫಲವತ್ತಾದ ಕ್ಯಾಸಂಬಳ್ಳಿ ಮತ್ತು ಕೆಜಿಎಫ್​ನ ಸಿಡಿಮದ್ದಿನ ನಡುವೆ ಅರಳಿದ ಬಾಲ್ಯ | Adhunika Shakuntala Kathana Autobiography Column of scientist Dr Shakuntala Sridhara


ಆಧುನಿಕ ಶಕುಂತಲಾ ಕಥನ: ಫಲವತ್ತಾದ ಕ್ಯಾಸಂಬಳ್ಳಿ ಮತ್ತು ಕೆಜಿಎಫ್​ನ ಸಿಡಿಮದ್ದಿನ ನಡುವೆ ಅರಳಿದ ಬಾಲ್ಯ

ಶಕುಂತಲಾ ಅವರ ತಂದೆ ನಾರಾಯಣಸ್ವಾಮಿ ಮತ್ತು ತಾಯಿ ಶಾಂತಮ್ಮ

Intercaste Marriage : ಬಂಗಾರುಪೇಟೆಯ ನಾರಾಯಣಸ್ವಾಮಿ ಕೆಜಿಎಫ್​ನ ಶಾಂತಮ್ಮ ಬೇರೆಬೇರೆ ಜಾತಿಗೆ ಸೇರಿದ್ದರೂ ವಿಧಿ ಕ್ಯಾಸಂಬಳ್ಳಿಯಲ್ಲಿ ಒಂದುಗೂಡಿಸಿತು. ನನ್ನ ತಂದೆಯ ಮನೆಯವರು ತಾಯಿಯನ್ನು ಐದು ಮಕ್ಕಳಾಗುವವರೆಗೆ ಮನೆಗೆ ಸೇರಿಸಲಿಲ್ಲ. ಚಿಕ್ಕವಯಸ್ಸಿನಲ್ಲೇ ನಾನು ತಾರತಮ್ಯ ಅನುಭವಿಸಿದೆ.

ಆಧುನಿಕ ಶಕುಂತಲಾ ಕಥನ | Adhunika Shakuntala Kathana : ನಾನು ಸ್ವತಂತ್ರ ಭಾರತದ ಶಿಶು. ನಾನು ಜನಿಸಿದ ನಾಲ್ಕು ತಿಂಗಳ ನಂತರ ದೇಶ ಬ್ರಿಟಿಷರಿಂದ ಸ್ವತಂತ್ರಗೊಂಡಿತು. ನನ್ನ ಹಿಂದಿನ ಹಿಂದಿನ ಪೀಳಿಗೆಯ ಹೆಣ್ಣುಮಕ್ಕಳಂತೆ ನನಗೆ ಹೆಚ್ಚಿನ ನಿರ್ಬಂಧಗಳಾಗಲಿ, ಸಂಕೋಲೆಗಳಾಗಲಿ ಇರಲಿಲ್ಲ. ಅಂತೆಯೇ ಇಂದಿನ ಹೆಣ್ಣು ಮಕ್ಕಳಿಗಿರುವಷ್ಟು ಅವಕಾಶಗಳೂ, ಆರ್ಥಿಕ ಸ್ವಾತಂತ್ರ್ಯ, ಸಮಾನತೆ ಏನೊಂದೂ ಇರಲಿಲ್ಲ. 1947 ಮತ್ತು 1960ರಲ್ಲಿ ಹುಟ್ಟಿಬೆಳೆದ ಹೆಣ್ಣುಮಕ್ಕಳದು ಒಂದು ಬಗೆಯ ತ್ರಿಶಂಕು ಸ್ವರ್ಗ. ಅತ್ತ ಅವರ ಅಜ್ಜಿ ತಾಯಿಯರಿಗಿದ್ದಂಥ ಶೃಂಖಲೆಗಳಿರಲಿಲ್ಲ. ಇತ್ತ ಇಂದಿನ ಹೆಣ್ಣುಮಕ್ಕಳಿಗಿರುವಂತೆ ಧೈರ್ಯ ಸಾಹಸ ಪ್ರವೃತ್ತಿ, ಅವಕಾಶಗಳೂ ಇರಲಿಲ್ಲ. ಲಿಂಗ ತಾರತಮ್ಯವಂತೂ ಹುಟ್ಟಿನಿಂದಲೇ ಇತ್ತು. ಹೆಣ್ಣಿನ ಜೀವನವೆಂದರೆ ಒಂದಷ್ಟು ಹೈಸ್ಕೂಲ್ ಅಥವಾ ಡಿಗ್ರಿ ಓದುವುದು, ಹೆಚ್ಚಿನ ಕುಟುಂಬಗಳಲ್ಲಿ ಮದುವೆಯಾಗುವುದು ಅಥವಾ ಹೆಣ್ಣಿಗೆ ಸೇಫ್ ಎನ್ನಿಸುವಂಥ ಶಾಲಾ ಶಿಕ್ಷಕಿ, ನರ್ಸ್, ಆಫೀಸ್ ಕ್ಲರ್ಕ್ ಇಂತಹ ಕೆಲಸಗಳಿಗೆ ಹೋಗುವುದು. ಅಪವಾದವೆಂದರೆ ಸುಶಿಕ್ಷಿತ, ಶ್ರೀಮಂತ ಕುಟುಂಬದ ಹಲವು ಹೆಣ್ಣುಮಕ್ಕಳು ಹೆಚ್ಚಿನ ವ್ಯಾಸಂಗ ಅಂದರೆ ವೈದ್ಯೆ, ಕಾಲೇಜು ಲೆಕ್ಚರರ್, ತೀರಾ ಕಡಿಮೆ ಸಂಖ್ಯೆಯಲ್ಲಿ ವಿಜ್ಞಾನಿ ವೃತ್ತಿಗಿಳಿಯುತಿದ್ದರು.
ಡಾ. ಶಕುಂತಲಾ ಶ್ರೀಧರ್, ಮೂಷಕ ತಜ್ಞೆ (Dr. Shakuntala Sridhara)

(ಕಥನ 1)

(ಬಾಲ್ಯ 1947-1956)

ನನ್ನ ತಂದೆ ನಾರಾಯಣ ಸ್ವಾಮಿ ಬಂಗಾರುಪೇಟೆಯಂಥ ಸಣ್ಣ ಊರಿನಲ್ಲಿ ಹುಟ್ಟಿದ್ದರೂ ಅವರ ಮನೆಯವರು ಅವರನ್ನು ಹೆಚ್ಚಿನ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಕಾಲೇಜಿನಲ್ಲಿ ಓದಲು ಕಳುಸಿದ್ದರು. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಕೆಟ್ಟಿದ್ದರಿಂದ ಅಂದಿನ ಮೈಸೂರು ಸರ್ಕಾರದಲ್ಲಿ ಅಮಲ್ದಾರ್ ಆಗಿ ಸೇರಿದರು. ಅವರು ಹಲವಾರು ಹಳ್ಳಿಗಳಿಗೆ ಅಮಲ್ದಾರ್ ಅಧಿಕಾರಿ. ಅವರ ಕ್ಷೇತ್ರ ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿ ಮತ್ತು ಸುತ್ತಮುತ್ತಲ ಹಳ್ಳಿಗಳಾಗಿದ್ದವು. ಅವರು ತುಂಬಾ ಕಟ್ಟುನಿಟ್ಟಿನ ಅಧಿಕಾರಿಯಾಗಿದ್ದರು. ಎರಡನೇ ಮಹಾಯುದ್ಧದ ಕಾಲದಲ್ಲಿ ಆಹಾರ ವಿತರಣೆ ಅವರ ಸುಪರ್ದಿಯಲ್ಲಿದ್ದರೂ ಅವರ ಮನೆಯವರಿಗೂ ಸರ್ಕಾರದ ನಿಯಮಕ್ಕಿಂತ ಒಂದು ಕಾಳು ಹೆಚ್ಚಿಗೆ ಕೊಡುತ್ತಿರಲಿಲ್ಲ. ಇದೇ ನಿಯಮಬದ್ದ ಜೀವನವನ್ನು ಅವರು ಮುಂದೆ ಆದಾಯ ತೆರಿಗೆ ಆಫೀಸಿಗೆ ಸೇರಿದಾಗಲೂ ಪಾಲಿಸಿಕೊಂಡು ಬಂದರು. ನಾನು ಮತ್ತು ಟ್ರೆಷರಿ ಆಫೀಸಿನಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಂಗಿ ಇಬ್ಬರೂ ಲಂಚದಿಂದ ದೂರವಿದ್ದು ಪ್ರಾಮಾಣಿಕವಾಗಿ ಬದುಕಿದೆವು.

ನನ್ನ ತಾಯಿಯನ್ನು ಮದುವೆ ಆಗುವ ಮೊದಲೇ ನನ್ನ ತಂದೆಗೆ ಮದುವೆಯಾಗಿ, ಒಬ್ಬ ಮಗಳು ಹುಟ್ಟಿ, ಮೊದಲನೇ ಹೆಂಡತಿ ಕ್ಷಯರೋಗದಿಂದ ತೀರಿಕೊಂಡೂ ಆಗಿತ್ತು. ನನ್ನಮ್ಮ ಕೆಜಿಎಫ್​ನಲ್ಲಿ ಹುಟ್ಟಿ ಬೆಳೆದವರು. ಅವರ ತಂದೆ ತಾಯಿಗಳ ಆರು ಮಕ್ಕಳಲ್ಲಿ ನಮ್ಮಮ್ಮನೇ ಹಿರಿಯಳು. ನಮ್ಮಜ್ಜಿ ನನ್ನ ತಾತನ ಎರಡನೇ ಹೆಂಡತಿಯಾಗಿದ್ದು, ಗಂಡನಿಂದ ಹಣಕಾಸಿನ ಸಹಾಯ ಅಷ್ಟಾಗಿ ದೊರಕದ ಕಾರಣ ಆಸ್ಪತ್ರೆಯಲ್ಲಿ ಆಯಾ ಆಗಿ ದುಡಿಯಲಾರಾಂಭಿಸಿದರು. ಆದರೆ ತಾನು ಆಯಾ ಆದರೂ ತನ್ನ ಮಕ್ಕಳು ಚೆನ್ನಾಗಿ ಓದಬೇಕೆಂದು ಆಕೆಯ ಧೃಡ ನಿರ್ಧಾರ. ಆಕೆಯ ಐವರು ಹೆಣ್ಣುಮಕ್ಕಳನ್ನು ಬೆಂಗಳೂರಿನಲ್ಲಿ ಹಾಸ್ಟೆಲ್​ನಲ್ಲಿಟ್ಟು ಹೈಸ್ಕೂಲ್​ವರೆಗೆ ಅದೂ ಸುಪ್ರಸಿದ್ದ ಕಾನ್ವೆಂಟ್​ಗಲ್ಲಿ ಓದಿಸಿದರು. ನನ್ನ ತಾಯಿ ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಮುಗಿದ ತಕ್ಷಣ ನರ್ಸ್ ಟ್ರೇನಿಂಗ್ ಮಾಡಿ ದಾಯಿಯಾಗಿ ಕ್ಯಾಸಂಬಳ್ಳಿಯಲ್ಲಿ ನೇಮಕಗೊಂಡು, ತನ್ನ ಸಂಪಾದನೆಯನ್ನು ಅವರ ತಾಯಿಯ ಕುಟುಂಬ ನಿರ್ವಹಣೆಗೆ ಕೊಡುತಿದ್ದರು.

ವಿಧಿ ಬಂಗಾರುಪೇಟೆಯ ನಾರಾಯಣಸ್ವಾಮಿಯನ್ನೂ ಕೆಜಿಎಫ್​ನ ಶಾಂತಮ್ಮನನ್ನೂ, ಅವರು ಬೇರೆ ಬೇರೆ ಜಾತಿಗೆ ಸೇರಿದ್ದರೂ ಕ್ಯಾಸಂಬಳ್ಳಿಯಲ್ಲಿ ಒಂದುಗೂಡಿಸಿತು. ಇದು ಸುಮಾರು 1946ರಲ್ಲಿ ಆಗಿರಬಹುದೆಂದು ನನ್ನ ಲೆಕ್ಕ. ಯಾಕೆಂದರೆ ನಾನು 1947ರಲ್ಲಿ ಇದೇ ಹಳ್ಳಿಯಲ್ಲಿ ಹುಟ್ಟಿದೆ. ಇಂಥದೊಂದು ಅಂತರ್ಜಾತಿಯ ವಿವಾಹ ಆ ಕಾಲದಲ್ಲಿ ಅತ್ಯಂತ ವಿರಳ ಹಾಗೂ ಕ್ರಾಂತಿಕಾರಿಯಾಗಿತ್ತು. ನನ್ನ ತಂದೆ ಮನೆಯವರಿಗೆ ಈ ವಿವಾಹ ಇಷ್ಟವಾಗಲಿಲ್ಲ. ಮಾತ್ರವಲ್ಲ, ನಮ್ಮ ತಾಯಿಯನ್ನು ಐದು ಮಕ್ಕಳಾಗುವವರೆಗೆ ಅವರು ಮನೆಗೆ ಸೇರಿಸಲಿಲ್ಲ. ಹೀಗೆ ಚಿಕ್ಕವಯಸ್ಸಿನಲ್ಲೇ ನಾನು ತಾರತಮ್ಯ ಅನುಭವಿಸಿದೆ. ನನ್ನ ತಾತ ಮತ್ತು ನನ್ನ ತಂದೆಯ ಸಂಬಂಧಿಕರಿಂದ ದೂರವಿಡಲ್ಪಟ್ಟೆ.

TV9 Kannada


Leave a Reply

Your email address will not be published. Required fields are marked *