ಮೈಸೂರಿನಿಂದ ಸುಮಾರು 80 ಕಿಮೀ ದೂರದ ಬೈಲುಕುಪ್ಪೆಯಲ್ಲಿ ಒಂದು
ಟಿಬೆಟನ್ ಕ್ಯಾಂಪ್ ಇರೋದು ಕನ್ನಡಿಗರಿಗೆಲ್ಲ ಗೊತ್ತಿರುವ ಸಂಗತಿಯೇ. ಅಲ್ಲಿ ಕರ್ನಾಟಕ ದಮ್ಮ ಬುದ್ಧ ಸಮಿತಿ ಕಾರ್ಯನಿರತವಾಗಿದೆ. ಇಲ್ಲಿರುವ ಟಿಬಟನ್ನರು ಧಾರ್ಮಿಕ ಕಾರ್ಯಗಳ ನಿಮಿತ್ತ ಮೈಸೂರು ಸುತ್ತಮುತ್ತ ಶಿಬಿರಗಳನ್ನು ಏರ್ಪಡಿಸುತ್ತಾರೆ. ಅಂತದ್ದೊಂದು ಶಿಬಿರವನ್ನು ಅವರು ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಹೂಡಿದ್ದಾರೆ. ಈಗ ಈ ವಿಷಯವನ್ನು ಚರ್ಚಿಸುವ ಕಾರಣವೇನೆಂದರೆ, ಹುಣಸೂರು ತಾಲ್ಲೂಕಿನ ಹಲವು ಪ್ರದೇಶಗಳಲ್ಲಿ ಕಾಡಾನೆಗಳು ಆಗಾಗ ಕಾಣಿಸಿಕೊಳ್ಳುತ್ತಿರುತ್ತವೆ.
ರವಿವಾರದಂದು ವೀರನಹೊಸಹಳ್ಳಿ ಕ್ಯಾಂಪಿನ ಬಳಿ ಸಲಗವೊಂದು ಬಂದುಬಿಟ್ಟಿದೆ. ಸುಮ್ಮನಿರದೆ ಬಿಟ್ಕೊಂಡ್ರು ಅಂತಾರಲ್ಲ, ಹಾಗೆ ಈ ಕ್ಯಾಂಪಿನ ಶಿಬಿರಾರ್ಥಿಯೊಬ್ಬ, ಬೇರೆ ಶಿಬಿರಾರ್ಥಿಗಳ ಮುಂದೆ ತನ್ನ ಶೌರ್ಯ ಪ್ರದರ್ಶಿಸಲು ಕೈಯಲ್ಲಿ ಪಂಜೊಂದನ್ನು ಹಿಡಿದು ಅದನ್ನು ಓಡಿಸಲು ಪ್ರಯತ್ನಿಸಿದ್ದಾನೆ. ಬೆಂಕಿಯನ್ನು ಕಂಡರೆ ಆನೆಗಳು ಓಡಿಹೋಗುತ್ತವೆ ಅಂತ ಯಾರೋ ಅವನಿಗೆ ಹೇಳಿರಬಹುದು.
ಆದರೆ, ನಿಮಗಿಲ್ಲಿ ಕಾಣುತ್ತಿರುವ ಸಲಗ ಇದಕ್ಕೆ ಮೊದಲು ಸಹ ಬೆಂಕಿ ಪಂಜನ್ನು ನೋಡಿದಂತಿದೆ. ಯುವಕ ತನ್ನತ್ತ ಬರುತ್ತಿರುವುದನ್ನು ಕಂಡು ಹೆದರದೆ ಅವನತ್ತ ಬರಲಾರಂಭಿಸಿದೆ. ಅದರ ಸೊಂಡಿಲಿಗೆ ತಾನು ಸಿಕ್ಕರೆ ಬೆಂಕಿ ತನಗೆ ಇಡಬೇಕಾಗುತ್ತೆ ಅಂತ ಮನವರಿಕೆ ಮಾಡಿಕೊಂಡ ಟಿಬೆಟನ್ ಯುವಕ ವಾಪಸ್ಸು ಓಟ ಕಿತ್ತಿದ್ದಾನೆ. ಅದನ್ನು ಕನ್ನಡ ಮಾತಾಡುವ ಯುವಕರ ಗುಂಪೊಂದು ಶೂ್ಟ್ ಮಾಡಿದೆ.
ಈ ವಿಡಿಯೋದ ಯಾವ ಫ್ರೇಮಿನಲ್ಲೂ ಯುವಕ ಕಾಣುತ್ತಿಲ್ಲವಾದರೂ ನಡೆದ ಸಂಗತಿ ಇಷ್ಟು. ಅವನು ವಾಪಸ್ಸು ಓಡಿದ ನಂತರ ಆನೆ ತಾನು ಸಹ ಕಾಡಿಗೆ ಹಿಂತಿರುಗಿದೆ.