ಆನ್ಲೈನ್ ಗ್ಯಾಂಬ್ಲಿಂಗ್ ಚಟಕ್ಕೆ ಬಿದ್ದು ರಸ್ತೆ ರಸ್ತೆಯಲ್ಲಿ ಸುಲಿಗೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಬಸವನಗುಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗ್ಯಾಂಬ್ಲಿಂಗ್ಗೆ ಹಣ ಬೇಕೆಂದಾಗೆಲ್ಲಾ ಆರೋಪಿಗಳು ಬೆಂಗಳೂರಿಗೆ ಬಂದು ಸುಳಿಗೆ ನಡೆಸುತ್ತಿದ್ದರು.

ಸಾಂಕೇತಿಕ ಚಿತ್ರ
ಬೆಂಗಳೂರು: ಆನ್ಲೈನ್ ಜೂಜು ಚಟಕ್ಕೆ ಬಿದ್ದು ರಸ್ತೆ ರಸ್ತೆಯಲ್ಲಿ ಸುಲಿಗೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಬಸವನಗುಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಾಹನ ತಾಗಿತು ಎಂದು ಆರೋಪಿಸಿ ಜಗಳಕ್ಕೆ ಇಳಿದು ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿದ್ದ ಮೈಸೂರು ಮೂಲದ ಜಮೀಲ್ ಖಾನ್, ಜುನಾಯಿದ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜನರನ್ನು ಸುಲಿಗೆ ಮಾಡಲು ಆರೋಪಿಗಳು ವಾಹನ ಅಪಘಾತವನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದರು. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಗಲು ರಾತ್ರಿ ಎನ್ನದೆ ಆರೋಪಿಗಳು ಸುಲಿಗೆ ನಡೆಸುತ್ತಿದ್ದರು. ಒತ್ತಡದಲ್ಲಿ ವಾಹನ ಚಾಲನೆ ಮಾಡುವವರ ಪಕ್ಕಕ್ಕೆ ಬಂದು ನಿಮ್ಮ ವಾಹನ ಟಚ್ ಆಯ್ತು ಎಂದು ಕಿರಿಕ್ ಮಾಡುತ್ತಿದ್ದರು. ಬಳಿಕ ಅವರಿಂದ ಸಾವಿರಾರು ರೂಪಾಯಿ ಸುಲಿಗೆ ಮಾಡುತ್ತಿದ್ದರು.
ಇದೇ ರೀತಿಯ ಕೃತ್ಯವನ್ನು ಆರೋಪಿಗಳು ಬಸವನಗುಡಿಯಲ್ಲಿ ನಡೆಸಿ ವಾಹನ ಸವಾರನಿಂದ 40 ಸಾವಿರ ರೂಪಾಯಿ ದರೋಡೆ ಮಾಡಿದ್ದರು. ಘಟನೆ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಬಸವನಗುಡಿ ಠಾಣಾ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ವಿಚಾರಣೆ ನಡೆಸಿದಾಗ ಬೆಂಗಳೂರು, ಶ್ರೀರಂಗಪಟ್ಟಣ ಸೇರಿದಂತೆ ಹಲವು ಕಡೆಗಳಲ್ಲಿ ಕೃತ್ಯ ನಡೆಸಿರುವುದು ತಿಳಿದುಬಂದಿದೆ. ಅಲ್ಲದೆ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದರೂ ಬುದ್ಧಿ ಕಲಿಯದ ಆರೋಪಿಗಳು ಮತ್ತದೇ ಕೃತ್ಯವನ್ನು ಮುಂದುವರಿಸಿದ್ದಾರೆ. ಆನ್ಲೈನ್ ಗ್ಯಾಂಬ್ಲಿಂಗ್ಗೆ ಹಣ ಬೇಕೆಂದಾದಾಗ ಬೆಂಗಳೂರಿಗೆ ಬಂದು ದರೋಡೆಗೆ ಇಳಿಯುತ್ತಿದ್ದರು ಎಂದು ತಿಳಿದುಬಂದಿದೆ.
ಬಾರ್ ಕ್ಯಾಷಿಯರ್ ಮೇಲೆ ಮಾರಣಾಂತಿಕ ಹಲ್ಲೆ
ಹಾಸನ: ಎಂಆರ್ಪಿ ದರದಲ್ಲಿ ಮದ್ಯ ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದಕ್ಕೆ ಮೂವರು ವ್ಯಕ್ತಿಗಳು ಬಾರ್ ಕ್ಯಾಷಿಯರ್ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ವಿಜಯ ನಗರ ಬಡಾವಣೆಯಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿಗಳು ಬಾರ್ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ಆಧರಿಸಿ ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಭಾನುವಾರ ಮಧ್ಯಾಹ್ನ ವಿಜಯ ನಗರ ಬಡಾವಣೆಯಲ್ಲಿರುವ ಬಾರ್ಗೆ ಬಂದ ಮೂವರು ವ್ಯಕ್ತಿಗಳು ಎಂಆರ್ಪಿ ದರದಲ್ಲಿ ಮದ್ಯ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಬಾರ್ ಕ್ಯಾಷಿಯರ್ ಒಪ್ಪದಿದ್ದಾಗ ಆಕ್ರೋಶಗೊಂಡ ಮೂವರು ಕುರ್ಚಿ ಮತ್ತು ದೊಣ್ಣೆಗಳಿಂದ ಕ್ಯಾಷಿಯರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ಎಷ್ಟೇ ಬೇಡಿಕೊಂಡರೂ ಬಿಡದ ಪುಂಡರು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಪುಂಡರ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಕ್ಯಾಷಿಯರ್ ಕುಸಿದುಬಿದ್ದಿದ್ದು, ಕೂಡಲೇ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಸಂಬಂಧ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿ ಕ್ಯಾಮೆರಾ ದೃಶ್ಯಾವಳಿ ಮುಂದಿಟ್ಟುಕೊಂಡು ದುಷ್ಕರ್ಮಿಗಳ ಬಂಧನಕ್ಕೆ ತನಿಖೆ ಕೈಗೊಂಡಿದ್ದಾರೆ.
ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ಕಾರು
ಚಾಮರಾಜನಗರ: ತಮಿಳುನಾಡು ಗಡಿ ಭಾಗ ದಿಂಬಂ ಘಾಟ್ 23ನೇ ತಿರುವಿನಲ್ಲಿ ಕಾರಿಗೆ ಆಕಸ್ಮಿಕ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ಘಟನೆ ನಡೆದಿದೆ. ಮೈಸೂರಿನಿಂದ ಸತ್ಯಂ ಮಂಗಲಂಗೆ ಕಾರು ಮೂಲಕ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು. ದಿಂಬಂ ಘಾಟ್ 23ನೇ ತಿರುವಿನಲ್ಲಿ ಹೋಗುತ್ತಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗೆ ಕಾಣಿಸಿಕೊಂಡ ಬೆಂಕಿ ಇಡೀ ಕಾರನ್ನು ಆವರಿಸಿದೆ. ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಕಾರಿಗೆ ಹತ್ತಿಕೊಂಡ ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.