ಆಫ್ರಿಕಾದಲ್ಲಿ ಮತ್ತೆ ಆಹಾರಕ್ಕೆ ಹಾಹಾಕಾರ ಉಂಟಾಗಿದೆ. ಜನ ಆಹಾರ, ಔಷಧಿ ಇಲ್ಲದೆ ಸಾಯುತ್ತಿದ್ದಾರೆ. ದಿನಬಳಕೆಯ ವಸ್ತುಗಳಿಗೆ ಗಂಟೆಗಟ್ಟಲೇ ಕ್ಯೂ ನಿಲ್ತಿದ್ದಾರೆ. ಪ್ರತಿಭಟನೆಯ ಸೋಗಿನಲ್ಲಿ ನಡೆದ ಹಿಂಸಾಚಾರದಿಂದ ಆಫ್ರಿಕಾದಲ್ಲಿ ಕಾನೂನು ಸುವ್ಯವಸ್ಥೆ ನೆಲಕಚ್ಚಿ ಬಿಟ್ಟಿದೆ.

ಹೌದು.. ಆಫ್ರಿಕಾದಲ್ಲಿ ಎಲ್ಲವೂ ಸರಿಯಾಯ್ತು ಅನ್ನೋವಷ್ಟರಲ್ಲೇ ಮತ್ತೊಂದು ಸಂಕಷ್ಟ ತಲೆದೂರಿದೆ. ಆಫ್ರಿಕಾದಲ್ಲಿ ಅಂಗಡಿ ಮಾಲ್​ಗಳು ಧಗಧಗಿಸುತ್ತಿವೆ, ಜನರು ಆಹಾರಕ್ಕೆ ಕಿಲೋಮೀಟರ್ ಗಟ್ಟಲೇ ನಿಂತಿದ್ದಾರೆ. ಪ್ರತಿಭಟನೆಯ ಸೋಗಿನಲ್ಲಿ ಹಿಂಸಾಚಾರ ಮುಗಿಲು ಮುಟ್ಟಿದೆ. ಪೊಲೀಸರ ಕೈಯಲ್ಲಿರುವ ಗನ್​ಗಳು ಘರ್ಜಿಸುತ್ತಿವೆ. ಜನರು ಮತ್ತೆ ಹಸಿವಿನ, ಬಡತನದ ಕರಾಳತೆಯನ್ನು ನೆನೆದು ಭಯಭೀತರಾಗಿದ್ದಾರೆ. ಹಸಿವಿನ ಯಾತನೆ ಮತ್ತೆ ಮರುಕಳಿಸಿದೆ. ಆಹಾರಕ್ಕೆ ಹಾಹಾಕಾರ ಎದುರಾಗಿದೆ.

ದಕ್ಷಿಣ ಆಫ್ರಿಕಾ ಹಲವು ದಂಗೆಗೆಳನ್ನು ಕಂಡಿದೆ. ಹಲವು ಚಳುವಳಿಗೆ ಇಲ್ಲಿಯ ನೆಲ ಸಾಕ್ಷಿಯಾಗಿದೆ. ವಸಾಹತು ಶಾಹಿಯಿಂದ, ಬಳಿಕ ವರ್ಣ ಬೇಧ ನೀತಿಯಿಂದ, ನಂತರ ಸ್ವಾತಂತ್ರ್ಯ ಸಿಕ್ಕರೂ ನಿರುದ್ಯೋಗ, ಬಡತನದಿಂದ ಕಂಗೆಟ್ಟಿರುವ ಆಫ್ರಿಕಾದಲ್ಲಿ ಹಲವು ಪ್ರತಿಭಟನೆಗಳು ನಡೆದಿವೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ನೆಲ್ಸನ್ ಮಂಡೇಲಾರಂತಹ ಮಹಾನ್ ವ್ಯಕ್ತಿಗಳ ಚಳುವಳಿಗೆ, ಹೋರಾಟಕ್ಕೆ ಸಾಕ್ಷಿಯಾದ ನೆಲ ಇದು. ದಕ್ಷಿಣ ಆಫ್ರಿಕಾ ದೇಶಕ್ಕೆ ಘನತೆ, ಸಮಾನತೆ, ಅಸ್ಮಿತೆಯನ್ನು ತಂದುಕೊಟ್ಟ ನೆಲ್ಸನ್ ಮಂಡೇಲಾ ಇಹಲೋಕ ತ್ಯಜಿಸಿ ವರ್ಷಗಳೇ ಕಳೆದ್ರೂ, ಆಫ್ರಿಕಾದ ಕಣ ಕಣದಲ್ಲೂ ನೆಲ್ಸನ್ ಮಂಡೇಲಾರ ತತ್ವಗಳು ಇನ್ನೂ ಜೀವಂತವಾಗಿದೆ ಎಂದೇ ಭಾವಿಸಲಾಗಿತ್ತು. ಆದ್ರೆ ಇದೀಗ ಆಫ್ರಿಕಾದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನ ಗಮನಿಸಿದ್ರೆ, ನೆಲ್ಸನ್ ಮಂಡೇಲಾರ ಜೊತೆಗೆ ಅವರು ಹಾಕಿಕೊಟ್ಟಿದ್ದ ಅಸ್ಮಿತೆ, ಸಮಾನತೆ, ಘನತೆ ಕೂಡ ಸಮಾಧಿ ಸೇರಿತ್ತಾ ಎಂಬ ಪ್ರಶ್ನೆ ಮೂಡುತ್ತಿದೆ.

ಅಂದು ಬಿಳಿಯರ ವಿರುದ್ಧ ಕ್ರೌರ್ಯ ತುಂಬಿದ ಜಂತುಗಳ ವಿರುದ್ಧ ಹೋರಾಟ ಮಾಡಿ, ನೆಲ್ಸನ್ ಮಂಡೇಲಾ ಜೈಲು ಸೇರಿದಾಗ ಇಷ್ಟರ ಮಟ್ಟಿಗೆ ಹಿಂಸಾತ್ಮಾಕ ಕೃತ್ಯಗಳನ್ನು ಎಸಗದ ಜನರು, ಇದೀಗ ಆಫ್ರಿಕಾದ ಮಾಜಿ ಅಧ್ಯಕ್ಷರ ಪರ ಧ್ವನಿ ಎತ್ತಿ, ಅದ್ಯಾಕೆ ಇಂತಹ ಉಗ್ರ ರೂಪ ತಾಳಿದ್ರೋ ಗೊತ್ತಿಲ್ಲ. ಪ್ರತಿಭಟನೆಕಾರರು ಅದ್ಯಾಕೆ ತಾಳ್ಮೆ ಕಳೆದುಕೊಂಡ್ರೋ ಇನ್ನೂ ಅರಿವಾಗ್ತಿಲ್ಲ. ನ್ಯಾಯ ಮಾರ್ಗದಲ್ಲಿ ನಡೆಯಬೇಕಿದ್ದ ಪ್ರತಿಭಟನೆ ಅದ್ಯಾಕೆ ದಿಕ್ಕು ತಪ್ಪಿತು ಅನ್ನೋದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಈ ಹಿಂದೆ ಆಫ್ರಿಕಾದಲ್ಲಿ ನಡೆದ ಎಲ್ಲಾ ದಂಗೆಯಲ್ಲಿಯೂ ಹಿಂಸಾಚಾರ ಇತ್ತು. ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಲೂಟಿಯೂ ಇತ್ತು. ಆದ್ರೆ, ಈಗ ನಡೆಯುತ್ತಿರುವ ಹಿಂಸಾಚಾರ ಭಿನ್ನವಾಗಿದೆ. ಜನ ಸಿಕ್ಕ ಸಿಕ್ಕ ಅಂಗಡಿ, ಮಾಲ್​ಗಳಿಗೆ ನುಗ್ಗಿದ್ದಾರೆ. ದಿನಬಳಕೆಯ ವಸ್ತುಗಳಿಂದ ಹಿಡಿದು ದುಬಾರಿ ವಸ್ತುಗಳನ್ನು ತೆಗೆದುಕೊಂಡು ಹೋಗ್ತಾ ಇದ್ದಾರೆ. ವಾಪಸ್ ಹೋಗುವಾಗ ಅಂಗಡಿಗಳಿಗೆ, ಮಾಲ್​ಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ಹಿಂಸಾಚಾರ ಅನ್ನೋದು ವಿರಾಟ ರೂಪವನ್ನೇ ಪಡೆದುಬಿಟ್ಟಿದೆ. ಇದ್ರಿಂದ ಆಫ್ರಿಕಾದಲ್ಲಿ ಆಹಾರಕ್ಕೆ ಹಾಹಾಕಾರ ಉಂಟಾಗಿದೆ.

ಆಫ್ರಿಕಾದಲ್ಲಿ ಮತ್ತೆ ಆಹಾರಕ್ಕೆ ಹಾಹಾಕಾರ?
ಕಿಲೋಮೀಟರ್‌ಗಟ್ಟಲೇ ಜನರು ನಿಂತಿದ್ಯಾಕೆ?

ಆಫ್ರಿಕಾದಲ್ಲಿ ಹಿಂಸಾಚಾರ ಶುರುವಾಗಿ ಕೆಲವೇ ಕೆಲ ದಿನಳಗಾಗಿದ್ದಷ್ಟೇ. ಇದೀಗ ಆಫ್ರಿಕಾದಲ್ಲಿ ದಿನಗಬಳಕೆಯ ಅಗತ್ಯ ವಸ್ತುಗಳಿಗೆ ಹಾಹಾಕಾರ ಎದುರಾಗಿದೆ. ಜನರು ಆಹಾರ ಸಿಗದೆ ಕಂಗಲಾಗಿ ಹೋಗಿದ್ದಾರೆ. ಅದ್ಕೆ ಈ ಇಲ್ಲಿರುವ ಒಂದೊಂದು ದೃಶ್ಯಗಳೇ ಸಾಕ್ಷಿ.

ಮೊನ್ನೆಯಿಂದ ಆಫ್ರಿಕಾದಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿ, ಅಲ್ಲಿಯ ಜನರು ದಂಗಾಗಿ ಹೋಗಿದ್ದಾರೆ. ಪ್ರತಿಭಟನೆಯ ಸೋಗಿನಲ್ಲಿ ಜನರು ದೊಡ್ಡ ದೊಡ್ಡ ಮಾಲ್​ಗಳ್ನ ದೋಚಿ ಬೆಂಕಿ ಇಟ್ಟು ಬಂದಿದ್ದಾರೆ. ಇದ್ರಿಂದ ಆಫ್ರಿಕಾದ ಹಲವೆಡೆ ದಿನಬಳಕೆಯ ಅಗತ್ಯ ವಸ್ತುಗಳಿಗೆ ಅಭಾವ ಎದುರಾಗಿದೆ. ಜನರು ಇದೀಗ ಅಗತ್ಯ ವಸ್ತುಗನ್ನ ಖರೀದಿ ಮಾಡಲು ಕಿಲೋ ಮೀಟರ್ ಗಟ್ಟಲೇ ನಿಂತಿದ್ದಾರೆ.
ಈ ಹಿಂದೆ ಹಸಿವು, ಬಡತನಕ್ಕೆ ಆಫ್ರಿಕಾದ ನೆಲ ಸಾಕ್ಷಿಯಾಗಿತ್ತು. ನೂರಾರು ಜನರು ಹಸಿವಿನಿಂದ ಸಾವನಪ್ಪಿದ್ರು. ಈ ದೃಶ್ಯ ಮತ್ತೆ ಮರುಕಳಿಸುವ ಭಯ ಆಫ್ರಿಕನ್ನರನ್ನು ಕಾಡ್ತಿದೆ. ಇದ್ರಿಂದ ಮುಂದಿನ ದಿನಗಳ ಕರಾಳತೆಯನ್ನು ನೆನೆದು ಜನರು ಇದೀಗ ಭಯಭೀತರಾಗಿದ್ದಾರೆ.

ದಕ್ಷಿಣ ಆಫ್ರಿಕಾ ಆರ್ಥಿಕ ರಾಜಧಾನಿ ಜೋಹಾನ್ಸ್​ಬರ್ಗ್ ಮತ್ತು ಡರ್ಬನ್ ನಲ್ಲಿ ಗೋದಾಮುಗಳು ಮತ್ತು ಮಳಿಗೆಗಳನ್ನು ದರೋಡೆ ಮಾಡಲಾಗಿದೆ. ಹಿಂಸಾಚಾರದಿಂದ ಈಗಾಗಲೇ ಹಲವು ಬೃಹತ್ ಅಂಗಡಿಗಳು,ಬೆಂಕಿಗೆ ಆಹುತಿಯಾಗಿದೆ. ಹಿಂಸಾಚಾರದಿಂದ ನಲುಗಿ ಹೋಗಿರುವ ಆಫ್ರಿಕಾದ ಕೆಲ ಪ್ರದೇಶಗಳಲ್ಲಿ ಮಾಲೀಕರು ಅಂಗಡಿ ಬಾಗಿಲು ಓಪನ್ ಕೂಡಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಜನರು ಮತ್ತೆ ಅಗತ್ಯ ವಸ್ತುಗಳು ಸಿಗದೆ ಕಂಗಲಾಗಿ ಹೋಗಿದ್ದಾರೆ. ಮಾಲ್​ಗಳು, ಅಂಗಡಿಗಳು ಗಲಭೆಕೋರರ ಕ್ರೌರ್ಯಕ್ಕೆ ಬಲಿಯಾಗಿರುವುದರಿಂದ ಆಫ್ರಿಕಾದಾದ್ಯಂತ ಆಹಾರಕ್ಕೆ ಹಾಹಾಕಾರ ಉಂಟಾಗಿದೆ. ಕೈಯಲ್ಲಿ ದುಡ್ಡಿದ್ರು ಆಹಾರ ಇಲ್ಲದೆ ಜನರು ನಲುಗಿ ಹೋಗಿದ್ದಾರೆ.

ಎದೆ ಝೆಲ್ ಅನ್ನೋ ಈ ದೃಶ್ಯವನ್ನು ನೋಡಿ.. ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಸೂಪರ್ ಮಾರ್ಕೆಟ್‍ಗಳು, ಮಾಲ್​ಗಳು, ಔಷಧಿ ಮಳಿಗೆಗಳು, ಪೆಟ್ರೋಲ್ ಬಂಕ್‍ಗಳು ಹೊತ್ತಿ ಉರಿಯುತ್ತಿವೆ. ಸಾವಿರಾರು ಜನರು ಮಾಲ್​ಗಳು ಎದುರು ದೌಡಾಯಿಸಿದ್ದಾರೆ. ಬೃಹತ್​ ಮಾಲ್​ಗಳೆಲ್ಲ ಗಲಭೆಕೋರರ ಕ್ರೌರ್ಯಕ್ಕೆ ಬಲಿಯಾಗಿ ಬಿಟ್ಟಿದೆ.

300ಕ್ಕೂ ಹೆಚ್ಚು ಸೂಪರ್ ಮಾರುಕಟ್ಟೆಗಳ ನಾಶ
ಮಾರಕಾಸ್ತ್ರ ಕೈಗೆತ್ತಿಕೊಂಡಿರುವ ಗಲಭೆಕೋರರು

ಆಫ್ರಿಕಾದಲ್ಲಿ ಪ್ರತಿಭಟನೆಗಳು ಮುಗಿಲು ಮುಟ್ಟಿದೆ. ಸರಿಸುಮಾರು 300ಕ್ಕೂ ಅಧಿಕ ಸೂಪರ್​ ಮಾರ್ಕೆಟ್​ಗಳನ್ನ ಈಗಾಗಲೇ ಗಲಭೆಕೋರರು ನಾಶ ಮಾಡಿದ್ದಾರೆ. ಇದ್ರ ನಡುವೆ ಮತ್ತೊಂದು ಆಘಾತಕಾರಿ ಬೆಳವಣಿಗೆ ನಡೀತಿದೆ. ಗುಂಪು ಮಾರಕಾಸ್ತ್ರಗಳನ್ನಿಡಿದು ರಸ್ತೆಗಳಲ್ಲಿ ಅಡ್ಡಾಡುತ್ತಿದೆ. ಬಂದೂಕು ಸೇರಿದಂತೆ ಕೆಲವು ಶಸ್ತ್ರಾಸ್ತ್ರಗಳನ್ನು ಕೈಯಲ್ಲಿಡಿದು ರಸ್ತೆಯಲ್ಲೇ ಓಡಾಡುತ್ತಿರುವ ಈ ಹಿಂಸಾಚಾರಿಗಳು, ಸಿಕ್ಕ ಸಿಕ್ಕ ಅಮಾಯಕರ ಮೇಲೆ ಗುಂಡು ಹಾರಿಸಿ ಕೊಲ್ಲುತ್ತಿದ್ದಾರೆ. ಇದ್ರಿಂದ ಆಫ್ರಿಕಾದ ಕೆಲ ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದ್ದು, ಜನ ಊಟ-ತಿಂಡಿಯಿಲ್ಲದೆ ಕಂಗಾಲಾಗಿದ್ದಾರೆ. ಇನ್ನೂ ಹಲವು ಕಡೆ ರಸ್ತೆಗಳು ಕೂಡ ಬಂದ್ ಆಗಿರುವುದರಿಂದ ಜನರು ಅಗತ್ಯ ವಸ್ತುಗಳನ್ನು ತರಲಾರದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಔಷಧ ಅಂಗಡಿಗಳಿಗೆ ಬೆಂಕಿ ಇಟ್ಟ ಗಲಭೆಕೋರರು
78 ಆರೋಗ್ಯ ಕೇಂದ್ರಗಳು ಹಿಂಸಾಚಾರಕ್ಕೆ ಬಲಿ

ಆಫ್ರಿಕಾದಲ್ಲಿ ಹಿಂಸಾಚಾರ ಕಡ್ಮೆಯಾಗ್ತಿಲ್ಲ, ಮಕ್ಕಳಿಗೆ ಹಾಲು-ಆಹಾರ ಸಿಗ್ತಿಲ್ಲ. ರೋಗಿಗಳಿಗೆ ಚಿಕಿತ್ಸೆ ಸಿಗ್ತಿಲ್ಲ, ಸಂಕಷ್ಟದಲ್ಲಿವರರಿಗೆ ಆಹಾರ ತಲುಪುತ್ತಿಲ್ಲ, ಜನರಿಗೆ ಮನೆಯಿಂದ ಹೊರ ಬರಲಾಗ್ತಿಲ್ಲ ಇದು ಸದ್ಯದ ಆಫ್ರಿಕಾದ ಪರಿಸ್ಥಿತಿ. ಕೊರೊನಾ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲೇ ಹಿಂಸಾಚಾರ ಮುಗಿಲು ಮುಟ್ಟಿರುವುದರಿಂದ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದ ಕಾರಣ ನೂರಾರು ಜನರು ಸಾವಿನ ಮನೆ ಸೇರಿದ್ದಾರೆ. ಭೀಕರ ಹಿಂಸಾಚಾರದಲ್ಲಿ ಈಗಾಗಲೇ 78 ಔಷಧ ಅಂಗಡಿಗಳು ಕೂಡ ಬಲಿಯಾಗಿ ಹೋಗಿವೆ.

ಇಂತಹ ಅದೆಷ್ಟೋ ಬೃಹತ್​​ ಅಂಗಡಿಗಳು, ಮಾಲ್​ಗಳು ಇದೇ ಗಲಭೆಕೋರರ ಕೆಂಗಣ್ಣಿಗೆ ಗುರಿಯಾಗಿ ಇಂದು ನಾಶವಾಗಿ ಹೋಗಿದೆ. ಅಲ್ಲಿದ್ದ ವಸ್ತುಗಳೆಲ್ಲಾ ಈ ಹಿಂಸಾಚಾರಿಗಳ ಮನೆ ಸೇರ್ಕೊಂಡು ಬಿಟ್ಟಿದೆ. ಪರಿಣಾಮ ಆಫ್ರಿಕಾದಲ್ಲಿ ಮತ್ತೆ ಆಹಾರದ ಕೊರತೆ ಎದುರಾಗಿದೆ. ಮತ್ತೆ ಸಾವಿರಾರು ಜನರು ಆಹಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲಾದ್ರೂ ದಿನಬಳಕೆಯ ವಸ್ತುಗಳು ಸಿಗುತ್ತೆ ಅನ್ನೋ ವಿಷ್ಯಾ ಸಿಕ್ಕಿದ್ರೆ ಸಾಕು ಜನರು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ಕ್ಯೂ ನಿಲ್ಲುತ್ತಿದ್ದಾರೆ. ಗಂಟೆಗಟ್ಟಲೇ ಆಹಾರಕ್ಕೆ ಕ್ಯೂ ನಿಂತರೂ ಜನರು ಆಹಾರ ಸಿಗದೆ ನಿರಾಸೆ ಗೊಂಡಿದ್ದಾರೆ. ಇದ್ರಿಂದ ಆಫ್ರಿಕಾದಲ್ಲಿ ಮತ್ತೊಮ್ಮೆ ಭೀಕರ ಹಸಿವಿನ ಸನ್ನಿವೇಶ ಸೃಷ್ಟಿಯಾಗುವ ಸಾಧ್ಯತೆ ಇದೆ.

ಭೀಕರ ಹಿಂಸಾಚಾರಕ್ಕೆ ನಡುಗಿದ ದಕ್ಷಿಣ ಆಫ್ರಿಕಾ
ಗಲಭೆಯ ವೇಳೆ 300ಕ್ಕೂ ಅಧಿಕ ಜನರು ಸಾವು
ಹಿಂಸಾಚಾರಕ್ಕೆ ಬಲಿಯಾದ್ರಾ 70 ಭಾರತೀಯರು

ಆಫ್ರಿಕಾದ ಡರ್ಬನ್ ನಲ್ಲಿ ಶತಮಾನಗಳ ಹಿಂದೆ ಬಂದು ವ್ಯಾಪಾರದ ಮೂಲಕ ಬದುಕು ಕಟ್ಟಿಕೊಂಡಿರುವ ಭಾರತೀಯರು ಕೂಡ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಫ್ರಿಕಾದಲ್ಲಿ ಇದುವರೆಗೆ 300 ಕ್ಕೂ ಅಧಿಕ ಜನರು ಸಾವನಪ್ಪಿದ್ದು, ಇದ್ರಲ್ಲಿ 70 ಕ್ಕೂ ಅಧಿಕ ಭಾರತೀಯರು ಕೂಡ ಸೇರಿದ್ದಾರೆ ಎನ್ನಲಾಗಿದೆ. ಹೆಜ್ಜೆ ಹೆಜ್ಜೆಗೂ ಜನರಲ್ಲಿ ಭಯ ಕಾಡ್ತಿದ್ದು, ಯಾವ ಸಂದರ್ಭದಲ್ಲಿ ಏನು, ಅಪಾಯ ಕಾದಿದ್ಯೋ ಎಂಬ ಭಯದಲ್ಲಿ ಜನರು ಬದುಕುತ್ತಿದ್ದಾರೆ.

ಆಫ್ರಿಕಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಯಾಕೆ..?
ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಬಂಧನವೇ ದಕ್ಷಿಣ ಆಫ್ರಿಕಾದಲ್ಲಿ ಗಲಭೆಗೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ತವರು ಪ್ರಾಂತ್ಯ ಕ್ವಾಝುಲು ನಟಾಲ್ನಲ್ಲಿ ಹುಟ್ಟಿಕೊಂಡ ಗಲಭೆ ಎಪ್ಯುಮಲಂಗಾ, ಗೌಟೆಂಗ್, ಕ್ವಾಝುಲು ನಟಾಲ್ ಸೇರಿದಂತೆ ಒಂದೊಂದೆ ಪ್ರದೇಶಗಳಿಗೆ ವ್ಯಾಪಿಸಿದೆ. ಒಂದು ಕಡೆ ಹಿಂಸಾಚಾರ ನಿಯಂತ್ರಣಕ್ಕೆ ಬಂತು ಅಂತ ನಿಟ್ಟುಸಿರುವ ಬಿಡುವಾಗಲೇ ಮತ್ತೊಂದು ಕಡೆ ಹಿಂಸಾಚಾರ ಆರಂಭವಾಗಿರುತ್ತೆ.

ಪ್ರತಿಭಟನಕಾರರು ಹಿಂಸಾತ್ಮಕ ರೂಪ ತಾಳಿದ್ದರಿಂದ ಹಿಂಸಾಚಾರಗಳು ಕೂಡ ಹೆಚ್ಚಾಗುತ್ತಿವೆ. ಪ್ರತಿಭಟನೆಯ ಹೆಸರಲ್ಲಿ ನಡೆಯುತ್ತಿರುವ ಗಲಭೆಯನ್ನು ನಿಯಂತ್ರಿಸಲು ಮಿಲಿಟರಿ ಪಡೆ ಕೂಡ ಎಂಟ್ರಿ ಕೊಟ್ಟಿದೆ. ಸ್ಥಳೀಯ ಪೊಲೀಸರು ಮತ್ತು ಮಿಲಿಟರಿ ಪಡೆ ಎಷ್ಟೇ ಹರಸಾಹಸ ಪಟ್ಟರೂ ಕೂಡ, ಗಲಭೆ ಮಾತ್ರ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಒಟ್ಟಿನಲ್ಲಿ ಪ್ರತಿಭಟನೆಯ ಸೋಗಿನಲ್ಲಿ ಕೆಲ ಕಿಡಿಗೇಡಿಗಳು ಎಸಗಿದ ಕೃತ್ಯದಿಂದ ಆಫ್ರಿಕಾ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಜನರು ಮತ್ತೆ ಹಸಿವಿನಿಂದ ದಿನದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗಲಭೆಯನ್ನು ನಿಯಂತ್ರಣ ಮಾಡದೇ ಹೋದಲ್ಲಿ,ಆಫ್ರಿಕಾ ಮತ್ತೊಮ್ಮೆ ಭೀಕರ ದುರಂತವನ್ನು ಎದುರಿಸುವುದು ಪಕ್ಕಾ.

The post ಆಫ್ರಿಕಾದಲ್ಲಿ ಪ್ರತಿಭಟನೆಯ ಸೋಗಿನಲ್ಲಿ ಹಿಂಸಾಚಾರ.. 70 ಕ್ಕೂ ಹಚ್ಚು ಭಾರತೀಯರೂ ಬಲಿ..? appeared first on News First Kannada.

Source: newsfirstlive.com

Source link