ಬಾಲಿವುಡ್‌ನ ಮಿಸ್ಟರ್‌ ಪರ್ಫೆಕ್ಟ್‌  ಅಮೀರ್‌ ಖಾನ್‌ ತಮ್ಮ 15 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಅಮೀರ್‌ ಸಿನಿಮಾದಲ್ಲಿ ಫರ್ಪೆಕ್ಟ್‌ ಆಗಿದ್ರೂ ವಿವಾಹ ಜೀವನದಲ್ಲಿ ಎಡವಿದ್ದಾರೆ.

ಇಂದು ಖ್ಯಾತ ನಟನಾಗಿ ಗುರುತಿಸಿಕೊಂಡಿರೋ ಅಮೀರ್‌ ಖಾನ್‌ ಬಾಲಿವುಡ್‌ ಅಂಗಳಕ್ಕೆ ಬಂದಿದ್ದು 1973ರಲ್ಲಿ. ಅಂದಿನಿಂದ ಇಂದಿನವರೆಗೆ ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ನಟ, ಅಳೆದು ತೂಗಿ ಚಿತ್ರಕಥೆ ಆಯ್ಕೆ ಮಾಡಿಕೊಳ್ಳುವ ವ್ಯಕ್ತಿ. ಯಾವುದೇ ಪಾತ್ರವಾದರೂ ಪರಕಾಯ ಪ್ರವೇಶ ಮಾಡಿ ನ್ಯಾಯ ಒದಗಿಸುವ ವ್ಯಕ್ತಿತ್ವ. ಮಿಸ್ಟರ್‌ ಫರ್ಪೆಕ್ಟ್‌ ಅಮೀರ್‌ ಬಾಲಿವುಡ್‌ ಪ್ರವೇಶ ಮಾಡಿದ ನಾಲ್ಕೈದು ವರ್ಷದ ಅಂತರದಲ್ಲಿಯೇ ಶಾರುಖ್‌ ಖಾನ್‌, ಸಲ್ಮಾನ್‌ ಖಾನ್‌, ಅಜಯ್‌ ದೇವಗನ್‌, ಅಕ್ಷಯ್‌ ಕುಮಾರ್‌ ಅವರಂಥ ದಿಗ್ಗಜ ನಟರ ಪ್ರವೇಶವೂ ಆಗುತ್ತೆ.

ಒಂದು ಅದ್ಭುತ ಸ್ಪರ್ಧೆಯಲ್ಲಿ ವಿಭಿನ್ನ ಚಿತ್ರಕಥೆ ಆಯ್ಕೆ ಮಾಡಿಕೊಂಡು ಪ್ರೇಕ್ಷಕರನ್ನು ಹಿಡಿದುಕೊಂಡವರು ಅಮೀರ್‌ ಖಾನ್‌. ಹೀಗಾಗಿಯೇ ವರ್ಷಕ್ಕೊ ಎರಡು ವರ್ಷಕ್ಕೋ ಒಮ್ಮೆ ಅಮೀರ್‌ ಚಿತ್ರ ಬಿಡುಗಡೆಯಾದರೂ ಜನ ಮುಗಿಬಿದ್ದು ನೋಡುತ್ತಾರೆ. ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಮೇಲೆ ದಾಖಲೆ ನಿರ್ಮಿಸುತ್ತೆ. ಬಾಲವುಡ್‌ನಲ್ಲಿ ಅಷ್ಟೊಂದು ಫರ್ಪೆಕ್ಟ್‌ ಆಗಿರೋ ಅಮೀರ್‌ ವೈವಾಹಿಕ ಜೀವನದಲ್ಲಿ ಎರಡನೇ ಬಾರಿ ಎಡವಿದ್ದಾರೆ.

ಕಿರಣ್‌ ರಾವ್‌ ಜೊತೆ ವಿಚ್ಛೇದನ
2015ರಲ್ಲಿ ವಿವಾಹವಾದ ಬಾಲಿವುಟ್‌ ನಟ ಅಮೀರ್‌ ಖಾನ್‌ ಮತ್ತು ಕಿರಣ್‌ ರಾವ್‌ ಶನಿವಾರ ಜಂಟಿಯಾಗಿ ವಿಚ್ಛೇದನ ಬಹಿರಂಗಪಡಿಸಿದ್ದಾರೆ. ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದ್ದೇವೆ. 15 ವರ್ಷದ ದಾಂಪತ್ಯ ಜೀವನದಲ್ಲಿ ಅನೇಕ ಕಷ್ಟ ಸುಖ ಅನುಭವಿಸಿದ್ದೇವೆ. ಆದ್ರೆ, ನಾವು ಈಗ ಇಬ್ಬರೂ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಇನ್ಮೇಲೆ ನಾವು ಪತಿ, ಪತ್ನಿ ಆಗಿ ಮುಂದುವರಿಯುವುದಿಲ್ಲ. ಆದ್ರೆ, ನಮ್ಮ ಪುತ್ರನಿಗೆ ಪೋಷಕರಾಗಿ ಮುಂದುವರಿಯುತ್ತೇವೆ. ನಾವು ನಮ್ಮ ಕುಟುಂಬದ ಜೊತೆ ಇರುತ್ತೇವೆ….ಅಂತ ಹೇಳಿಕೆ ನೀಡುವ ಮೂಲಕ ವಿಚ್ಛೇದನ ಘೋಷಣೆ ಮಾಡಿದ್ದಾರೆ. ಬಹುಶಃ ಯಾವುದೇ ಬಾಲಿವುಡ್‌ ಅಭಿಮಾನಿ ಕೂಡ ಈ ಡಿವೋರ್ಸ್‌ ನಿರೀಕ್ಷೆ ಮಾಡಿರಲಿಲ್ಲ. ಅಂತಹ ಒಂದು ಶಾಕಿಂಗ್‌ ಸುದ್ದಿ ಬಿಟೌನ್‌ನಲ್ಲಿ ಸ್ಫೋಟವಾಗಿದೆ.

ಲಗಾನ್‌ ಚಿತ್ರದ ವೇಳೆ ಚಿಗುರೊಡೆದಿತ್ತು ಪ್ರೀತಿ
ಕಿರಣ್‌ ನೋಡಿ ಮನಸೋತಿದ್ದ ಅಮೀರ್‌

ಅದು, 2000ನೇ ವರ್ಷದ ವೇಳೆ ನಡೆಯುತ್ತಿದ್ದ ಲಗಾನ್‌ ಚಿತ್ರದ ಶೂಟಿಂಗ್‌, ಹೀರೋ ಆಗಿ ಅಮೀರ್‌ ಖಾನ್ ಅಭಿನಯ ಮಾಡ್ತಾ ಇರ್ತಾರೆ. ವಿಶೇಷ ಅಂದ್ರೆ ಇದೇ ಚಿತ್ರಕ್ಕೆ ಅಮೀರ್‌ ಖಾನ್‌ ಮೊದಲ ಪತ್ನಿ ರೀಯಾ ದತ್‌ ಸಹನಿರ್ಮಾಪಕಿಯಾಗಿ ಕೆಲಸ ಮಾಡ್ತಾ ಇರ್ತಾರೆ. ನಿರ್ದೇಶಕ ಅಶುತೋಷ್‌ ಗೋವಾರಿಕರ್‌ಗೆ ಆ್ಯಕ್ಷನ್‌ ಕಟ್‌ ಹೇಳುವ ಕೆಲಸ ಆಗಿರುತ್ತೆ. ಆದ್ರೆ, ಅಲ್ಲೊಬ್ಬಳು ಬೆಂಗಳೂರು ಮೂಲದ ಚೆಲುವೆ ಸಿನಿಮಾ ಸೆಟ್‌ನಲ್ಲಿ ಇರ್ತಾಳೆ. ಆಕೆಯ ಕೆಲಸ ಸಹನಿರ್ದೇಶನವಾಗಿತ್ತೆ. ಆಕೆ ಬೇರೆಯಾರೂ ಅಲ್ಲ, ಇಂದು ಅಮೀರ್‌ ಖಾನ್‌ ಜೊತೆ ವಿಚ್ಛೇದನ ಮಾಡಿಕೊಳ್ತಾ ಇರೋ ಕಿರಣ್‌ ರಾವ್‌. ಹೌದು, ಅವರಿಬ್ಬರ ಮೊದಲ ಭೇಟಿಯಾಗಿದ್ದು, ಆ ಭೇಟಿ ಪ್ರೇಮಕ್ಕೆ ತಿರುಗಿದ್ದು ಲಗಾನ್‌ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ.

ನಾಲ್ಕು ವರ್ಷ ಹರಿದಾಡ್ತಾ ಇತ್ತು ಗಾಸಿಪ್‌
ಬಾಲಿವುಡ್‌ ಅಂಗಳದಲ್ಲಿ ಕೈಕೈ ಹಿಡಿದು ಓಡಾಟ

ಲಗಾನ್‌ ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರ ನಡುವೆ ಪ್ರೀತಿ ಹುಟ್ಟುತ್ತೆ. ಮೇಲೆ ಕೈಕೈ ಹಿಡಿದು ಓಡಾಡಲು ಆರಂಭಿಸಿ ಬಿಡ್ತಾರೆ. ಇದೇ ಸಮಯದಲ್ಲಿ ಅಂದ್ರೆ 2002ರಲ್ಲಿ ಅಮೀರ್‌ ಖಾರ್‌ ಮೊದಲ ಪತ್ನಿ ರೀಯಾ ದತ್‌ಗೆ ವಿಚ್ಛೇದನ ನೀಡುತ್ತಾರೆ. ಯಾವುದೇ ಪಾರ್ಟಿ, ಸಿನಿಮಾ ಕಾರ್ಯಕ್ರಮ ಇದ್ರೂ ಅದಲ್ಲಿ ಅಮೀರ್‌, ಕಿರಣ್‌ ಜೊತೆಯಾಗಿಯೇ ಇರ್ತಾ ಇದ್ರು. ಅಂದು, ಬಾಲಿವುಡ್‌ ಅಂಗಳಲ್ಲಿ ದೊಡ್ಡ ಗಾಸಿಪ್‌ ಅಂದ್ರೆ ಅದು ಅಮೀರ್‌, ಕಿರಣ್‌ ನಡುವಿನದಾಗಿತ್ತು. ಆದ್ರೆ, ತಾವು ಪ್ರೀತಿಸುತ್ತಿದ್ದೇವೆ ಅಂಥ ಈ ಜೋಡಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಅಂತೂ ಅಂತಿಮವಾಗಿ 2005ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತೆ.

15 ವರ್ಷ ದಾಂಪತ್ಯ ಜೀವನ ನಡೆಸಿದ ಜೋಡಿ
ಡಿವೋರ್ಸ್‌ ದಿಢೀರ್‌ ನಿರ್ಧಾರ ಅಲ್ಲವೇ ಅಲ್ಲ

ವಿವಾಹದ ನಂತರ ಈ ಜೋಡಿ 15 ವರ್ಷಗಳ ಕಾಲ ಜೊತೆಯಾಗಿಯೇ ಜೀವನ ನಡೆಸಿದ್ದಾರೆ. ಕಷ್ಟ ಸುಖವನ್ನು ಸಮಾನವಾಗಿ ಸ್ವೀಕರಿಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಸೋಲು ಗೆಲುವು ಅನುಭವಿಸಿದ್ದಾರೆ. ಅಮೀರ್‌ ಖಾನ್‌ ಅಭಿನಯ ಮಾಡ್ತಾ ಇದ್ರೆ, ಕಿರಣ್‌ ರಾವ್‌ ನಿರ್ಮಾಪಕರಾಗಿ ಕೆಲಸ ಮಾಡ್ತಾ ಇದ್ರು. ಸ್ವತಃ ಅಮೀರ್‌ ಅಭಿನಯದ ದಂಗಲ್‌, ತಲಾಶ್‌, ಧೋಬಿ ಘಾಟ್‌ ಸೇರಿದಂತೆ 8 ಚಿತ್ರಗಳಲ್ಲಿ ಕಿರಣ್‌ ರಾವ್‌ ಅವರೇ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ನೋಡುಗರ ಕಣ್ಣಿಗೆ ಈ ಜೋಡಿ ಅನ್ಯೂನ್ಯವಾಗಿಯೇ ಇತ್ತು. ಸಿನಿಮಾಗೆ ಸಂಬಂಧಿಸಿದ ವಿವಾದಗಳು ಅಮೀರ್‌ ಖಾತ್‌ ಸುತ್ತ ಸುತ್ತುತ್ತಿದ್ದರೂ ವೈವಾಹಿಕ ಜೀವನದಲ್ಲಿ ಎಂಟ್ರಿ ಆಗಿರಲಿಲ್ಲ. ಆದ್ರೆ, ದಂಗಲ್‌ ಸಿನಿಮಾದಲ್ಲಿ ಒಂದು ಕಿಡಿ ಹತ್ತಿಕೊಂಡಿತ್ತು.

ದಂಗಲ್‌ ಸಿನಿಮಾದಲ್ಲಿ ಹತ್ತಿದ ಕಿಡಿ ಏನು?
ಮತ್ತೊಬ್ಬಳ ಪ್ರೀತಿಗೆ ಬಿದ್ರಾ ಅಮೀರ್‌ ಖಾನ್‌?

ಅದು, ಕುಸ್ತಿಪಟುಗಳಾದ ಪೋಗಟ್‌ ಫ್ಯಾಮಿಲಿ ಕಥೆಯನ್ನು ಹೊಂದಿರೋ ಸಿನಿಮಾವಾಗಿರುತ್ತೆ. ಅಲ್ಲಿ ತನ್ನ ಮಕ್ಕಳಿಗೆ ಕುಸ್ತಿ ತರಬೇತಿ ನೀಡಿ ಅಂತಾರಾಷ್ಟ್ರೀಯ ಪದಕ ಗೆಲ್ಲುವಂತೆ ಮಾಡುವ ಪಾತ್ರ ಅಮೀರ್‌ ಖಾನ್‌ ಅವರದ್ದಾಗಿರುತ್ತೆ. ಈ ಸಿನಿಮಾ 2016ರಲ್ಲಿ ಬಿಡುಗಡೆಯಾಗುತ್ತೆ. ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ. ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯುತ್ತೆ. ಸರಿಸುಮಾರು ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡಿದೆ ಎನ್ನುತ್ತೆ ಬಾಲಿವುಡ್‌. ಆದ್ರೆ, ಆ ಸಿನಿಮಾದ ಶೂಟಿಂಗ್‌ ಸಂದರ್ಭದಲ್ಲಿಯೇ ಅಮೀರ್‌ ದಾಂಪತ್ಯ ಜೀವನಕ್ಕೆ ಒಂದು ಕಿಡಿ ಹತ್ತಿಕೊಂಡಿತ್ತು. ಅದೇ ಕಿಡಿ ಇಂದು ಅಮೀರ್‌ ಖಾನ್‌ ವಿಚ್ಛೇದನಕ್ಕೆ ಕಾರಣ ಆಯ್ತಾ ಅನ್ನೋ ಅನುಮಾನ ಹರಿದಾಡ್ತಾ ಇದೆ.

ಅಮೀರ್‌ ಖಾನ್‌ ಮನಸ್ಸು ಕದ್ದವಳು ಯಾರು?
ಬಾಲಿವುಡ್‌ ಅಂಗಳದಲ್ಲಿ ಹರಿದಾಡಿದ ಸುದ್ದಿ ಏನು?
ಆರಂಭದಲ್ಲಿ ಕದ್ದು ಮುಚ್ಚಿ ಓಡಾಡಿದ್ದು ಯಾಕೆ?

ಈ ನಟಿಯನ್ನೊಮ್ಮೆ ನೋಡಿ, ಈಕೆಯ ಹೆಸರು ಫಾತಿಮಾ ಸನಾ ಶೇಖ್‌. ಇಂದು ಬಾಲಿವುಡ್‌ನಲ್ಲಿ ಆರಕ್ಕೇರಿದ ನಟಿ ಆಗಿರದಿದ್ದರೂ ಮೂರಕ್ಕೆ ಬಿದ್ದಿಲ್ಲ. ದಂಗಲ್‌ ಸಿನಿಮಾದಲ್ಲಿ ಈಕೆಯದ್ದು ಗೀತಾ ಪೋಗಟ್‌ ಪಾತ್ರವಾಗಿರುತ್ತೆ. ಅಂದ್ರೆ, ಆ ಚಿತ್ರದಲ್ಲಿ ಈಕೆಗೆ ಅಮೀರ್‌ ಖಾನ್‌ ತಂದೆ ಆಗಿರುತ್ತಾರೆ. ಮತ್ತೊಂದು ವಿಶೇಷ ಅಂದ್ರೆ ಇದೇ ಚಿತ್ರಕ್ಕೆ ಕಿರಣ್‌ ರಾವ್‌ ನಿರ್ಮಾಪಕಿ ಆಗಿರುತ್ತಾಳೆ. ಶೂಟಿಂಗ್‌ ನಂತರ ಅಮೀರ್‌ ಮತ್ತು ಫಾತಿಮಾ ಕದ್ದುಮುಚ್ಚಿ ಓಡಾಡಲು ಆರಭಿಸುತ್ತಾರೆ. ಆದ್ರೆ, ಬಾಲಿವುಡ್‌ನಲ್ಲಿ ಎಷ್ಟು ದಿನ ಅಂತ ಕದ್ದು ಮುಚ್ಚಿ ಓಡಾಡಲು ಸಾಧ್ಯ ಹೇಳಿ. ಅಂತೂ ಕ್ಯಾಮರಾ ಕಣ್ಣಲ್ಲಿಯೂ ಸೇರೆಯಾಗಿ ಬಿಡ್ತಾರೆ. ಗಾಸಿಪ್‌ ಕಾಲಂನಲ್ಲಿ ಈ ಇಬ್ಬರು ಸತತವಾಗಿ ಕಾಣಿಸಿಕೊಳ್ಳುತ್ತಾರೆ. ಕಿರಣ್‌ ರಾವ್‌ ಕೂಡ ಅಮೀರ್‌ ಮೇಲೆ ಅಸಮಾಧಾನಗೊಳ್ಳುತ್ತಾರೆ. ಆದ್ರೆ, ಎಲ್ಲವೂ ಗಪ್‌ಚುಪ್‌ ಆಗಿಯೇ ನಡೆಯುತ್ತಿರುತ್ತೆ.

ಈ ಮುನ್ನವೇ ನಡೆದಿತ್ತಾ ಬ್ರೇಕ್‌ ಅಪ್‌ ಯತ್ನ
ಮತ್ತೆ ಪ್ಯಾಚ್‌ ಅಪ್‌ ಮಾಡಿಕೊಂಡಿದ್ದು ಯಾಕೆ?

ಹೌದು, ದಂಗಲ್‌ ಸಿನಿಮಾದಲ್ಲಿ ಹುಟ್ಟಿಕೊಂಡ ಗಾಸಿಪ್‌ ಅಮೀರ್‌ ಖಾನ್‌ ಸಂಸಾರದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿ ಬಿಡುತ್ತೆ. ಅಮೀರ್‌ ಮತ್ತು ಕಿರಣ್‌ ನಡುವೆ ಬಿರುಕು ಮೂಡಿಸುತ್ತೆ. ಈ ಜೊಡಿ ವಿಚ್ಛೇದನ ಪಡೆಯುತ್ತೆ ಅಂತ ಬಾಲಿವುಡ್‌ನ ಗಲ್ಲಿ ಗಲ್ಲಿಯಲ್ಲಿಯೂ ಹರಿದಾಡುತ್ತೆ. ಅಭಿಮಾನಿಗಳು ಭಾರೀ ಕುತೂಹಲದಲ್ಲಿಯೇ ನೋಡುತ್ತಾರೆ. ಆದ್ರೆ, ನಿಧಾನಕ್ಕೆ ಆ ಸುದ್ದಿ ತಣ್ಣಗಾಗಿ ಬಿಡುತ್ತೆ. ಮತ್ತೆ ಅಮೀರ್‌ ಮತ್ತು ಕಿರಣ್‌ ಜೊತೆಯಾಗಿಯೇ ಕಾಣಿಸುತ್ತಾರೆ. ಸಿನಿಮಾ ಕಾರ್ಯಕ್ರಮ, ಪಾರ್ಟಿಗಳಲ್ಲಿ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಗಾಸಿಪ್‌ಗೆ ತೆರೆ ಬೀಳುತ್ತೆ.

ಇತ್ತೀಚೆಗೆ ಮತ್ತೆ ಗುಸುಗುಸು ಆರಂಭ
ಕೊನೆಗೂ ಡಿವೋರ್ಸ್‌ ನಿರ್ಧಾರ ಮಾಡಿದ್ರು

ಒಮ್ಮೆ ಬ್ರೇಕ್‌ ಅಪ್‌ ಹಂತಕ್ಕೆ ಹೋಗಿ ತಣ್ಣಗಾಗಿದ್ದ ವಿವಾದ ಇತ್ತೀಚೆಗೆ ಮತ್ತೆ ಎದ್ದಿತ್ತು. ಅಮೀರ್‌ ಖಾನ್‌ ವಿಚ್ಛೇದನ ಪಡೆಯುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿತ್ತು. ಇಂತಹ ಗಾಸಿಪ್‌ ಸುದ್ದಿಗಳು ಹರಿದಾಡುತ್ತಿರುವಾಗಲೇ ಶನಿವಾರ ಇಬ್ಬರೋ ಸೇರಿ ಡಿವೋರ್ಸ್‌ ಪಡೆಯುವುದಾಗಿ ಘೋಷಣೆ ಮಾಡಿ ಬಿಟ್ಟಿದ್ದಾರೆ.

ಮಗನ ಜವಾಬ್ದಾರಿ ಯಾರ ಹೆಗಲಿಗೆ?
ಬಾಲಿವುಡ್‌ನಲ್ಲಿ ಮತ್ತೊಂದು ದುಬಾರಿ ವಿಚ್ಛೇದನ ಘೋಷಣೆಯಾಗಿದೆ. ತಾವು ಪರಸ್ಪರ ಒಟ್ಟಿಗೆ ಜೀವನ ಮಾಡಲ್ಲ ಅಂತ ಹೇಳಿ ಬಿಟ್ಟಿದ್ದಾರೆ. ಆದ್ರೆ, ಈ ಜೋಡಿಗೆ ಒಬ್ಬನೇ ಮಗನಿದ್ದಾನೆ. ಆತ ಅಝಾದ್‌ ರಾವ್‌ ಖಾನ್‌. ಈಗ ಆತನಿಗೆ 10 ವರ್ಷ. ತಾರಾ ಜೋಡಿ ಡಿವೋರ್ಸ್‌ ಪಡೆದರೆ ಮಗನನ್ನು ನೋಡಿಕೊಳ್ಳೋರು ಯಾರು ಅನ್ನೋ ಪ್ರಶ್ನೆ ಬರೋದು ಸಹಜ. ಆದ್ರೆ, ಈ ಜೋಡಿ ವಿಚ್ಛೇದನ ಘೋಷಣೆ ಮಾಡುವಾಗಲೇ ತಮ್ಮ ಮಗನಿಗೆ ಪೋಷಕರಾಗಿ ಮುಂದುವರಿಯುತ್ತೇವೆ ಅಂತ ತಿಳಿಸಿದ್ದಾರೆ. ಕಾನೂನಾತ್ಮಕವಾಗಿ ಹೋದರೆ ಮಗ ಕಿರಣ್‌ ರಾವ್‌ ಜೊತೆಗೆ ಇರಬೇಕಾಗುತ್ತದೆ. ಆದ್ರೆ, ಪತಿ, ಪತ್ನಿ ಯಾವ ರೀತಿಯ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಅನ್ನೋದರ ಮೇಲೆ ನಿರ್ಧಾರ ಆಗುತ್ತೆ.

ಟ್ರೆಂಡಿಂಗ್‌ ಆದ ವಿಚ್ಛೇದನ ಬಹಿರಂಗ

ಶನಿವಾರ ಬೆಳಗ್ಗೆ ಅಮೀರ್‌ ಖಾನ್‌, ಕಿರಣ್‌ ರಾವ್‌ ತಮ್ಮ 15 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಲೇ ಇತ್ತ ಸಾಮಾಜಿಕ ಜಾಲತಾಣದಲ್ಲಿ ವಿಷಯ ಟ್ರೆಂಡಿಂಗ್‌ ಆಗಿ ಬಿಡುತ್ತೆ. ಕೆಲವರು ಬಾಲಿವುಡ್‌ ಹಣೆ ಬರಹವೇ ಇಷ್ಟು, ಅಲ್ಲಿ ವೈವಾಹಿಕ ಜೀವನಕ್ಕೆ ಬೆಲೆ ಇಲ್ಲ ಅಂತ ಪ್ರತಿಕ್ರಿಯಿಸಿದ್ದರೆ, ಮತ್ತೆ ಕೆಲವರು ಅಮೀರ್‌ ಖಾನ್‌ ನಿರ್ಧಾರ ಸ್ವಾಗತಿಸಿದ್ದಾರೆ. ಈ ನಡುವೆ ದಂಗಲ್‌ ನಟಿ ಫಾತಿಮಾ ಸನಾ ಶೇಖ್‌ ಮಾತ್ರ ಫುಲ್‌ ಟ್ರೋಲ್‌ ಆಗಿದ್ದಾರೆ. ಅಮೀರ್‌, ಕಿರಣ್‌, ಫಾತಿಮಾ ಮೂವರು ಒಂದೇ ಫ್ರೇಮ್‌ನಲ್ಲಿರುವ ಫೋಟೋ ಇಟ್ಟುಕೊಂಡು ಟ್ರೋಲ್‌ ಮಾಡಲಾಗಿದೆ.

ಅಮೀರ್‌ ಡಿವೋರ್ಸ್‌ ಬಗ್ಗೆ ಫಾತಿಮಾ ಏನಂದ್ರು?
ಅಮೀರ್‌ ಖಾನ್‌ ದಾಂಪತ್ಯ ಜೀವನ ಮುರಿದು ಬೀಳಲು ನಟಿ ಫಾತಿಮಾ ಕಾರಣ ಅನ್ನೋದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದಂತೆ ಫಾತಿಮಾ ಪ್ರತಿಕ್ರಿಯೆ ನೀಡಿದ್ದಾರೆ. ದಯವಿಟ್ಟು ಹಾಗೆ ಬರೆಯಬೇಡಿ, ಅದು ತನ್ನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಬರವಣಿಗೆ ಸತ್ಯ ಇಲ್ಲದಿದ್ದರೂ ಓದುಗರು ಅದೇ ಸತ್ಯ ಅಂತ ತಿಳಿದುಕೊಳ್ಳುತ್ತಾರೆ. ನನ್ನನ್ನು ಕೆಟ್ಟ ವ್ಯಕ್ತಿ ಅಂತ ತಿಳಿಯುತ್ತಾರೆ. ನನ್ನನ್ನು ಕೇಳಿದರೆ ನಾನೇ ನೇರವಾಗಿ ಉತ್ತರ ನೀಡುತ್ತೇನೆ. ಅವರ ಡಿವೋರ್ಸ್‌ನಲ್ಲಿ ನನ್ನ ಯಾವ ಪಾತ್ರವೂ ಇಲ್ಲ ಅಂತ ಹೇಳಿದ್ದಾರೆ.

ಪ್ರಿಯಾ ವಾರಿಯರ್‌ ಜೊತೆಗೂ ಗಾಸಿಪ್‌?
ಹೌದು, ಕಣ್‌ ಸನ್ನೆಯ ಹುಡ್ಗಿ ಪ್ರಿಯಾ ವಾರಿಯರ್‌, ನಟ ಅಮೀರ್‌ ಖಾನ್‌ ನಡುವೆ ಗಾಸಿಪ್‌ ಹರಿದಾಡಿದೆ. ಇಬ್ಬರೂ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದ್ದವು. ಆದ್ರೆ, ದಂಗಲ್‌ ನಟಿ ಜೊತೆ ಇದ್ದ ಗಾಸಿಪ್‌ ಅಷ್ಟು ಈ ವಿಷಯ ಸದ್ದು ಮಾಡಿಲ್ಲ.

ಅಮೀರ್‌ಗೆ ಬಾಲವುಡ್‌ನಲ್ಲಿ ಎಷ್ಟೇ ಫರ್ಪೆಕ್ಟ್‌ ಆಗಿದ್ರೂ ದಾಂಪತ್ಯ ಜೀವನದಲ್ಲಿ ಅಷ್ಟೇ ಫರ್ಪೆಕ್ಟ್‌ ಆಗಿರಲು ಸಾಧ್ಯ ಆಗಿಲ್ಲ. ಸ್ಟಾರ್‌ ನಟರ ವಿಚ್ಛೇದನ ಲೀಸ್ಟ್‌ನಲ್ಲಿ ಇದೀಗ ಅಮೀರ್‌ ವಿಚ್ಛೇದನವು ಸೇರುತ್ತಿದೆ.

The post ಆಮಿರ್ ದಾಂಪತ್ಯ ಜೀವನ ಅಂತ್ಯ.. ವಿಚ್ಛೇದನಕ್ಕೆ ಕಾರಣ ಏನು? appeared first on News First Kannada.

Source: newsfirstlive.com

Source link