ಬೆಂಗಳೂರು: ಬ್ಯಾಟರಾಯನಪುರ ಎಪಿಎಂಸಿ ಮಾರ್ಕೆಟ್​​​ನಲ್ಲಿ ಇಂದಿನಿಂದ ವ್ಯಾಪಾರ ಮಾಡದಂತೆ ಅಧಿಕಾರಿಗಳು ತಡೆಯುತ್ತಿರೋ ಹಿನ್ನೆಲೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಂಕಷ್ಟದಲ್ಲಿದ್ದೀವಿ, ಈಗ ಅಧಿಕಾರಿಗಳು ನಮಗೆ ಕಷ್ಟ ಕೊಡ್ತಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ.

ಯಲಹಂಕ ರೈತ ಸಂತೆಯಿಂದ ಕೊಡಿಗೇಹಳ್ಳಿ ಬಳಿಯ ಬ್ಯಾಟರಾಯನಪುರ ಬಳಿ ಎಪಿಎಂಸಿ ಮಾರ್ಕೆಟ್​​ ಸ್ಥಳಾಂತರಿಸಲಾಗಿತ್ತು. ಈಗ ಇಲ್ಲಿ ಕೂಡ ರೈತರಿಗೆ ವ್ಯಾಪಾರ ಮಾಡಲು ಅಧಿಕಾರಿಗಳು ಬಿಡ್ತಿಲ್ಲ. ನಾಳೆಯಿಂದ ಬರ್ಬೇಡಿ ಅಂತಾ ಹೇಳ್ತಿದ್ದಾರೆ. ನಮಗೆ ನ್ಯಾಯ ಬೇಕು ಅಂತಾ ತರಕಾರಿ ಚೆಲ್ಲಿ ರೈತರು ಆಕ್ರೋಶ ಹೊರಹಾಕಿದ್ರು.

ನಮಗೆ ನ್ಯಾಯ ಸಿಗೋವರೆಗೂ ಇಲ್ಲಿಂದ ಕದಲೋದಿಲ್ಲ. ವ್ಯಾಪಾರ ಮಾಡೋಕೆ ಜಾಗ ಕೊಡಿ. ಬೀದಿಲಾದ್ರೂ ವ್ಯಾಪಾರ ಮಾಡ್ಕೊಂಡು ಜೀವನ‌ ಮಾಡ್ತೀವಿ. ಈಗಾಗಲೇ ಬೆಳೆದಿರೋ ಬೆಳೆಯಲ್ಲಿ ಮುಕ್ಕಾಲು ಭಾಗ ಚೆಲ್ತಿದ್ದೀವಿ. ಈಗ ಮಾಡ್ತಿರೋ ವ್ಯಾಪಾರಕ್ಕೂ ಕಲ್ಲು ಹಾಕಿದ್ರೆ ಏನ್ಮಾಡಬೇಕು? ಒಂದ್ಕಡೆ ಕೊರೊನಾ‌ ಸಾಯ್ಸುತ್ತೆ.. ಒಂದ್ಕಡೆ ನೀವ್ ಸಾಯಿಸ್ತಿದ್ದೀರಿ. ನೀವೇನೋ ಎ.ಸಿ ಲಿ ಅರಾಮಾಗಿ ಕೂತ್ಕೊಂಡೊರ್ತೀರಾ. ಒಮ್ಮೆ ಬಿಸಿಲಿಗೆ ಬಂದು ಬೆಳೆ ಬೆಳೆದು ನೋಡಿ. ನಮ್ಮ ಕಷ್ಟ ಅರ್ಥ ಅಗ್ತಿಲ್ವಾ ನಿಮ್ಗೆ? ಎಂದು ಅನ್ನದಾತರು ಪ್ರಶ್ನಿಸಿದರು.

ನ್ಯೂಸ್​​ಫಸ್ಟ್​ ಜೊತೆ ಮಾತನಾಡಿದ ರೈತ ಮುಖಂಡ ನಾರಾಯಣ ರೆಡ್ಡಿ, ನಮಗೆ ನ್ಯಾಯ ಬೇಕು. ಇಲ್ಲದಿದ್ರೆ ನಾವೆಲ್ಲಾ ಸಾಮೂಹಿಕವಾಗಿ ಆತ್ಮಹತ್ಯೆ ಮಾಡ್ಕೊಳ್ತೀವಿ ಅಂತಾ ಎಚ್ಚರಿಕೆ ಕೊಟ್ರು. ಎಂಪಿಎಂಸಿಯಲ್ಲಿ ಹೊಸದಾಗಿ ಅನಿಲ್ ಕುಮಾರಿ ಎಂಬವರು ಬಂದಿದ್ದಾರಂತೆ. ಅವರು ಹೇಳೋದೇನಂದ್ರೆ.. ನಮಗೆ ಸರ್ಕಾರದಿಂದ ಆದೇಶ ಬಂದಿದೆ. ನಾವು ಪುರ್ತಿ ಬಂದ್​ ಮಾಡ್ತೀವಿ. ನಾಳೆಯಿಂದ ತರಕಾರಿ ತರಬೇಡಿ ಅಂತ ಬಂದ್​ ಮಾಡಿಸಿದ್ದಾರೆ. ನಾನು ನಿನ್ನೆಯಿಂದ ಆಯಮ್ಮನ ಫೋನ್​ಗೆ ಟ್ರೈ ಮಾಡಿದೆ. ಆಯಮ್ಮ ಚೀಫ್​ ಮಿನಿಸ್ಟರ್ ಇರಬಹುದು.. ಮಿನಿ ಚೀಫ್ ಮಿನಿಸ್ಟ್ರು. ಫೋನ್ ತೆಗೀಲಿಲ್ಲ. ನಂತರ ಆಯುಕ್ತರಾದ ಕರೀಗೌಡ ಅವರಿಗೆ ಫೋನ್ ಮಾಡಿದಾಗ, ಆ ಥರ ಏನಿಲ್ಲ.. ಬೆಳಗ್ಗೆ 12 ಗಂಟೆವರೆಗೆ ವ್ಯಾಪಾರ ಮಾಡಬಹುದು ಅಂದಿದ್ದಾರೆ. ಆದ್ರೆ ಇಲ್ಲಿ ಅಧಿಕಾರಿಗಳು ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡ್ತಿಲ್ಲ ಎಂದರು.

ಈಗಾಗಲೇ ಎಲ್ಲಾ ರೈತರಿಗೂ ಸಂಕಷ್ಟವಿದೆ. ಇದ್ರ ಮೇಲೆ ಮತ್ತೆ ನೀವು ಬರೆ ಎಳೆಯುತ್ತಿದ್ದೀರಿ. ಬಾರ್ ಗಳಿಗೆ ಅವಕಾಶ ಕೊಡ್ತೀರ. ನಾವು ರೈತರು ಏನ್ಮಾಡಿದ್ದೀವಿ? ನಮಗೆ ವ್ಯಾಪಾರ ಮಾಡಿಕೊಳ್ಳೋಕೆ ಅವಕಾಶ ಕೊಡಿ. ಇಲ್ಲಾ ಅಂದ್ರೆ ಎಲ್ಲವನ್ನೂ ಬಂದ್ ಮಾಡಿ. ಯಾವುದಕ್ಕೂ ಅವಕಾಶ ಕೊಡಬೇಡಿ. ರೈತರೆಲ್ಲರಿಗೂ ವಿಷ ಕೊಟ್ಟುಬಿಡಲಿ.. ಪೂರ್ತಿ ಲಾಕ್​ಡೌನ್ ಮಾಡಿ ಇಲ್ಲಾ ಮಾರಾಟಕ್ಕೆ ಅವಕಾಶ ಕೊಡಿ ಅಂತ ಸರ್ಕಾರಕ್ಕೆ ಒತ್ತಾಯಿಸಿದ್ರು.

The post ‘ಆಯಮ್ಮ ಮಿನಿ ಚೀಫ್ ಮಿನಿಸ್ಟರ್.. ತರಕಾರಿ ತರಬೇಡಿ ಅಂತ ಬಂದ್ ಮಾಡಿದ್ದಾರೆ’ -ಅನ್ನದಾತರ ಆಕ್ರೋಶ appeared first on News First Kannada.

Source: newsfirstlive.com

Source link