ಹುಬ್ಬಳ್ಳಿ: ಹೆಗ್ಗೇರಿ ಆಯುರ್ವೇದ ಕಾಲೇಜಿನ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದ ಹಿಂದುಳಿದ ವರ್ಗ ಇಲಾಖೆಯ ಸಿಬ್ಬಂದಿಯೊಬ್ಬ ಬರೋಬ್ಬರಿ 24 ಲಕ್ಷ ರೂ. ಹಿಂದುಳಿದ ವರ್ಗದ ವಿದ್ಯಾರ್ಥಿ ವೇತನವನ್ನು ಆ ಖಾತೆಗೆ ಜಮಾ ಮಾಡಿಸಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಎ.ಎಸ್.ಅವರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ನಕಲಿ ಖಾತೆ ತೆರೆದು ಸಿಎಂ ವಿರುದ್ಧ ಪೋಸ್ಟ್ ಹಾಕಿದ್ದ ಮಂಡ್ಯದ ಟೆಕ್ಕಿಯ ಬಂಧನ

ದೂರಿನಲ್ಲಿ ಏನಿದೆ?
ಹಿಂದುಳಿದ ವರ್ಗದ ವಿದ್ಯಾರ್ಥಿ ವೇತನವನ್ನು ಕಾಲೇಜಿನ ಪ್ರಾಚಾರ್ಯರ ಖಾತೆಗೆ ಜಮೆ ಮಾಡುತ್ತಾರೆ. ಹೀಗಿರುವಾಗ ಇಲಾಖೆಯ ಸಿಬ್ಬಂದಿ ಹುಬ್ಬಳ್ಳಿ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್‍ನಲ್ಲಿ ಆಯುರ್ವೇದ ಕಾಲೇಜಿನ ಹೆಸರಿನಲ್ಲಿ ಖಾತೆ ತೆರೆದ್ದಿದ್ದಾನೆ. ಖಾತೆಗೆ 2017ರ ಏ.1ರಿಂದ 2018ರ ಮಾ. 31ರವರೆಗಿನ ಅವಧಿಯಲ್ಲಿ 24,04,090 ರೂ. ವಿದ್ಯಾರ್ಥಿ ವೇತನವನ್ನು ಪ್ರಾಚಾರ್ಯರ ಖಾತೆ ಬದಲಾಗಿ ನಕಲಿ ಖಾತೆಗೆ ಜಮಾ ಮಾಡಿಸಿಕೊಂಡು ಕಾಲೇಜು, ವಿದ್ಯಾರ್ಥಿಗಳಿಗೆ ವಂಚಿಸಿ ಸ್ವಂತಕ್ಕೆ ಬಳಸಲಾಗಿದೆ ಎಂದು ದೂರು ದಾಖಲಾಗಿದೆ.

ಬೆಳಕಿಗೆ ಬಂದಿದ್ದು ಹೇಗೆ?
ಕಳೆದ ಆಡಿಟ್ ವೇಳೆ ವಂಚನೆ ಆಗಿರುವುದು ಪತ್ತೆಯಾಗಿದೆ. ಹಿಂದುಳಿದ ವರ್ಗ ಇಲಾಖೆಯಿಂದ ಕಾಲೇಜಿನ ಖಾತೆಗೆ ಆಗಬೇಕಿದ್ದ ಹಣ ಎಲ್ಲಿ ಜಮಾ ಆಗಿದೆ ಎಂದು ಪತ್ತೆಗೆ ಮುಂದಾದಾಗ ವಿಷಯ ಬೆಳಕಿಗೆ ಬಂದಿದೆ. ಸುಮಾರು 100 ವಿದ್ಯಾರ್ಥಿಗಳಿಗೆ ಬರಬೇಕಾದ ವಿದ್ಯಾರ್ಥಿವೇತನ ಇದು. ಯಾವ ಸಿಬ್ಬಂದಿ ವಂಚನೆ ಎಸಗಿದ್ದಾನೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ ಎಂದು ಪ್ರಾಚಾರ್ಯ ಪ್ರಶಾಂತ್ ಎ.ಎಸ್. ತಿಳಿಸಿದ್ದಾರೆ.

The post ಆಯುರ್ವೇದ ವಿದ್ಯಾರ್ಥಿಗಳ 24 ಲಕ್ಷ ರೂ. ವಿದ್ಯಾರ್ಥಿ ವೇತನ ನಕಲಿ ಖಾತೆಗೆ ಜಮೆ appeared first on Public TV.

Source: publictv.in

Source link