ಟೆಂಬಾ ಬವುಮಾ ಮತ್ತು ವ್ಯಾನ್ ಡರ್ ಡುಸೆನ್ ಅವರ ಶತಕಗಳ ನೆರವಿನಿಂದ ಸೌತ್ ಆಫ್ರಿಕಾ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿದ ಟೀಮ್ ಇಂಡಿಯಾ, ಹೀನಾಯ ಸೋಲನುಭವಿಸಿತು. ಹೇಗಿತ್ತು ಪಂದ್ಯದ ಹೈಲೈಟ್ಸ್..?
ಪರ್ಲ್ನ ಬೋಲ್ಯಾಂಡ್ ಮೈದಾನದಲ್ಲಿ ನಡೆದ ಮೊದಲ ಏಕದಿನದಲ್ಲಿ ಟೀಮ್ ಇಂಡಿಯಾ ನಡೆಸಿದ ಕಳಪೆ ಬ್ಯಾಟಿಂಗ್ನಿಂದ ಸೋಲನುಭವಿಸಿದ್ರೆ, ಸೌತ್ ಆಫ್ರಿಕಾ 31 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-0ರಲ್ಲಿ ಮುನ್ನಡೆ ಸಾಧಿಸಿದೆ.
ಆರಂಭದಲ್ಲಿ ಅಬ್ಬರಿಸಿ ಕೊನೆಯಲ್ಲಿ ಮುಗ್ಗರಿಸಿದ ಭಾರತದ ಬೌಲರ್ಸ್..!
ಟಾಸ್ ಗೆದ್ದ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತು. ಆದ್ರೆ ಆರಂಭದಲ್ಲೇ ಭಾರತದ ಬೌಲರ್ಗಳು ಮಾರಕ ದಾಳಿ ನಡೆಸಿ, ಹರಿಣಗಳಿಗೆ ಕಂಟಕವಾದ್ರು. ಜೆನ್ನೆಮಾನ್ ಮಲಾನ್, ಕ್ವಿಂಟನ್ ಡಿ ಕಾಕ್, ಆ್ಯಡಂ ಮಾರ್ಕರಮ್ರನ್ನ ಬೇಗನೇ ಪೆವಿಲಿಯನ್ಗೆ ಕಳಿಸಿ ಮೇಲುಗೈ ಸಾಧಿಸಿದ್ರು. ಆದರೆ ಟೆಂಬಾ ಬವುಮಾ ಮತ್ತು ವ್ಯಾನ್ ಡರ್ ಡುಸೆನ್ ಆಟದ ಮುಂದೆ ಬೌಲರ್ಗಳು ಮಂಕಾದರು.
ದ್ವಿಶತಕದ ಜೊತೆಯಾಟ-ಭರ್ಜರಿ ಶತಕ ಸಿಡಿಸಿದ ಬವುಮಾ, ಡುಸೆನ್..!
ಇಕ್ಕಟ್ಟಿಗೆ ಸಿಲುಕ್ಕಿದ್ದ ಆಫ್ರಿಕಾಗೆ ಬವುಮಾ-ಡುಸೆನ್ ಎಚ್ಚರಿಕೆ ಆಟವಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ರು. ಒಂದೆಡೆ ತಾಳ್ಮೆಯ ಆಟವಾಡಿದ ಬವುಮಾ 143 ಎಸೆತಗಳಲ್ಲಿ 110 ರನ್ ಗಳಿಸಿದ್ರೆ, ಮತ್ತೊಂದೆಡೆ ಅಬ್ಬರಿಸಿದ ಡುಸೆನ್ 96 ಎಸೆತಗಳಲ್ಲಿ ಅಜೇಯ 129 ರನ್ ಸಿಡಿಸಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದ್ರು. ಅಲ್ಲದೆ ದಾಖಲೆಯ ದ್ವಿಶತಕದ ಜೊತೆಯಾಟಕ್ಕೂ ಸಾಕ್ಷಿಯಾದ್ರು.
ಭಾರತಕ್ಕೆ 297 ರನ್ಗಳ ಸವಾಲಿನ ಗುರಿ ನೀಡಿದ ಸೌತ್ ಆಫ್ರಿಕಾ
ಒಂದೆಡೆ ಸೌತ್ ಆಫ್ರಿಕಾ ಬ್ಯಾಟರ್ಗಳು ಸ್ಫೋಟಕ ಬ್ಯಾಟಿಂಗ್ ನಡೆಸಿದ್ರೆ, ಮತ್ತೊಂದೆಡೆ ಭಾರತದ ಬೌಲರ್ಗಳು ವಿಕೆಟ್ಗಾಗಿ ಪರದಾಡಿದ್ರು. ಹೀಗಾಗಿ ದಕ್ಷಿಣ ಆಫ್ರಿಕಾ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ಗಳ ಸವಾಲಿನ ಮೊತ್ತ ಕಲೆ ಹಾಕ್ತು. ಬೂಮ್ರಾ 2, ಅಶ್ವಿನ್ 1 ವಿಕೆಟ್ ಪಡೆಯುವಲ್ಲಿ ಯಶ್ವಿಯಾದ್ರೆ, ಉಳಿದ ಬೌಲರ್ಗಳು ದುಬಾರಿಯಾದ್ರು.
ಕೈಕೊಟ್ಟ ನಾಯಕ ರಾಹುಲ್, ಧವನ್-ಕೊಹ್ಲಿ ಅರ್ಧಶತಕ
ಇನ್ನು ಗುರಿ ಬೆನ್ನತ್ತಿದ್ದ ಭಾರತ ಉತ್ತಮ ಆರಂಭದ ಭರವಸೆ ನೀಡಿತು. ಆದ್ರೆ ನಾಯಕ ರಾಹುಲ್ 12ರನ್ಗಳಿಸಿ ಔಟಾಗಿ ನಿರಾಸೆ ಮೂಡಿಸಿದ್ರು. ಬಳಿಕ ಜೊತೆಯಾದ ವಿರಾಟ್ ಕೊಹ್ಲಿ-ಧವನ್ ತಂಡಕ್ಕೆ ಚೇತರಿಕೆ ನೀಡಿದ್ರು. ಇಬ್ಬರೂ ತಲಾ ಅರ್ಧಶತಕ ಸಿಡಿಸಿದ್ದಲ್ಲದೆ, 92 ರನ್ಗಳ ಭರ್ಜರಿ ಜೊತೆಯಾಟ ಕೂಡ ಆಡಿದ್ರು. ಆದ್ರೆ ಕೊಹ್ಲಿ-ಧವನ್ ಔಟಾದ ಬೆನ್ನಲ್ಲೆ ದಕ್ಷಿಣ ಆಫ್ರಿಕಾ ಬೌಲರ್ಗಳು ಪಾರಮ್ಯ ಮೆರೆದ್ರು.
ರಿಷಭ್ ಪಂತ್ 16 ರನ್, ಶ್ರೇಯಸ್ ಅಯ್ಯರ್ 17 ರನ್ಗೆ ಔಟಾಗಿ ನಿರ್ಗಮಿಸಿದ್ರು. ಇನ್ನು ಏಕದಿನ ಕ್ರಿಕೆಟ್ಗೆ ಪದಾರ್ಪಣೆಗೈದ ವೆಂಕಟೇಶ್ ಅಯ್ಯರ್ ಕೂಡ 3ರನ್ಗೆ ಔಟಾಗಿ ನಿರಾಸೆ ಮೂಡಿಸಿದ್ರು. ಕೊನೆಯಲ್ಲಿ ಶಾರ್ದೂಲ್ ಠಾಕೂರ್ ಅರ್ಧಶತಕದ ಹೋರಾಟದ ಫಲವಾಗಿಯೂ ಭಾರತ 8 ವಿಕೆಟ್ ನಷ್ಟಕ್ಕೆ 265 ರನ್ಗಳಿಗೆ ಆಟ ಮುಗಿಸಿತು. ಆ ಮೂಲಕ 31 ರನ್ಗಳ ಹೀನಾಯ ಸೋಲು ಅನುಭವಿಸಿತು.