ಜೀವನ ವಿಧಾನದ ಬದಲಾವಣೆಯಿಂದ ಅಕಾಲಿಕವಾದ ಆಹಾರಕ್ರಮ, ಅಹಿತವಾದ ಆಹಾರ ಸೇವನೆ, ಮಲ ಮೂತ್ರ ತಡೆಗಟ್ಟುವಿಕೆ, ನಿಯಮಿತ ಪ್ರಮಾಣದ ಆಹಾರಕ್ಕಿಂತ ಅಧಿಕವಾದ ಆಹಾರವನ್ನು ಸೇವನೆ ಮಾಡುವುದು,  ರಾತ್ರಿ ವೇಳೆ ನಿದ್ರೆ ಮಾಡದಿರುವುದು, ಅತ್ಯಂತ ಕಡಿಮೆ ಸಮಯ ನಿದ್ರೆ ಮಾಡುವುದು, ದುಷ್ಚಟಗಳನ್ನು ಹೊಂದುವುದರಿಂದ ಅಜೀರ್ಣದ ಸಮಸ್ಯೆ ಕಂಡುಬರುತ್ತದೆ.

ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹಲವರನ್ನು ಬಾಧಿಸುತ್ತಿದ್ದು, ಈ ಸಮಸ್ಯೆಯಿಂದ ಮುಕ್ತವಾಗಲು ಹಲವಾರು ಔಷಧಿಗಳ ಮೊರೆ ಮೋಗಬೇಕಾಗಿದೆ.

ಅಸಿಡಿಟಿ ಸಮಸ್ಯೆಗೆ ಮೂಲ ಕಾರಣವೇ ಇದಾಗಿದ್ದು, ಹೊಟ್ಟೆಯಲ್ಲಿ ಉರಿಯ ಅನುಭವ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಇದು ಎಡೆ ಮಾಡಿಕೊಡುತ್ತದೆ. ತಾತ್ಕಾಲಿಕವಾದ ಅಜೀರ್ಣದ ಸಮಸ್ಯೆಗೆ ಉಪವಾಸ ಮಾಡುವುದು ಹಾಗೂ ಸೀಮಿತ ಚಿಕಿತ್ಸಾ ವಿಧಾನಗಳಿಂದ ಪರಿಣಾಮಕಾರಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಒಂದು ವೇಳೆ ಈ ಸಮಸ್ಯೆ ದೀರ್ಘ ಕಾಲದ್ದಾಗಿದ್ದರೆ, ವಾರಕ್ಕೆ ಒಂದು ಬಾರಿ ಉಪವಾಸ ಮಾಡುವುದು, ಆಹಾರ ಕ್ರಮಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವುದರಿಂದ ಸಮಸ್ಯೆಯನ್ನು ಗುಣಪಡಿಸಿಕೊಳ್ಳಬಹುದಾಗಿದೆ. ಇದಿಷ್ಟೇ ಅಲ್ಲದೆ ಪ್ರತಿನಿತ್ಯ, ಯೋಗಾಸನ, ಪ್ರಾಣಾಯಾಮ, ಸೂರ್ಯನಮಸ್ಕಾರವನ್ನು ಮಾಡುವುದರಿಂದ ಸಮಸ್ಯೆಯಿಂದ ದೂರವಿರಬಹುದಾಗಿದೆ.

ಇದನ್ನೂ ಓದಿ:ಭರತನಾಟ್ಯ ಕಲಾವಿದೆ ಆಶಾಲತಾ ಗಿನ್ನಿಸ್‌ ದಾಖಲೆ

ಅಜೀರ್ಣದ ಸಮಸ್ಯೆಗೆ ಸಾಮಾನ್ಯ ಚಿಕಿತ್ಸೆಗಳು

ನಮ್ಮನ್ನು ಬಾಧಿಸುವ ಅಜೀರ್ಣದ ಸಮಸ್ಯೆಗೆ ನಮ್ಮ ಸುತ್ತಮುತ್ತಲಿನ ವಸ್ತುಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ನುಣ್ಣಗೆ ಪುಡಿ ಮಾಡಿ ಶುಭ್ರವಾದ ಬಟ್ಟೆಯಿಂದ ಗಾಳಿಸಿದ ಅಜವಾನದ ಪುಡಿ( ಓಂಕಾಳು) ಅನ್ನು ಒಂದು ವಾರ ಪ್ರತಿನಿತ್ಯ ಬಿಸಿನೀರಿನಲ್ಲಿ 1 ಗ್ರಾಂ ಬೆರೆಸಿ ಸೇವಿಸಿದರೆ ಅಜೀರ್ಣದ ಸಮಸ್ಯೆಯಿಂದ ಮುಕ್ತವಾಗಬಹುದಾಗಿದೆ. ಆದರೆ ಓಂಕಾಳು ಸೇವನೆ ದೇಹದಲ್ಲಿ ಉಷ್ಣದ ಅಂಶವನ್ನು ಹೆಚ್ಚಿಸುವುದರಿಂದ ಹೆಚ್ಚು ನೀರನ್ನು ಸೇವಿಸಬೇಕು.

ಹುಳಿಯಾಗದ ಮಜ್ಜಿಗೆಯನ್ನು ಸೇವಿಸುವುದರಿಂದ ಹಾಗೂ ಸೊಪ್ಪು ತರಕಾರಿಗಳನ್ನು ಸೇವನೆ ಮಾಡುವುದು ಮತ್ತು ಕಡಿಮೆ ಖಾರವನ್ನು ಸೇವನೆ ಮಾಡುವುದು ಉತ್ತಮ. ಇನ್ನು ಜೀರಿಗೆ ದನಿಯಾ ಕಷಾಯ, ಲಿಂಬೆರಸ ,ಸೇವನೆಯನ್ನು ಮಾಡುವುದರಿಂದಲೂ ಅಜೀರ್ಣದ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಆರೋಗ್ಯ – Udayavani – ಉದಯವಾಣಿ
Read More