ಆರೋಗ್ಯ ತಪಾಸಣೆಗೆ ಒಳಗಾಗುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್​: ಕಮಲಾ ಹ್ಯಾರಿಸ್​ಗೆ ಅಧಿಕಾರ ಹಸ್ತಾಂತರ | Joe Biden undergoes routine physical exam briefly transfers power to Kamala Harris


ಆರೋಗ್ಯ ತಪಾಸಣೆಗೆ ಒಳಗಾಗುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್​: ಕಮಲಾ ಹ್ಯಾರಿಸ್​ಗೆ ಅಧಿಕಾರ ಹಸ್ತಾಂತರ

ಜೋ ಬೈಡನ್​ ಮತ್ತು ಕಮಲಾ ಹ್ಯಾರಿಸ್​

ವಾಷಿಂಗ್​ಟನ್: ಆರೋಗ್ಯ ತಪಾಸಣೆಗೆ ಒಳಗಾಗುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸ್ವಲ್ಪ ಕಾಲ ಅಧ್ಯಕ್ಷರ ಅಧಿಕಾರವನ್ನು ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರಿಗೆ ಹಸ್ತಾಂತರಿಸಲಿದ್ದಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಈ ಅವಧಿಯಲ್ಲಿ ವೆಸ್ಟ್​ ವಿಂಗ್​ನ ತಮ್ಮ ಮನೆಯಿಂದಲೇ ಕೆಲಸ ಮಾಡುತ್ತಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪಸ್ಕಿ ತಿಳಿಸಿದ್ದಾರೆ. ಜೋ ಬೈಡೆನ್​ ಅವರು ವಾಡಿಕೆಯಂತೆ ವಾರ್ಷಿಕ ಕೊಲೊನೊಸ್ಕೊಪಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದು, ಇದಕ್ಕಾಗಿ ಅನಸ್ತೀಶಿಯಾ ತೆಗೆದುಕೊಳ್ಳಲಿದ್ದಾರೆ.

ಜಾರ್ಜ್​ ಡಬ್ಲ್ಯು ಬುಷ್ ಅವರು 2002 ಮತ್ತು 2007ರಲ್ಲಿ ಕೊಲೊನೊಸ್ಕೊಪಿ ತಪಾಸಣೆಗೆ ಒಳಗಾದ ಸಂದರ್ಭದಲ್ಲಿಯೂ ಅಮೆರಿಕ ಅಧ್ಯಕ್ಷರ ಅಧಿಕಾರವನ್ನು ಉಪಾಧ್ಯಕ್ಷರಿಗೆ ಹಸ್ತಾಂತರಿಸಲಾಗಿತ್ತು. ಅಧ್ಯಕ್ಷರ ಅಧಿಕಾರ ಹಸ್ತಾಂತರ ವಿಧಿ ವಿಧಾನವನ್ನು ಅಮೆರಿಕ ಸಂವಿಧಾನದಲ್ಲಿಯೇ ವಿಶದಪಡಿಸಲಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಾಳೆ (ನ.20) 79ನೇ ವರ್ಷಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಅಮೆರಿಕದಲ್ಲಿ ಅಧಿಕಾರಕ್ಕೆ ಬಂದ ಅತಿ ಹಿರಿಯ ಅಧ್ಯಕ್ಷ ಎನಿಸಿಕೊಂಡಿದ್ದಾರೆ ಜೋ ಬೈಡೆನ್. 2024ರ ಮರುಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಾರೆಯೇ ಎಂಬ ಬಗ್ಗೆ ಹಲವು ಊಹಾಪೋಹಗಳು ಚಾಲ್ತಿಯಲ್ಲಿವೆ. ಕಮಲಾ ಹ್ಯಾರಿಸ್ ಸಹ ಎರಡನೇ ಅವಧಿಗೆ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ.

ಭಿನ್ನಾಭಿಪ್ರಾಯದ ಊಹಾಪೋಹ
ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಏರುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಕಮಲಾ ಹ್ಯಾರಿಸ್​ ಮತ್ತು ಅಧ್ಯಕ್ಷ ಜೋ ಬೈಡನ್​ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆಯಾ ಎಂಬುದೊಂದು ಅನುಮಾನ ಹುಟ್ಟುಹಾಕುವಂಥ ವರದಿಯನ್ನು ಸಿಎನ್​ಎನ್​ ಅಂತಾರಾಷ್ಟ್ರೀಯ ಮಾಧ್ಯಮ ಪ್ರಕಟ ಮಾಡಿದೆ. ಹ್ಯಾರಿಸ್ ಸಾರ್ವಜನಿಕರೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಾರೆ. ಈ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತ ಹ್ಯಾರಿಸ್​ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಧ್ಯಕ್ಷ ಜೋ ಬೈಡನ್​ ತಂಡ ಹತಾಶೆಗೆ ಒಳಗಾಗಿದ್ದು, ಬೇಕಂತಲೇ ಆಡಳಿತ ವಿಷಯದಲ್ಲಿ ಕಮಲಾ ಹ್ಯಾರಿಸ್​​ ಮತ್ತು ಅವರ ತಂಡದ ಸಿಬ್ಬಂದಿಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಉಪಾಧ್ಯಕ್ಷೆ ಹ್ಯಾರಿಸ್​ ಬೆಂಬಲಿಗರು, ಅವರ ಆಪ್ತರು ಆರೋಪ ಮಾಡುತ್ತಿದ್ದಾರೆ ಎಂದು ಸಿಎನ್​ಎನ್​ ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಅಧ್ಯಕ್ಷ ಬೈಡನ್​-ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ನಡುವೆ ಭಿನ್ನಾಭಿಪ್ರಾಯ !; ವೈಯಕ್ತಿಕ ಸ್ಪರ್ಧೆಗೆ ಬಿದ್ದರಾ ನಾಯಕರು?
ಇದನ್ನೂ ಓದಿ: ಚೀನಾ, ರಷ್ಯಾ ಬಿಡನ್​ಗೆ ಶುಭಾಶಯ ಕೋರಿಲ್ಲ! ಏನಿದರ ಒಳಮರ್ಮ?

TV9 Kannada


Leave a Reply

Your email address will not be published. Required fields are marked *