ಬೆಂಗಳೂರು: ರಾಜ್ಯದಲ್ಲಿ ಕೊರೊನಾ ತೀವ್ರತೆ ಹೆಚ್ಚಾಗಿದ್ದು, ಪರಿಸ್ಥಿತಿ ಬಿಗಡಾಯಿಸುತ್ತಿದೆ. ಈ ನಡುವೆ ಸರ್ಕಾರ ಕ್ಲೋಸ್​ ಡೌನ್ ಮೊರೆ ಹೋಗಿ ಕಠಿಣ ನಿಯಮಗಳನ್ನು ಜಾರಿ ತಂದಿದೆ. ಕೊರೊನಾ ಕರ್ಫ್ಯೂ ವಿಧಿಸಿದ ಬಳಿಕವೂ ಸಾವಿನ ಸಂಖ್ಯೆ, ಪಾಸಿಟಿವ್ ಕೇಸ್​​ಗಳು ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕೊರೊನಾ ರಿವ್ಯೂ ಮಾಡಲು ಸಿಎಂ ಬಿಎಸ್​ ಯಡಿಯೂರಪ್ಪ ಸರಣಿ ಸಭೆಗಳನ್ನು ನಡೆಸಿದ್ದಾರೆ. ಈ ಕುರಿತಂತೆ ನಿನ್ನೆ ನಡೆದ ಸಭೆಯಲ್ಲಿ ಕೊರೊನಾ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಿರುದ್ಧ ಸಿಎಂ ಗರಂ ಆಗಿದ್ದಾರೆ ಎಂಬ ಮಾಹಿತಿ ನ್ಯೂಸ್‌ಫಸ್ಟ್‌ಗೆ ಲಭ್ಯವಾಗಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೊರೊನಾ ಸೋಂಕು ಸೇರಿದಂತೆ ಆಕ್ಸಿಜನ್ ಕೊರತೆ ಕುರಿತಂತೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸಿಎಂ ಪ್ರಶ್ನಿಸಿ, ಮಾಹಿತಿ ಕಲೆ ಹಾಕಿದ್ದರು ಎನ್ನಲಾಗಿದೆ.

ಆಕ್ಸಿಜನ್ ಸಮಸ್ಯೆ ನಮ್ಮ ರಾಜ್ಯದಲ್ಲಿ ಆಗಿರುವುದೇಕೆ? ಎಂದು ಅಧಿಕಾರಿಗಳನ್ನು ಸಿಎಂ ಪ್ರಶ್ನಿಸಿದ್ದರು. ಇದಕ್ಕುತ್ತರಿಸಿದ ಅಧಿಕಾರಿಗಳು, ರಾಜ್ಯದಲ್ಲಿ ಏಕೆ ಆಕ್ಸಿಜನ್ ಕೊರತೆ ಆಗಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು ಅಂತಾ ಹೇಳಲಾಗಿದೆ.

ಪಿಎಂ ಕೇರ್​​​ ಫಂಡ್‌ನಿಂದ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ನಮಗೆ ಮಂಜೂರಾತಿಗೆ ಸಿಕ್ಕಿತ್ತು. ಇದು ಮಂಜೂರಾಗಿ 6 ತಿಂಗಳಾಗಿದೆ. ನಾವು ನಮಗೆ ಬಂದ ಆಕ್ಸಿಜನ್ ಪ್ಲಾಂಟ್ ನಿರ್ಮಾಣದ ಕಡತವನ್ನು 6 ತಿಂಗಳ ಹಿಂದೆಯೇ ಕ್ಲಿಯರ್ ಮಾಡಿ ಕಳುಹಿಸಿದ್ದೇವೆ. ಆದರೆ ಸಚಿವ ಸುಧಾಕರ್ ಅವರು ಅದನ್ನು ಇನ್ನು ಪೆಂಡಿಂಗ್ ಇಟ್ಟಿದ್ದಾರೆ. ಇದಕ್ಕೇನು ಕಾರಣ ಎಂಬುದು ನಮಗೆ ತಿಳಿದಿಲ್ಲ. ನೀವು ಇದರ ಬಗ್ಗೆ ಸಚಿವ ಸುಧಾಕರ್‌ರನ್ನೇ ಕೇಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದರು ಎನ್ನಲಾಗಿದೆ.

ಅಧಿಕಾರಿಗಳ ಮಾತಿನಿಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ವಿರುದ್ಧ ಸಿಎಂ ಯಡಿಯೂರಪ್ಪ ಗರಂ ಆಗಿದ್ದರು. ಇದರ ಮಧ್ಯೆ ಸಿಎಂ ಭೇಟಿಗೆ ಆಗಮಿಸಿದ ಡಿಸಿಎಂ ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ್ ಕೂಡ ಸುಧಾಕರ್ ವಿರುದ್ಧ ಸಿಎಂ ಮುಂದೆ ತೀವ್ರ ಅಸಮಾಧಾನ ಹೊರಹಾಕಿದ್ದರು.

ಯಾವಾಗ ಡಿಸಿಎಂ, ಸುಧಾಕರ್‌ ವಿರುದ್ಧ ದೂರು ಹೇಳಿದ್ರೋ ಆಗ ರಾಜ್ಯದಲ್ಲಿ ನಡೆದಿರುವ ಘಟನೆಯನ್ನು ವಿವರಿಸಿದ ಸಿಎಂ, ಕೋವಿಡ್-19 ಎರಡನೇ ಆಲೆ ರಾಜ್ಯದಲ್ಲಿ ಹೆಚ್ಚಾಗಿದೆ. ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಈ ಎರಡು ಮಹತ್ತರವಾದ ಇಲಾಖೆಗಳು. ಈ ಎರಡು ಖಾತೆಗಳು ಒಬ್ಬರ ಬಳಿಯೇ ಇದ್ದರೇ ಒಳ್ಳೆಯದು. ನನ್ನ ಬಳಿ ವೈದ್ಯಕೀಯ ಶಿಕ್ಷಣ, ಆರೋಗ್ಯ ಖಾತೆಯಿದ್ರೆ, ಎರಡಲ್ಲೂ ಸಮನ್ವಯತೆ ಸಾಧಿಸಬಹುದು ಎಂದು ಸುಧಾಕರ್ ಹೇಳಿದ್ರು. ಆದರೆ ಸುಧಾಕರ್‌ ಹೇಳಿರುವುದು ಒಂದು, ಮಾಡಿರುವುದು ಇನ್ನೊಂದು ಅನ್ನೋ ಅಸಮಾಧಾನ ಈಗ ಸಚಿವರಲ್ಲೂ ಮೂಡಿದೆ ಎನ್ನಲಾಗ್ತಿದೆ.

ವೈದ್ಯಕೀಯ ಶಿಕ್ಷಣ ಅಂದರೆ ಮೆಡಿಕಲ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನು ಕರೆ ತಂದು ಕೋವಿಡ್-19 ನಿಯಂತ್ರಿಸಬಹುದು. ಸುಧಾಕರ್‌ ಕೇಳಿದ್ದಕ್ಕೆ, ಎರಡು ಖಾತೆ ಕೊಟ್ಟಿದ್ದೇನೆ. ಆದರೆ ಸುಧಾಕರ್‌ ಅದನ್ನು ಸರಿಯಾಗಿ ನಿಭಾಯಿಸಿಲ್ಲ. ಕೋವಿಡ್-19 ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಲಾಕ್‌ಡೌನ್, ಲಾಕ್‌ಡೌನ್ ಎಂಬುದನ್ನು ಬಿಟ್ಟರೆ ಸುಧಾಕರ್‌ ಬೇರೆನೂ ಮಾಡಿಲ್ಲ ಎಂದು ಸಿಎಂ ಗರಂ ಆಗಿ ಎಚ್ಚರಿಕೆ ನೀಡಿದ್ದರು ಅಂತ ಸಹ ಹೇಳಲಾಗ್ತಿದೆ.

The post ಆರೋಗ್ಯ ಸಚಿವ ಡಾ.ಸುಧಾಕರ್ ವಿರುದ್ಧ ಸಿಎಂ ಯಡಿಯೂರಪ್ಪ ಗರಂ ಆಗಿದ್ಯಾಕೆ? appeared first on News First Kannada.

Source: newsfirstlive.com

Source link