ತುಮಕೂರು: ನಿನ್ನೆ ತುರುವೇಕೆರೆ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ಎದುರು ಸಿನಿಮೀಯ ರೀತಿಯಲ್ಲಿ ಹೈಡ್ರಾಮಾ ನಡೆದಿದೆ. ಈ ನಾಟಕೀಯ ಕಥೆ ನಿಮಗೆ ಗೊತ್ತಾದ್ರೆ ಪಕ್ಕಾ ನಗು ಬಂದೇ ಬರುತ್ತೆ. ಆದರೆ ಇದೊಂದು ಗಂಭೀರ ವಿಚಾರ.
ಏನಿದು ಘಟನೆ..?
ಹೌದು.. ಕಳೆದ ಮೂರು ತಿಂಗಳ ಹಿಂದೆ ಕೋಡಿಹಳ್ಳಿಯಲ್ಲಿ ಶಿವಮ್ಮ ನಾಗೇಂದ್ರಪ್ಪ ಎನ್ನುವವರ ಮೇಲೆ ಹಲ್ಲೆ ನಡೆದಿತ್ತು. ಶಿವಪ್ರಕಾಶ್ ಮತ್ತು ಚಂದನ್ ಎನ್ನುವವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಶಿವಮ್ಮ ಪುತ್ರ ಅರುಣ್ ದಂಡಿನಶಿವರ ಪೊಲೀಸರಿಗೆ ದೂರು ನೀಡಿದ್ದರು.
ಘಟನೆ ನಡೆದು 3 ತಿಂಗಳು ಆದರೂ ಆರೋಪಿಗಳನ್ನು ಪೊಲೀಸರು ಬಂಧಿಸಿರಲಿಲ್ಲ. ಹೀಗಾಗಿ ಅರುಣ್ ಮತ್ತೆ ದಂಡಿನಶಿವರ ಪೊಲೀಸ್ ಠಾಣೆಗೆ ಬಂದು ವಿಚಾರಿಸಿದ್ದಾರೆ. ಯಾಕ್ ಸರ್ ಇನ್ನೂ ಆರೋಪಿಗಳನ್ನ ವಿಚಾರಿಸಿಲ್ಲ, ಬಂಧಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ದಂಡಿನಶಿವರ ಪಿಎಸ್ಐ ಶಿವಲಿಂಗಯ್ಯ ಹಾಗೂ ಸಿಪಿಐ ನವೀನ್, ಆರೋಪಿಗಳನ್ನ ಹುಡುಕೋಣ. ಆದರೆ ಬಾಡಿಗೆ ಕಾರು ತೆಗೆದುಕೊಂಡು ಬಾ ಎಂದಿದ್ದಾರೆ. ಪೊಲೀಸ್ ಅಧಿಕಾರಿಗಳ ಅಸಡ್ಡೆ ಉತ್ತರಕ್ಕೆ ರೊಚ್ಚಿಗೆದ್ದ ಅರುಣ್, ಕೂಡಲೇ ಎಸ್ಪಿ ರಾಹುಲ್ ಕುಮಾರ್ ಅವರನ್ನ ಭೇಟಿ ಮಾಡಿದ್ದಾರೆ.
ಸರ್ಕಾರಿ ಕಾರನ್ನೇ ನೀಡಿದ ಎಸ್ಪಿ
ಎಸ್ಪಿ ಭೇಟಿ ಮಾಡಿದ ದೂರುದಾರ, ಪಿಎಸ್ಐ ಹಾಗೂ ಸಿಪಿಐ ಹೇಳಿದ್ದನ್ನೇ ಇವರಿಗೆ ಹೇಳಿದ್ದಾರೆ. ಅರುಣ್ ದೂರನ್ನ ಗಂಭೀರವಾಗಿ ಪರಿಗಣಿಸಿದ ಎಸ್ಪಿ ರಾಹುಲ್, ತಾವು ಓಡಾಡುವ ಕಾರನ್ನೇ ಆತನಿಗೆ ನೀಡಿದ್ದಾರೆ. ತಾವು ಓಡಾಡುವ ಸರ್ಕಾರಿ ಕಾರನ್ನು ದೂರುದಾರ ಅರುಣ್ಗೆ ನೀಡಿದ್ದಾರೆ. ಅದರಂತೆ ಅರುಣ್ ಎಸ್ಪಿ ಕಾರಿನಲ್ಲಿ ತುರುವೇಕೆರೆ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಗೆ ಬಂದಿಳಿದಿದ್ದಾರೆ. ಇದನ್ನ ನೋಡಿದ ಪೊಲೀಸರು ಒಂದುಕ್ಷಣ ಕಕ್ಕಾಬಿಕ್ಕಿ ಆಗಿದ್ದಾರೆ.