ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ  ಸ್ಥಾನಕ್ಕೆ ಶಿಲ್ಪಾ ನಾಗ್ ರಾಜೀನಾಮೆ ನೀಡಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕೆಲವು ಆರೋಪಗಳನ್ನ ಮಾಡಿದ್ದರು. ಇದೀಗ ರೋಹಿಣಿ ಸಿಂಧೂರಿ ತಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆ ಹೊರಡಿಸಿ ‘ನನ್ನ ಮೇಲಿನ ಆರೋಪ ಆಧಾರ ರಹಿತ’ ಎಂದಿದ್ದಾರೆ.

ನನ್ನ ವಿರುದ್ಧ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಮಾಡಿರುವ ಕಿರುಕುಳದ ಆರೋಪಕ್ಕೆ ಯಾವುದೇ ಆಧಾರ ಇಲ್ಲ. ನನ್ನಿಂದ ಕಿರುಕುಳ ನಡೆದಿದೆ ಅನ್ನೋದು ಸುಳ್ಳು. ಜಿಲ್ಲಾಧಿಕಾರಿಯಾದ ನನಗೆ ಕೊರೊನಾ ನಿಯಂತ್ರಣದ ಜವಾಬ್ದಾರಿ ಇದೆ.

ವಾಸ್ತವದಲ್ಲಿ ಶಿಲ್ಪಾ ನಾಗ್​ ಅವರು ಕೊರೊನಾ ವಿಮರ್ಶೆ ಸಭೆಗಳಿಗೆ ಹಾಜರಾಗೋದನ್ನ ನಿಲ್ಲಿಸಿದ್ದರು. ಮೈಸೂರು ಸಿಟಿ ಕಾರ್ಪೋರೇಷನ್ ಹೊಸ ಕೊರೊನಾ ಪ್ರಕರಣಗಳು, ಸಾವುಗಳು ಹಾಗೂ ಸಕ್ರಿಯ ಪ್ರಕರಣಗಳ ದಾಖಲಾತಿಗೆ ಸಹಿ ಮಾಡುತ್ತಿರಲಿಲ್ಲ. ಮುಂದೆ ಹೀಗೆ ಮಾಡಬಾರದು ಅಂತಾ ನಾನು ಆದೇಶ ನೀಡಿದ್ದೆ.

ಜೊತೆಗೆ ಅವರಿಗೆ ಕೋವಿಡ್ ಕೇರ್​ ಸೆಂಟರ್​ ತೆರೆಯಲು ಆದೇಶ ನೀಡಿದ್ದೆ. ಆದರೆ ಅವರು ಮೈಸೂರು ನಗರದಲ್ಲಿ ಒಂದೇ ಒಂದು ಸರ್ಕಾರಿ ಕೊರೊನಾ ಕೇರ್​ ಸೆಂಟರ್​​ ತೆರೆಯುವಲ್ಲಿ ವಿಫಲಾರಾಗಿದ್ದರು. ನಾನು ಕೊವಿಡ್ ಕೇರ್ ಸೆಂಟರ್ ಆರಂಭಿಸಿಲ್ಲವೆಂಬ ಆರೋಪಕ್ಕೂ ಯಾವುದೇ ಸಾಕ್ಷಿ ಇಲ್ಲ. ಯಾಕಂದ್ರೆ ಕೇವಲ 20 ದಿನಗಳಲ್ಲಿ ಹಳ್ಳಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಒಟ್ಟು 18 ಕೊವಿಡ್ ಕೇರ್ ಸೆಂಟರ್ ಆರಂಭಿಸಿದ್ದೇವೆ. ಇತ್ತೀಚೆಗೆ ನನ್ನ ನೇತೃತ್ವದಲ್ಲೇ ನಗರದಲ್ಲಿ ಮೂರು ಕೊರೊನಾ ಕೇರ್​ ಸೆಂಟರ್​ ತೆರೆಯಲಾಗಿದೆ.

ಶಿಲ್ಪಾ ನಾಗ್ ಅವರಿಗೆ ಜಿಲ್ಲೆಯ ಖಾಸಗಿ ಕೈಗಾರಿಕೆಗಳು, ಕಾರ್ಖಾನೆಗಳು, ಐಟಿ ಕಂಪನಿಗಳಿಂದ ಬರುವ ಸಿಎಸ್ಆರ್ ಉಸ್ತುವಾರಿ ವಹಿಸಲಾಯಿತು. ಆದರೆ ಅವರು ಹೆಚ್ಚಿನ ಸಮಯವನ್ನ ನಗರದಲ್ಲೇ ಕಳೆದಿದ್ದಾರೆ ಅನ್ನೋದು ನನಗೆ ತಿಳಿಯಿತು. ಇದಕ್ಕೆ ಸಂಬಂಧಿಸಿಂದತೆ ನಾನು ಅವರಿಂದ ಉತ್ತರ ಕೇಳಿದ್ದೆ. ಇದುವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದು ರೋಹಿಣಿ ಸಿಂಧೂರಿ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಕೆಲವೊಂದು ದಾಖಲೆಗಳನ್ನೂ ಸಹ ಬಿಡುಗಡೆ ಮಾಡಿದ್ದಾರೆ.

 

 

The post ‘ಆರೋಪ ಆಧಾರ ರಹಿತ’ -ಶಿಲ್ಪಾ ನಾಗ್ ಆರೋಪಕ್ಕೆ ರೋಹಿಣಿ ಸಿಂಧೂರಿ ಪ್ರತ್ಯುತ್ತರ appeared first on News First Kannada.

Source: newsfirstlive.com

Source link