ಆರ್​ಎಸ್​ಎಸ್ ಆಸ್ಪತ್ರೆಯಲ್ಲಿ ಹಿಂದೂಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತೀರಾ ಎಂದು ರತನ್ ಟಾಟಾ ಪ್ರಶ್ನಿಸಿದ್ದರು: ಸಚಿವ ನಿತಿನ್ ಗಡ್ಕರಿ | Ratan Tata Asks RSS Hospital Only For Hindus Says Nitin Gadkari


ಆರ್​ಎಸ್​ಎಸ್ ಆಸ್ಪತ್ರೆಯಲ್ಲಿ ಹಿಂದೂಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತೀರಾ ಎಂದು ರತನ್ ಟಾಟಾ ಪ್ರಶ್ನಿಸಿದ್ದರು: ಸಚಿವ ನಿತಿನ್ ಗಡ್ಕರಿ

ನಿತಿನ್​ ಗಡ್ಕರಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಧರ್ಮದ ಆಧಾರದ ಮೇಲೆ ಯಾರಿಗೂ ತಾರತಮ್ಯ ಮಾಡುವುದಿಲ್ಲ ಎಂದು ನಾನೊಮ್ಮೆ ಖ್ಯಾತ ಉದ್ಯಮಿ ರತನ್​ ಟಾಟಾ ಅವರಿಗೆ ಹೇಳಿದ್ದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಪುಣೆಯ ಸಿಂಹಗಢ್​​ನಲ್ಲಿ ಚಾರಿಟಬಲ್ ಆಸ್ಪತ್ರೆಯೊಂದನ್ನು ಉದ್ಘಾಟಿಸಿ ಮಾತನಾಡಿದ ಗಡ್ಕರಿ,  ತಾವು ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದಾಗ ನಡೆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. 

‘ನಾನು ಹಿಂದೆ ಮಹಾರಾಷ್ಟ್ರ ರಾಜ್ಯ ಸರ್ಕಾರದಲ್ಲಿ ಸಚಿವನಾಗಿದ್ದೆ. ಆಗ ಔರಂಗಾಬಾದ್​ನಲ್ಲಿ ಆರ್​ಎಸ್​ಎಸ್ ಮುಖ್ಯಸ್ಥ ಕೆ.ಬಿ.ಹೆಡ್ಗೆವಾರ್​ ಹೆಸರಿನ ಆಸ್ಪತ್ರೆಯೊಂದು ನಿರ್ಮಾಣವಾಗಿತ್ತು. ಅದನ್ನು ಉದ್ಯಮಿ ರತನ್​ ಟಾಟಾ ಅವರಿಂದ ಉದ್ಘಾಟನೆ ಮಾಡಿಸಬೇಕು ಎಂಬುದು ಆರ್​ಎಸ್​ಎಸ್​ನ ಹಿರಿಯ ಕಾರ್ಯಕಾರಿಯೊಬ್ಬರ ಬಯಕೆಯಾಗಿತ್ತು. ಅದನ್ನು ನನಗೆ ಅವರು ಹೇಳಿ, ಹೇಗಾದರೂ ರತನ್ ಟಾಟಾರನ್ನು ಕರೆದುಕೊಂಡು ಬರಲು ಸಹಾಯ ಮಾಡಿ ಎಂದರು.  ಅದಕ್ಕೊಪ್ಪಿದ ನಾನು ರತನ್​ ಟಾಟಾರನ್ನು ಸಂಪರ್ಕಿಸಿ, ಅವರಿಗೆ ವಿಷಯ ತಿಳಿಸಿದೆ. ದೇಶದಲ್ಲಿ ಬಡ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಟಾಟಾ ಕ್ಯಾನ್ಸರ್ ಆಸ್ಪತ್ರೆಗಳು ನೀಡುತ್ತಿರುವ ಕೊಡುಗೆಗಳನ್ನು ಉಲ್ಲೇಖಿಸಿ, ಶ್ಲಾಘಿಸಿದೆ. ಎಲ್ಲ ಆದ ಬಳಿಕ ಅವರೂ ಬರಲು ಒಪ್ಪಿಕೊಂಡರು’.

‘ಅಂತೂ ಉದ್ಘಾಟನೆಯ ದಿನ ರತನ್ ಟಾಟಾ ಆಸ್ಪತ್ರೆ ತಲುಪಿದರು. ಆದರೆ ಆಗ ಅವರು ಕೇಳಿದ ಪ್ರಶ್ನೆ ಸ್ವಲ್ಪ ವಿಚಿತ್ರವಾಗಿತ್ತು. ಈ ಆಸ್ಪತ್ರೆಯಲ್ಲಿ ಕೇವಲ ಹಿಂದೂ ಸಮುದಾಯದವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆಯೇ ಎಂದು ಕೇಳಿದರು. ಆಗ ನಾನು ಅಚ್ಚರಿ ಪಟ್ಟೆ ಮತ್ತು ಯಾಕೆ ಈ ಪ್ರಶ್ನೆ ಕೇಳುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಅದಕ್ಕೆ ಉತ್ತರಿಸಿದ ಅವರು, ಇದು ಆರ್​ಎಸ್​ಎಸ್​ಗೆ ಸೇರಿದ ಆಸ್ಪತ್ರೆಯಾಗಿದ್ದಕ್ಕೆ ನಾನು ಹೀಗೆ ಕೇಳಿದೆ ಎಂದರು.  ರತನ್ ಟಾಟಾರಿಗೆ ಇದ್ದ ಅನುಮಾನವನ್ನು ನಾನು ಪರಿಹರಿಸಿದೆ. ಹಾಗೇನೂ ಇಲ್ಲ, ಈ ಆಸ್ಪತ್ರೆಯಲ್ಲಿ ಭೇದಭಾವ ತೋರುವುದಿಲ್ಲ. ಆರ್​ಎಸ್​ಎಸ್​ ಧರ್ಮದ ಆಧಾರದ ಮೇಲೆ ಯಾರಿಗೂ ತಾರತಮ್ಯ ಮಾಡುವುದಿಲ್ಲ ಎಂದೆ.  ಅಷ್ಟೇ ಅಲ್ಲ, ಆರ್​ಎಸ್​ಎಸ್​ನ ತತ್ವ, ಸಿದ್ಧಾಂತ, ಕೆಲಸ ಮಾಡುವ ವಿಧಾನಗಳ ಬಗ್ಗೆ ಹಲವು ಮಾಹಿತಿಯನ್ನು ಟಾಟಾರಿಗೆ ನೀಡಿದೆ. ನಂತರ ಅವರಿಗೆ ಸಿಕ್ಕಾಪಟೆ ಖುಷಿ ಆಯಿತು’ ಎಂದು ನಿತಿನ್​ ಗಡ್ಕರಿ ಹೇಳಿದ್ದಾರೆ.

TV9 Kannada


Leave a Reply

Your email address will not be published.