ಆರ್​ಎಸ್​ಎಸ್​ ಕಾರಣಕ್ಕೆ ದೂರವಾಗಿದ್ದ ಸಿಖ್ಖರನ್ನು ಒಲಿಸಲು ಬಿಜೆಪಿಯಿಂ ಗುರು ತೇಗ್ ಬಹದ್ದೂರ್ ಜಪ | BJP Trying to Woe Sikhs after Punjab Debacle used Guru Tegh Bahadur event hopes to surmount RSS hump


ಆರ್​ಎಸ್​ಎಸ್​ ಕಾರಣಕ್ಕೆ ದೂರವಾಗಿದ್ದ ಸಿಖ್ಖರನ್ನು ಒಲಿಸಲು ಬಿಜೆಪಿಯಿಂ ಗುರು ತೇಗ್ ಬಹದ್ದೂರ್ ಜಪ

ಪಂಜಾಬ್​ನಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಬಿಜೆಪಿ ಪ್ರಯತ್ನ

ದೆಹಲಿ: ಗುರು ತೇಗ್ ಬಹದ್ದೂರ್ ಅವರ 400ನೇ ಜನ್ಮದಿನದ ಪ್ರಯುಕ್ತ ಕೇಂದ್ರ ಸರ್ಕಾರವು ಎರಡು ದಿನಗಳ ವಿಶೇಷ ಕಾರ್ಯಕ್ರಮಗಳನ್ನು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆ ಭಾಷಣದಲ್ಲಿ ಮಾಡಿದ್ದ ಘೋಷಣೆಯನ್ನು ಸಾಕಾರಗೊಳಿಸುವ ಮೂಲಕ ಸಿಖ್ಖ್ ಸಮುದಾಯವನ್ನು ಒಲಿಸಿಕೊಳ್ಳಲು ಬಿಜೆಪಿ ಸರ್ವ ಪ್ರಯತ್ನ ಮಾಡುತ್ತಿದೆ. ಪಕ್ಕದ ಹರಿಯಾಣದಲ್ಲಿ ಈ ವಿಶೇಷ ಸಂದರ್ಭದ ಪ್ರಯುಕ್ತ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪಾಣಿಪತ್​ನಲ್ಲಿ ಏಪ್ರಿಲ್ 24ರಂದು ಬೃಹತ್ ಕಾರ್ಯಕ್ರಮ ನಡೆಸಲಾಗುವುದು ಎಂದು ಬಿಜೆಪಿ ಘೋಷಿಸಿದೆ.

ಪಂಜಾಬ್ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಕೇವಲ ಒಂದು ತಿಂಗಳ ನಂತರ ಬಿಜೆಪಿ ಸಿಖ್ಖರನ್ನು ಒಲಿಸಿಕೊಳ್ಳುವ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಪಂಜಾಬ್​ನಲ್ಲಿ ಬಿಜೆಪಿ ಸ್ಪರ್ಧಿಸಿದ್ದ 73 ಕ್ಷೇತ್ರಗಳ ಪೈಕಿ ಕೇವಲ ಎರಡು ಸ್ಥಾನಗಳಲ್ಲಿ ಮಾತ್ರ ಜಯಗಳಿಸಿತ್ತು. ಕೃಷಿ ಕಾನೂನುಗಳ ವಿಚಾರದಲ್ಲಿ ಕೇಂದ್ರದೊಂದಿಗೆ ಸುಮಾರು ಒಂದು ವರ್ಷ ನಡೆದಿದ್ದ ಹೋರಾಟದಲ್ಲಿ ಪಂಜಾಬ್​​ನ ರೈತರು ಮುಂಚಣಿಯಲ್ಲಿದ್ದರು. ಕಳೆದ ವರ್ಷ ನವೆಂಬರ್ 19ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ಇದು ಕಾಕತಾಳೀಯ ಎನ್ನುವಂತೆ ಗುರುನಾನಕ್ ಜಯಂತಿಯಂದೇ ಆಗಿತ್ತು.

ಪಂಜಾಬ್​ ವಿಧಾನಸಭಾ ಚುನಾವಣೆಗಳ ಫಲಿತಾಂಶದ ನಂತರ ಮೋದಿ ಅವರು ಪಂಜಾಬ್​ನ ಸಿಖ್ಖ್ ಸಮುದಾಯಕ್ಕೆ ಸೇರಿದ ಬುದ್ಧಿಜೀವಿಗಳನ್ನು ದೆಹಲಿಯ ತಮ್ಮ ನಿವಾಸಕ್ಕೆ ಆಮಂತ್ರಿಸಿ, ಸುದೀರ್ಘ ಸಮಾಲೋಚನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪಂಜಾಬ್​ನ ಆಶೋತ್ತರಗಳನ್ನು ಅರಿಯಲು ಪ್ರಧಾನಿ ಪ್ರಯತ್ನಿಸಿದ್ದರು. ಏಪ್ರಿಲ್ 1ರಂದು ಕೇಂದ್ರ ಸಚಿವ ಮತ್ತು ಬಿಜೆಪಿ ಪಂಜಾಬ್ ಉಸ್ತುವಾರಿ ಗಜೇಂದ್ರ ಶೇಖಾವತ್ ಅವರನ್ನು ಗುರುಚರಣ್ ಸಿಂಗ್ ತೊಹ್ರಾರ ಸ್ಮರಣಾರ್ಥ ನಡೆಯುವ ಭೋಗ್ ಉತ್ಸವದಲ್ಲಿ ಪಾಲ್ಗೊಳ್ಳಲು ಬಿಜೆಪಿ ಕಳುಹಿಸಿತ್ತು. ಈ ಸಮಾರಂಭದಲ್ಲಿ ಪಂಜಾಬ್​ನ ಸ್ಥಳೀಯ ನಾಯಕರು ಪಾಲ್ಗೊಂಡಿರಲಿಲ್ಲ. ಹರಿಯಾಣದ ಬಿಜೆಪಿ ಸರ್ಕಾರವು ಸಿಖ್ಖ್ ಸಮುದಾಯದ ಯುವಕರನ್ನು ಪಂಜಾಬ್​ನಲ್ಲಿರುವ ಭಗತ್ ಸಿಂಗ್​ರ ಹುಟ್ಟೂರಿಗೆ ಕರೆದೊಯ್ಯಲು ಉಚಿತ ಬಸ್ ವ್ಯವಸ್ಥೆ ಮಾಡಿತ್ತು. ಗುರು ತೇಗ್ ಬಹದ್ದೂರ್ ಜನ್ಮದಿನದ ನಿಮಿತ್ತ ಹರಿಯಾಣ ಸರ್ಕಾರವು ಪಾಣಿಪತ್​ನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಿತ್ತು. ಸಿಖ್ಖರ ಎಲ್ಲ 10 ಗುರುಗಳು ಹರಿಯಾಣದೊಂದಿಗೆ ಹೊಂದಿದ್ದ ಮಧುರ ಸಂಬಂಧವನ್ನು ಸ್ಮರಿಸಿದ್ದರು.

ಏಪ್ರಿಲ್ 24ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಎಲ್ಲ ಪಕ್ಷಗಳು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದ ಖಟ್ಟರ್, ಜನರು ದೊಡ್ಡಸಂಖ್ಯೆಯಲ್ಲಿ ಸೇರಬೇಕು ಎಂದು ವಿನಂತಿಸಿದ್ದಾರೆ. ಗುರು ತೇಗ್ ಬಹದ್ದೂರ್ ಅವರು ತಮ್ಮ ಕುದುರೆ ಕಟ್ಟಿದ್ದರು ಎಂಬ ಪ್ರತೀತಿ ಇರುವ ಹುಣಸೆ ಮರವು ಸೇರಿದಂತೆ ಹರಿಯಾಣದಲ್ಲಿರುವ ಸಿಖ್ಖರ ಪವಿತ್ರ ಸ್ಥಳಗಳನ್ನು ಸರ್ಕಾರದ ಪತ್ರಿಕಾ ಹೇಳಿಕೆ ಉಲ್ಲೇಖಿಸಿದೆ. ಈವರೆಗೆ ಮೋದಿ ಅಲೆಯಲ್ಲಿ ತೇಲಿ ಹೋಗದ ಪಂಜಾಬ್​ ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿಯಿಂದ ದೂರವೇ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಸಿಖ್ಖರನ್ನು ಒಲಿಸಿಕೊಳ್ಳಲು ಬಿಜೆಪಿ ಸರ್ವ ಪ್ರಯತ್ನ ಮಾಡುತ್ತಿದೆ.

ಅಕಾಲಿದಳದ ಪ್ರಭಾವದಿಂದ ಬಿಡಿಸಿಕೊಂಡು ಪಂಜಾಬ್​ನಲ್ಲಿ ತನ್ನದೇ ಸ್ವಂತ ಬೆಂಬಲಿಗರನ್ನು ಸೃಷ್ಟಿಸಿಕೊಳ್ಳಲು ಬಿಜೆಪಿ ಸತತ ಪ್ರಯತ್ನ ನಡೆಸುತ್ತಿದೆ. ಬಿಜೆಪಿಯ ದೀರ್ಘಕಾಲದ ಮಿತ್ರ ಪಕ್ಷ ಅಕಾಲಿ ದಳವು ಕೃಷಿ ಕಾನೂನು ಕಾರಣಕ್ಕೆ ಮುನಿಸಿಕೊಂಡು ದೂರವಾಗಿತ್ತು. ಪಂಜಾಬ್ ರಾಜ್ಯದ ಮಟ್ಟಿಗೆ ಅಕಾಲಿದಳದೊಂದಿಗೆ ಬಿಜೆಪಿ ಕಿರಿತಮ್ಮನ ರೀತಿಯಲ್ಲಿ ಕಾರ್ಯನಿರ್ವಹಿಸಿತ್ತು. ಪಂಥದ ಆಶಯದಿಂದ ಅಕಾಲಿದಳ ದೂರವಾದಾಗ ಬಿಜೆಪಿ ಅದರ ಕೆಟ್ಟ ಪರಿಣಾಮ ಎದುರಿಸಬೇಕಾಯಿತು. ಮತ್ತೊಂದೆಡೆ ಮೋದಿ ಸರ್ಕಾರವು ಕೃಷಿ ಕಾನೂನು ಹಿಂಪಡೆದ ಶ್ರೇಯಸ್ಸನ್ನು ಇಡಿಯಾಗಿ ಅಕಾಲಿದಳ ತನ್ನದೆಂದು ಬಿಂಬಿಸಿಕೊಂಡಿತ್ತು. ಹೀಗಾಗಿ ಬಿಜೆಪಿ ಇದೀಗ ನೇರವಾಗಿ ಸಿಖ್ಖ್ ಸಮುದಾಯದಲ್ಲಿ ಬೆಂಬಲ ಹೆಚ್ಚಿಸಿಕೊಳ್ಳುವ ಕಾರ್ಯತಂತ್ರ ಹೆಣೆಯಲು ಮುಂದಾಗಿದೆ.

ಆದರೆ ಆರ್​ಎಸ್​ಎಸ್ ಮತ್ತು ಸಿಖ್ಖ್ ಸಮುದಾಯದ ನಡುವೆ ಬಹುಕಾಲದಿಂದಲೂ ತಾತ್ವಿಕ ಭಿನ್ನಾಭಿಪ್ರಾಯಗಳು ತಲೆದೋರಿವೆ. 1999ರಲ್ಲಿ ಆರ್​ಎಸ್​ಎಸ್​ನ ಅಂದಿನ ಮುಖ್ಯಸ್ಥರಾಗಿದ್ದ ಸುದರ್ಶನ್ ಅವರು ದಾಮ್​ದನಿ ತಕ್​​ಸಲ್​ಗೆ ಭೇಟಿ ನೀಡಿದ್ದರು. ಆದರೂ ಸಿಖ್ಖರಿಗೆ ಸಂಘ ಪರಿವಾರ ಪ್ರತಿಪಾದಿಸುವ ಹಲವು ವಿಚಾರಗಳಿಗೆ ಸಹಮತವಿಲ್ಲ. ಸಿಖ್ಖರನ್ನು ಹಿಂದೂ ಧರ್ಮದ ಭಾಗ ಎನ್ನುವ ವಾದವನ್ನು ಬಹುತೇಕ ಸಿಖ್ಖರು ನಿರಾಕರಿಸುತ್ತಾರೆ. ಜುಲೈ 13, 2004ರಂದು ಆರ್​ಎಸ್​ಎಸ್​ ಗುರು ಗ್ರಂಥ ಸಾಹೀಬ 400ನೇ ವರ್ಷಾಚರಣೆಯನ್ನು ಆರ್​ಎಸ್​ಎಸ್​ ಆಯೋಜಿಸಿತ್ತು. ಆದರೆ ಆರ್​ಎಸ್​ಎಸ್​ ನಡವಳಿಕೆ ಬಗ್ಗೆ ಸಿಖ್ಖರು ಎಚ್ಚರದಿಂದ ಇರಬೇಕು ಎಂದು ಅಕಾಲ್ ತಖ್ತ್​ ಎಚ್ಚರಿಸಿತ್ತು. ಸಿಖ್ಖರ ನಡವಳಿಗೆ ಮತ್ತು ನಂಬಿಕೆಗಳನ್ನು ಆರ್​ಎಸ್​ಎಸ್​ ತನ್ನ ಮೂಗಿನ ನೇರಕ್ಕೆ ವಿಶ್ಲೇಷಿಸುತ್ತಿದೆ. ಇದನ್ನು ಒಪ್ಪಲು ಆಗುವುದಿಲ್ಲ ಎಂದು ಸಿಖ್ಖ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.

‘ಭಾರತ ಹಿಂದೂ ದೇಶ’ ಎಂದು ಅಕ್ಟೋಬರ್ 2019ರಂದು ಆರ್​ಎಸ್​ಎಸ್​ ಸರಸಂಘಚಾಲಕ ಮೋಹನ್ ಭಾಗವತ್ ನೀಡಿದ್ದ ಹೇಳಿಕೆಯನ್ನು ಸಿಖ್ಖರು ಒಪ್ಪಿರಲಿಲ್ಲ. ಈ ಹೇಳಿಕೆಯನ್ನು ಖಂಡಿಸಿದ್ದ ಸಿಖ್ಖ್ ಸಮುದಾಯದ ಮುಖಂಡ ಗಿಯಾನಿ ಹರ್​ಪ್ರೀತ್ ಸಿಂಗ್, ‘ಆರ್​ಎಸ್​ಎಸ್​ನ ಕಾರ್ಯಚಟುವಟಿಕೆಗಳು ದೇಶವನ್ನು ಒಗ್ಗೂಡಿಸುವುದಕ್ಕಿಂತಲೂ ಒಡೆಯಲು ಇಂಬು ನೀಡುತ್ತಿವೆ’ ಎಂದು ಹೇಳಿದ್ದರು. ‘ಆರ್​ಎಸ್​ಎಸ್​ ಬಗ್ಗೆ ಸಿಖ್ಖ್ ಸಮುದಾಯಕ್ಕೆ ಅನುಮಾನಗಳಿವೆಯಾದರೂ ಇದು ಶಾಶ್ವತ ಎಂದು ಹೇಳಲು ಆಗುವುದಿಲ್ಲ. ಸಿಖ್ಖ್ ಸಮುದಾಯದ ವಿಶ್ವಾಸ ಬೆಳೆಸಿಕೊಳ್ಳಲು ಆರ್​ಎಸ್​ಎಸ್​ ಸಹ ಸತತ ಪ್ರಯತ್ನ ನಡೆಸುತ್ತಿದೆ’ ಎಂದು ರಾಜಕೀಯ ವಿಶ್ಲೇಷಕರಾದ ಸರ್​ಚಂದ್ ಸಿಂಗ್ ಹೇಳುತ್ತಾರೆ.

TV9 Kannada


Leave a Reply

Your email address will not be published. Required fields are marked *