ಆರ್ಯನ್ ಖಾನ್ ಡ್ರಗ್ಸ್​ ಪ್ರಕರಣ: ಆರೋಪಿಗಳ ಸಂಚು ನಿರೂಪಿಸುವ ಪುರಾವೆ ಇಲ್ಲ ಎಂದ ಬಾಂಬೆ ಹೈಕೋರ್ಟ್ | Bombay High Court Publishes Aryan Khan bail order says no positive evidence to show conspiracy between accused


ಆರ್ಯನ್ ಖಾನ್ ಡ್ರಗ್ಸ್​ ಪ್ರಕರಣ: ಆರೋಪಿಗಳ ಸಂಚು ನಿರೂಪಿಸುವ ಪುರಾವೆ ಇಲ್ಲ ಎಂದ ಬಾಂಬೆ ಹೈಕೋರ್ಟ್

ಜೈಲಿನಿಂದ ಹೊರಬಂದ ಆರ್ಯನ್​ ಖಾನ್​ (ಸಂಗ್ರಹ ಚಿತ್ರ)

ಮುಂಬೈ: ಖ್ಯಾತ ನಟ ಶಾರೂಖ್​ ಖಾನ್ ಮಗ ಆರ್ಯನ್​ ಖಾನ್ ಸೇರಿದಂತೆ ಮೂವರಿಗೆ ಡ್ರಗ್ಸ್​ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿರುವ ಬಾಂಬೆ ಹೈಕೋರ್ಟ್​, ಆರೋಪಿಗಳು ಸಂಚು ರೂಪಿಸಿದ್ದರು ಎಂಬುದನ್ನು ನಿರೂಪಿಸುವ ಗಟ್ಟಿ ಪುರಾವೆಯನ್ನು ಒದಗಿಸುವಲ್ಲಿ ನಾರ್ಕೊಟಿಕ್ಸ್​ ಕಂಟ್ರೋಲ್ ಬ್ಯೂರೊ (Narcotics Control Bureau – NCB) ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಅವರಿದ್ದ ಏಕಸದಸ್ಯ ನ್ಯಾಯಪೀಠವು ಅಕ್ಟೋಬರ್ 28ರಂದು ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಐಷಾರಾಮಿ ಹಡಗಿನಲ್ಲಿ (ಕ್ರೂಸ್) ಇವರನ್ನು ಎನ್​ಸಿಬಿ ಅಕ್ಟೋಬರ್ 2ರಂದು ಬಂಧಿಸಿತ್ತು. 14 ಪುಟಗಳ ವಿಸ್ತೃತ ಆದೇಶದ ಪ್ರತಿಯು ಶನಿವಾರ ಸಂಜೆ ಲಭ್ಯವಾಗಿದೆ.

ಆರ್ಯನ್ ಮತ್ತು ಇತರ ಆರೋಪಿಗಳಿಂದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿಲ್ಲ. ಮರ್ಚಂಟ್ ಮತ್ತು ಧಮೇಚಾ ಅವರಿಂದ ಅಲ್ಪಪ್ರಮಾಣದ ಡ್ರಗ್ಸ್​ ವಶಪಡಿಸಿಕೊಳ್ಳಲಾಗಿದೆ. ಆದರೆ ಎನ್​ಸಿಬಿ ಮಾತ್ರ ಎಲ್ಲ ಆರೋಪಿಗಳ ಬಳಿ ವಾಣಿಜ್ಯ ಗುಣಮಟ್ಟದ ಡ್ರಗ್ಸ್​ ಪತ್ತೆಯಾಗಿತ್ತು. ಇವೆಲ್ಲವನ್ನೂ ಸಂಚಿನ ಭಾಗವಾಗಿ ಪರಿಗಣಿಸಬೇಕು ಎಂದು ಹೇಳಿತ್ತು. ಎನ್​ಡಿಪಿಎಸ್ ಕಾಯ್ದೆಯ ಅನ್ವಯ ಇದನ್ನು ಸಂಚು ಎಂದು ಪರಿಗಣಿಸಬೇಕು ಎಂದು ವಾದಿಸಿತ್ತು. ಮೂವರು ಆರೋಪಿಗಳು ಅಪರಾಧಕ್ಕಾಗಿ ಸಂಚು ರೂಪಿಸಿದ್ದರು. ಈ ಪ್ರಕರಣದಲ್ಲಿ ಬಂಧಿತರಾಗಿರುವ ಇತರರ ಜೊತೆಗೆ ಇದೇ ವಿಷಯವಾಗಿ ಚರ್ಚಿಸಿದ್ದರು ಎಂದು ನಿರೂಪಿಸುವ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಆರೋಪಿಗಳು ಕಾನೂನುಬಾಹಿರ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎಂದು ನಿರೂಪಿಸುವ, ನ್ಯಾಯಾಲಯವು ಒಪ್ಪುವಂಥ ಯಾವುದೇ ಪುರಾವೆ ಸಲ್ಲಿಕೆಯಾಗಿಲ್ಲ. ಇದರ ಬದಲಿಗೆ ಅರ್ಜಿದಾರರು (ಅರ್ಯನ್ ಮತ್ತು ಮರ್ಚಂಟ್) ಆರೋಪಿ (ಧಮೇಚ) ಅವರೊಂದಿಗೆ ಪ್ರಯಾಣ ಮಾಡುತ್ತಿದ್ದರು. ಆದರೆ ಅಪರಾಧ ಕೃತ್ಯ ನಡೆಸಲು ಈ ಮೂವರ ನಡುವೆ ಸಮಾನ ಅಭಿಪ್ರಾಯ ಇತ್ತು, ಮೊದಲೇ ಇವರು ಮಾತನಾಡಿದ್ದರು ಎಂದು ಹೇಳಲು ಯಾವುದೇ ಆಧಾರಗಳು ಇಲ್ಲ ಎಂದು ಹೇಳಿದರು. ವಶಪಡಿಸಿಕೊಂಡಿರುವ ಮಾದಕ ದ್ರವ್ಯಗಳು ಸಹ ವಾಣಿಜ್ಯ ಗಾತ್ರದ್ದು ಎಂದು ಹೇಳಲು ಆಗುವುದಿಲ್ಲ ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಜಾಮೀನು ಅರ್ಜಿಯ ವಿಚಾರಣೆಗೆ ಹೆಚ್ಚಿನ ಪುರಾವೆಗಳು ಅಗತ್ಯವಿಲ್ಲ ಎಂದು ಎನ್​ಸಿಬಿ ವಾದಿಸಿದೆ. ಆದರೆ ಈ ಪ್ರಕರಣದ ಸೂಕ್ಷ್ಮ ವಿವರಗಳನ್ನು ಗಮನಿಸಿದಾಗ ಸಂಚು ನಡೆದಿದೆ ಎಂಬುದನ್ನು ನಿರೂಪಿಸಲು ಎನ್​ಸಿಬಿ ಅಗತ್ಯ ಪುರಾವೆ ಒದಗಿಸಬೇಕಿತ್ತು. ಕ್ರೂಸ್​ನಲ್ಲಿ ಅರ್ಜಿದಾರರು ಪ್ರಯಾಣಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರ ವಿರುದ್ಧ ಸೆಕ್ಷನ್ 29 (ಸಂಚು) ಅನ್ವಯ ಪ್ರಕರಣ ದಾಖಲಿಸಲು ಆಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಆರ್ಯನ್ ಖಾನ್ ಮೊಬೈಲ್​ನಲ್ಲಿದ್ದ ವಾಟ್ಸ್ಯಾಪ್ ಚಾಟ್​ ಪ್ರಸ್ತಾಪಿಸಿ ಎನ್​ಸಿಬಿ ಮಂಡಿಸಿದ ವಾದವನ್ನೂ ನ್ಯಾಯಾಲಯವು, ‘ಅದರಲ್ಲಿ ಆಕ್ಷೇಪಾರ್ಹ ಎನ್ನುವಂಥದ್ದು ಏನೂ ಇಲ್ಲ’ ಎಂದು ತಳ್ಳಿಹಾಕಿದೆ.

ಕ್ರೂಸ್ ಡ್ರಗ್ಸ್​ ಪ್ರಕರಣದಲ್ಲಿ ಈವರೆಗೆ ಆರ್ಯನ್ ಖಾನ್ ಸೇರಿದಂತೆ 12 ಮಂದಿಗೆ ಹೈಕೋರ್ಟ್​ ಜಾಮೀನು ನೀಡಿದೆ. ಪ್ರಕರಣ ಸಂಬಂಧ 20 ಮಂದಿಯನ್ನು ಎನ್​ಸಿಬಿ ಬಂಧಿಸಿತ್ತು.

ಇದನ್ನೂ ಓದಿ: ಪೊಲೀಸ್ ಕಸ್ಟಡಿಗೆ ಆರ್ಯನ್ ಖಾನ್ ಡ್ರಗ್ಸ್​ ಪ್ರಕರಣದಲ್ಲಿ ಎನ್​ಸಿಬಿ ಸಾಕ್ಷಿ ಕಿರಣ್ ಗೋಸಾವಿ
ಇದನ್ನೂ ಓದಿ: ಆರ್ಯನ್ ಖಾನ್ ಆರೋಪಿಯಾಗಿರುವ ಕ್ರೂಸ್​ ರೇವ್ ಪಾರ್ಟಿ ತನಿಖೆ ಸಮೀರ್ ವಾಂಖೆಡೆಯಿಂದಲೇ ಮುಂದುವರಿಕೆ: ಎನ್​ಸಿಬಿ

TV9 Kannada


Leave a Reply

Your email address will not be published. Required fields are marked *