ಬೆಂಗಳೂರು: ರಾಜ್ಯ ಸಚಿವರ ಜವಾಬ್ದಾರಿಯಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯಾಗಿದ್ದು, ಸಕ್ಕರೆ ಮತ್ತು ಪೌರಾಡಳಿತ ಸಚಿವರಾಗಿರುವ ಎಂಟಿಬಿ ನಾಗರಾಜ್ ಅವರಿಗೆ ಹೆಚ್ಚುವರಿಯಾಗಿ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ನೀಡಲಾಗಿದೆ.

ಸಿಎಂ ಬಿಎಸ್​ ಯಡಿಯೂರಪ್ಪ ಅವರ ನಿರ್ದೇಶನದಂತೆ ಕಂದಾಯ ಸಚಿವ ಆರ್​​.ಅಶೋಕ್​​ ಬಳಿಯಿದ್ದ ಈ ಖಾತೆಯನ್ನ ಎಂಟಿಬಿ ನಾಗರಾಜ್​ ಹೆಗಲಿಗೆ ಹೊರಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಸಿ. ಮಾಲತಿ ಆದೇಶ ಹೊರಡಿಸಿದ್ದಾರೆ.

ಕೊನೆಗೂ ಎಂಟಿಬಿ ನಾಗರಾಜ್ ತೆಕ್ಕೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಬಂದಿದೆ. ಇಷ್ಟು ದಿನಗಳ ಕಾಲ ಸಿಎಂ ಮುಂದೆ ಎಂಟಿಬಿ ನಾಗರಾಜ್ ಬೇಡಿಕೆ ಇಟ್ಟಿದ್ದರು. ನಾನು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯವನು. ನನಗೆ ನನ್ನ ಜಿಲ್ಲೆಯ ಉಸ್ತುವಾರಿ ಸ್ಥಾನ ಬೇಕು. ನನಗೆ ನನ್ನ ಜಿಲ್ಲೆಯನ್ನು ಹೊರತುಪಡಿಸಿ, ಈ ಹಿಂದೆ ಕೋಲಾರ ಜಿಲ್ಲೆಯ ಉಸ್ತುವಾರಿ ಸ್ಥಾನ ನೀಡಲಾಗಿತ್ತು.

ಮತ್ತೆ ಬದಲಾದ ಸನ್ನಿವೇಶದಲ್ಲಿ ನನಗೆ ಕೋಲಾರ ಜಿಲ್ಲೆಯಿಂದ ಹೊರಗಿಟ್ಟು, ಕೇವಲ ಪೌರಾಡಳಿತ ಇಲಾಖೆಯ ಜವಾಬ್ದಾರಿ ಮಾತ್ರ ನೀಡಲಾಗಿದೆ. 2023ರಲ್ಲಿ ಎದುರಾಗಲಿರುವ ರಾಜ್ಯ ಸಾರ್ವತ್ರಿಕ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಬಲವರ್ಧನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಗಬೇಕೆಂದರೆ, ನನಗೆ ನನ್ನ ತವರು ಜಿಲ್ಲೆಯ ಉಸ್ತುವಾರಿ ಬೇಕು ಎಂದು ಎಂಟಿಬಿ ನಾಗರಾಜ್ ಬೇಡಿಕೆ ಇಟ್ಟಿದ್ದರು. ಕೊನೆಗೂ ಎಂಟಿಬಿ ನಾಗರಾಜ್ ಬೇಡಿಕೆಯನ್ನು ಸಿಎಂ ಯಡಿಯೂರಪ್ಪ ಈಡೇರಿಸಿದ್ದಾರೆ.

The post ಆರ್​.ಅಶೋಕ್​​ಗೆ ಶಾಕ್.. ಎಂಟಿಬಿ ಹೆಗಲಿಗೆ ಹೊಸ ಜವಾಬ್ದಾರಿ ಹೊರಿಸಿದ ಬಿಎಸ್​ವೈ appeared first on News First Kannada.

Source: newsfirstlive.com

Source link